×
Ad

ಗೂಳೂರಿನಲ್ಲಿ ಕ್ರಿ.ಶ.1557ರ ಪಾರ್ಸಿ, ಕನ್ನಡ ಶಿಲಾ ಶಾಸನ ಪತ್ತೆ

Update: 2025-08-24 08:19 IST

ಬಾಗೇಪಲ್ಲಿ, ಆ.23: ತಾಲೂಕಿನ ಗೂಳೂರು ಶ್ರೀ ವೀರಭದ್ರೇಶ್ವರ ದೇಗುಲದ ಸಮೀಪದ ಹೊಲದಲ್ಲಿ ಕ್ರಿ.ಶ. 1557ರ ಕನ್ನಡ ಮತ್ತು ಪರ್ಷಿಯನ್ ಲಿಪಿಯ ಅಪರೂಪದ ಶಿಲಾಶಾಸನ ಪತ್ತೆಯಾಗಿದ್ದು, ಆಳವಾದ ಅಧ್ಯಯನಕ್ಕೆ ಯೋಗ್ಯವಾಗಿದ್ದು, ಗತ ಇತಿಹಾಸದ ಮೇಲೆ ಬೆಳಕು ಚೆಲ್ಲುವಲ್ಲಿ ಸಹಕಾರಿಯಾಗುತ್ತದೆ ಎಂದು ಸಂಶೋಧಕ ಬಿ.ಆರ್.ಕೃಷ್ಣ ಪ್ರತಿಪಾದಿಸಿದ್ದಾರೆ.

ತಾಲೂಕಿನ ಗೂಳೂರು ಶ್ರೀ ವೀರಭದೇಶ್ವ ಸ್ವಾಮಿ ದೇಗುಲದ ಹೊಲಗಳ ಬಳಿಯಿರುವ ಕಾಲುವೆಯ ಬಳಿ ದೊರೆತ ಶಿಲಾಶಾಸನವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಶಿಲಾಶಾಸನ ಐದು ಅಡಿ ಉದ್ದ, ಎರಡು ಅಡಿ ಅಗಲ ಹಾಗೂ ಆರು ಅಡಿ ದಪ್ಪದಾದ ಬಂಡೆಯ ಮೇಲೆ ಕೆತ್ತಲಾಗಿದ್ದು, (ಕ್ರಿ.ಶ. 1557) ಶಾಲಿವಾಹನ ಶಕೆಯ 1479 ಪಿಂಗಳನಾಮ ಸಂವತ್ಸರ ಮಾಘ ಬಹುಳ 3ನೇ ಶನಿವಾರ ಹಾಕಲಾಗಿರುವುದು. ಇದೊಂದು ಭೂದಾನ ಶಾಸನವಾಗಿದ್ದು, ಕಾಲುವೆ ತೋಡಿಸುವ ಕಾರ್ಯಕ್ಕೆ ಒಡೆಯರು ಎಂಬವರು ಭೂದಾನ ಮಾಡಿರುವ ಧರ್ಮ ಶಾಸನವಾಗಿದ್ದು, ಇದಕ್ಕೆ ಯಾರು ತಪ್ಪಿದರೂ ಧರ್ಮಕ್ಕೆ ತಪ್ಪಿದವರಾಗಿಯೂ, ವಾರಣಾಸಿಯಲ್ಲಿ ತಮ್ಮ ತಂದೆ ತಾಯಿಗಳನ್ನು ಕೊಂದ ಪಾಪಕ್ಕೆ ಈಡಾಗುವರು ಎಂದು ಶಾಸನದಲ್ಲಿ ಎಚ್ಚರಿಸಲಾಗಿದೆ. ಶಾಸನವನ್ನು ಹಳೆಗನ್ನಡದಲ್ಲಿ ಹತ್ತು ಸಾಲುಗಳಲ್ಲಿ ಬರೆಯಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರಿದ್ದಾರೆ. ಅದರ ಕೆಳಗೆ ಪರ್ಷಿಯನ್ ಭಾಷೆಯಲ್ಲಿ ಆರು ಸಾಲುಗಳನ್ನು ಬರೆಯಲಾಗಿದ್ದು, ಇದರ ಸಾರಾಂಶ ತಿಳಿಯುತ್ತಿಲ್ಲ ಎಂದರು.

ಕರ್ನಾಟಕ ಇತಿಹಾಸ ಅಕಾಡಮಿ ಸಮ್ಮೇಳನದಲ್ಲಿ ಈ ಬಗ್ಗೆ ಸಂಶೋಧನಾತ್ಮಕ ಲೇಖನ ಮಂಡಿಸಲಾಗುವುದು ಎಂದು ತಿಳಿಸಿದರು. ಆನಂತರ ಶಿಲಾಶಾಸನವನ್ನು ನೀರಿನಿಂದ ತೊಳೆದು, ದೇವಾಲಯದ ಮುಂದೆ ತಂದು ನಿಲ್ಲಿಸಿ, ಸಂರಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಸನದ ಪಾಠವನ್ನು ಸಂಶೋಧಿಸಿ, ಸಂಪೂರ್ಣವಾಗಿ ಫಲಕದ ಮೇಲೆ ಬರೆಸಿ, ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವಾಲಯ ಉಸ್ತುವಾರಿಗಳಾದ ಬಸವರಾಜು, ಚಲಪತಿ ಮತ್ತು ದೇವಾಲಯದ ಅರ್ಚಕ ಮಂಜುನಾಥ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವೆಂಕಟೇಶ್ ಗೂಳೂರು

contributor

Similar News