500ಕ್ಕೂ ಅಧಿಕ ಮಕ್ಕಳನ್ನು ತೂಗಿದ ಪುರಾತನ ತೊಟ್ಟಿಲು!
ಉಡುಪಿ: ಮನೆಯಲ್ಲಿ ಮಗು ಹುಟ್ಟಿದರೆ ಅಲ್ಲಿ ತೊಟ್ಟಿಲು ಇರಲೇ ಬೇಕು. ಹುಸಳೆಯ ಆರಾಮದಾಯಕ ನಿದ್ದೆಗೆ ತೊಟ್ಟಿಲು ಅಗತ್ಯ. ಆದರೆ ಮಗು ಬೆಳೆದು ದೊಡ್ಡದಾಗುತ್ತಲೇ ಈ ತೊಟ್ಟಿಲು ಅಟ್ಟಕೇರುತ್ತದೆ ಇಲ್ಲವೇ, ಮಾರಾಟವಾಗುತ್ತದೆ. ಆದರೆ ಇಲ್ಲೊಂದು ತೊಟ್ಟಿಲು ಕಳೆದ 122 ವರ್ಷಗಳಿಂದ 500ಕ್ಕೂ ಅಧಿಕ ಮಕ್ಕಳನ್ನು ತೂಗಿ, ಈಗಲೂ ಮುಂದುವರಿಯುತ್ತಿದೆ.!
ಮಲ್ಪೆ ಕಲ್ಮಾಡಿ ದೊಡ್ಡಮನೆ ದಿ.ಸಾಹುಕಾರ್ ಬಪ್ಪ ಪೂಜಾರಿ 1903ರಲ್ಲಿ ತಮ್ಮ ಮಕ್ಕಳಿಗೆ ಮಲ್ಪೆ ಬಾಪುತೋಟ ದೊಡ್ಡಮನೆಯಲ್ಲಿ ಮರದ ಸ್ಟ್ಯಾಂಡ್ ಇರುವ ತೊಟ್ಟಿಲನ್ನು ನಿರ್ಮಿಸಿದ್ದರು. ಸುಮಾರು 122 ವರ್ಷಗಳ ಇತಿಹಾಸವಿರುವ ಈ ಕುಟುಂಬದ ಆರು ತಲೆಮಾರಿನ ಎಲ್ಲ ಮಕ್ಕಳು ಮಲಗಿರುವ ತೊಟ್ಟಿಲನ್ನು ಈಗಲೂ ಈ ಕುಟುಂಬದ ಹಸುಳೆಗಳನ್ನು ತೂಗಲು ಬಳಕೆ ಮಾಡಲಾಗುತ್ತಿದೆ.
ಸಾಹುಕಾರ್ ಬಪ್ಪ ಪೂಜಾರಿಗೆ ಅಕ್ಕು, ರಾಮು, ಸುಂದರಿ, ಎಂ.ಕೆ.ಗಿರಿಯಪ್ಪ, ಎಂ.ಕೆ.ಶೇಷಪ್ಪ ಎಂಬ ಐವರು ಮಕ್ಕಳು ಮತ್ತು ಜಲಜಾ, ನಾಗಪ್ಪ ಬಂಗೇರ, ಗಿರಿಜಾ, ಲಕ್ಷ್ಮೀ, ಕುಸುಮ, ಮಲ್ಪೆ ರಾಘವೇಂದ್ರ ಲೀಲಾ ಎಸ್. ಕೋಟ್ಯಾನ್, ಎಂ.ಸಂಕಪ್ಪ ಬಂಗೇರ, ವಾರಿಜಾ ಕೃಷ್ಣ, ಕೆ.ಸುಂದರ್, ಭವಾನಿ ಪೂಜಾರಿ, ವಿಜಯ ಜಿ. ಬಂಗೇರ. ಎಂ.ಜಿ.ಮಧ್ವರಾಜ್, ಎಂ.ಜಿ.ಮೋಹನ್, ಎಂ.ಜಿ.ಲೋಹಿತ್‌ರಾಜ್, ವಿಜಯ ಭಾರತಿ, ಪೂರ್ಣಿಮಾ ಪುರುಷೋತ್ತಮ್, ಎಂ.ಕೆ.ರಮೇಶ್, ಶಶಿಕಲಾ ವಿ. ಅಮೀನ್, ಸುಭಾಸ್‌ಚಂದ್ರ ಎಂಬ 20 ಮಂದಿ ಮೊಮ್ಮಕ್ಕಳು.
ಈ ತೊಟ್ಟಿಲಿನಲ್ಲಿ ಬಪ್ಪ ಪೂಜಾರಿಯ ಮಕ್ಕಳು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಅವರ ಮಕ್ಕಳು ಸೇರಿದಂತೆ ಒಟ್ಟು ಸುಮಾರು 500ಕ್ಕೂ ಅಧಿಕ ಮಕ್ಕಳು ತೂಗಿ, ಆಡಿ ಮಲಗಿದ್ದಾರೆ. ಕಲ್ಮಾಡಿ ಬಪ್ಪ ಪೂಜಾರಿಯವರ ಮಲ್ಪೆ ಬಾಪುತೋಟದ ಮನೆ ಯಲ್ಲಿರುವ ಈ ತೊಟ್ಟಿಲನ್ನು ಕುಟುಂಬದ ಯಾವುದೇ ಮನೆಯಲ್ಲಿ ಮಗು ಹುಟ್ಟಿದರೂ ಸ್ವಚ್ಛ ಮಾಡಿ, ಬಣ್ಣ ಬಳಿದು ನೀಡಲಾಗುತ್ತಿದೆ.
ತೊಟ್ಟಿಲನ್ನು ಮಗು ಹುಟ್ಟಿದ ಮನೆಯವರು ಬಂದು ತಮ್ಮ ಮನೆಗೆ ಕೊಂಡೊ ಯ್ಯುತ್ತಿದ್ದರು. ಮುಂದೆ ಆ ಮಗುವಿಗೆ ತೊಟ್ಟಿಲು ತೂಗುವುದನ್ನು ನಿಲ್ಲಿಸಿದಾಗ ಮತ್ತೆ ಮಲ್ಪೆ ದೊಡ್ಡಮನೆಗೆ ಹಿಂದಿರುಗಿಸುತ್ತಿದ್ದರು.
ಬಾಪುತೋಟದ ಮನೆ ತುಂಬಾ ಹಳೆಯದಾಗಿದ್ದ ಕಾರಣ, ಮನೆ ದುರಸ್ತಿ ಮಾಡುವ ಅನಿವಾರ್ಯ ಎದುರಾಗಿತ್ತು. ಆ ಸಂದರ್ಭ ಅಂದರೆ ಸುಮಾರು 30 ವರ್ಷ ಗಳ ಹಿಂದೆ ಈ ತೊಟ್ಟಿಲಿನ ಹೊಣೆಗಾರಿಕೆಯನ್ನು ಬಪ್ಪ ಪೂಜಾರಿಯ ಮೊಮ್ಮಗಳು ಪಂದುಬೆಟ್ಟು ನಂದಗೋಕುಲ ಮನೆಯ ವಿಜಯಾ ಗೋಪಾಲ ಬಂಗೇರ ವಹಿಸಿಕೊಂಡರು.
ಸದ್ಯ ನಂದಗೋಕುಲ ಮನೆಯಲ್ಲಿ ಈ ಪುರಾತನ ತೊಟ್ಟಿಲು ನೆಲೆ ಕಂಡಿದೆ. ಹಿಂದಿನಂತೆ ಯಾರ ಮನೆಯಲ್ಲಿ ಮಗು ಹುಟ್ಟಿದರೂ ತೊಟ್ಟಿಲನ್ನು ಪಂದುಬೆಟ್ಟು ಮನೆಯಿಂದ ಕೊಂಡೊಯ್ದು ಮುಂದೆ ವಾಪಸ್ ಅಲ್ಲಿಗೇ ತಂದು ಕೊಡುವ ಪದ್ಧತಿ ಮುಂದುವರಿದಿದೆ. ಒಟ್ಟಾರೆಯಾಗಿ ಇಡೀ ಕುಟುಂಬದವರಲ್ಲಿ ಈ ತೊಟ್ಟಿಲಿನ ಬಗ್ಗೆ ಭಾವನಾತ್ಮಕ ಸಂಬಂಧ ಬೆಳೆದಿದೆ. ಎಲ್ಲರಿಗೂ ಈ ತೊಟ್ಟಿಲಿನ ಮೇಲೆ ಗೌರವ, ಪ್ರೀತಿ ಈಗಲೂ ಉಳಿದುಕೊಂಡಿದೆ.
‘‘ಮಗು ಹುಟ್ಟಿದ ಮನೆಗೆ ತೊಟ್ಟಿಲನ್ನು ಕಳುಹಿಸಿಕೊಡುವಾಗ ಇಡೀ ತೆಂಗಿನಕಾಯಿ, ವೀಳ್ಯದೆಲೆ ಇಟ್ಟು ಕಳುಹಿಸುತ್ತೇವೆ. ಇದು ನಮ್ಮ ಸಂಪ್ರದಾಯ. ನಮ್ಮ ಮನೆಗೆ ಹಲವು ಮಂದಿ ಭೇಟಿ ನೀಡುತ್ತ ಇರುತ್ತಾರೆ. ಬಂದವರ ಕಣ್ಣಿಗೆ ಮೊದಲು ಬೀಳುವುದು ಈ ತೊಟ್ಟಿಲು. ಅಷ್ಟೊಂದು ಆಕರ್ಷಣೀಯವಾಗಿರುವ ಈ ತೊಟ್ಟಿಲು ಎಲ್ಲರ ಗಮನ ಸೆಳೆಯುತ್ತದೆ. ತೊಟ್ಟಿಲು ತೂಗುವ ಕಾರ್ಯಕ್ರಮಕ್ಕೆ ಬಂದವರು ತೊಟ್ಟಿಲಿನಲ್ಲಿರುವ ಮಗುವನ್ನು ನೋಡುವುದಕ್ಕಿಂತ ತೊಟ್ಟಿಲನ್ನು ನೋಡುವುದರಲ್ಲೇ ಮಗ್ನರಾಗುತ್ತಾರೆ. ನಮ್ಮ ಕುಟುಂಬದಲ್ಲಿ ಯಾರು ಹೊಸ ತೊಟ್ಟಿಲು ಖರೀದಿಸುವುದಿಲ್ಲ. ಇದನ್ನೇ ಬಳಸುತ್ತಾರೆ. ಈ ತೊಟ್ಟಿಲಲ್ಲಿ ಮಕ್ಕಳನ್ನು ಮಲಗಿಸುವುದೇ ದೊಡ್ಡ ಗೌರವ’’ ಎಂದೆನ್ನುತ್ತಾರೆ ವಿಜಯಾ ಗೋಪಾಲ ಬಂಗೇರ.
‘ಈ ತೊಟ್ಟಿಲು ತುಂಬಾ ವಿಶೇಷವಾಗಿದೆ. 1903ರಲ್ಲಿ ನನ್ನ ಅಜ್ಜ ಅಂದರೆ ತಾಯಿಯ ತಂದೆ ತಮ್ಮ ಮಕ್ಕಳಿಗೆ ನಿರ್ಮಿಸಿದ ತೊಟ್ಟಿಲು ಇದು. ಏಳು ತಲೆಮಾರಿನ ಎಲ್ಲ ಮಕ್ಕಳು ಇದರಲ್ಲಿ ಮಲಗಿದ್ದಾರೆ. ನಾನು ಕೂಡ ಇದರಲ್ಲೇ ಮಲಗಿ ದೊಡ್ಡವನಾಗಿರುವುದು. ಇಡೀ ಕುಟುಂಬವೇ ಈ ತೊಟ್ಟಿಲನ್ನು ಪ್ರೀತಿಸುತ್ತದೆ ಮತ್ತು ಗೌರವಿಸುತ್ತದೆ. ಇದರ ಬಗ್ಗೆ ಭಾವನಾತ್ಮಕವಾಗಿ ಸಂಬಂಧ ನಮ್ಮಲ್ಲಿ ಬೆಳೆದಿದೆ’
-ವಿಜಯಾ ಗೋಪಾಲ ಬಂಗೇರ