×
Ad

12,000 ವರ್ಷಗಳ ಬಳಿಕ ಹೈಲಿಗುಬ್ಬಿ ಜ್ವಾಲಾಮುಖಿ ಸ್ಫೋಟಿಸಿದ್ದು ಏಕೆ? ತಜ್ಞರು ಏನು ಹೇಳುತ್ತಾರೆ?

Update: 2025-11-25 20:39 IST

Photo Credit : X 

ಹೊಸದಿಲ್ಲಿ: ಸುದೀರ್ಘ ಸಮಯದಿಂದ ಸುಪ್ತವಾಗಿದ್ದ ಉತ್ತರ ಇಥಿಯೋಪಿಯಾದಲ್ಲಿಯ ಹೈಲಿ ಗುಬ್ಬಿ ಜ್ವಾಲಾಮುಖಿ ರವಿವಾರ ಸ್ಫೋಟಗೊಂಡಿದ್ದು, ಕೆಂಪು ಸಮುದ್ರದಾದ್ಯಂತ ಯೆಮೆನ್, ಒಮಾನ್ ಮತ್ತು ಭಾರತದ ಕೆಲವು ಭಾಗಗಳತ್ತವೂ ಎತ್ತರದ ಬೂದಿಯ ಅಲೆಗಳನ್ನು ರವಾನಿಸಿದೆ. ಅಡಿಸ್ ಅಬಾಬಾದಿಂದ ಈಶಾನ್ಯಕ್ಕೆ ಸುಮಾರು 800 ಕಿ.ಮೀ.ದೂರದಲ್ಲಿರುವ ಅಫ್ರಾರ್ ಪ್ರದೇಶದಲ್ಲಿಯ ಹೈಲಿ ಗುಬ್ಬಿ ಜ್ವಾಲಾಮುಖಿ ಸುಮಾರು 12,000 ವರ್ಷಗಳಿಂದಲೂ ಶಾಂತವಾಗಿತ್ತು. ರವಿವಾರ ಹಲವಾರು ಗಂಟೆಗಳ ಕಾಲ ಜಾಗ್ರತಗೊಂಡಿದ್ದು ನೆರೆಯ ಅಫ್ದೇರಾ ಗ್ರಾಮವು ಬೂದಿಯಿಂದ ಆವೃತಗೊಂಡಿತ್ತು.

ಈ ಘಟನೆಯನ್ನು ಅತ್ಯಂತ ಅಸಾಮಾನ್ಯ ಎಂದು ಬಣ್ಣಿಸಿರುವ ತಜ್ಞರು,ಪ್ರದೇಶದ ಜ್ವಾಲಾಮುಖಿ ಚಟುವಟಿಕೆಯ ಬಗ್ಗೆ ಸರಿಯಾದ ಅಧ್ಯಯನ ನಡೆದಿರಲಿಲ್ಲ ಎಂದಿದ್ದಾರೆ.

ಜ್ವಾಲಾಮುಖಿಯು 1,000 ಅಥವಾ 10,000 ವರ್ಷಗಳ ಕಾಲ ಶಾಂತವಾಗಿದ್ದರೂ ಶಿಲಾಪಾಕ ರೂಪುಗೊಳ್ಳಲು ಪೂರಕ ಸ್ಥಿತಿಗಳು ಇರುವವರೆಗೂ ಅದು ಯಾವಾಗ ಬೇಕಾದರೂ ಸ್ಫೋಟಿಸಬಹುದು ಎಂದು ನಾರ್ಥ್ ಕ್ಯಾರೋಲಿನಾ ಸ್ಟೇಟ್ ವಿವಿಯ ಜ್ವಾಲಾಮುಖಿ ತಜ್ಞೆ ಆರಿಯಾನಾ ಸೋಲ್ಡಾಟಿ ಅವರನ್ನು ಉಲ್ಲೇಖಿಸಿ ಸೈಂಟಿಫಿಕ್ ಅಮೆರಿಕನ್ ಮ್ಯಾಗಝಿನ್ ವರದಿ ಮಾಡಿದೆ.

ಗುರಾಣಿಯನ್ನು ಹೋಲುವ ಹೈಲಿ ಗುಬ್ಬಿ ಜ್ವಾಲಾಮುಖಿ ಪೂರ್ವ ಆಫ್ರಿಕಾದ ರಿಫ್ಟ್ ರೆನ್ ಅಥವಾ ಬಿರುಕು ವಲಯದಲ್ಲಿದ್ದು,ಈ ಪ್ರದೇಶದಲ್ಲಿ ಆಫ್ರಿಕನ್ ಮತ್ತು ಅರೆಬಿಯನ್ ಟೆಕ್ಟಾನಿಕ್ ಪ್ಲೇಟ್ ಅಥವಾ ಭೂಪಟಲ ಫಲಕಗಳು ವರ್ಷಕ್ಕೆ 0.4ರಿಂದ 0.6 ಇಂಚು ದರದಲ್ಲಿ ಕ್ರಮೇಣ ಬೇರ್ಪಡುತ್ತಿವೆ.

‘12,000 ವರ್ಷಗಳ ಹಿಂದೆ ನಿಜವಾಗಿಯೂ ಕೊನೆಯ ಬಾರಿಗೆ ಸ್ಫೋಟಿಸಿದ್ದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತದೆ ’ಎಂದು ಹೇಳಿದ ಇಂಗ್ಲಂಡ್‌ನ ಬ್ರಿಸ್ಟಲ್ ವಿವಿಯ ಭೂವಿಜ್ಞಾನಿ ಜೂಲಿಯಟ್ ಬಿಗ್ಸ್ ಅವರು,ಈ ಅವಧಿಯಲ್ಲಿ ಯಾವುದೇ ದೃಢೀಕೃತ ಸ್ಫೋಟಗಳು ಸಂಭವಿಸಿಲ್ಲವಾದರೂ ಜ್ವಾಲಾಮುಖಿಯು ಇತ್ತೀಚಿಗೆ ಲಾವಾವನ್ನು ಹೊರಕ್ಕೆ ಸೂಸಿರಬಹುದು ಎನ್ನುವುದನ್ನು ಉಪಗ್ರಹ ಚಿತ್ರಗಳು ಸೂಚಿಸಿವೆ. ಈ ಪ್ರದೇಶದಲ್ಲಿ ಬೃಹತ್ ಕೊಡೆಯ ಮೋಡದಂತಹ ಎತ್ತರದ ಸ್ಫೋಟದ ಸ್ತಂಭವನ್ನು ನೋಡುವುದು ನಿಜಕ್ಕೂ ಅಪರೂಪ ಎಂದರು.

ಜ್ವಾಲಾಮುಖಿ ಸ್ಫೋಟದಿಂದ ಯಾವುದೆ ಸಾವುನೋವುಗಳು ಸಂಭವಿಸಿಲ್ಲ,ಆದರೆ ಅದು ಜಾನುವಾರು ಸಾಕಣೆ ಸಮುದಾಯಗಳ ಮೇಲೆ ತೀವ್ರ ಪರಿಣಾಮವನ್ನು ಬೀರಬಹುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದರು.

ಹೈಲಿ ಗುಬ್ಬಿ ಸ್ಫೋಟಗೊಳ್ಳಬಹುದು ಎಂಬ ಮುನ್ಸೂಚನೆಗಳನ್ನು ವಿಜ್ಞಾನಿಗಳು ಮೊದಲೇ ಗಮನಿಸಿದ್ದರು. ಜುಲೈನಲ್ಲಿ ಸಮೀಪದ ಎರ್ಟಾ ಏಲ್ ಜ್ವಾಲಾಮುಖಿ ಸ್ಫೋಟಗೊಂಡಿತ್ತು ಮತ್ತು ಹೈಲಿ ಗುಬ್ಬಿ ಕೆಳಗಿನ ನೆಲದ ಚಲನೆಯನ್ನು ಪ್ರಚೋದಿಸಿತ್ತು ಮತ್ತು ಮೇಲ್ಮೈಯಿಂದ ಸುಮಾರು 30 ಕಿ.ಮೀ.ಆಳದಲ್ಲಿ ಶಿಲಾಪಾಕದ ಒಳನುಗ್ಗುವಿಕೆಯನ್ನು ಬಹಿರಂಗಗೊಳಿಸಿತ್ತು. ರವಿವಾರದ ಸ್ಫೋಟಕ್ಕೂ ಮುನ್ನ ಹೈಲಿ ಗುಬ್ಬಿಯ ಶಿಖರದಲ್ಲಿ ಬಿಳಿಯ ಹಗುರ ಮೋಡಗಳನ್ನು ಮತ್ತು ನೆಲವು ಸ್ವಲ್ಪ ಮೇಲಕ್ಕೆದ್ದಿರುವುದನ್ನು ಬಿಗ್ಸ್ ಮತ್ತು ಅವರ ಸಹವರ್ತಿಗಳು ದಾಖಲಿಸಿದ್ದರು.

ಜ್ವಾಲಾಮುಖಿ ಸ್ಫೋಟದ ಸಮಯದಲ್ಲಿ ಇಥಿಯೋಪಿಯಾದಲ್ಲಿದ್ದ ಸೌಥ್‌ಹ್ಯಾಂಪ್ಟನ್ ವಿವಿಯ ಭೂ ವಿಜ್ಞಾನಿ ಡೆರೆಕ್ ಕೀರ್ ಅವರು ಸೋಮವಾರ ಬೂದಿಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಶಿಲಾಪಾಕದ ವಿಧವನ್ನು ಮತ್ತು ಜ್ವಾಲಾಮುಖಿ ನಿಜಕ್ಕೂ 12,000 ವರ್ಷಗಳಿಂದ ಸುಪ್ತವಾಗಿತ್ತೇ ಎನ್ನುವುದನ್ನು ನಿರ್ಧರಿಸಲು ಈ ಮಾದರಿಗಳು ನೆರವಾಗಲಿವೆ ಎಂದು ಬಿಗ್ಸ್ ಹೇಳಿದರು.

ಫ್ರಾನ್ಸ್‌ನ ಟೌಲೋಸ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರದ ಪ್ರಕಾರ ಬೂದಿಯ ಮೋಡಗಳು ಆಗಸದಲ್ಲಿ 14 ಕಿ.ಮೀ.ಗಳಷ್ಟು ಎತ್ತರಕ್ಕೆ ಚಿಮ್ಮಿದ್ದು,ಯೆಮೆನ್,ಒಮಾನ್, ಭಾರತ ಮತ್ತು ಉತ್ತರ ಪಾಕಿಸ್ತಾನದಲ್ಲಿ ಪರಿಣಾಮಗಳು ಗೋಚರವಾಗಿವೆ. ಸುಮಾರು 500 ಮೀ.ಗಳಷ್ಟು ಎತ್ತರವಿರುವ ಹೈಲಿ ಗುಬ್ಬಿ ಟೆಕ್ಟಾನಿಕ್ ಪ್ಲೇಟ್‌ಗಳು ಸಂಧಿಸುವ ಭೌಗೋಳಿಕವಾಗಿ ಸಕ್ರಿಯವಾಗಿರುವ ರಿಫ್ಟ್ ವ್ಯಾಲಿಯೊಳಗಿದೆ.

ಕೃಪೆ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News