×
Ad

ಅನುದಾನದ ಕೊರತೆಯಿಂದ ನಲುಗುತ್ತಿರುವ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿ

Update: 2025-06-23 14:20 IST

ರಾಯಚೂರು: ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಯ ಶೈಕ್ಷಣಿಕ ಸುಧಾರಣೆಗಾಗಿ ಸ್ಥಾಪನೆ ಮಾಡಲಾದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ( ರಾಯಚೂರು ವಿಶ್ವವಿದ್ಯಾನಿಲಯ) ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು 4 ವರ್ಷಗಳಾದರೂ ಅನುದಾನದ ಕೊರತೆಯಿಂದಾಗಿ ಕುಂಟುತ್ತಾ ಸಾಗುತ್ತಿದೆ.

ಈ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟು ಯರಗೇರಾ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ರಾಯಚೂರು ವಿಶ್ವವಿದ್ಯಾನಿಲಯ 2021-22ನೇ ಸಾಲಿನಿಂದ ಅಧಿಕೃತವಾಗಿ ವಿವಿಯಾಗಿ ಗುಲ್ಬರ್ಗಾ ವಿವಿಯಿಂದ ಬೇರ್ಪಟ್ಟು ಸ್ವತಂತ್ರ ವಿವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಹಿಂದುಳಿದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ಜಾರಿ ಮಾಡಲಾದ 371ಜೆ ಕಲಂ ಜಾರಿಯಾಗಿ ದಶಮಾನೋತ್ಸವ ಆಚರಣೆಯ ಹೊತ್ತಿನಲ್ಲಿದೆ. ರಾಯಚೂರು ಜಿಲ್ಲೆಯ ಶೈಕ್ಷಣಿಕ ಸುಧಾರಣೆಗೆ ಸ್ಥಾಪನೆ ಮಾಡಲಾದ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ಮೂಲಸೌಕರ್ಯ, ಖಾಯಂ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯಿಲ್ಲದೇ ಹೊರ ಗುತ್ತಿಗೆ ಆಧಾರದ ಮೇಲೆ ನಡೆಸಲಾಗುತ್ತಿದೆ.

ರಾಯಚೂರು ಜಿಲ್ಲೆಯ 122 ಹಾಗೂ ಯಾದಗಿರಿ ಜಿಲ್ಲೆಯ 102 ಸೇರಿ ಒಟ್ಟು 224 ಕಾಲೇಜುಗಳನ್ನು ಒಳಗೊಂಡು ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಯರಗೇರಾ ತಾಲೂಕಿನಲ್ಲಿ 250 ಎಕರೆ ವಿಶಾಲ ಪ್ರದೇಶದಲ್ಲಿ ತನ್ನ ಕ್ಯಾಂಪಸ್ ಹರಡಿಕೊಂಡಿದೆ.

ವಿವಿಯಲ್ಲಿ 20 ಪಿಜಿ ವಿಭಾಗಗಳಿದ್ದು, ತಲಾ 200 ಬೋಧಕ-ಬೋಧಕೇತರ ಹುದ್ದೆಗಳ ಪೈಕಿ 3 ಜನ ಸಹ ಪ್ರಾಧ್ಯಾಪಕರು, ಇಬ್ಬರು ಹಿರಿಯ ಪ್ರಾಧ್ಯಾಪಕರು ಮಾತ್ರ ಖಾಯಂ ಇದ್ದು, ಉಳಿದ 84 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. 31 ಬೋಧಕ ಹುದ್ದೆಯಲ್ಲಿ ಇಬ್ಬರು ಪ್ರೊಫೆಸರ್, 5 ಜನ ಅಸೋಸಿಯೇಟ್ ಪ್ರೊಫೆಸರ್, 24 ಸಹಾಯಕ ಪ್ರೊಫೆಸರ್ ಭರ್ತಿಗೆ ಕ್ರಮ ವಹಿಸಲಾಗಿದೆ. ಇನ್ನು, 89 ಜನ ಬೋಧಕೇತರ ಸಿಬ್ಬಂದಿಯಲ್ಲಿ 20 ಸೆಕ್ಯೂರಿಟಿ ಗಾರ್ಡ್, 10 ಸಫಾಯಿ ಕರ್ಮಚಾರಿ, 36 ಕಚೇರಿ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದು, 47 ಜನರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.

ವಿವಿಯ ನಿರ್ವಹಣೆಗೆ ಕಳೆದ ಬಜೆಟ್ ನಲ್ಲಿ 330 ಕೋಟಿ ರೂ.ಬೇಡಿಕೆ ಇಡಲಾಗಿತ್ತು. ಆದರೆ ಸರಕಾರದಿಂದ ಕೇವಲ 2.23 ಕೋಟಿ ರೂ. ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ, ಅಗತ್ಯಕ್ಕನುಸಾರವಾಗಿ ವಿವಿಧ ಕಟ್ಟಡಗಳ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ 330 ಕೋಟಿ ರೂ.ಕ್ರಿಯಾ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಕೇವಲ 2.23 ಕೋಟಿ ರೂ.ಮಾತ್ರ ಸರಕಾರ ಮಂಜೂರು ಮಾಡಿದೆ. ಇದನ್ನು ಸಿಬ್ಬಂದಿ ಸಂಬಳ ಹಾಗೂ ಪರೀಕ್ಷೆ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ (ಕೆಕೆಆರ್‌ಡಿಬಿ) ತಳಿಶಾಸ್ತ್ರ ಅಧ್ಯಯನಕ್ಕಾಗಿ 45 ಕೋಟಿ ರೂ.ನೀಡಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ರಾಜ್ಯಪಾಲರ ವಿವೇಚನಾ ನಿಧಿಯಿಂದ ಸೆಂಟರ್ ಆಫ್ ಎಕ್ಸಲ್ ಇನ್ ಆರ್ಟಿಫಿಷಲ್ ಇಂಟಲಿಜೆನ್ಸ್ ಸ್ಥಾಪನೆಗೆ 34 ಕೋಟಿ ರೂ.ಹಾಗೂ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 7 ಕೋಟಿ ರೂ.ಅನುದಾನ ಮಂಜೂರಾಗಿದೆ. ಇದನ್ನು ಬಿಟ್ಟರೆ, ವಿವಿಗೆ ಯಾವುದೇ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರ ಕ್ಷೇತ್ರದಲ್ಲಿಯೇ ವಿವಿ ಇರುವುದರಿಂದ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ವಿಶ್ವಾಸವಿತ್ತು. ಆದರೆ ರಾಯಚೂರು ವಿವಿಯ ಹೆಸರನ್ನು ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿವಿ ಆಗಿ ಮರು ನಾಮಕರಣ ಮಾಡಿದ್ದೇ ಇವರ ದೊಡ್ಡ ಸಾಧನೆಯಾಗಿದೆ.

ವಿವಿ ವ್ಯಾಪ್ತಿಗೆ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ 11 ಶಾಸಕರು, 3ಜನ ವಿಧಾನಪರಿಷತ್ ಸದಸ್ಯರು, ಹಾಗೂ ಒಬ್ಬರು ಸಂಸದರು ಕೆಕೆಆರ್‌ಡಿಬಿಯಿಂದ ಹೆಚ್ಚುವರಿ ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸ್ಥಳಿಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಜೂ.23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು, ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿ ಅಂದಾಜು 936 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಮಾಡಲಿದ್ದಾರೆ. ರಾಯಚೂರು ವಿವಿ ಆವರಣದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ರಾಯಚೂರು ವಿವಿಗೆ ಮರುನಾಮಕರಣ ನಡೆಯಲಿದೆ. ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ರಾಯಚೂರ ವಿವಿ ಆವರಣದಲ್ಲಿ 6 ಎಕರೆ ಪ್ರದೇಶದಲ್ಲಿ ಹೊಸದಾಗಿ ಉದ್ಯಾನವನ ನಿರ್ಮಾಣವಾಗಲಿದೆ. ಈ ವೇಳೆ ವಿವಿಯಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ವಿವಿಗೆ ಬೇಕಾಗುವ ಅನುದಾನದ ಬಗ್ಗೆ ಸಿಎಂ ಗಮನಕ್ಕೆ ತರಲಾಗುವುದು.

-ಬಸನಗೌಡ ದದ್ದಲ್, ಶಾಸಕ, ರಾಯಚೂರ ಗ್ರಾಮೀಣ ವಿಧಾನಸಭಾ ಕ್ಷೇತ್ರ

ರಾಯಚೂರು ವಿವಿಯ ನಿರ್ಮಾಣಕ್ಕೆ ಅನೇಕರು ತಮ್ಮ ಫಲವತ್ತಾದ ಭೂಮಿ ನೀಡಿದ್ದು ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನು ಸರಕಾರ ನೀಡಿಲ್ಲ, ಉದ್ಯೋಗ ನೀಡಿಲ್ಲ. ವಿವಿಗೆ ಅಗತ್ಯವಾದ ಸಿಬ್ಬಂದಿ ನೇಮಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು.

-ನಿಝಾಮುದ್ದೀನ್ ಯರಗೇರಾ, ಜೆಡಿಎಸ್ ಮುಖಂಡ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News