×
Ad

ಗ್ರೀಕ್‌ ದ್ವೀಪ ರೋಡ್ಸ್‌ನಲ್ಲಿ ಭೀಕರ ಕಾಡ್ಗಿಚ್ಚು; 19,000ಕ್ಕೂ ಅಧಿಕ ಜನರ ಸ್ಥಳಾಂತರ

Update: 2023-07-24 23:57 IST

Photo: NDTV

ರೋಡ್ಸ್‌: ಗ್ರೀಕ್‌ ದ್ವೀಪ ರೋಡ್ಸ್‌ನಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಒಂದು ವಾರದಿಂದಲೂ ನಿಯಂತ್ರಣಕ್ಕೆ ಬಾರದೆ ಇನ್ನಷ್ಟು ಪ್ರದೇಶಕ್ಕೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದ್ವೀಪದಿಂದ 19,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಭಾರೀ ಗಾಳಿ ಹಾಗೂ ಉಷ್ಣ ಮಾರುತದಿಂದ ದೇಶದ ಇನ್ನೂ ಮೂರು ಕಡೆ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ವಾರಾಂತ್ಯದ ಸಂದರ್ಭ ದಕ್ಷಿಣ ರೋಡ್ಸ್‌ಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ರವಿವಾರ ಹಲವು ಕರಾವಳಿ ಪ್ರದೇಶಗಳಿಗೆ ಕಾಡ್ಗಿಚ್ಚು ವ್ಯಾಪಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶದಿಂದ ಸುಮಾರು 19,000 ಜನರನ್ನು ಬಸ್ಸು ಹಾಗೂ ದೋಣಿಗಳ ಮೂಲಕ ಸ್ಥಳಾಂತರ ಮಾಡಿದ್ದು ಇವರಲ್ಲಿ ಹೆಚ್ಚಿನವರು ಪ್ರವಾಸಿಗರು. ಈ ಮಧ್ಯೆ, ಯುರೋಪಿಯನ್‌ ಯೂನಿಯನ್‌ ಹಾಗೂ ಇತರ ದೇಶಗಳು ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಕೈಜೋಡಿಸಿದ್ದು ಟರ್ಕಿ ದೇಶ 8 ನೀರು ಎರಚುವ ವಿಮಾನಗಳು ಹಾಗೂ 10 ಹೆಲಿಕಾಪ್ಟರ್‌ಗಳನ್ನು ಒದಗಿಸಿದೆ. ಈ ಹೆಲಿಕಾಪ್ಟರ್‌ಗಳು ಬೆಂಕಿಬಿದ್ದಿರುವ ಪ್ರದೇಶದಲ್ಲಿ ಗೋಚರತೆ ಕಡಿಮೆಯಿದ್ದರೂ ನೆಲದಿಂದ 5 ಮೀಟರ್‌ನಷ್ಟು ಎತ್ತರದಲ್ಲಿ ಕಾರ್ಯಾಚರಿಸಲು ಸಮರ್ಥವಾಗಿವೆ.

ದಕ್ಷಿಣ ಗ್ರೀಕ್‌ ಮೈನ್‌ಲ್ಯಾಂಡ್‌ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಶಿಯಸ್‌ಗೂ ಹೆಚ್ಚಿರುವುದರಿಂದ ಗ್ರೀಸ್‌ನ ಹಲವು ಪ್ರದೇಶಗಳಲ್ಲಿ ಸೋಮವಾರ ಬೆಂಕಿ ಹರಡುವ ಅಪಾಯ ಗರಿಷ್ಟವಾಗಿದೆ ಎಂದು ಟರ್ಕಿ ಅಗ್ನಿಶಾಮಕ ದಳದ ವಕ್ತಾರ ವ್ಯಾಸಿಲಿಸ್‌ ವಥ್ರಕೊಗಿಯಾನಿಸ್‌ ಹೇಳಿದ್ದಾರೆ. ದಕ್ಷಿಣದ ಕೊರ್ಫು ದ್ವೀಪ, ಎವಿಯಾ ದ್ವೀಪ ಹಾಗೂ ಪೆಲೊಪೊನೆಸ್‌ ಪ್ರಾಂತದ ಪರ್ವತ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ 2,000ಕ್ಕೂ ಅಧಿಕ ಜನರನ್ನು ರವಿವಾರ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರೋಡ್ಸ್‌ ದ್ವೀಪದ ಶಾಲೆಗಳು, ಮೈದಾನ, ಕ್ರೀಡಾ ಕೇಂದ್ರಗಳಲ್ಲಿ ತಾತ್ಕಾಲಿಕ ಶಿಬಿರವನ್ನು ತೆರೆಯಲಾಗಿದ್ದು ಇಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆಯನ್ನು ನಿಯೋಜಿಸಲಾಗಿದೆ. ಗ್ರೀಕ್‌ ಪ್ರಧಾನಿ ಕಿರಿಯಾಕೊಸ್‌ ಮಿಟ್ಸೊಟಕಿಸ್‌ಗೆ ಕರೆ ಮಾಡಿರುವ ಯುರೋಪಿಯನ್‌ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್‌ಡರ್‌ ಹೆಚ್ಚುವರಿ ನೆರವಿನ ವಾಗ್ದಾನ ನೀಡಿದ್ದಾರೆ. 266 ಅಗ್ನಿಶಾಮಕ, 10 ಹೆಲಿಕಾಪ್ಟರ್‌ಗಳನ್ನು ಬೆಂಕಿ ನಂದಿಸಲು ಬಳಸಿಕೊಳ್ಳಲಾಗಿದೆ. ನೂರಾರು ಸ್ವಯಂಸೇವಕರೂ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ . ದಾಖಲೆ ಪತ್ರಗಳನ್ನು ಕಳೆದುಕೊಂಡಿರುವ ಪ್ರವಾಸಿಗರ ನೆರವಿಗಾಗಿ ವಿದೇಶಾಂಗ ಸಚಿವಾಲಯದ ಸಿಬಂದಿಗಳನ್ನು ರೋಡ್ಸ್‌ ವಿಮಾನ ನಿಲ್ದಾಣದಲ್ಲಿ ಮಾಹಿತಿ ಕೇಂದ್ರಗಳನ್ನು ಆರಂಭಿಸಲು ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News