×
Ad

ಉತ್ತರ ಪ್ರದೇಶ: ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು; ಅಪಾಯದಿಂದ ಪಾರಾದ ಪ್ರಯಾಣಿಕರು

Update: 2024-08-17 08:37 IST

PC: x.com/JAMMULINKS

ಲಕ್ನೋ: ಸಬರಮತಿ ಎಕ್ಸ್‌ಪ್ರೆಸ್ ರೈಲಿನ 20 ಬೋಗಿಗಳು ಹಳಿತಪ್ಪಿರುವ ಘಟನೆ  ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣದ ನಡುವಿನ ಬ್ಲಾಕ್ ವಿಭಾಗದಲ್ಲಿ  ಶನಿವಾರ ಮುಂಜಾನೆ  ಸಂಭವಿಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಪ್ರಯಾಣಿಕರನ್ನು ಕಾನ್ಪುರಕ್ಕೆ ಕರೆದೊಯ್ಯಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ.

ಕಲ್ಲು ಬಂಡೆಯೊಂದು ರೈಲಿನ ಎಂಜಿನ್‌ಗೆ ಬಡಿದ ಪರಿಣಾಮ ಇದರಿಂದಾಗಿ ಎಂಜಿನ್‌ಗೆ ಹೆಚ್ಚು ಹಾನಿಯಾಗಿದೆ ಎಂದು ಲೋಕೋಪೈಲಟ್ ತಿಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ವಾರಣಾಸಿಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ (19168) ಕಾನ್ಪುರದ ಗೋವಿಂದಪುರಿ ಎದುರು ರಾತ್ರಿ 2.30ರ ಸುಮಾರಿಗೆ ಹಳಿತಪ್ಪಿತು. ರೈಲ್ವೇ ಪ್ರಕಾರ, ರೈಲಿನ 20 ಬೋಗಿಗಳು ಹಳಿತಪ್ಪಿವೆ. ಘಟನೆಯ ಬಳಿಕ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

ರೈಲ್ವೆ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು,  ಬೋಗಿಗಳನ್ನು ಹಳಿಗೆ ತರಲು ಶ್ರಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಕಾರಣ ತಿಳಿಯಲು ರೈಲ್ವೇ ತಜ್ಞರ ತಂಡ ತನಿಖೆ ಆರಂಭಿಸಿದೆ.   ಹಳಿಗಳನ್ನು ದುರಸ್ತಿ ಮಾಡುವ ಮೂಲಕ ರೈಲು ಸೇವೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News