‘ಪಂಜರದ ಗಿಳಿ’ಗೆ ಹಾರಲು ಬಿಡಿ
ಸಿಬಿಐ ಹಿನ್ನೆಲೆ ಕೆದಕುತ್ತಾ ಹೋದರೆ ಆತಂಕದ ವಿಷಯಗಳು ಬಿಚ್ಚಿಕೊಳ್ಳುತ್ತವೆ. ಇಷ್ಟಾದರೂ ಜನರಿಗೆ ಸಿಬಿಐ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಈಗಲೂ ರಾಜ್ಯ ಪೊಲೀಸರ ಮೇಲೆ ಅಪನಂಬಿಕೆ ಹೊಂದಿರುವ ಜನ ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವುದು ಕಂಡುಬರುತ್ತದೆ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬಂದು ನಿಜ ಆರೋಪಿಗಳಿಗೆ ಶಿಕ್ಷೆಯಾಗಬಹುದೆಂಬ ಸಣ್ಣ ಭರವಸೆ ಇದಕ್ಕೆ ಕಾರಣ. ಪೊಲೀಸರಿಗಿಂತ ಸಿಬಿಐನಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಕ್ಷತೆ-ವೃತ್ತಿಪರತೆ ಹಾಗೂ ನೈಪುಣ್ಯ ವಿಷಯದಲ್ಲಿ ಮುಂದಿದ್ದಾರೆ ಎಂಬುದು ಅವರ ಭಾವನೆ. ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸಬೇಕಿದೆ.
ದಿಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ‘ಆಮ್ ಆದ್ಮಿ ಪಕ್ಷ’ದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಸೋತು, ಗೆದ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ‘ಅಬಕಾರಿ ನೀತಿ ಹಗರಣ’ದ ಕಾನೂನು ಸಮರದಲ್ಲಿ ಗೆದ್ದು ಆರೋಪ ಮುಕ್ತರಾಗಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದವರೆಲ್ಲರೂ ನಿರಾಳರಾಗಿದ್ದಾರೆ. ತನಿಖಾಧಿಕಾರಿಗಳನ್ನು ದಿಲ್ಲಿ ‘ರೌಸ್ ಅವೆನ್ಯೂ ಕೋರ್ಟ್’ ಹಿಗ್ಗಾಮುಗ್ಗ ಜಾಡಿಸಿದೆ. ‘‘ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲದಿರುವುದರಿಂದ ಪ್ರಕರಣ ವಿಚಾರಣೆಗೆ ಯೋಗ್ಯವಲ್ಲ’’ ಎಂದು ಹೇಳಿದೆ.
ಕೇಜ್ರಿವಾಲ್ ಹಾಗೂ ಅವರ ಸಹೊದ್ಯೋಗಿಗಳು ಆರೋಪ ಮುಕ್ತರಾಗಿ ಹೊರ ಬರುವ ನಿರೀಕ್ಷೆ ‘ಕೇಂದ್ರ ತನಿಖಾ ದಳ’ (ಸಿಬಿಐ) ಅಥವಾ ಅವರ ರಾಜಕೀಯ ವೈರಿಗಳಿಗೆ, ಅದರಲ್ಲೂ ಬಿಜೆಪಿ ನಾಯಕರಿಗೆ ಇರಲಿಲ್ಲ. ತನಿಖೆ ಕುರಿತು ಕೋರ್ಟ್ ಕಟುವಾಗಿ ಟೀಕಿಸಿರುವುದನ್ನು ಗಮನಿಸಿದರೆ, ಇದು ‘ರಾಜಕೀಯ ಪ್ರೇರಿತ ಪ್ರಕರಣ’ ಎಂದು ಹೇಳಬಹುದು. ಹಗರಣ ರಾಜಕೀಯವಾಗಿಯೂ ಸೂಕ್ಷ್ಮವಾಗಿರುವುದರಿಂದ ಕೆಳ ಹಂತದ ಕೋರ್ಟ್ ಬೇಕಾಬಿಟ್ಟಿ ವಿಚಾರಣೆ ನಡೆಸಿರುವುದಿಲ್ಲ. ಎಲ್ಲ ಅಂಶಗಳನ್ನು ಪರಿಶೀಲಿಸಿಯೇ ತೀರ್ಪು ನೀಡಿರುತ್ತದೆ. ಆರೋಪದಲ್ಲಿ ಕೂದಲೆಳೆಯ ಅನುಮಾನ (ಅಯೋಟಾ ಆಫ್ ಡೌಟ್) ಇದ್ದರೂ ಕೇಜ್ರಿವಾಲ್ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಿತ್ತು.
ಈ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸುತ್ತಿದೆ. ಸಾಮಾನ್ಯವಾಗಿ ಮೇಲಿನ ಕೋರ್ಟ್ ಗಳು ಅಧೀನ ನ್ಯಾಯಾಲಯಗಳ ತೀರ್ಪನ್ನು ಬದಿಗೊತ್ತುವುದು ಅಪರೂಪ. ಅಪ್ಲಿಕೇಷನ್ ಆಫ್ ಫ್ಯಾಕ್ಟ್ಸ್, ಅಪ್ಲಿಕೇಷನ್ ಆಫ್ ಎವಿಡೆನ್ಸ್ ಅಥವಾ ಅಪ್ಲಿಕೇಷನ್ ಆಫ್ ಮೈಂಡ್‌ನಲ್ಲಿ ಲೋಪ ಅಥವಾ ಎರರ್ ಆಫ್ ಜಡ್ಜ್ ಮೆಂಟ್ ಇದ್ದರೆ ತದ್ವಿರುದ್ಧ ತೀರ್ಪು ಬರುತ್ತವೆ. ಅಧೀನ ನ್ಯಾಯಾಲಯ ಹಾಗೇನಾದರೂ ಮಾಡಿದ್ದರೆ ಮೇಲಿನ ಕೋರ್ಟ್ ಕಟುವಾದ ಆಕ್ಷೇಪ (ಸ್ಟ್ರಿಕ್ಚರ್ ಪಾಸ್ ಮಾಡುವ) ಎತ್ತುವ ಸಾಧ್ಯತೆಗಳಿರುತ್ತವೆ. ಇದರ ಬಗ್ಗೆಯೂ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಭಯವಿರುತ್ತದೆ. ಹೀಗಾಗಿ, ಸೂಕ್ಷ್ಮಾತಿಸೂಕ್ಷ್ಮ ಪ್ರಕರಣಗಳಲ್ಲಿ ತೀರ್ಪು ಕೊಡುವಾಗ ಎಚ್ಚರಿಕೆ ವಹಿಸುವುದುಂಟು.
ದಿಲ್ಲಿ ಕೋರ್ಟ್ ತೀರ್ಪಿನಿಂದ ಸಿಬಿಐ ನಡೆ ಮತ್ತೊಮ್ಮೆ ಅನುಮಾನಕ್ಕೆ ಎಡೆಮಾಡಿದೆ. ಸಿಬಿಐ, ಈ.ಡಿ., ಐ.ಟಿ ಮತ್ತಿತರ ಸಂಸ್ಥೆಗಳ ಮೇಲಿನ ಅಪನಂಬಿಕೆ ಹೊಸದಲ್ಲ. ಅಧಿಕಾರದಲ್ಲಿರುವ ಪಕ್ಷ ತನ್ನ ಎದುರಾಳಿಗಳನ್ನು ಬಗ್ಗುಬಡಿಯಲು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಆರೋಪವೂ ನಿರಂತರವಾಗಿದೆ. ಇದಕ್ಕೆ ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಕೆಲವು ಪ್ರಮುಖ ಪ್ರಕರಣಗಳ ತನಿಖೆಯಲ್ಲಿ ಸಿಬಿಐ, ಈ.ಡಿ. ನಿಷ್ಪಕ್ಷವಾಗಿರದೆ ಕಳಂಕ ಹೊತ್ತಿವೆ. ವೃತ್ತಿಪರತೆ, ದಕ್ಷತೆ ಮೆರೆಯಬೇಕಿದ್ದ ಸಂಸ್ಥೆಗಳು ಸರಕಾರದ ಕೈಗೊಂಬೆಯಾಗಿ ಕುಣಿಯುತ್ತಿವೆ. ಸುಪ್ರೀಂ ಕೋರ್ಟ್, ‘ಸಿಬಿಐ ಪಂಜರದ ಗಿಳಿ. ಸ್ವತಂತ್ರವಲ್ಲ. ಪೊಲಿಟಿಕಲ್ ಬಾಸ್‌ಗಳ ಬಾಲಂಗೋಚಿ. ಅವರ ದನಿಯಲ್ಲೇ ಮಾತನಾಡುತ್ತದೆ’ ಎಂದು ಲೇವಡಿ ಮಾಡಿತ್ತು. ಕಲ್ಲಿದ್ದಲು, ಎರಡನೇ ತಲೆಮಾರಿನ ತರಂಗಾಂತರ ಹಗರಣದ ವಿಚಾರಣೆ ವೇಳೆ ಅಫೆಕ್ಸ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿತ್ತು.
‘ಕಲ್ಲಿದ್ದಲು ಹಗರಣ’ದಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಕರಡು ವರದಿಯನ್ನು ತಿದ್ದಿದ ಹಿನ್ನೆಲೆಯಲ್ಲಿ ಯುಪಿಎ- 2 ಸರಕಾರದ ಕಾನೂನು ಮಂತ್ರಿ ಅಶ್ವನಿ ಕುಮಾರ್ ರಾಜೀನಾಮೆ ಕೊಡಬೇಕಾಯಿತು. ಮನಮೋಹನ್ ಸಿಂಗ್ ಬಗ್ಗೆ ಯಾರು ಏನೇ ಟೀಕಿಸಿದರೂ, ‘ಮೌನಿ ಸಿಂಗ್’ ಎಂದು ಜರಿದರೂ ಇಂಥ ವಿಷಯಗಳಲ್ಲಿ ಸೂಕ್ಷ್ಮವಾಗಿದ್ದರು. ಈ ಸಂದರ್ಭ ಈಗ ಎದುರಾಗಿದ್ದರೆ ಕಾನೂನು ಸಚಿವರು ರಾಜೀನಾಮೆ ನೀಡುವುದಿರಲಿ, ಎನ್‌ಡಿಎ ಸರಕಾರದ ಮುಖಂಡರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಕ್ಕಟ್ಟಿನಿಂದ ಪಾರಾಗಲು ದಾರಿ ಹುಡುಕುತ್ತಿದ್ದರು.
ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆ ಅಡಿ 1963ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಸ್ಥಾಪನೆ ಆದರೂ ಅದಕ್ಕೆ ಮಹತ್ವ ಬಂದಿದ್ದು 1980- 90ರ ದಶಕದಲ್ಲಿ. ‘ಬೋಫೋರ್ಸ್ ಹೌವಿಟ್ಝರ್’ ಖರೀದಿ ವ್ಯವಹಾರದಲ್ಲಿ ಕಮಿಷನ್ ಪಡೆಯಲಾಗಿದೆ ಎಂಬ ಆರೋಪ ಕುರಿತಾದ ತನಿಖೆಯನ್ನು ಸಿಬಿಐ ನಡೆಸಿದ ಬಳಿಕ. ಭ್ರಷ್ಟಾಚಾರ ಆರೋಪದ ಮಸಿ ಆಗಿನ ರಾಜೀವ್ ಗಾಂಧಿ ಸರಕಾರಕ್ಕೆ ಮೆತ್ತಿಕೊಂಡಿತ್ತು. ಬಳಿಕ, ಒಂದರ ಹಿಂದೆ ಒಂದರಂತೆ ರಾಜಕಾರಣಿಗಳು ಭಾಗಿಯಾದ ಪ್ರಕರಣಗಳು ಹೊರ ಬಂದವು. ಇದು ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಯಿತು.
ಡಾ. ಸಿಂಗ್ ಸರಕಾರಕ್ಕೆ ಕಳಂಕ ಹಚ್ಚಿದ ಎರಡನೇ ತಲೆಮಾರಿನ ತರಂಗಾಂತರ ಮಾರಾಟ ಪ್ರಕ್ರಿಯೆ ಹಗರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆಗಿನ ದೂರ ಸಂಪರ್ಕ ಸಚಿವ ಎ. ರಾಜಾ, ಲೋಕಸಭೆ ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ ಎಲ್ಲ 19 ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಕಲ್ಲಿದ್ದಲು ಹಗರಣದಲ್ಲಿ ಮಾತ್ರ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತಿತರರಿಗೆ ಶಿಕ್ಷೆ ಆಯಿತು. ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯಡಿ ಸಿಬಿಐ ತನಿಖೆ ನಡೆಸಿದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ. 65- 75ರಷ್ಟಿದೆ ಎಂದು ಹೇಳಿಕೊಂಡರೂ ಪ್ರಭಾವಿಗಳು- ಗಣ್ಯರು ಆರೋಪಿಗಳಾಗಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತೀ ಕಡಿಮೆ ಇದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾದ ಪ್ರಕರಣಗಳ ತನಿಖೆಯನ್ನು ‘ಜಾರಿ ನಿರ್ದೇಶನಾಲಯ’ (ಈ.ಡಿ.) ನಡೆಸುತ್ತದೆ. ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳು ನಡೆಸಿದ ದಾಳಿ ವೇಳೆ ಅಕ್ರಮ ಹಣ ವರ್ಗಾವಣೆ ಆಗಿರುವುದು ಕಂಡುಬಂದರೆ ಈ.ಡಿ. ಜತೆ ಮಾಹಿತಿ ಹಂಚಿಕೊಳ್ಳುತ್ತವೆ. ಬಳಿಕ ಈ.ಡಿ. ಪ್ರವೇಶ ಮಾಡುತ್ತದೆ. ಈ.ಡಿ. ತನಿಖೆ ಮಾಡಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ. 94ಕ್ಕಿಂತಲೂ ಅಧಿಕ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಗೆ ಹೇಳಿದ್ದಾರೆ. ಆದರೆ, ಸಿಬಿಐ, ಈ.ಡಿ. ಮತ್ತಿತರ ಸಂಸ್ಥೆಗಳ ತನಿಖಾ ಗುಣಮಟ್ಟದ ಬಗ್ಗೆ ಕೋರ್ಟ್ ಆಗಾಗ ಕಿವಿ ಹಿಂಡುತ್ತಲೇ ಇರುತ್ತದೆ. ಈ ಸಾಲಿಗೀಗ ಅಬಕಾರಿ ನೀತಿ ಪ್ರಕರಣ ಸೇರಿಕೊಂಡಿದೆ.
ಕಳಪೆ ಗುಣಮಟ್ಟದ ತನಿಖೆಯೊಂದರಿಂದಲೇ ಸಿಬಿಐ ವಿಶ್ವಾಸಾರ್ಹತೆ ಕುಗ್ಗಿಲ್ಲ. ಇನ್ನು ಕೆಲವು ಕಾರಣಗಳಿವೆ. ಸಿಬಿಐ ನಿರ್ದೇಶಕರ ನೇಮಕವೂ ಆಗಾಗ ವಿವಾದಕ್ಕೆ ಒಳಗಾಗುತ್ತಿದೆ. ಪ್ರಧಾನಿ ನೇತೃತ್ವದ ಉನ್ನತ ಸಮಿತಿ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕರೂ ಸಮಿತಿಯಲ್ಲಿರುತ್ತಾರೆ. 2025ರ ಮೇ 5ರಂದು ನಿರ್ದೇಶಕರ ಆಯ್ಕೆಗೆ ಸಮಿತಿ ಸಭೆ ಸೇರಿತ್ತು. ಉನ್ನತ ಹುದ್ದೆಗೆ ಕೆಲವು ಹೆಸರು ಶಿಫಾರಸಾಗಿತ್ತು. ಸಮಿತಿ ಒಮ್ಮತಕ್ಕೆ ಬರಲಾಗದ್ದರಿಂದ ಈಗಿನ ನಿರ್ದೇಶಕ, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನೇ ಒಂದು ವರ್ಷ ಮುಂದುವರಿಸಲಾಗಿದೆ.
ವಿವಾದ ಇದಲ್ಲ. ಈ ಹಿಂದೆಯೂ ಸಿಬಿಐ ನಿರ್ದೇಶಕರು ಹಾಗೂ ವಿಶೇಷ ನಿರ್ದೇಶಕರ ನೇಮಕ ದೊಡ್ಡ ವಿವಾದವಾಯಿತು. ಇದಾಗಿದ್ದು ಎನ್‌ಡಿಎ-1 ಸರಕಾರದಲ್ಲಿ. ಇಬ್ಬರು ಅಧಿಕಾರಿಗಳ ಕಿತ್ತಾಟ ಬೀದಿಗೆ ಬಂದಿತ್ತು. ಇದು ದೇಶದ ಉನ್ನತ ತನಿಖಾ ಸಂಸ್ಥೆಯ ವರ್ಚಸ್ಸಿಗೂ ವ್ಯಾಪಕ ಧಕ್ಕೆ ಮಾಡಿತು. 2017ರ ಫೆಬ್ರವರಿಯಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದ 1984ರ ಬ್ಯಾಚ್ ಅಧಿಕಾರಿಯೊಬ್ಬರು ತಮ್ಮದೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯೊಬ್ಬರನ್ನು ವಿಶೇಷ ನಿರ್ದೇಶಕರಾಗಿ ನೇಮಿಸಿದ್ದನ್ನು ವಿರೋಧಿಸಿದ್ದರು. ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಕಿತ್ತಾಟ ಯಾವ ಹಂತ ತಲುಪಿತೆಂದರೆ, ಸಿಬಿಐ ತನ್ನದೇ ವಿಶೇಷ ನಿರ್ದೇಶಕರ ವಿರುದ್ಧ ಎರಡು ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿತ್ತು. ಮಾಂಸದ ರಫ್ತುದಾರರಿಗೆ ಸಂಬಂಧಿಸಿದ ಪ್ರಕರಣದಿಂದ ಪಾರಾಗಲು ಉದ್ಯಮಿಯೊಬ್ಬರಿಂದ ಲಂಚ ಪಡೆದರೆಂಬ ಆರೋಪ ಪ್ರಕರಣ ಇದಾಗಿತ್ತು. ತಮ್ಮ ಸಹೋದ್ಯೋಗಿ ನಿರ್ದೇಶಕರ ಮೇಲೆ ವಿಶೇಷ ನಿರ್ದೇಶಕರೂ ಇಂತಹದೇ ಆರೋಪ ಮಾಡಿದ್ದರು. ಮಾಂಸದ ರಫ್ತುದಾರರು ಹವಾಲಾ ಹಗರಣಗಳಲ್ಲಿ ಭಾಗಿಯಾದ ಆರೋಪಕ್ಕೆ ಒಳಗಾಗಿದ್ದರು. ಅವರ ವಿರುದ್ಧ ಸಿಬಿಐ ತನಿಖೆಯೂ ನಡೆಯುತ್ತಿತ್ತು. ಬಳಿಕ ಸರಕಾರ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಆಮೇಲೆ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮರು ನೇಮಕ ಮಾಡಿತು. ಎರಡೇ ದಿನದಲ್ಲಿ ಹೊಸ ನಿರ್ದೇಶಕರನ್ನು ನೇಮಿಸಲಾಯಿತು.
ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳನ್ನು ಕುತೂಹಲದಿಂದ ಗಮನಿಸುತ್ತಿರುವ ಕೆಲವರಿಗೆ ಯುಪಿಎ ಸರಕಾರ-2 ಅವಧಿಯಲ್ಲಿ ಸಿಬಿಐ ನಿರ್ದೇಶಕರಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರು ಮಾಂಸದ ವ್ಯಾಪಾರಿಯ ಹವಾಲ ವ್ಯವಹಾರದ ತನಿಖೆಯಲ್ಲಿ ಪ್ರಭಾವ ಬೀರಲು ಯತ್ನಿಸಿದ್ದು ನೆನಪಿರಬಹುದು.
ಸಿಬಿಐ ಹಿನ್ನೆಲೆ ಕೆದಕುತ್ತಾ ಹೋದರೆ ಆತಂಕದ ವಿಷಯಗಳು ಬಿಚ್ಚಿಕೊಳ್ಳುತ್ತವೆ. ಇಷ್ಟಾದರೂ ಜನರಿಗೆ ಸಿಬಿಐ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಈಗಲೂ ರಾಜ್ಯ ಪೊಲೀಸರ ಮೇಲೆ ಅಪನಂಬಿಕೆ ಹೊಂದಿರುವ ಜನ ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವುದು ಕಂಡುಬರುತ್ತದೆ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬಂದು ನಿಜ ಆರೋಪಿಗಳಿಗೆ ಶಿಕ್ಷೆಯಾಗಬಹುದೆಂಬ ಸಣ್ಣ ಭರವಸೆ ಇದಕ್ಕೆ ಕಾರಣ. ಪೊಲೀಸರಿಗಿಂತ ಸಿಬಿಐನಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಕ್ಷತೆ-ವೃತ್ತಿಪರತೆ ಹಾಗೂ ನೈಪುಣ್ಯ ವಿಷಯದಲ್ಲಿ ಮುಂದಿದ್ದಾರೆ ಎಂಬುದು ಅವರ ಭಾವನೆ. ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸಬೇಕಿದೆ.
ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಮುಕ್ತ- ಪಾರದರ್ಶಕವಾಗಿ ಸಿಬಿಐ ಕೆಲಸ ಮಾಡಬೇಕಾದ ವಾತಾವರಣ ಸೃಷ್ಟಿಸಬೇಕಿದೆ. ಪ್ರತಿಷ್ಠಿತ ತನಿಖಾ ಸಂಸ್ಥೆ ಎಲ್ಲಿಯವರೆಗೂ ಸರಕಾರದ ಅಧೀನದಲ್ಲಿ ಇರುವುದೋ ಅಲ್ಲಿಯವರೆಗೆ ಪೊಲಿಟಿಕಲ್ ಮಾಸ್ಟರ್‌ಗಳ ದನಿಯಲ್ಲೇ ಮಾತನಾಡಲಿದೆ. ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗುವವರೆಗೂ ಪಂಜರದ ಗಿಳಿಯಾಗಿಯೇ ಇರಲಿದೆ.