ನೆಲ್ಲಿಹುದಿಕೇರಿ, ನಲ್ವತ್ತೇಕರೆಯಲ್ಲಿ ಸೌಹಾರ್ದದ ಗಣೇಶೋತ್ಸವ ಆಚರಣೆ
ಮಡಿಕೇರಿ, ಆ.31: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಲ್ವತ್ತೇಕರೆ ಮತ್ತು ನೆಲ್ಲಿಹುದಿಕೇರಿಯ ಸ್ಕೂಲ್ ಪೈಸಾರಿಯಲ್ಲಿ ಸರ್ವ ಧರ್ಮೀಯ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸ್ನೇಹ ಸೌಹಾರ್ದ, ಏಕತೆ ಸಾರುತ್ತಿರುವ ಯುವಕರ ತಂಡ ಎಲ್ಲರಿಗೂ ಮಾದರಿಯಾಗಿದೆ.
ಇಲ್ಲಿನ ಶ್ರೀವಿನಾಯಕ ಮಿತ್ರ ಮಂಡಳಿ ವತಿಯಿಂದ 32ನೇ ವರ್ಷದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾನೆ ಮಾಡಲಾಗಿದೆ. ವಿಶೇಷವೆಂದರೆ ಹಲವು ವರ್ಷಗಳಿಂದ ಸರ್ವಧರ್ಮೀಯರೂ ಒಳಗೊಂಡಂತೆ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಸ್ಲಿಮ್ ಸಮುದಾಯದವರೂ ಸೇರಿ ನಡೆಸುವ ಹಬ್ಬದ ಆಚರಣೆ ಗಮನ ಸೆಳೆದಿದೆ. ಅನ್ನ ಸಂತರ್ಪಣೆ, ವಿಸರ್ಜನಾ ಪೂರ್ವ ಮೆರವಣಿಗೆ ಇಲ್ಲಿಯ ಮಸೀದಿ ಆವರಣ ತಲುಪುತ್ತಿದ್ದಂತೆ ಭಕ್ತರಿಗೆ ಪಾನಕ, ಹಣ್ಣು, ಸಿಹಿ ತಿನಿಸು ನೀಡಿ ಸ್ವಾಗತಿಸುವುದು ವಾಡಿಕೆ.
ಪ್ರತಿ ವರ್ಷ ಗಣೇಶೋತ್ಸವ, ಮೀಲಾದುನ್ನಬಿ ಜೊತೆಗೇ ಬರುವುದರಿಂದ ಇಲ್ಲಿ ಎರಡೂ ಧರ್ಮದವರು ಜೊತೆಗೂಡಿ ಆಚರಿಸುತ್ತಾರೆ. ಮೀಲಾದುನ್ನಬಿ ಸಂದರ್ಭದಲ್ಲಿ ಮುಹಮ್ಮದ್(ಸ.ಅ.) ಅವರ ಶಾಂತಿ ಸಂದೇಶ ಸಾರುವ ಸೌಹಾರ್ದ ಜಾಥಾ ಬರುವಾಗ ಶ್ರೀ ಸಿದ್ಧಿವಿನಾಯಕ ಮಿತ್ರ ಮಂಡಳಿಯವರು 13 ವರ್ಷಗಳಿಂದ ಮುಸ್ಲಿಮರಿಗೆ ಪಾನಕ ನೀಡಿ ಸ್ವಾಗತಿಸುತ್ತಾರೆ.
ಹಬ್ಬದ ಸಂದರ್ಭಕ್ಕೆ ಮಾತ್ರ ಸೀಮಿತವಾಗದ ಈ ಆಚರಣೆ ಉತ್ಸವದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಶೈಕ್ಷಣಿಕ ಸಹಾಯ, ನಿರ್ಗತಿಕರಿಗೆ ಆರೋಗ್ಯ ವೆಚ್ಚ ಭರಿಸುವುದು, ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.
ನೆಲ್ಲಿಹುದಿಕೇರಿಯ ಸ್ಕೂಲ್ ಪೈಸಾರಿಯಲ್ಲಿ ಶ್ರೀಸಿದ್ಧಿವಿನಾಯಕ ಮಿತ್ರ ಮಂಡಳಿ ತನ್ನ 13ನೇ ವರ್ಷದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಸರ್ವ ಧರ್ಮೀಯರನ್ನೂ ಒಳಗೊಂಡ ಸಮಿತಿಯ ಅಧ್ಯಕ್ಷ ಕ್ರೈಸ್ತ ಧರ್ಮದ ಕ್ಸೇವಿಯರ್ ಎಂಬುದು ಮತ್ತೊಂದು ವಿಶೇಷ. ಅಲ್ಲದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಮುಸ್ಲಿಮ್ ವ್ಯಕ್ತಿಯ ಜಾಗದಲ್ಲಿ. ಸದಸ್ಯರಾದ ನೌಫಲ್, ಆಂಟೋನಿ ಸೇರಿದಂತೆ ಎಲ್ಲ ಧರ್ಮದವವರೂ ಸಂಘದಲ್ಲಿ ಇದ್ದು, ಸೌಹಾರ್ದ, ಏಕತೆಯನ್ನು ಸಾರುತ್ತಾ ಬರುತ್ತಿದ್ದಾರೆ.
ಶ್ರೀ ವಿನಾಯಕ ಮಿತ್ರ ಮಂಡಳಿಯು 32 ವರ್ಷಗಳಿಂದ ಗಣಪತಿ ಉತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದು, ಎಲ್ಲ ಧರ್ಮದವರೂ ಕೂಡಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ. ಇಲ್ಲಿನ ಮಸೀದಿ ವತಿಯಿಂದ ಒಂದು ದಿನದ ಅನ್ನಸಂತರ್ಪಣೆ ನಡೆಸಲಾಗುತ್ತದೆ. ನಾವು ಕೂಡ ಮೀಲಾದುನ್ನಬಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಸಹೋದರರ ರೀತಿಯಲ್ಲಿ ಬಾಳುತ್ತಿದ್ದೇವೆ.
-ಸತೀಶ್, ಶ್ರೀ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ, ನಲ್ವತ್ತೇಕರೆ