×
Ad

ಪಟೌಡಿ ಟ್ರೋಫಿಯ ಮರುನಾಮಕರಣದ ನಿರ್ಧಾರವೇಕೆ ಮಹತ್ವ ಪಡೆದುಕೊಂಡಿದೆ?

Update: 2025-06-08 17:08 IST

Pataudi Trophy | X/@CricCrazyJohns

ಹೊಸದಿಲ್ಲಿ: ತೆಂಡೂಲ್ಕರ್-ಆ್ಯಂಡರ್ಸನ್ ಟ್ರೋಫಿಯೆಂದು ಪಟೌಡಿ ಟ್ರೋಫಿಯ ಮರುನಾಮಕರಣವು ಕ್ರಿಕೆಟ್ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಮರುನಾಮಕರಣವು ಕೇವಲ ಟ್ರೋಫಿಯ ಹೆಸರನ್ನು ಆಕರ್ಷಕಗೊಳಿಸುವ ಬದಲಾವಣೆಯಲ್ಲ, ಅದು ಭಾರತಿಯ ಕ್ರಿಕೆಟ್ ತನ್ನದೇ ಇತಿಹಾಸವನ್ನು ಹೇಗೆ ನೋಡುತ್ತದೆ ಎನ್ನುವುದರಲ್ಲಿ ಆಳವಾದ ಬದಲಾವಣೆಯನ್ನು ಪ್ರತಿನಿಧಿಸುತ್ತಿದೆ.

ಭಾರತೀಯ ಕ್ರಿಕೆಟ್ ನಲ್ಲಿ ರಾಷ್ಟ್ರೀಯ ಏಕತೆಯನ್ನು ಮೂಡಿಸಿದ್ದ ಮನ್ಸೂರ್ ಅಲಿ ಖಾನ್ ‘ಟೈಗರ್’ಪಟೌಡಿ ಅವರ ಪರಂಪರೆ ಈ ವಿವಾದದ ಕೇಂದ್ರಬಿಂದುವಾಗಿದೆ. ಟ್ರೋಫಿ ಅವರ ಹೆಸರಿನಲ್ಲಿಯೇ ಮುಂದುವರಿಯಬೇಕು ಎಂದು ಅನೇಕ ಜನರು ಭಾವಿಸಿದ್ದಾರೆ ಏಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕ್ರಿಕೆಟ್ ನ ಮೇಲೆ ಅವರ ಪ್ರಭಾವವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತೆಂಡೂಲ್ಕರ್ ಮತ್ತು ಆ್ಯಂಡರ್ಸನ್ ಅರ್ಹ ಐಕಾನ್ ಗಳಾಗಿದ್ದರೂ ಪಟೌಡಿಯವರ ಹೆಸರನ್ನು ಅಳಿಸುವುದು ತಲೆಮಾರುಗಳಿಂದಲೂ ಭಾರತ-ಇಂಗ್ಲಂಡ್ ಕ್ರಿಕೆಟ್ ಅನ್ನು ವ್ಯಾಖ್ಯಾನಿಸಿರುವ ಬೇರುಗಳು ಮತ್ತು ಸಂಬಂಧಗಳನ್ನು ಕಡೆಗಣಿಸುತ್ತದೆ.

► ಏನಿದು ಪಟೌಡಿ ಟ್ರೋಫಿ?

ಇಂಗ್ಲಂಡ್ ನಲ್ಲಿ ಭಾರತದ ಮೊದಲ ಟೆಸ್ಟ್ ಸರಣಿಯ 75ನೇ ವರ್ಷದ ನೆನಪಿಗಾಗಿ 2007ರಲ್ಲಿ ಪಟೌಡಿ ಟ್ರೋಫಿಯನ್ನು ಸ್ಥಾಪಿಸಲಾಗಿತ್ತು. ಪಟೌಡಿ ಕುಟುಂಬದ, ವಿಶೇಷವಾಗಿ ಇಂಗ್ಲಂಡ್ ಮತ್ತು ಭಾರತದ ಪರ ಟೆಸ್ಟ್ ಪಂದ್ಯಗಳನ್ನಾಡಿದ್ದ ಏಕೈಕ ವ್ಯಕ್ತಿ ಇಫ್ತಿಕಾರ್ ಅಲಿ ಖಾನ್ ಪಟೌಡಿ ಮತ್ತು ಅವರ ಪುತ್ರ ‘ಟೈಗರ್ ’ ಪಟೌಡಿ ಎಂದೇ ಹೆಸರಾಗಿದ್ದ ಮೇರು ವ್ಯಕ್ತಿತ್ವದ ಭಾರತೀಯ ಕ್ರಿಕೆಟ್ ತಂಡದ ನಾಯಕ ಮನ್ಸೂರ್ ಅಲಿ ಖಾನ್ ಅವರ ಹೆಸರನ್ನು ಈ ಟ್ರೋಫಿಗಿಡಲಾಗಿತ್ತು.

ಈ ಟ್ರೋಫಿಯು ಉಭಯ ದೇಶಗಳು ಹಂಚಿಕೊಂಡಿರುವ ಪರಂಪರೆ ಮತ್ತು ಸಂಕೀರ್ಣ ಇತಿಹಾಸದ ಸಂಕೇತವಾಗಿತ್ತು. ಸಾಂಪ್ರದಾಯಿಕವಾಗಿ ಭಾರತವು ಇಂಗ್ಲಂಡ್ ಪ್ರವಾಸವನ್ನು ಕೈಗೊಂಡಾಗ ಟೆಸ್ಟ್ ಸರಣಿಯಲ್ಲಿ ವಿಜೇತರು ಪಟೌಡಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಭಾರತದಲ್ಲಿ ಈ ಟೆಸ್ಟ್ ಸರಣಿಯನ್ನು ಬಿಸಿಸಿಐ ಸ್ಥಾಪಕರ ಹೆಸರಿನಲ್ಲಿರುವ ಆ್ಯಂಥನಿ ಡಿ ಮೆಲ್ಲೋ ಟ್ರೋಫಿಗಾಗಿ ಆಡಲಾಗುತ್ತದೆ.

► ಟ್ರೋಫಿಯ ಮರುನಾಮಕರಣ ನಿಜವೇ?

ಹೌದು, ಈ ತಿಂಗಳ ಆರಂಭದಲ್ಲಿ ಇಂಗ್ಲಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಮತ್ತು ಬಿಸಿಸಿಐ ಸರಣಿಯನ್ನು ಇನ್ನು ಮುಂದೆ ತೆಂಡೂಲ್ಕರ್-ಆ್ಯಂಡರ್ಸನ್ ಟೋಫಿಯೆಂದು ಕರೆಯಲಾಗುವುದು ಎಂದು ಜಂಟಿಯಾಗಿ ಪ್ರಕಟಿಸಿವೆ. ನೂತನ ಹೆಸರು ವಿಶ್ವದಲ್ಲಿ ಅತ್ಯಂತ ಹೆಚ್ಚು (200) ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಮತ್ತು ಇಂಗ್ಲಂಡ್ ನ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್(188 ಪಂದ್ಯಗಳಿಂದ 704 ವಿಕೆಟ್ಗಳು) ಜೇಮ್ಸ್ ಆ್ಯಂಡರ್ಸನ್ ಅವರಿಗೆ ನೀಡಿರುವ ಗೌರವವಾಗಿದೆ. ಜೂ.20ರಿಂದ ಆರಂಭಗೊಳ್ಳಲಿರುವ ಭಾರತ ಮತ್ತು ಇಂಗ್ಲಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಕೆಲವೇ ದಿನಗಳ ಮೊದಲು ವಿಶ್ವ ಟೆಸ್ಟ ಚಾಂಪಿಯನ್ ಶಿಪ್ ಫೈನಲ್‌ ಗೆ ಮುನ್ನ ನೂತನ ಟ್ರೋಫಿಯು ಅನಾವರಣಗೊಳ್ಳಲಿದೆ.

► ಹೆಸರು ಬದಲಿಸಲು ಕಾರಣವೇನು?

ಇಸಿಬಿ ಮತ್ತು ಬಿಸಿಸಿಐ ತೆಂಡೂಲ್ಕರ್ ಹಾಗೂ ಆ್ಯಂಡರ್ಸನ್ ಅವರ ಸಾಧನೆಗಳನ್ನು ಕ್ರಿಕೆಟ್ ನ ಆಧುನಿಕ ದಂತಕಥೆಗಳೆಂದು ಉಲ್ಲೇಖಿಸಿವೆ. ಈ ಇಬ್ಬರು ಆಟಗಾರರನ್ನು ಗೌರವಿಸುವುದು ಟೆಸ್ಟ್ ಪಂದ್ಯಗಳಲ್ಲಿ ಯುವ ಪೀಳಿಗೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉಭಯ ದೇಶಗಳ ನಡುವಿನ ಪೈಪೋಟಿಯನ್ನು ಪ್ರಸ್ತುತವಾಗಿಸುತ್ತದೆ ಎನ್ನುವುದು ಅಧಿಕಾರಿಗಳ ವಾದವಾಗಿದೆ.

► ಭಾರತ ಮತ್ತು ಭಾರತೀಯ ಕ್ರಿಕೆಟ್ ಗೆ ಟೈಗರ್ ಪಟೌಡಿಯವರ ಪ್ರಸ್ತುತತೆ ಏನು?

ಭಾರತೀಯ ಕ್ರಿಕೆಟ್ ನಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಮೂಡಿಸುವಲ್ಲಿ ಟೈಗರ್ ಪಟೌಡಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸಮಕಾಲೀನ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ಸುನೀಲ್ ಗಾವಸ್ಕರ್ ಮತ್ತು ಎರಪಳ್ಳಿ ಪ್ರಸನ್ನರಂತಹ ದಿಗ್ಗಜ ಆಟಗಾರರು ಅವರನ್ನು‘ ಭಾರತೀಯ ಕ್ರಿಕೆಟ್ ಗೆ ಸಂಭವಿಸಿದ ಅತ್ಯುತ್ತಮ ವಿಷಯ’ ಎಂದು ಬಣ್ಣಿಸಿದ್ದರು.

► ಪಟೌಡಿ ಕುಟುಂಬದ, ಮಾಜಿ ಕ್ರಿಕೆಟಿಗರ ಪ್ರತಿಕ್ರಿಯೆ ಏನು?

ಟ್ರೋಫಿಯ ಹೆಸರಿನ ಬದಲಾವಣೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ದಿ.ಟೈಗರ್ ಪಟೌಡಿಯವರ ಪತ್ನಿ ಶರ್ಮಿಳಾ ಟಾಗೋರ್ ಅವರು ಈ ಕ್ರಮವನ್ನು ಸಂವೇದನಾರಹಿತ ಎಂದು ಬಣ್ಣಿಸಿದ್ದಾರೆ. ಪಟೌಡಿ ಪರಂಪರೆಯನ್ನು ಅಳಿಸಿ ಹಾಕಿದ್ದನ್ನು ಅವರು ಪ್ರಶ್ನಿಸಿದ್ದಾರೆ.

ಟೈಗರ್ ನೇತೃತ್ವದಲ್ಲಿ ಆಡಿದ್ದ ಮಾಜಿ ಭಾರತೀಯ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಹಾಗೂ ಖ್ಯಾತ ಕ್ರಿಕೆಟ್ ನಿರೂಪಕ ಹರ್ಷ ಭೋಗ್ಲೆ ಅವರು ಟ್ರೋಫಿಯ ಮರುನಾಮಕರಣವನ್ನು ಟೀಕಿಸಿದ್ದಾರೆ.

► ನಿರ್ಧಾರವೇಕೆ ತಪ್ಪು?

ಪಟೌಡಿ ಟ್ರೋಫಿ ಹೆಸರಿಗಿಂತ ಹೆಚ್ಚಿನದಾಗಿತ್ತು. ಅದು ಎರಡು ಕ್ರಿಕೆಟ್ ಸಂಸ್ಕೃತಿಗಳು ಮತ್ತು ಇತಿಹಾಸಗಳ ನಡುವಿನ ಸೇತುವೆಯಾಗಿತ್ತು. ಅದು ವಸಾಹತುಶಾಹಿ ಸಂಬಂಧಗಳು ಮತ್ತು ಸ್ವಾತಂತ್ರ್ಯೋತ್ತರ ಭಾರತೀಯ ಹೆಮ್ಮೆ ಎರಡನ್ನೂ ಪ್ರತಿನಿಧಿಸುತ್ತದೆ. ಹೆಸರನ್ನು ಅಳಿಸುವುದು ಈ ಸಂಬಂಧಗಳನ್ನು ಕಡಿದುಹಾಕುತ್ತದೆ. ಹೆಸರು ಬದಲಾವಣೆಗೆ ಮುನ್ನ ಪಟೌಡಿ ಕುಟುಂಬ ಅಥವಾ ಕ್ರಿಕೆಟ್ ಜಗತ್ತಿನ ಪ್ರಮುಖ ಧ್ವನಿಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸಿರಲಿಲ್ಲ. ಇದು ಅಗೌರವ ಮತ್ತು ಪರಕೀಯತೆಯ ಭಾವನೆಗಳಿಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News