×
Ad

ಯುದ್ಧ ಭಾರತದ ಆಯ್ಕೆಯಲ್ಲ: ಚೀನಾಗೆ ಭಾರತ ಸ್ಪಷ್ಟನೆ

Update: 2025-05-11 09:13 IST

ಅಜಿತ್ ದೋವಲ್ (Image Source : PTI/File)

ಹೊಸದಿಲ್ಲಿ: ದೇಶದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶನಿವಾರ ಚೀನಾದ ವಿದೇಶಾಂಗ ಖಾತೆ ಸಚಿವ ವಾಂಗ್ ಯೀ ಅವರಿಗೆ ಕರೆ ಮಾಡಿ ಭಾರತ- ಪಾಕಿಸ್ತಾನ ಸಂಘರ್ಷ ಉಲ್ಬಣಗೊಂಡಿರುವ ಬಗ್ಗೆ ಚರ್ಚೆ ನಡೆಸಿದರು. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ಯುದ್ಧ ಭಾರತದ ಆಯ್ಕೆಯಲ್ಲ ಹಾಗೂ ಯಾವುದೇ ಪಕ್ಷಗಳ ಆಸಕ್ತಿಯೂ ಅಲ್ಲ" ಎಂದು ಹೇಳಿದರು.

ಭಾರತೀಯ ವಾಯುಪ್ರದೇಶದ ಮೇಲೆ ಮತ್ತೆ ಪಾಕಿಸ್ತಾನ ಮತ್ತೊಂದು ಸುತ್ತಿನ ಡ್ರೋಣ್ ದಾಳಿ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ದೋವಲ್ ಈ ಚರ್ಚೆ ನಡೆಸಿದರು. ಇಸ್ಲಾಮಾಬಾದ್ ತಾನೇ ಶಾಂತಿ ಒಪ್ಪಂದದ ಪ್ರಸ್ತಾವ ಮುಂದಿಟ್ಟು, ಅದೇ ದೇಶ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಗಮನಕ್ಕೆ ತಂದರು.

"ಪಹಲ್ಗಾಮ್ ಉಗ್ರರ ದಾಳಿಯು ಭಾರತದಲ್ಲಿ ಗಂಭೀರ ಸಾವು ನೋವುಗಳನ್ನು ತಂದಿದೆ. ಭಾರತ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯನ್ನು ನಡೆಸುವುದು ಅನಿವಾರ್ಯವಾಗಿದೆ. ಯುದ್ಧ ಭಾರತದ ಆಯ್ಕೆಯಾಗಿರಲಿಲ್ಲ ಹಾಗೂ ಯಾರ ಆಸಕ್ತಿಯೂ ಆಗಿರಲಿಲ್ಲ. ಭಾರತ ಹಾಗೂ ಪಾಕಿಸ್ತಾನ ಯುದ್ಧವಿರಾಮಕ್ಕೆ ಬದ್ಧವಾಗಿದ್ದು, ಪ್ರಾದೇಶಿಕ ಶಾಂತಿ ಮತ್ತು ಸುಭದ್ರತೆಯ ಮರುಸ್ಥಾಪನೆಗೆ ಬದ್ಧ ಎಂದು ದೋವಲ್ ಹೇಳಿದ್ದಾಗಿ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿವರ ನೀಡಿದೆ.

ಈ ಮಾತುಕತೆಯ ವೇಳೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು, ಉಗ್ರರ ದಾಳಿ ಘಟನೆಯನ್ನು ಕಟುವಾಗಿ ಖಂಡಿಸಿದ್ದು, ಪ್ರಾದೇಶಿಕ ಸ್ಥಿರತೆಯ ಮಹತ್ವವನ್ನೂ ಒತ್ತಿ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಎರಡೂ ಚೀನಾದ ನೆರೆಯ ದೇಶಗಳು ಹಾಗೂ ಈ ಭಾಗದಲ್ಲಿ ಶಾಂತಿ ಸ್ಥಾಪನೆ ಅತ್ಯಂತ ಕಠಿಣ ಹಾಗೂ ಅದನ್ನು ಪೋಷಿಸುವುದು ಅಗತ್ಯ ಎಂದು ವಾಂಗ್ ಯೀ ಅಭಿಪ್ರಾಯಪಟ್ಟರು. ಉಭಯ ದೇಶಗಳು ಗರಿಷ್ಠ ತಾಳ್ಮೆ ವಹಿಸಬೇಕು ಎಂದು ಕರೆ ನೀಡಿರುವ ಅವರು, ಪರಸ್ಪರ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News