ಯಾದಗಿರಿ: ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ; ನಶಿಸುತ್ತಿರುವ ಈಚಲ ವನ
ಯಾದಗಿರಿ : ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಅಪರೂಪದ ಈಚಲವನ ಆಡಳಿತದ ನಿರ್ಲಕ್ಷ್ಯದಿಂದ ನಶಿಸುತ್ತಿದ್ದು, ಇದನ್ನು ತಕ್ಷಣವೇ ರಕ್ಷಿಸಬೇಕು ಎಂಬ ಆಗ್ರಹ ವ್ಯಕ್ತವಾಗತೊಡಗಿವೆ.
ವಡಗೇರಾ ತಾಲೂಕಿನ ಹಂಚಿನಾಳ, ಮಳ್ಳಳ್ಳಿ, ಕಾಡಮಗೇರಿ ಹಾಗೂ ಕುರಕುಂದಿ ಗ್ರಾಮಗಳ ಸೀಮಾಂತರದಲ್ಲಿ ಸುಮಾರು 500 ಎಕರೆಗೂ ಅಧಿಕ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಈಚಲ ಮರಗಳ ವಿಶಾಲ ಗೊಂಚಲುಗಳು ಇದ್ದು, ಇವು ಅಪರೂಪದ ವನ ಸಂಪತ್ತಾಗಿವೆ. ಆದರೆ ಈಚಲ ಮರವನ್ನು ಕೇವಲ ಹೆಂಡದ ಮೂಲವೆಂಬ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಇದರ ಪರಿಣಾಮವಾಗಿ ಈ ಅಮೂಲ್ಯ ವನ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಈಚಲ ಗಿಡಗಳ ಗೊಂಚಲುಗಳು ಅವನತಿ ಹೊಂದುತ್ತಿದ್ದು, ಒಣಗಿ ವಿನಾಶದತ್ತ ಸಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕಾಳಜಿ ವಹಿಸುತ್ತಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಇಂತಹ ವನವನ್ನು ಬೆಳೆಸುವುದು ಕಷ್ಟವಾಗಿರುವಾಗ ನೈಸರ್ಗಿಕವಾಗಿ ಬೆಳೆದಿರುವ ಈ ವೃಕ್ಷ ಸಂಪತ್ತನ್ನು ಉಳಿಸಿಕೊಳ್ಳಲಾಗದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳು ಈ ಬಗ್ಗೆ ತಕ್ಷಣವೇ ಮುಂದಾಗಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.
ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣದಿಂದ ಗ್ರಾಮೀಣ ಪ್ರದೇಶದ ಕಾರ್ಮಿಕರು ಮಹಾನಗರಗಳಿಗೆ ಗುಳೇ ಹೋಗುವ ಸ್ಥಿತಿ ಇದೆ. ಈಚಲ ವನ ಆಧಾರಿತ ಉದ್ಯಮಗಳನ್ನು ಅಭಿವೃದ್ಧಿಪಡಿಸಿದರೆ ಈ ಸಮಸ್ಯೆಯನ್ನು ತಡೆಯಬಹುದು. ನೈಸರ್ಗಿಕವಾಗಿ ಬೆಳೆಯುವ ಈ ಮರದಿಂದ ಹಲವು ಉಪಯುಕ್ತ ಉ ಪ-ಉತ್ಪನ್ನಗಳನ್ನು ತಯಾರಿಸಿ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಬಹುದು. ಇದರಿಂದ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿ ಆರ್ಥಿಕ ಚೇತರಿಕೆ ಸಾಧ್ಯವಾಗುತ್ತದೆ.
-ಉಮೇಶ ಕೆ. ಮುದ್ನಾಳ