ಮಹಿಳೆಯರಲ್ಲಿ ರಕ್ತಹೀನತೆ, ನಾರಿನಾಂಶದ ಕೊರತೆ : ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಶಿಶುಮರಣ ಪ್ರಮಾಣ
ರಾಯಚೂರು, ಅ.9: ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮಹಿಳೆಯರಲ್ಲಿ ರಕ್ತ ಹೀನತೆ, ತಾಯಿ ಹಾಗೂ ಶಿಶುಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೂರು ವರ್ಷಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ 1,405 ಶಿಶುಮರಣಗಳು ಸಂಭವಿಸಿದ್ದು ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಕಳೆದ 2022ರಿಂದ 2025 ಆಗಸ್ಟ್ ವರೆಗೆ ಅಂದರೆ 3 ವರ್ಷಗಳಲ್ಲಿ 18,359 ಶಿಶುಮರಣ ಸಂಭವಿಸಿದರೆ ಈ ಪೈಕಿ ಕಲ್ಯಾಣ ಕರ್ನಾಟಕದಲ್ಲಿಯೇ 6,507 ಶಿಶುಮರಣ ಸಂಭವಿಸಿದೆ. ಅತ್ಯಂತ ಹೆಚ್ಚು ಶಿಶುಮರಣ ಸಂಭವಿಸಿದ ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ 1,450 ಶಿಶು ಮರಣವಾಗಿ ಪ್ರಥಮ ಸ್ಥಾನದಲ್ಲಿದ್ದರೆ, 1,272 ಶಿಶುಗಳ ಸಾವನ್ನಪ್ಪಿದ ಕೊಪ್ಪಳ ಜಿಲ್ಲೆ ಎರಡನೇ ಸ್ಥಾನದಲಿದ್ದು, 1,062 ಶಿಶುಮರಣವಾದ ಕಲಬುರಗಿ ಮೂರನೇ ಸ್ಥಾನದಲ್ಲಿದೆ. ಯಾದಗಿರಿಯಲ್ಲಿ 216, ಹೊಸ ಜಿಲ್ಲೆಯಾದ ವಿಜಯನಗರ 106 ಶಿಶುಮರಣ ಆಗಿರುವುದು ಕೆಳಗಿನ ಸ್ಥಾನದಲ್ಲಿದೆ. ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿಯೇ ಶಿಶುಮರಣಗಳ ಸಂಖ್ಯೆ ಹೆಚ್ಚಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ, ಬಡತನ, ಅನಕ್ಷರತೆ ಇತರ ಕಾರಣಗಳಿಂದ ಕಾಲಕಾಲಕ್ಕೆ ತಪಾಸಣೆ, ಚಿಕಿತ್ಸೆ ದೊರೆಯದಿರಬಹುದು ಆದರೆ ನಗರ ಪ್ರದೇಶಗಳಲ್ಲಿ ಎಲ್ಲವೂ ಇದ್ದರೂ ಶಿಶುಮರಣ ಪ್ರಮಾಣ ಹೆಚ್ಚಾಗಿರುವುದು ಯಾಕೆ ಎಂದು ಪ್ರಶ್ನೆ ಮೂಡುತ್ತಿದೆ.
ಸಾಮಾಜಿಕವಾಗಿ, ಆರ್ಥಿಕ, ಶೈಕ್ಷಣಿಕವಾಗಿ ತೀರ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ, ಗರ್ಭಿಣಿ, ಬಾಣಂತಿಯರಲ್ಲಿ ರಕ್ತಹೀನತೆ, ಕಬ್ಬಣಾಂಶ(ನಾರಿನಾಂಶ)ದ ಕೊರತೆ ನಿವಾರಣೆಗೆ ಸರಕಾರ ಅನೇಕ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಅನೇಕ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಾ ಬಂದರೂ ಸಮರ್ಪಕ ಅನುಷ್ಠಾನದ ಕೊರತೆಯಿಂದ ಯಶಸ್ವಿಯಾಗುತ್ತಿಲ್ಲ.
ರಾಯಚೂರು ಜಿಲ್ಲೆಯಲ್ಲಿ ಹೆರಿಗೆಗಳ ಪ್ರಮಾಣ ಹೆಚ್ಚಾಗಿವೆ. ತಾಯಿ ಹಾಗೂ ಶಿಶು ಮರಣಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಲಿಂಗಸುಗೂರು, ಸಿಂಧನೂರು, ರಾಯಚೂರು ನಗರದಲ್ಲಿ ನೂತನವಾಗಿ ಈ ವರ್ಷ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತೆರೆಯಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡರೆ ತಾಯಿ, ಶಿಶುಮರಣ ನಿಯಂತ್ರಣ ಮಾಡಬಹುದು.
-ಡಾ.ಸುರೇಂದ್ರ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ