×
Ad

ಉತ್ತರ ಪ್ರದೇಶ | ಅಂತರ್ಜಾತಿ ಪ್ರೇಮ ಆರೋಪ; ಗ್ರಾಮಸ್ಥರಿಂದ ಮನೆಗೆ ಬೆಂಕಿ

Update: 2024-08-04 07:49 IST

Photo: TOI

ಬರೇಲಿ: ಅನ್ಯಕೋಮಿಗೆ ಸೇರಿದ ನೆರೆಮನೆಯ ಯುವತಿಯೊಂದಿಗೆ ಓಡಿಹೋಗಿದ್ದ 21 ವರ್ಷದ ಯುವಕನ ಮನೆಯನ್ನು ಉದ್ರಿಕ್ತ ಗ್ರಾಮಸ್ಥರು ಬೆಂಕಿ ಹಚ್ಚಿ ಭಸ್ಮಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ವಾಹನವನ್ನು ಕೂಡಾ ಉದ್ರಿಕ್ತರು ಜಖಂಗೊಳಿಸಿದ್ದಾರೆ.

ಹೇಗೋ ತಪ್ಪಿಸಿಕೊಂಡ ಪೊಲೀಸರು ತಮ್ಮ ಮೇಲಧಿಕಾರಿಗಳಿಗೆ ವಿಷಯವನ್ನು ವಿವರಿಸಿದ್ದಾರೆ. ಅಕ್ಕಪಕ್ಕದ ಠಾಣೆಗಳಿಂದ ಹೆಚ್ಚಿನ ಪೊಲೀಸರನ್ನು ಗ್ರಾಮಕ್ಕೆ ಕಳುಹಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬರೇಲಿ ಜಿಲ್ಲೆಯ ಸಿರೌಲಿ ಠಾಣೆ ವ್ಯಾಪ್ತಿಯ ಚಂದೂಪುರ ಶಿವನಗರ ಎಂಬಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಯುವತಿ ತನ್ನ ನೆರೆಮನೆಯ ಯುವಕನ  ಜತೆ ಜುಲೈ 29ರಂದು ಓಡಿಹೋಗಿದ್ದಾಳೆ ಎಂದು ಆಪಾದಿಸಲಾಗಿತ್ತು. ಗುರುವಾರ ರಾತ್ರಿ ಇಬ್ಬರೂ ಪತ್ತೆಯಾಗಿದ್ದು, ಮಹಿಳೆಯನ್ನು ಶುಕ್ರವಾರ ತಂದೆಗೆ ಹಸ್ತಾಂತರಿಸಲಾಗಿತ್ತು. ಯುವಕನನ್ನು ವಿಚಾರಣೆಗಾಗಿ ಬಂಧನದಲ್ಲಿ ಇಡಲಾಗಿತ್ತು. ತಡರಾತ್ರಿ ಕೆಲ ಸಮಾಜ ಘಾತುಕ ಶಕ್ತಿಗಳು ಯುವಕನ ಮನೆಯ ಕೆಲ ವಸ್ತುಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. 20 ಮಂದಿ ಗುರುತಿಸಲ್ಪಟ್ಟ ಮತ್ತು 30 ಮಂದಿ ಗುರುತಿಸಲ್ಪಡದ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯಸಂಹಿತೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಯುವಕನ ವಿರುದ್ಧ ಅಪಹರಣ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಬರೇಲಿ ಎಸ್ಎಸ್ಪಿ ಅನುರಾಗ್ ಆರ್ಯಾ ವಿವರಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಸಿರೌಲಿ ಠಾಣಾಧಿಕಾರಿ, ಲುವ್ ಸಿರೋಹಿ ಸಬ್ ಇನ್ಸ್ಪೆಕ್ಟರ್ ಸತ್ವೀರ್ ಸಿಂಗ್ ಮತ್ತು ಪೊಲೀಸ್ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News