ಅಮಿತ್ ಶಾ ಇರುವ ಹೋಟೆಲ್‌ನಲ್ಲಿ ಸಿಸಿಟಿವಿಗಳನ್ನು ಏಕೆ ಆಫ್ ಮಾಡಲಾಗಿದೆ?: ಕಾಂಗ್ರೆಸ್ ಪ್ರಶ್ನೆ
ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಪವನ್ ಖೇರಾ
Screengrab:X/@iamharmeetK
ಹೊಸದಿಲ್ಲಿ: ದಿಲ್ಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ನಂತರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಹರ್ಯಾಣದ ಫರಿದಾಬಾದ್‌ನಲ್ಲಿ 360 ಕೆಜಿ ಸ್ಫೋಟಕ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಖೇರಾ ಕೇಂದ್ರ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶಗಳ ಮುನ್ನ ಅಮಿತ್ ಶಾ ಅಧಿಕಾರಿಗಳೊಂದಿಗೆ “ರಹಸ್ಯ ಸಭೆಗಳನ್ನು” ನಡೆಸುತ್ತಿದ್ದಾರೆ ಎಂದು ಖೇರಾ ಇತ್ತೀಚೆಗೆ ಆರೋಪಿಸಿದ್ದರು.
“ಅಮಿತ್ ಶಾ ತಂಗಿದ್ದ ಹೋಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಏಕೆ ಆಫ್ ಮಾಡಲಾಗಿದೆ? ಅವರು ಯಾರೊಂದಿಗೆ ರಹಸ್ಯವಾಗಿ ಭೇಟಿಯಾಗುತ್ತಿದ್ದಾರೆ? ಬಿಹಾರವನ್ನು ಗೆಲ್ಲಲು ಅಧಿಕಾರಿಗಳನ್ನು ರಹಸ್ಯವಾಗಿ ಸಭೆ ನಡೆಸುತ್ತಿದ್ದಾರೆಯೇ?” ಎಂದು ಖೇರಾ ಪ್ರಶ್ನಿಸಿದ್ದರು.
ಅಸ್ಸಾಂ ಕಾಂಗ್ರೆಸ್ ನಾಯಕಿ ಹರ್ಮೀತ್ ಕೌರ್ ಅವರು ಈ ಸಂಬಂಧ ಖೇರಾ ಅವರ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡು, “ದಿಲ್ಲಿಯ ಕೆಂಪುಕೋಟೆಯ ಸ್ಫೋಟಕ್ಕೆ ಅಮಿತ್ ಶಾ ನೇರವಾಗಿ ಹೊಣೆಗಾರರು. ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಪೋಸ್ಟ್ ಮಾಡಿದ್ದಾರೆ.
ಖೇರಾ ಹಂಚಿಕೊಂಡ ವೀಡಿಯೊ ಕ್ಲಿಪ್‌ನಲ್ಲಿ, ಹೋಟೆಲ್ ಸೀಲಿಂಗ್‌ನಲ್ಲಿ ಸುತ್ತ ಸಿಸಿಟಿವಿ ಮುಚ್ಚುವಂತೆ ಕಾಗದ ಹಚ್ಚಿರುವುದು ಕಾಣುತ್ತದೆ. “ಗೃಹ ಸಚಿವರು ಪಾಟ್ನಾಗೆ ಬಂದಾಗಲೆಲ್ಲಾ, ಹೋಟೆಲ್ ಲಿಫ್ಟ್‌ನಲ್ಲಿರುವ ಸಿಸಿಟಿವಿ ಮೇಲೆ ಕಾಗದ ಅಂಟಿಸಲಾಗುತ್ತದೆ. ಅವರು ಅಧಿಕಾರಿಗಳೊಂದಿಗೆ ರಹಸ್ಯ ಸಭೆ ನಡೆಸುತ್ತಾರಾ? ಇದು ಭದ್ರತಾ ಉಲ್ಲಂಘನೆ. ಏಕೆ ಈ ರಹಸ್ಯ?” ಎಂದು ಖೇರಾ ಪ್ರಶ್ನಿಸಿದ್ದಾರೆ.
ಹರ್ಯಾಣ ಮತ್ತು ಬಿಹಾರ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಭಾರತೀಯ ಚುನಾವಣಾ ಆಯೋಗ ಸೇರಿ “ಮತದಾರರ ಪಟ್ಟಿಯನ್ನು ಬದಲಾಯಿಸಿ ಜನರ ಹಕ್ಕು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ” ಎಂದು ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
“ತಲೆಮಾರುಗಳಿಂದ ಮತ ಚಲಾಯಿಸುತ್ತಿದ್ದವರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಬಿಹಾರದಲ್ಲಿ ಎಸ್‌ಐಆರ್ ಪ್ರದರ್ಶನ ವಿಫಲವಾಗಿದೆ. ಇದೇ ಮಾದರಿಯಲ್ಲಿ ಹರ್ಯಾಣದಲ್ಲಿಯೂ ಮತ ಕಳವು ನಡೆದಿದೆ. ಇದೇ ಕಾರಣಕ್ಕೆ ಹರ್ಯಾ ಣದಲ್ಲಿ ಸರ್ಕಾರ ರಚಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಖೇರಾ ಹೇಳಿದರು.