ಮೂಲಭೂತ ಸೌಕರ್ಯ ವಂಚಿತ ಐದನಾಳರ್ ದೊಡ್ಡಿ ಗ್ರಾಮ
ರಾಯಚೂರು: ಜಿಲ್ಲೆಯ ಲಿಂಗಸುಗೂರ ತಾಲೂಕಿನ ಗುಂತಗೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದನಾಳರ್ ದೊಡ್ಡಿಯ ಗ್ರಾಮ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ವಂಚಿತವಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಲಿಂಗಸುಗೂರ ತಾಲೂಕಿನ ಗುಂತಗೋಳ ಗ್ರಾಮದಿಂದ 6 ಕಿ.ಮೀ.ದೂರದಲ್ಲಿರುವ ಐದನಾಳರ್ ದೊಡ್ಡಿಯಲ್ಲಿ ಹಾಲುಮತದ ಸಮಾಜದ 80ಕ್ಕೂ ಹೆಚ್ಚು ಜನರು ವಾಸಮಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯಿಂದ ಆಹಾರ ಸಾಮಗ್ರಿಗಳನ್ನು ತಗೆದುಕೊಳ್ಳಲು 6 ಕಿ.ಮೀ.ನಡೆದುಕೊಂಡು ಹೋಗಿ ಪಡಿತರ ತರಬೇಕಿದೆ. ಸಣ್ಣ ಪುಟ್ಟ ಕೆಲಸಕ್ಕೆ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಬೇಕಿದೆ. ಆದರೆ ಸಮರ್ಪಕ ರಸ್ತೆಯಿಲ್ಲದೇ ಹಾವು, ಚೋಳು ಭಯದಿಂದ ಆತಂಕದಲ್ಲಿ ಹೋಗುವಂತಾಗಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.
ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ: ಮಳೆ ಬಂದರೆ ಐದನಾಳರ್ ದೊಡ್ಡಿಯಲ್ಲಿ ವಾಸಮಾಡಬೇಕು. ಗುಂತಗೋಳ ಗ್ರಾಮಕ್ಕೆ ಹೋಗಲಾರದಂತೆ ರಸ್ತೆ ಮೆಲೆ ಹಳ್ಳದ ನೀರು ಹರಿಯುತ್ತದೆೆ. ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ಮಾಡಿಕೊಡಿ ಎಂದು ಗ್ರಾಮ ಪಂಚಾಯತ್‌ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲಾಗಿದ್ದು ವಿದ್ಯಾರ್ಥಿಗಳು ಹಳ್ಳದ ನೀರಿನಲ್ಲಿ ನಿತ್ಯವು ನಡೆದುಕೊಂಡು ಬರುತ್ತಾರೆ. ಮಳೆ ಬಂದರೆ ಸಾಕು ಅನೇಕರು ಶಾಲೆಗೆ ಹೋಗಲು ಸಾಧ್ಯವಾಗದೇ ಮನೆಯಲ್ಲಿಯೇ ಇರುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವಂತಾಗಿದೆ ಎಂಬುದು ಪೋಷಕರ ಆತಂಕ ಸೃಷ್ಟಿಸಿದೆ.
ಭಾರೀ ಮಳೆಯಿಂದ ಹಳ್ಳದ ನೀರು ಹೆಚ್ಚಾಗಿ ನಾವು ಸಾಕಿರುವ ಕುರಿ, ಆಡು ಮರಿಗಳು ಹಳ್ಳಕ್ಕೆ ಕೊಚ್ಚಿಕೊಂಡು ಹೋದ ಸಾಕಷ್ಟು ಉದಾಹರಣೆಗಳು ಇವೆ. ಗರ್ಭಿಣಿಯರು, ಮಕ್ಕಳನ್ನು ರಾತ್ರಿ ವೇಳೆಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಹೋಗುವ ಸ್ಥಿತಿ ಇದ್ದು, ಅನಾರೋಗ್ಯದ ಸಂದರ್ಭದಲ್ಲಿ ನಮ್ಮ ಜೀವನ ಸಾಕಾಗಿ ಹೋಗಿದೆ. ಆದುದರಿಂದ ಗ್ರಾಮಕ್ಕೆ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ನಾವು ಇಲ್ಲಿಯತನಕ ನಮ್ಮ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿಕೊಡುತ್ತೇವೆ ಎಂಬ ಜನಪ್ರತಿನಿಧಿಗಳ ಭರವಸೆ ಮೇರೆಗೆ ಮತಹಾಕಿ ಅವರನ್ನು ಬೆಂಬಲಿಸುತ್ತಿದ್ದೇವೆ. ಇಲ್ಲಿಯವರೆಗೂ ಯಾರೂ ನಮ್ಮ ಸಮಸ್ಯೆಗೆ ಪರಿಹಾರ ನೀಡಿಲ್ಲ. ಯಾವುದೇ ಕೆಲಗಳನ್ನು ಮಾಡಿ ಕೊಟ್ಟಿಲ್ಲ.ಇನ್ನೂ ಮುಂದೆ ಯಾವುದೇ ಚುನಾವಣೆ ಬರಲಿ ನಾವು ಮತದಾನ ಮಾಡುವುದಿಲ್ಲ, ಬದಲಾಗಿ ಹೋರಾಟಕ್ಕೆ ಮುಂದಾಗುತ್ತೇವೆ. ಆದುದರಿಂದ ನಮ್ಮ ದೊಡ್ಡಿಯಲ್ಲಿ ವಾಸಿಸುವ ಜನರಿಗೆ ರಸ್ತೆ ಸೌಲಭ್ಯ ಕಲ್ಪಿಸಿ ಸಾಕು.
-ಬೀರಪ್ಪಕುರುಬರ್, ಐದನಾಳರ್ ದೊಡ್ಡಿ ನಿವಾಸಿ, ಗುಂತಗೋಳ ಗ್ರಾಮ
ಮಳೆ ಬಂದು ಹಳ್ಳಕ್ಕೆ ನೀರು ಬಹಳ ಬಂದಿದೆ. ಇದರಿಂದ ನಮ್ಮ ಮಕ್ಕಳು ಶಾಲೆಗೆ ಹೋಗಿಲ್ಲ ಪರೀಕ್ಷೆ ನಡೆಯುತ್ತಿವೆ. ಶಾಲೆಗೆ ಹೋಗಲೂ ಸಾಧ್ಯವಾಗದೇ ಮನೆಯಲ್ಲೆ ಇದ್ದಾರೆ. ನಾವು ಇಲ್ಲಿಯ ತನಕ ಸಂಕಷ್ಟದಿಂದ ಜೀವನ ನಡೆಸಿದ್ದೇವೆ. ಮಕ್ಕಳು ನಮ್ಮಂತೆ ಆಗದೇ ಉತ್ತಮ ಶಿಕ್ಷಣ ಪಡೆಯಲು ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
-ಬಸಮ್ಮ, ಐದನಾಳರ್ ದೊಡ್ಡಿಯ ನಿವಾಸಿ, ಗುಂತಗೋಳ ಗ್ರಾಮ