ಬಿಹಾರದಲ್ಲಿ 22.7 ಲಕ್ಷ ಮಹಿಳಾ ಮತದಾರರ ಹೆಸರುಗಳನ್ನು ಅಳಿಸಲಾಗಿದೆ: ವರದಿ
ಸಾಂದರ್ಭಿಕ ಚಿತ್ರ | Photo Credit : NDTV
ಹೊಸದಿಲ್ಲಿ: ಬಿಹಾರದಲ್ಲಿ 22.7 ಲಕ್ಷ ಮಹಿಳಾ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು,ಇದು ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮವನ್ನು ಬೀರುವ ನಿರೀಕ್ಷೆಯಿದೆ ಎಂದು The Tribune ವರದಿ ಮಾಡಿದೆ.
3.5 ಕೋಟಿ ಮಹಿಳಾ ಮತದಾರರ ಪೈಕಿ 22.7 ಲಕ್ಷ ಹೆಸರುಗಳನ್ನು ಮತ್ತು 3.92 ಕೋಟಿ ಪುರುಷ ಮತದಾರರ ಪೈಕಿ 15.5 ಲಕ್ಷ ಹೆಸರುಗಳನ್ನು ಅಳಿಸಲಾಗಿದ್ದು, ಇದರಿಂದಾಗಿ ಅಳಿಸುವಿಕೆಯಲ್ಲಿ ಲಿಂಗ ಅಂತರ ಕಂಡುಬಂದಿದೆ. ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮಹಿಳಾ ಮತದಾರರಿಗೆ ಹೋಲಿಸಿದರೆ ಅವರ ಪೈಕಿ ಕಡಿಮೆ ಅಳಿಸುವಿಕೆ ಕಂಡು ಬಂದಿದೆ.
ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿಕೂಟವು ಮಹಿಳಾ ಕಲ್ಯಾಣಕ್ಕೆ ಒತ್ತು ನೀಡಿ ಅದನ್ನೇ ತನ್ನ ಚುನಾವಣಾ ಪ್ರಚಾರದ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿರುವ ಸಮಯದಲ್ಲೇ ಮಹಿಳಾ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ಅಳಿಸಲಾಗಿದೆ.
ಗೋಪಾಲಗಂಜ್ ಜಿಲ್ಲೆಯಲ್ಲಿ 1.5 ಲಕ್ಷದಷ್ಟು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರ ಹೆಸರುಗಳನ್ನು ಅಳಿಸಲಾಗಿದೆ(ಶೇ.15.1 ಇಳಿಕೆ). ನಂತರದ ಸ್ಥಾನಗಳಲ್ಲಿ ಮಧುಬನಿ(1.3 ಲಕ್ಷ ಮಹಿಳಾ ಮತದಾರರು) ಮತ್ತು ಪೂರ್ವ ಚಂಪಾರಣ(1.1 ಲಕ್ಷ ಮಹಿಳಾ ಮತದಾರರು) ಜಿಲ್ಲೆಗಳಿವೆ.
ಸರನ್ ಮತ್ತು ಭಾಗಲ್ಪುರ ಜಿಲ್ಲೆಗಳಲ್ಲಿಯೂ ಸುಮಾರು ಒಂದು ಲಕ್ಷ ಮಹಿಳಾ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಪಾಟ್ನಾ ಕೂಡ ಇದೇ ಸಾಲಿಗೆ ಸೇರಿದೆ. ಈ ಎಲ್ಲ ಆರೂ ಜಿಲ್ಲೆಗಳು ಒಟ್ಟು 59 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ.
2020ರ ಚುನಾವಣೆಗಳಲ್ಲಿ ಪ್ರತಿಪಕ್ಷಗಳ ಮಹಾಘಟಬಂಧನ ಈ ಜಿಲ್ಲೆಗಳಲ್ಲಿ 25 ಸ್ಥಾನಗಳನ್ನು ಮತ್ತು ಎನ್‌ಡಿಎ 34 ಸ್ಥಾನಗಳನ್ನು ಗೆದ್ದಿದ್ದವು.