×
Ad

ರಾಯಚೂರು ಜಿಲ್ಲೆಯಲ್ಲಿ ತಗ್ಗಿದ ಮಳೆ: ಬೆಳೆ ಹಾನಿಯಿಂದ ಕಂಗೆಟ್ಟ ರೈತರು

ಪರಿಹಾರ ನೀಡಲು ಸರಕಾರಕ್ಕೆ ಒತ್ತಾಯ

Update: 2025-09-29 14:47 IST

ರಾಯಚೂರು:  ಕಳೆದ ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಕೃಷ್ಣ ಹಾಗೂ ತುಂಗಭದ್ರಾ ನದಿಗಳಿಗೆ ನಾರಾಯಣಪುರ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್‌ನೀರು ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಗಡಿ ಗ್ರಾಮಗಳಲ್ಲಿ ಬೆಳೆಗಳು ಹಾಳಾಗಿವೆ. ಕಷ್ಟ ಪಟ್ಟು ಬೆಳೆದ ರೈತರು ಕಂಗೆಟ್ಟು ಹೋಗಿದ್ದಾರೆ.

ರಾಯಚೂರು ತಾಲೂಕಿನ ಗುರ್ಜಾಪುರ, ಕೊರ್ವಿಹಾಳ, ಡಿ.ರಾಂಪೂರು, ಮಂಡಲಗೇರ, ಸರ್ಜಾಪುರ, ಆತ್ಕೂರು, ದೇವದುರ್ಗದ ಯರಮಸಾಳ ಸೇರಿ ಸಿಂಧನೂರು ತಾಲೂಕಿನ ಹಲವೆಡೆ ಹತ್ತಿ, ಭತ್ತ, ತೊಗರಿ ಬೆಳೆಗಳು ಹಾಳಾಗಿವೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆಗಳಿಗೆ ನೀರು ನುಗ್ಗಿದ್ದು ಹತ್ತಿ ಕಪ್ಪು ಬಣ್ಣಕ್ಕೆ ತಿರುಗಿದೆ. ಭತ್ತದ ಬೆಳೆಗಳು ಸಂಪೂರ್ಣ ಜಲಾವೃತ್ತವಾಗಿದ್ದು ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ರಾಯಚೂರು ತಾಲೂಕಿನ ಕೃಷ್ಣಾ ನದಿ ದಂಡೆಯ ಮೇಲಿರುವ ಕೊರತಕುಂದ, ಡೋಂಗರಾಮಪುರ ರೈತರ ಗದ್ದೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಒಂದೆಡೆ ಬೇಸಿಗೆಯಲ್ಲಿ ನೀರಿನ ಕೊರತೆ ಮಳೆಗಾಲದಲ್ಲಿ ಅತಿವೃಷ್ಟಿಯ ಕೊರತೆ ಇವರಿಗೆ ಹಲವಾರು ವರ್ಷಗಳಾದರೂ ಪರಿಹಾರವೇ ನೀಡಿಲ್ಲ.

ಮಾಮಡದೊಡ್ಡಿ ನರಸಣ್ಣ, ಶ್ರೀಮಂತ ಕೊಂಡಿ ಜಗದೀಶ, ಡೊಂಗರಾಂಪುರ ಗಡ್ಡಮೀದಿ ವೆಂಕಟೇಶ ಇವರು ಹೊಲಗಳು ಸಂಪೂರ್ಣವಾಗಿ ಮುಳುಗಿವೆ. ಲಿಂಗಸುಗೂರು ತಾಲೂಕಿನ ಹಲವು ಗ್ರಾಮಗಳಲ್ಲಿ ನಿರಂತರ ಮಳೆಯಿಂದ ಕೊಯ್ಲಿಗೆ ಬಂದ ಸೂರ್ಯಕಾಂತಿ, ಸಜ್ಜೆ, ಹತ್ತಿ ಮೊಳಕೆ ಒಡೆಯುತ್ತಿದೆ. ನಿರಂತರ ಮಳೆಗೆ ಈಗ ಬೆಳೆ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಹತ್ತಿ ಬೆಳೆಗೆ ಕಂಟಕವಾದ ಮಳೆ: ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಜಿಲ್ಲೆಯ ಪ್ರಮುಖ ಬೆಳೆಯಾದ ಹತ್ತಿಗೆ ಕಂಟಕ ಎದುರಾಗಿದೆ. ಈಗಾಗಲೇ ಹತ್ತಿ ಕಾಯಿ ಒಡೆಯುತ್ತಿದ್ದು, ಗಿಡಗಳೆಲ್ಲ ಕೊಳೆತ ಪರಿಣಾಮ ಹತ್ತಿ ಗುಣಮಟ್ಟ ಹಾಳಾಗುವ ಭೀತಿ ಶುರುವಾಗಿದೆ.

ಬಯಲುಸೀಮೆಯ ಜಮೀನುಗಳು ಅಗತ್ಯಕ್ಕಿಂತ ಹೆಚ್ಚು ತೇವಗೊಂಡಿದ್ದು, ನೀರು ಇಂಗದೆ ಹೊಲಗಳಲ್ಲೇ ನಿಲ್ಲುತ್ತಿದೆ. ಇದರಿಂದ ಬೆಳೆಗಳೆಲ್ಲ ಕೊಳೆಯುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಹತ್ತಿಗೆ ಅಂಟಿಕೊಂಡಿದ್ದ ತಾಮ್ರ ರೋಗ, ಕೀಟ ಬಾಧೆಗೆ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಕ್ರಿಮಿನಾಶಕ ಸಿಂಪಡಿಸಿದ್ದರು. ಕಾಯಿಗಳು ಒಡೆಯುವ ಸಮಯದಲ್ಲಿ ಮತ್ತೆ ಮತ್ತೆ ವರುಣ ಕಾಡುತ್ತಿದ್ದು, ರೈತರು ಕಂಗಲಾಗಿದ್ದಾರೆ.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News