×
Ad

ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ: ನೆಗಡಿಗೆ ಮೂಗು ಕತ್ತರಿಸಬೇಕೇ?

Update: 2026-03-05 10:58 IST

ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಹೆಚ್ಚುಕಡಿಮೆ 40,000 ಕನ್ನಡ ಸರಕಾರಿ ಶಾಲೆಗಳು ಮುಚ್ಚಲಿವೆ. ಇದೇ ಜೂನ್‌ಗೆ ಅಂದರೆ ಮುಂಬರುವ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಸರಕಾರಿ ಶಾಲೆಗಳು ಶಾಶ್ವತವಾಗಿ ಸಮಾಧಿಯಾಗಲಿವೆ. ಬಡವರ ಮಕ್ಕಳು ಕಲಿಯುವ ಈ ಶಾಲೆಗಳನ್ನು ಮುಗಿಸಲು ಸ್ವತಃ ರಾಜ್ಯ ಸರಕಾರವೇ ಏಶ್ಯನ್ ಡೆವಲಪ್ ಮೆಂಟ್ ಬ್ಯಾಂಕ್‌ನಿಂದ 10,000 ಕೋಟಿ ರೂ.ಯ ‘ಸುಪಾರಿ’ ಪಡೆದಿದೆ. ಅದರಲ್ಲಿ ಈಗಾಗಲೇ 2,000 ಕೋಟಿ ರೂ. ಸರಕಾರದ ಕೈ ಸೇರಿದೆ. ಈ ಸುಪಾರಿ ಹಣಕ್ಕೆ ರಾಜ್ಯ ಸರಕಾರವು ‘ಅಭಿವೃದ್ಧಿಗಾಗಿ ಪಡೆಯುವ ಸಾಲ’ ‘ಗುಣಮಟ್ಟದ ಶಿಕ್ಷಣಕ್ಕಾಗಿ ಸಾಲ’ ಎಂಬ ಸಿಹಿಲೇಪಿತ ವಿಷದ ಮಾತ್ರೆಯನ್ನು ಜನರಿಗೆ ನುಂಗಿಸುತ್ತಿದೆ. ಇದೆಂಥ ತಣ್ಣನೆಯ ಕ್ರೌರ್ಯ!! ಈ ಕೊಲೆಗಡುಕ ಕೆಲಸವನ್ನು ಸಮರ್ಥಿಸಲು ಜನರಿಂದ ಆಯ್ಕೆಯಾಗಿ ಹೋದ ರಾಜ್ಯದ ಬಹುತೇಕ ಎಲ್ಲಾ ಪಕ್ಷಗಳ ಎಲ್ಲಾ ಶಾಸಕರು, ಸಂಸದರು ಮೂಕಪ್ರೇಕ್ಷಕರಾಗಿದ್ದಾರೆ. ಕೆಲವರು ಜಾಣ ಮೌನ ತಾಳಿದರೆ, ಇನ್ನು ಕೆಲ ಶಾಸಕ ಸಚಿವರುಗಳು ಈ ಸರಕಾರಿ ಶಾಲೆಗಳ ಮಾರಣ ಹೋಮ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.

ಕಳೆದ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶಾಸಕ ಚಿದಾನಂದ ಎಂ. ಗೌಡ ಇವರ ಪ್ರಶ್ನೆಗೆ ರೋಷಾವೇಷದಿಂದ ಉತ್ತರಿಸುತ್ತಾ ‘‘ನಮ್ಮ ರಕ್ತದಲ್ಲೇ ಕನ್ನಡವಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ’’ ಎಂದು ಹೇಳಿದರು. ಆದರೆ ಶಾಲೆಗಳ ವಿಲೀನದ ಹೆಸರಲ್ಲಿ ಶಾಲೆಗಳನ್ನು ಮುಚ್ಚುವ ಅಕ್ಟೋಬರ್ 15ರ ಇಲಾಖೆಯ ಆದೇಶವನ್ನು ಸರಕಾರ ಇದುವರೆಗೂ ಹಿಂಪಡೆದಿಲ್ಲ. ಯಾಕೆ ಹಿಂಪಡೆದಿಲ್ಲ? ಮತ್ತು ಯಾವ ಉದ್ದೇಶಕ್ಕಾಗಿ ಹಿಂಪಡೆದಿಲ್ಲ? ಹಿಂಪಡೆಯುವ ಬದಲು ಈ ಆದೇಶಕ್ಕನುಗುಣವಾಗಿಯೇ ಶಾಲೆಗಳ ಮುಚ್ಚುವ(ವಿಲೀನ) ಕೆಲಸ ಸದ್ದಿಲ್ಲದೇ ಮಾಡುವುದಾದರೂ ಯಾಕೆ? ಆಯಾ ಮ್ಯಾಗ್ನೆಟ್ ಶಾಲೆಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಶಿಕ್ಷಕರನ್ನು ಮ್ಯಾಗ್ನೆಟ್ ಶಾಲೆಗಳಿಗೆ ವರ್ಗಾಯಿಸುತ್ತಿರುವುದೇಕೆ? ಈ ಮ್ಯಾಗ್ನೆಟ್ ಶಾಲೆ ಯೋಜನೆ ಜಾರಿಯಾದರೆ ಒಂದು ಅಂದಾಜಿನಂತೆ 80,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳೇ ನಾಶವಾಗಲಿವೆ. ಒಂದೆಡೆ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎನ್ನುತ್ತಾ ಇನ್ನೊಂದೆಡೆ ಶಿಕ್ಷಕ ಹುದ್ದೆಗಳನ್ನು ನಾಶಮಾಡುವುದು ಯಾವ ಸೀಮೆ ನ್ಯಾಯ? ಮುಂದುವರಿದು ಸರಕಾರವು ‘‘ಇಲ್ಲ, ಇಲ್ಲ ಆಯಾ ಹಳ್ಳಿಗಳಿಂದ ಮ್ಯಾಗ್ನೆಟ್ ಶಾಲೆಗಳಿಗೆ ಬಸ್ ಸೌಲಭ್ಯ ಒದಗಿಸುತ್ತೇವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ’’ ಎಂದು ಹೇಳುತ್ತಿದೆ. ಕಾಲೇಜುಗಳಿಗೆ ಹೋಗಲು ಪಟ್ಟಣ-ನಗರಗಳಿಗೇ ಬಸ್ ಸೌಲಭ್ಯವಿಲ್ಲದೆ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವಾಗ ಇನ್ನು ಯಾವುದೋ ಮೂಲೆಯಲ್ಲಿರುವ ಅತಿಚಿಕ್ಕ ಹಳ್ಳಿಗಳಿಂದ/ತಾಂಡಾಗಳಿಂದ/ ಹಟ್ಟಿಗಳಿಂದ ತೋಟದ ವಸ್ತಿಗಳಿಂದ ಪಂಚಾಯತ್ ಮಟ್ಟಕ್ಕೆ ಮ್ಯಾಗ್ನೆಟ್ ಶಾಲಾ ಮಕ್ಕಳಿಗೆಂದೆ ಬಸ್ ಓಡಿಸುತ್ತಾರಂತೆ! ಈ ಕಾಗಕ್ಕ ಗುಬ್ಬಕ್ಕ ಕಥೆ ರಾಜ್ಯದ ಜನ ನಂಬಬೇಕಂತೆ! ಹೇಗಿದೆ ನೋಡಿ ನಮ್ಮ ಶಿಕ್ಷಣ ಸಚಿವರ ರಕ್ತದಲ್ಲಿನ ಕನ್ನಡ ಪ್ರೀತಿ!!

ಸರಕಾರವು ಇನ್ನು ಮುಂದೆ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಶಾಲೆ)ನಂತಹ ಕೆಲವು ಆಕರ್ಷಣೀಯ ಶಾಲೆಗಳನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸರಕಾರಿ ಶಾಲೆಗಳನ್ನು ಮುಚ್ಚಿ ಬಡವರ, ದಲಿತರ, ಹಿಂದುಳಿದ ವರ್ಗದವರ ಮತ್ತು ಜನಸಾಮಾನ್ಯರ ಮಕ್ಕಳ ಶಿಕ್ಷಣದ ಹಕ್ಕನ್ನೇ ಕಿತ್ತುಕೊಳ್ಳುತ್ತದೆ. ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗೆ ಆರ್ಥಿಕ ಸಂಪನ್ಮೂಲವನ್ನೂ ಆಯಾ ಎಸ್‌ಡಿಎಂಸಿಗಳೇ ನೋಡಿಕೊಳ್ಳಬೇಕಂತೆ. ಬೇಕಿದ್ದರೆ ಶಾಲಾ ಕಾಂಪೌಂಡ್‌ಗೆ ಹೊಂದಿ ವಾಣಿಜ್ಯಮಳಿಗೆಗಳನ್ನು ತೆರೆಯಬಹುದಂತೆ, ಕಾಂಪೌಂಡ್‌ನ ಗೋಡೆಗಳನ್ನು ಜಾಹೀರಾತುದಾರರಿಗೆ ಬಾಡಿಗೆ ನೀಡಬಹುದಂತೆ. ಇವೆಲ್ಲಾ ಯಾವುದರ ಲಕ್ಷಣಗಳೆಂದರೆ, ಕಾಲಕ್ರಮೇಣ ಈ ಪಬ್ಲಿಕ್ ಶಾಲೆಗಳನ್ನೂ ಪಿಪಿಪಿ ಹೆಸರಲ್ಲೋ ಅಥವಾ ಇನ್ನಾವುದೋ ಮತ್ತೊಂದು ಬೇರೆ ಆಕರ್ಷಣೀಯವಾದ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಮನೆತನಗಳಿಗೆ ಧಾರೆ ಎರೆದು ಶಿಕ್ಷಣದ ಜವಾಬ್ದಾರಿಯಿಂದ ಸರಕಾರ ಸಂಪೂರ್ಣ ಕೈ ತೊಳೆದುಕೊಳ್ಳುವುದರ ಮುನ್ಸೂಚನೆ.

ಒಂದೆಡೆ ಸರಕಾರವು ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತೀ 1.ಕಿ.ಮೀ. ಗೆ ಪ್ರಾಥಮಿಕ ಶಾಲೆ ಮತ್ತು ಪ್ರತೀ 3 ಕಿ.ಮೀ.ಗೆ ಹಿರಿಯ ಪ್ರಾಥಮಿಕ ಶಾಲೆಗಳಿರಬೇಕು ಎಂದು ಪ್ರತಿಪಾದಿಸುತ್ತದೆ. ಇನ್ನೊಂದೆಡೆ ಇದೇ ಸರಕಾರವು 5ರಿಂದ 7ಕಿ.ಮೀ. ವ್ಯಾಪ್ತಿಯಡಿ ಬರುವ ಶಾಲೆಗಳನ್ನು ವಿಲೀನಗೊಳಿಸುವ ಹೆಸರಲ್ಲಿ ಮುಚ್ಚಬೇಕು ಎಂದು ಸಾರುತ್ತದೆ. ಇದೆಂತಹ ಇಬ್ಬಂದಿತನ?

ಇನ್ನೂ ವಿಶೇಷವೆಂದರೆ ಕಲ್ಯಾಣ ಕರ್ನಾಟಕದಲ್ಲಿ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯ ಅನುದಾನವನ್ನು ಚಿಕ್ಕ ಚಿಕ್ಕ ಹಳ್ಳಿಗಳಲ್ಲಿನ ಶಾಲೆಗಳನ್ನು ಬಲಪಡಿಸುವ ಬದಲು ಪಂಚಾಯತ್‌ಗೊಂದರಂತೆ ತಲೆಯೆತ್ತುವ ಮ್ಯಾಗ್ನೆಟ್ ಶಾಲೆಗಳಿಗೆ ಬಳಸುತ್ತಾರಂತೆ. ಅಂದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹಣವನ್ನು ಬಳಸಿ, ಕಲ್ಯಾಣ ಕರ್ನಾಟಕದ ಸರಕಾರಿ ಶಾಲೆಗಳನ್ನೇ ಕೊಲ್ಲುವ ಕೆಲಸ! ಶಹಬ್ಬಾಷ್!!

ರಾಜ್ಯದ ಯಾರೊಬ್ಬರೂ ಪಬ್ಲಿಕ್ ಶಾಲೆಗಳ ಆರಂಭಕ್ಕೆ ವಿರೋಧಿಸುತ್ತಿಲ್ಲ. ಬದಲಾಗಿ ಪಬ್ಲಿಕ್ ಶಾಲೆ ತೆರೆಯುವ ಹೆಸರಲ್ಲಿ ಇರುವ 40,000ಕ್ಕೂ ಹೆಚ್ಚು ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸುತ್ತಿದ್ದಾರೆ. ಹಲವಾರು ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ, ಗ್ರಂಥಾಲಯಗಳಿಲ್ಲ, ಕೆಲವೆಡೆ ಶಿಕ್ಷಕರ ಕೊರತೆ ಇದೆ, ಯೋಗ್ಯ ಕಟ್ಟಡಗಳಿಲ್ಲ, ಶೌಚಾಲಯಗಳಿಲ್ಲ, ಗುಣಮಟ್ಟದ ಶಿಕ್ಷಣಕ್ಕೆ ಸಮರ್ಪಕ ನೀತಿನಿಯಮಗಳಿಲ್ಲ, ರಾಜ್ಯದಲ್ಲೀಗ 7,000 ಏಕೋಪಾಧ್ಯಾಯ ಶಾಲೆಗಳಿವೆ. 59,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇಷ್ಟೆಲ್ಲ ಸಮಸ್ಯೆಗಳಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವುದು ಸಹಜ. ಸಮಸ್ಯೆಗಳಿವೆ ಎಂದು ಶಾಲೆಗಳನ್ನೇ ಮುಚ್ಚುವುದೆಂದರೆ ನೆಗಡಿಯಾಗಿದೆ ಎಂದು ಮೂಗನ್ನೇ ಕತ್ತರಿಸಿದಂತಾಗುವುದಿಲ್ಲವೇ?

ಸ್ಥಳೀಯ ಶಾಸಕರು ಈ ಉದ್ದೇಶಿತ ಕೆ.ಪಿ.ಎಸ್. ಶಾಲೆಗಳ ಎಸ್‌ಡಿಎಮ್‌ಸಿಯ ಅಧ್ಯಕ್ಷರಾಗುವುದರಿಂದ ನೇರ ರಾಜಕೀಯ ಹಸ್ತಕ್ಷೇಪಕ್ಕೆ ದಿಡ್ಡಿ ಬಾಗಿಲನ್ನೇ ತೆರೆದಂತಾಗುತ್ತದೆ. ಸಂವಿಧಾನದ ಅನುಚ್ಛೇದ 21ರ ಪ್ರಕಾರ ಶಿಕ್ಷಣ ಮಗುವಿನ ಮೂಲಭೂತ ಹಕ್ಕು. ಆದರೆ ಶಾಲೆಗಳೇ ಇಲ್ಲ ಎಂದ ಮೇಲೆ ಹಕ್ಕು ಇದ್ದಾದರೂ ಏನು ಪ್ರಯೋಜನ?

ಬಡವರು ತಮ್ಮ ಮಕ್ಕಳನ್ನು ತಮ್ಮೂರಲ್ಲಿನ ಸರಕಾರಿ ಶಾಲೆಗೆ ಕಳುಹಿಸುವುದು ಕಷ್ಟವಾದರೂ ಸದ್ಯಕ್ಕೆ ಅಲ್ಪಸ್ವಲ್ಪ ಸಾಧ್ಯವಿದೆ. ಆದರೆ ಇನ್ನು ಸರಕಾರಿ ಶಾಲೆಗಳು ಮುಚ್ಚಿದರೆ ಈ ಬಡ ಕೂಲಿಕಾರರು ತಮ್ಮ ಮಕ್ಕಳನ್ನು ದೂರದ ಮ್ಯಾಗ್ನೆಟ್ ಶಾಲೆಗಳಿಗೆ ಕಳುಹಿಸುವ ಬದಲು ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಪರೋಕ್ಷವಾಗಿ ಸರಕಾರವೇ ಬಾಲಕಾರ್ಮಿಕತನ ಹೆಚ್ಚು ಮಾಡಿದಂತಾಗುತ್ತದೆ, ಅಷ್ಟೇ ಅಲ್ಲ ಆ ಮಗುವಿನ ಶಿಕ್ಷಣದ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಈಗಾಗಲೇ ಈ ಮ್ಯಾಗ್ನೆಟ್ ಶಾಲೆಗಳ ಪರಿಕಲ್ಪನೆ ಮುಂದುವರಿದ ಅಮೆರಿಕ ಮತ್ತು ಚೀನಾ ದೇಶಗಳಲ್ಲಷ್ಟೇ ಅಲ್ಲ ಸ್ವೀಡನ್, ಮೆಕ್ಸಿಕೋದಂತಹ ದೇಶಗಳಲ್ಲೂ ಸಂಪೂರ್ಣ ವಿಫಲವಾಗಿವೆ. ಇಂಥ ಹಳಸಿದ ಶೈಕ್ಷಣಿಕ ನೀತಿಗಳನ್ನು ಸರಕಾರ ನಮ್ಮ ರಾಜ್ಯದಲ್ಲಿ ಜಾರಿಗೊಳಿಸುವ ಉದ್ದೇಶವಾದರೂ ಏನು? ಮತ್ತು ಯಾರ ಹಿತಕ್ಕಾಗಿ ಈ ಡೊಂಬರಾಟ?

ತಾವು ಈ ಬ್ಯಾಚ್‌ನ ವಿದ್ಯಾರ್ಥಿಗಳು, ತಾವು ಆ ಬ್ಯಾಚ್‌ನ ವಿದ್ಯಾರ್ಥಿಗಳು ಎಂದು ಹಲವಾರು ವರ್ಷಗಳ ನಂತರ ಗುರುವಂದನೆಯ ಹೆಸರಲ್ಲಿ ಆಯಾ ಶಾಲೆಗಳಲ್ಲಿ ಒಂದೆಡೆ ಸೇರುವ ಸಹಪಾಠಿಗಳಿದ್ದಾರೆ, ತುಂಬಾ ಸಂತೋಷ. ಹಾಗೆ ಸೇರಿ ತಿಂದುಂಡು ಹಳೆ ನೆನಪುಗಳನ್ನು ಕೆದಕಿ ‘ಸವಿ ಸವಿನೆನಪು’ ಎಂದು ಮೆಲುಕು ಹಾಕಿದರೆ ಸಾಕಾಗುವುದಿಲ್ಲ. ಬದಲಾಗಿ ನಮಗೆ ಅಕ್ಷರ ಮತ್ತು ಅನ್ನದ ತುತ್ತು ನೀಡಿದ ಈ ಶಾಲೆಗಳ ರಕ್ಷಣೆಗೆ ಮುಂದಾಗಬೇಕಿದೆ. ಎಷ್ಟೋ ಜನರು ಈ ಶಾಲೆಗಳಲ್ಲಿ ಕಲಿತು ದೊಡ್ಡ ಅಧಿಕಾರಿಗಳೋ, ಇಂಜಿನಿಯರೋ ಡಾಕ್ಟರೋ ಅಥವಾ ಮತ್ತಿನ್ನಾವುದೋ ದೊಡ್ಡ ದೊಡ್ಡ ಹುದ್ದೇಗೇರಿದ್ದಾರೆ. ಅವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಈ ಶಾಲೆಗಳಿರದಿದ್ದರೆ ತಾವೆಲ್ಲಿ ಇರುತ್ತಿದ್ದರು ಎಂದು. ಆ ಚಿಕ್ಕ ಚಿಕ್ಕ ಶಾಲೆಗಳಲ್ಲಿ ಕಲಿತ ದೊಡ್ಡ ದೊಡ್ಡ ಪಾಠಗಳೇ ಇಂದು ಕೆಲವರನ್ನು ಬಾನೆತ್ತರಕ್ಕೇರಿಸಿವೆ. ಮತ್ತೆ ಕೆಲವರ ಬದುಕಿಗೆ ಊರುಗೋಲನ್ನೊದಗಿಸಿವೆ. ಒಟ್ಟಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಟ್ಟ ಈ ಜೀವಂತ ದೇವಾಲಯಗಳೀಗ ತಾವು ಬದುಕಲು ಸೆಣಸಾಡುತ್ತಿವೆ. ಮರಣಶಯ್ಯೆಯಲ್ಲಿ ನರಳುತ್ತಾ ಹಳೆ ವಿದ್ಯಾರ್ಥಿಗಳು, ಪೋಷಕರು, ನಾಗರಿಕರತ್ತ ಕಣ್ಣಲ್ಲೇ ಜೀವ ಹಿಡಿದು ನೋಡುತ್ತಿವೆ, ನಮ್ಮನ್ನು ಯಾರಾದರೂ ರಕ್ಷಿಸಬಹುದಾ? ಎಂದು.

200 ವರ್ಷ ದೇಶವಾಳಿದ ಪರಕೀಯ ಬ್ರಿಟಿಷರು ನಮ್ಮ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದರು. ಆದರೆ ಇಂದು ನಮ್ಮನ್ನಾಳುವ ನಮ್ಮ ಸರಕಾರಗಳೇ ನಮ್ಮ ಶಾಲೆಗಳನ್ನು ಮುಚ್ಚುತ್ತಿವೆ. ಇದೆಂಥ ವೈರುಧ್ಯ? ಈ ಶಾಲೆಗಳೆಂದರೆ ಕೇವಲ ಕಟ್ಟಡವಲ್ಲ ಅಥವಾ ಕೇವಲ ಆಗಸ್ಟ್ 15, ಜನವರಿ 26ರಂದು ಧ್ವಜಾರೋಹಣಮಾಡುವ ಸ್ಥಳಗಳೂ ಅಲ್ಲ. ನಮ್ಮ ದೇಶಕ್ಕೆ ಬೇಕಾದ ಅತ್ಯುತ್ತಮ ವ್ಯಕ್ತಿತ್ವಗಳನ್ನು ಬಿತ್ತಿಬೆಳೆಯುವ ತೋಟ. ಮಕ್ಕಳಲ್ಲಿ ಆದರ್ಶ, ಮೌಲ್ಯ, ದೇಶ ಭಕ್ತಿ, ಜೀವನಪ್ರೀತಿ, ಸಾಮೂಹಿಕ ಜೀವನ ಕಲಿಸುವ ಸಾಂಸ್ಕೃತಿಕ ಕೇಂದ್ರಗಳು, ಹಳ್ಳಿಗಳ ಜೀವನಾಡಿಗಳು! ಹಲವಾರು ಶಿಕ್ಷಕರು, ಶಿಕ್ಷಣ ಪ್ರೇಮಿಗಳು ತಮ್ಮ ಆಯುಷ್ಯವನ್ನೇ ಸವೆಸಿ ಮಕ್ಕಳ ಭವಿಷ್ಯ ಕೆತ್ತಿದ ಪವಿತ್ರ ಸ್ಥಳಗಳು! ಈ ಶಾಲೆಗಳನ್ನು ನಾವು ಇನ್ನಾದರೂ ಉಳಿಸಿಕೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಎಚ್.ಟಿ. ಭರತಕುಮಾರ್

contributor

Similar News