×
Ad

ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್‌, ಖಾತೆಗಳ ನಿರ್ಬಂಧಿಸುವ ಕೇಂದ್ರ ಸರ್ಕಾರದ ಆದೇಶಕ್ಕೆ X ಅಸಮ್ಮತಿ

Update: 2024-02-22 11:20 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ಕೆಲವೊಂದು ಖಾತೆಗಳನ್ನು ಹಾಗೂ ಪೋಸ್ಟ್‌ಗಳನ್ನು ತಡೆಹಿಡಿಯುವಂತೆ ಭಾರತ ಸರ್ಕಾರವು ಆದೇಶಿಸಿದೆ ಎಂದು ಎಲಾನ್‌ ಮಸ್ಕ್‌ ನೇತೃತ್ವದ ಸಾಮಾಜಿಕ ಜಾಲತಾಣ ಸಂಸ್ಥೆ ʼಎಕ್ಸ್‌ʼ  ಹೇಳಿದೆ. ಇಂತಹ ಕ್ರಮಗಳಿಗೆ ತನ್ನ ಸಹಮತವಿಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿರುವಾಗ ಇಂತಹ ಪೋಸ್ಟ್‌ಗಳನ್ನು ತಡೆಹಿಡಿಯಬಾರದು ಎಂದು ಅದು ಹೇಳಿದೆ.

ಕಾನೂನಾತ್ಮಕ ನಿರ್ಬಂಧಗಳಿಂದಾಗಿ ಭಾರತ ಸರ್ಕಾರದ ಆದೇಶವನ್ನು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎಂದು ಎಕ್ಸ್‌ ನ ಜಾಗತಿಕ ಸರ್ಕಾರಿ ವ್ಯವಹಾರಗಳ ತಂಡ ಹೇಳಿದೆ, ಅದೇ ಸಮಯ ಆದೇಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಅದು ಹೇಳಿದೆ. ಬುಧವಾರ ಮಧ್ಯರಾತ್ರಿ ಎಕ್ಸ್‌ ನಲ್ಲಿ ಸಂಸ್ಥೆಯ ಆಡಳಿತ ಮಾಡಿರುವ ಈ ಪೋಸ್ಟ್‌ ಕುರಿತು ಕೇಂದ್ರ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

“ಕೆಲ ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹಾಗೂ ತಪ್ಪಿದಲ್ಲಿ ಗಣನೀಯ ದಂಡ ಮೊತ್ತ ಮತ್ತು ಜೈಲು ಶಿಕ್ಷೆ ಮುಂತಾದ ಕ್ರಮಗಳಿರುವ ಕುರಿತಂತೆ ಭಾರತ ಸರ್ಕಾರದ ಆದೇಶ ತಿಳಿಸಿದೆ,” ಎಂದು ಎಕ್ಸ್‌ ತನ್ನ ಪೋಸ್ಟ್‌ನಲ್ಲಿ ಹೇಳಿದೆ.

“ಈ ಆದೇಶಕ್ಕೆ ಬದ್ಧವಾಗಿ ಈ ಖಾತೆಗಳು ಮತ್ತು ಪೋಸ್ಟ್‌ಗಳನ್ನು ಭಾರತದಲ್ಲಿ ಮಾತ್ರ ತಡೆಹಿಡಿಯುತ್ತೇವೆ, ಆದರೆ ಈ‌ ಕ್ರಮಗಳ ಬಗ್ಗೆ ನಮಗೆ ಸಹಮತವಿಲ್ಲ, ಈ ಪೋಸ್ಟ್‌ಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸಬೇಕು,” ಎಂದು ಎಕ್ಸ್‌ ಹೇಳಿದೆ.

“ನಮ್ಮ ನಿಲುವಿಗೆ ಬದ್ಧವಾಗಿ, ಭಾರತ ಸರ್ಕಾರದ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲು ಬಾಕಿಯಿದೆ. ಸರ್ಕಾರದ ಆದೇಶಾನುಸಾರ ಕೈಗೊಳ್ಳಲಾಗಿರುವ ಕ್ರಮದ ಕುರಿತಂತೆ ಸಂಬಂಧಿತರಿಗೆ ಸೂಚನೆ ನೀಡಲಾಗಿದೆ,” ಎಂದು ಎಕ್ಸ್‌ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News