ಕಾಫಿ ಬೆಳೆಯಲ್ಲಿ ಯಶಸ್ವಿಯಾದ ಬಯಲುಸೀಮೆ ರೈತ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಕೆಲ ರೈತರು ಸಾಂಪ್ರದಾಯಿಕ ಕೃಷಿಯನ್ನು ಬದಿಗೊತ್ತಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಇಂತಹವರ ಸಾಲಿಗೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮದ ರೈತಸಂಘದ ಮುಖಂಡ ಬಿ.ಎನ್.ವಾಸು ಸೇರಿಕೊಂಡಿದ್ದಾರೆ. ಬಯಲು ಸೀಮೆಯಲ್ಲೂ ಕಾಫಿ ಬೆಳೆದು ಗಮನ ಸೆಳೆದಿದ್ದಾರೆ.
ತನ್ನ ಎರಡು ಎಕರೆ ಕೃಷಿ ಜಮೀನಿನಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಕಾಫಿ, ಮಾವು ಬೆಳೆಗಳನ್ನು ಬೆಳೆಯುತ್ತಿದ್ದು, ಕೋಳಿ ಸಾಕಣೆಯನ್ನೂ ಮಾಡುತ್ತಿದ್ದಾರೆ. ಇವರ ತೋಟದಲ್ಲಿ ತೀರ್ಥಹಳ್ಳಿ ತಳಿಯ 1,500 ಮರಗಳು ಫಸಲು ಕೊಡುತ್ತಿದ್ದು, ಇದರಿಂದ ವಾರ್ಷಿಕ ಸುಮಾರು 5 ಲಕ್ಷ ರೂ. ಆದಾಯ ಬರುತ್ತಿದೆ.
ಅಡಿಕೆ ಮರಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿದ್ದು, ಒಂದು ವರ್ಷದಲ್ಲಿ ಫಸಲು ಪಡೆಯುವ ಕೈಸೇರುವ ನಿರೀಕ್ಷೆಯಲ್ಲಿದ್ದಾರೆ. ಜಮೀನಿನ ಸುತ್ತ ಮತ್ತು ಮಧ್ಯೆ 150 ತೆಂಗಿನ ಮರಗಳಿವೆ. ಈಗಾಗಲೇ ಫಲಕೊಡುತ್ತಿದ್ದು, ಎಳನೀರು ಮಾರಾಟದಿಂದ ಸುಮಾರು ಒಂದು ಲಕ್ಷ ರೂ. ಪಡೆಯುತ್ತಿದ್ದಾರೆ. ತೋಟದಲ್ಲಿ ಶೆಡ್ ನಿರ್ಮಿಸಿ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ.
ವಾಸು ಅವರು ತನ್ನ ಜಮೀನಿನ ಜತೆಗೆ ಮೂರು ಎಕರೆ ಜಮೀನು ಗುತ್ತಿಗೆ ಪಡೆದು ಭತ್ತ ಬೆಳೆಯುತ್ತಿದ್ದಾರೆ. ಕಳೆದ ಹಂಗಾಮಿನಲ್ಲಿ ಸುಮಾರು 109 ಕ್ವಿಂಟಾಲ್ ಭತ್ತ ಬೆಳೆದಿದ್ದಾರೆ. ಇವರ ತೋಟಕ್ಕೆ ಅಕ್ಕಪಕ್ಕದ ಗ್ರಾಮಸ್ಥರು ಭೇಟಿ ನೀಡಿ ಸಲಹೆ ಪಡೆಯುತ್ತಿದ್ದಾರೆ. ಇವರಿಗೆ 2022-23ನೇ ಸಾಲಿನ ‘ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ’ ಬಂದಿದೆ.
ಕಾಫಿ ಜೊತೆ ಮಿಶ್ರ ಬೆಳೆಗಳು
ಮಂಡ್ಯದಂತಹ ಬಯಲು ಸೀಮೆಯಲ್ಲಿ ಮಲೆನಾಡಿನ ಪ್ರಮುಖ ಬೆಳೆ ಕಾಫಿಯನ್ನು ಬೆಳೆಯುವುದು ಕಷ್ಟ. ವಾಸು ಅವರು ಕಾಫಿ ಬೆಳೆದು ಯಶಸ್ವಿಯಾಗಿದ್ದಾರೆ. ಸುಮಾರು ಒಂದು ಸಾವಿರ ಕಾಫಿ ಗಿಡಗಳನ್ನು ಬೆಳೆಸಿದ್ದು, ಮೊದಲ ಕೊಯ್ಲಿನಲ್ಲೇ 3.25 ಕ್ವಿಂಟಾಲ್ ಬೀಜ ಸಿಕ್ಕಿದೆ. ಇದಲ್ಲದೆ, ಅಲ್ಲಲ್ಲಿ ಏಲಕ್ಕಿ, ಕಿತ್ತಳೆ, ಸಪೋಟ, ಮೋಸಂಬಿ, ಸೀತಾಫಲ, ಇತರ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.
ಸಮಗ್ರ ಕೃಷಿ ಪದ್ಧತಿಯಲ್ಲಿ ವಾಸು ಅವರು ಯಶಸ್ವಿಯಾಗಿದ್ದಾರೆ. ಕಬ್ಬು, ಭತ್ತ, ರಾಗಿ ಇತರ ಸಾಂಪ್ರದಾಯಿಕ ಬೆಳೆಗಳಲ್ಲದೆ ಸಮಗ್ರ ಕೃಷಿ ಪದ್ಧತಿಯಿಂದ ನಿರೀಕ್ಷಿತ ಲಾಭಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತರ ರೈತರಿಗೆ ಮಾದರಿಯಾಗಿದ್ದಾರೆ.
-ಪ್ರಿಯದರ್ಶಿನಿ ಎಸ್.ಎನ್., ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ
ತೋಟದಲ್ಲಿರುವ ಬೆಳೆಗಳಿಗೆ ಶೇ.90 ಭಾಗ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದು, ರಸಗೊಬ್ಬರವನ್ನು ಸೀಮಿತ ಪ್ರಮಾಣದಲ್ಲಿ ಬಳಸುತ್ತಿದ್ದೇನೆ. ಎಲ್ಲ ಬೆಳೆಗಳೂ ಹುಲುಸಾಗಿ ಬೆಳೆದಿದ್ದು, ಸದ್ಯ ವರ್ಷಕ್ಕೆ 8 ಲಕ್ಷ ರೂ. ಆದಾಯ ಸಿಗುತ್ತಿದೆ.
-ಬಿ.ಎನ್.ವಾಸು, ಕೃಷಿಕ.