ಐಐಎಂ-ಕಲ್ಕತ್ತಾ ಹಾಸ್ಟೆಲ್ ನಲ್ಲಿ ಯುವತಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಆರೋಪ: ಓರ್ವನ ಬಂಧನ
ಸಾಂದರ್ಭಿಕ ಚಿತ್ರ (PTI)
ಕೋಲ್ಕತ್ತಾ: ಕಲ್ಕತ್ತಾ ಐಐಎಂ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಓರ್ವ ಯುವತಿಯ ಮೇಲೆ ಅದೇ ಸಂಸ್ಥೆಯ ವಿದ್ಯಾರ್ಥಿಯೊಬ್ಬ ಬಿಸಿನೆಸ್ ಶಾಲೆಯ ವಿದ್ಯಾರ್ಥಿ ನಿಲಯದಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಯುವತಿಯು ಹರಿದೇವಪುರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಾಥಮಿಕ ಮಾಹಿತಿ ವರದಿಯನ್ನು ಆಧರಿಸಿ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯು ಶುಕ್ರವಾರ ಕಲ್ಕತ್ತಾ ಐಐಎಂ ಸಂಸ್ಥೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಮಾಲೋಚನಾ ಅವಧಿಗಾಗಿ ನನ್ನನ್ನು ವಿದ್ಯಾರ್ಥಿ ನಿಲಯಕ್ಕೆ ಆಹ್ವಾನಿಸಲಾಗಿತ್ತು. ಆದರೆ, ವಿದ್ಯಾರ್ಥಿ ನಿಲಯದಲ್ಲಿ ನೀಡಿದ ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ಕುಡಿದ ನಂತರ, ನಾನು ಪ್ರಜ್ಞಾಹೀನಳಾದೆ. ಆದರೆ, ನನಗೆ ಪ್ರಜ್ಞೆ ಮರಳಿದ ನಂತರ, ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬ ಸಂಗತಿ ಅರಿವಾಯಿತು ಎಂದು ಸಂತ್ರಸ್ತ ಯುವತಿ ದಾಖಲಿಸಿರುವ ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಸಂಗತಿಯನ್ನು ಯಾರಿಗಾದರೂ ತಿಳಿಸಿದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ವಿದ್ಯಾರ್ಥಿಯು ತನಗೆ ಬೆದರಿಕೆ ಒಡ್ಡಿದ ಎಂದೂ ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಹದಿನೈದು ದಿನಗಳ ಹಿಂದೆ ಕೋಲ್ಕತ್ತಾದ ಕಾನೂನು ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು.