ಪುರುಷರ ‘ಗೌರವ’ಕ್ಕಿಲ್ಲ ಬೆಲೆ, ಮಹಿಳಾ ಘಟಕ ಮಾತ್ರ ನಿರ್ವಹಣೆ
ಕೋಟಿ ವೆಚ್ಚದ ಶೌಚಾಲಯವಿದ್ದರೂ ಬಯಲು ಶೌಚಕ್ಕೆ ಮರಳಿದ ಜನ
ಕುಕನೂರು: ಪಟ್ಟಣದ ವಾರ್ಡ್ ನಂಬರ್ 4ರಲ್ಲಿ ನಿರ್ಮಿಸಲಾದ ಹೈಟೆಕ್ ಶೌಚಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ, ಪುರುಷರು ತೀವ್ರ ಅವಮಾನ ಅನುಭವಿಸುತ್ತಿದ್ದಾರೆ. ಮಹಿಳಾ ಶೌಚಾಲಯಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ, ‘ಹೆಸರಿನಲ್ಲಿ ಪುರುಷ ಗೌರವ ಘಟಕ’ ಎಂದು ಸೂಚಿಸಿರುವ ಬೋರ್ಡ್ ವಾಸ್ತವ ಬಳಕೆಯಲ್ಲಿ ನಾಚಿಕೆಗೇಡಿನ ಪರಿಸ್ಥಿತಿಗೆ ಕಾರಣವಾಗಿದೆ.
ಪುರುಷ ಶೌಚಾಲಯ ಎದುರು ‘ಬಯಲು ಶೌಚ ತ್ಯಜಿಸಿ ಪುರುಷ ಶೌಚಾಲಯ ಬಳಸಿ’ ಎಂದು ಫಲಕ ಹಾಕಿ ಜಾಗೃತಿ ಮೂಡಿಸಲಾಗಿತ್ತು. ಆದರೂ, ಶೌಚಾಲಯ ಸಂಪೂರ್ಣ ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸದೇ, ಜನರು ಹಳೆಯ ಅಭ್ಯಾಸವಾದ ಬಯಲು ಶೌಚಕ್ಕೆ ಹಿಂತಿರುಗಿದ್ದಾರೆ.
2015-16ನೇ ಸಾಲಿನಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಮಹಾಮಾಯ ತೇರಿನ ಗಡ್ಡಿಯ ಸಮೀಪ ನಿರ್ಮಿಸಲಾದ ಶೌಚಾಲಯಗಳಲ್ಲಿ ಸುಮಾರು 6 ವರ್ಷಗಳಿಂದ ಪುರುಷರ ವಿಭಾಗ ಕಾರ್ಯಾರಂಭವಾಗದೆ ಇದೆ. ಇದರಿಂದಾಗಿ, ಬಡಾವಣೆ ಮತ್ತು ಹೊರಗ್ರಾಮದಿಂದ ಬರುವ ಜನರು ತೊಂದರೆಗೆ ಈಡಾಗಿದ್ದಾರೆ.
ಸುಮಾರು 25 ಸಾವಿರ ಅಧಿಕ ಜನಸಂಖ್ಯೆವಿರುವ ಪಟ್ಟಣದಲ್ಲಿ 19 ವಾರ್ಡುಗಳಿದ್ದರೂ, ಶೌಚಾಲಯ-ಮೂತ್ರಾಲಯ ವ್ಯವಸ್ಥೆ ಅಸಮರ್ಪಕವಾಗಿದೆ.ಪ್ರಮುಖ ರಸ್ತೆ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯು ಸ್ಪಷ್ಟವಾಗಿದೆ. ಪ್ರತಿವಾರ ಶುಕ್ರವಾರ ನಡೆಯುವ ಸಂತೆ ಸಂದರ್ಭದಲ್ಲಿ, ಬಡಾವಣೆಯಲ್ಲಿಯೇ ಕೆಲವರು ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಸ್ಥಳೀಯರಿಗೆ ದೊಡ್ಡತೊಂದರೆಯುಂಟು ಮಾಡುತ್ತಿದೆ.
ಮಹಿಳೆಯರು ಈ ಪ್ರದೇಶದಲ್ಲಿ ಸಂಚರಿಸುವಾಗ ತಲೆ ತಗ್ಗಿಸಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ತಮ್ಮ ಗೌರವವನ್ನು ಕಾಪಾಡಿಕೊಳ್ಳಲು, ನಿರ್ವಹಣೆ ಇಲ್ಲದ ಹಾಗೂ ಸೌಲಭ್ಯಗಳಿಲ್ಲದ ಶೌಚಾಲಯದ ಗೇಟ್ ಹಾರಿ ಒಳಗೆ ಹೋಗಿ ಶೌಚಕಾರ್ಯ ಮುಗಿಸುತ್ತಿದ್ದಾರೆ. ಇದರಿಂದಾಗಿ ಶೌಚಾಲಯದ ಪರಿಸರದಲ್ಲಿ ದುರ್ವಾಸನೆ ಹೆಚ್ಚಾಗಿ, ಸೊಳ್ಳೆ ಮತ್ತು ನೊಣಗಳ ಕಾಟ ಎದುರಾಗುತ್ತಿದೆ. ರೋಗ ಹರಡುವ ಭೀತಿಯೂ ಉಲ್ಬಣಗೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿ ಈ ಸಮಸ್ಯೆಯನ್ನು ತಕ್ಷಣ ಗಮನಿಸಿ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಕೂಡಲೇ ಸಮಸ್ಯೆಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ನಿರ್ವಹಣೆಗೆ ಒತ್ತು ಕೊಡಲಾಗುವುದು. ನೀರು ಮತ್ತು ವಿದ್ಯುತ್ ಸೇರಿದಂತೆ ಕೆಲವು ತಾಂತ್ರಿಕ ಅಡಚಣೆಗಳಿವೆ. ಅವುಗಳನ್ನು ಶೀಘ್ರದಲ್ಲಿ ಪರಿಹರಿಸಿ ಉಪಯೋಗಕ್ಕೆ ಸೂಚಿಸಲಾಗುವುದು.
-ನಾಗೇಶ, ಮುಖ್ಯಾಧಿಕಾರಿ, ಪ.ಪಂ.
ಪುರುಷರ ಹಾಗೂ ಮಹಿಳೆಯರ ಶೌಚಾಲಯ ಅಕ್ಕ ಪಕ್ಕದಲ್ಲಿದ್ದರೂ, ಪುರುಷ ಗೌರವ ಘಟಕ ಬಂದ್ ಮಾಡಿ ಅನ್ಯಾಯ ಮಾಡಿದಂತಾಗಿದೆ. ಇದು ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ದುಸ್ಥಿತಿ. ಶೌಚಾಲಯಗಳು ಕಾರ್ಯನಿರ್ವಹಿಸದೇ ಇರುವುದರಿಂದ ಪುರುಷರು ಬಡಾವಣೆಯ ಬಯಲು ಪ್ರದೇಶದಲ್ಲಿ ಶೌಚ, ಮೂತ್ರವಿಸರ್ಜನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಾಚಿಕೆಪಡುವ ಸಂಗತಿಯಾಗಿದೆ.
-ಗವಿಯಪ್ಪ ಸೋನಾರ, ಸ್ಥಳೀಯ ನಿವಾಸಿ
ಈ ಗಂಭೀರ ಸಮಸ್ಯೆ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೌಚಾಲಯಕ್ಕೆ ಮೂಲ ಸೌಲಭ್ಯವನ್ನು ಕಲ್ಪಿಸಿ ಶೀಘ್ರದಲ್ಲಿ ಬಳಕೆಗೆ ನೀಡಲು ಒತ್ತಾಯಿಸಿದ್ದೇನೆ.
-ನೂರುದ್ದೀನ್, ವಾರ್ಡ್ ಸದಸ್ಯ