ಉತ್ತರಾಖಂಡ | ಮೇಘಸ್ಫೋಟ; ಧಾರಾಲಿಯಲ್ಲಿ ಭಾರೀ ಮಳೆಯ ನಡುವೆ ಮುಂದುವರಿದ ರಕ್ಷಣಾ ಕಾರ್ಯಾಚರಣೆ
►ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ►ಭೂಕುಸಿತದಿಂದಾಗಿ ಮುಚ್ಚಿಹೋದ ರಸ್ತೆಗಳು ►ಪ್ರವಾಹಪೀಡಿತ ಪ್ರದೇಶ ತಲುಪಲು ರಕ್ಷಣಾತಂಡಗಳ ಹರಸಾಹಸ ►70ಕ್ಕೂ ಅಧಿಕ ಮಂದಿ ನಾಪತ್ತೆ ಶಂಕೆ ►ಬಾಹ್ಯಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡ ಧಾರಾಲಿ ಗ್ರಾಮ ►ನೆರೆಪೀಡಿತ ಪ್ರದೇಶದಲ್ಲಿ ಸಿಲುಕಿರುವ 200ಕ್ಕೂ ಅಧಿಕ ಮಂದಿ ಗ್ರಾಮಸ್ಥರು
PC : PTI
ಡೆಹ್ರಾಡೂನ್,ಆ.6: ಉತ್ತರಾಖಂಡದ ಧಾರಾಲಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದಾಗಿ ಉಂಟಾದ ಭೀಕರ ಪ್ರವಾಹದ ಬಳಿಕ ನಾಪತ್ತೆಯಾಗಿರುವ 70ಕ್ಕೂ ಅಧಿಕ ನಾಗರಿಕರಿಗಾಗಿ ಭಾರೀ ಮಳೆಯ ನಡುವೆಯೂ ಶೋಧ ಕಾರ್ಯಾಚರಣೆ ಬುಧವಾರ ಮುಂದುವರಿದಿದೆ.
ರಕ್ಷಣಾ ಕಾರ್ಯಕರ್ತರು ಬುಧವಾರ ಒಂದು ಮೃತದೇಹವನ್ನು ಪತ್ತೆಹಚ್ಚಿದ್ದು, ಸ್ಥಳೀಯ ನಿವಾಸಿ ಆಕಾಶ್ ಪನ್ವಾರ್ ಎಂಬಾತನದ್ದೆಂದು ಗುರುತಿಸಿದ್ದಾರೆ. ಪ್ರವಾಹ ಪೀಡಿತ ಧಾರಾಲಿ ಗ್ರಾಮದಲ್ಲಿ ಸುಮಾರು 200 ಮಂದಿ ಗ್ರಾಮಸ್ಥರು ಸಿಕ್ಕಿಹಾಕಿಕೊಂಡಿದ್ದಾರೆ. ನಾಪತ್ತೆಯಾದವರಲ್ಲಿ 9 ಮಂದಿ ಸೇನಾ ಸಿಬ್ಬಂದಿಯೆಂದು ತಿಳಿದುಬಂದಿದೆ.
ಬಾಹ್ಯ ಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕವನ್ನು ಕಡಿದುಕೊಂಡಿರುವ ಧಾರಾಲಿ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಹೆವಿ ಲಿಫ್ಟ್ ಚಿನೂಕ್ ಸೇರಿದಂತೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳು ಹಾಗೂ ಏರ್ ಕ್ರಾಫ್ಟ್ ಗಳನ್ನು ನಿಯೋಜಿಸಲಾಗಿದೆ. ಭಾರೀ ಮಳೆ,ಗಾಳಿಯ ನಡುವೆ ಗ್ರಾಮವನ್ನು ತಲುಪುವುದು ಅವುಗಳಿಗೆ ಸವಾಲಾಗಿದೆ.ಪರ್ವತ ಪ್ರದೇಶದಲ್ಲಿರುವ ಪ್ರವಾಹಪೀಡಿತ ಧಾರಾಲಿ ಗ್ರಾಮದಲ್ಲಿ ಈವರೆಗೆ 150 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗ್ರಾಮದಾದ್ಯಂತ 25 ಅಡಿ ಎತ್ತರದವರೆಗೆ ಕೆಸರುಮಣ್ಣು, ಮರ,ಬಂಡೆಗಲ್ಲು ಮತ್ತಿತರ ಭಗ್ನಾವಶೇಷಗಳ ರಾಶಿಯೇ ಬಿದ್ದಿದ್ದು, ಅವುಗಳ ನಡುವೆ ದಾರಿಮಾಡಿಕೊಂಡು ಪ್ರವಾಹದಲ್ಲಿ ಸಿಲುಕಿಕೊಂಡಿರುವ ಗ್ರಾಮಸ್ಥರನ್ನು ತಲುಪಲು ಐಟಿಬಿಪಿ ಹಾಗೂ ಸೇನಾ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ. ರಸ್ತೆಯ ಮೂಲಕ ಗ್ರಾಮವನ್ನು ತಲುಪುವುದು ಅಸಾಧ್ಯವಾದ ಕಾರಣ ತಾತ್ಕಾಲಿಕವಾದ ಸೇತುವೆಯೊಂದನ್ನು ನಿರ್ಮಿಸುವ ಪ್ರಯತ್ನಗಳೂ ನಡೆಯುತ್ತಿವೆಯೆಂದು ಮೂಲಗಳು ತಿಳಿಸಿವೆ.
ಧಾರಾಲಿ ಗ್ರಾಮದೆಡೆಗೆ ತೆರಳುವ ರಸ್ತೆಗಳು ಭೂಕುಸಿತದಿಂದಾಗಿ ಸಂಪೂರ್ಣ ಮುಚ್ಚುಗಡೆಗೊಂಡಿವೆ. ಹಲವಾರು ಕಾರುಗಳು ಹಾಗೂ ವಾಹನಗಳು ಕೂಡಾ ಪ್ರವಾಹಕ್ಕೆ ಕೊಚ್ಚಿಹೋಗಿವೆ. ನಾಪತ್ತೆಯಾದವರಲ್ಲಿ ಸಮೀಪದ ಹಾರ್ಸಿಲ್ ನ ಸೇನಾ ಶಿಬಿರದಲ್ಲಿರುವ 11 ಮಂದಿ ಯೋಧರೂ ಇದ್ದಾರೆಂದು ಅವು ಹೇಳಿವೆ.
ಈವರೆಗೆ ಪ್ರವಾಹದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಫೆಡರಲ್ ಎನ್ ಡಿ ಆರ್ ಎಫ್ ನ ಉಪ ಮಹಾನಿರೀಕ್ಷ (ಡಿಐಜಿ) ಮೊಹ್ಸೆನ್ ಶಾಹೇದಿ ತಿಳಿಸಿದ್ದಾರೆ. ಫೆಡರಲ್ ತುರ್ತು ಪ್ರತಿಕ್ರಿಯೆ ಪಡೆಯ ಮೂರು ತಂಡಗಳು ಧಾರಾಲಿ ಗ್ರಾಮದೆಡೆಗೆ ತೆರಳುತ್ತಿವೆ. ಆದರೆ ನಿರಂತರ ಭೂಕುಸಿತಗಳಿಂದಾಗಿ ಉತ್ತರಾಖಂಡ-ಉತ್ತರಾಕಾಶಿ ಹೆದ್ದಾರಿಯು ಮುಚ್ಚುಗೆಗೊಂಡಿರುವುದರಿಂದ ಅವುಗಳಿಗೆ ಆ ಗ್ರಾಮವನ್ನು ತಲುಪುವುದು ಅಸಾಧ್ಯವಾಗಿದೆ.
ಧಾರಾಲಿ ಗ್ರಾಮಕ್ಕೆ ತೆರಳುವ ದಾರಿಯಲ್ಲಿರುವ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ವಿವಿಧ ಸ್ಥಳಗಳಲ್ಲಿ ಭೂಕುಸಿತದಿಂದಾಗಿ ಮುಚ್ಚಿಹೋಗಿದ್ದು, 200ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಭಟ್ವಾರಿ ಗ್ರಾಮದಲ್ಲಿ ದಾರಿ ತೆರವುಗೊಳ್ಳುವುದನ್ನು ಕಾಯುತ್ತಿದ್ದಾರೆ.
ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಂಗಾನನಿಯಲ್ಲಿ ಲಿಮಾಚ್ಚಾ ನದಿಗೆ ನಿರ್ಮಿಸಲಾಗಿರುವ ಸೇತುವೆಯೊಂದು ದಿಢೀರ್ ಪ್ರವಾಹದಿಂದ ಕೊಚ್ಚಿಹೋಗಿರುವುದರಿಂದ, ಧಾರಾಲಿ ಗ್ರಾಮಕ್ಕೆತೆರಳುತ್ತಿದ್ದ ರಕ್ಷಣಾ ಸಿಬ್ಬಂದಿಯ ತಂಡವೊಂದು ದಾರಿ ಮಧ್ಯೆಯೇ ಸಿಕ್ಕಿಹಾಕಿಕೊಂಡಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ಅವಗಾಹನೆ ನಡೆಸಿದ್ದಾರೆ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಎಲ್ಲಾ ರೀತಿಯ ಬೆಂಬಲದ ಭರವಸೆ ನೀಡಿದ್ದಾರೆ.
ಡೆಹ್ರಾಡೂನ್ ನಲ್ಲಿರುವ ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರದ ಸಭೆಯಲ್ಲಿ ಮುಖ್ಯಮಂತ್ರಿ ಧಾಮಿ ಪರಾಮರ್ಶನಾ ಸಭೆ ನಡೆಸಿದರು ಆಹಗೂ ಆನಂತರ ಧಾರಾಲಿ ಹಾಗೂ ಸಮೀಪದ ಹಾರ್ಸಿಲ್‌ನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.
ಪ್ರವಾಹಸಂತ್ರಸ್ತರಿಗೆ ಆಹಾರ ಹಾಗೂ ಔಷಧಿಗಳ ವಿತರಣೆಗೆ ಏರ್ಪಾಡುಗಳನ್ನು ಮಾಡಲಾಗಿದೆ. ಪಡಿತರ ವಿತರಣೆಗೆಗಾಗಿ 10 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮೂವರು ಎಸ್‌ಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರಿಹಾರ ಕಾರ್ಯಾಚರಣೆಗಳಲ್ಲಿ ಸಮನ್ವಯತೆಯನ್ನು ಸಾಧಿಸಲು ಮುಖ್ಯಮಂತ್ರಿಯವರ ಕಾರ್ಯಾಲಯಿದಂ ಮೂವರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.