×
Ad

ಪಾಳುಬಿದ್ದ ಭತ್ತದ ಗದ್ದೆಗೆ ಮರುಜೀವ ತುಂಬಿದ ಬೇಗೂರಿನ ಕೃಷಿಕ ಪ್ರವೀಣ್

Update: 2025-08-11 08:15 IST

ಮಡಿಕೇರಿ, ಆ.10: ಪಾಳುಬಿಟ್ಟಿದ್ದ ಭತ್ತದ ಗದ್ದೆಯನ್ನು ಗುತ್ತಿಗೆ ಪಡೆದುಕೊಂಡು ಯಂತ್ರದ ಮೂಲಕ ನಾಟಿ ಮಾಡಿ ದಕ್ಷಿಣ ಕೊಡಗಿನಲ್ಲಿ ಕೃಷಿಕರೋರ್ವರು ಗಮನ ಸೆಳೆದಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಚೀನಿವಾಡ ಎಂಬಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಯಂತ್ರದ ಮೂಲಕ ಭತ್ತದ ಕೃಷಿಯಲ್ಲಿ ಕೃಷಿಕ ಮತ್ರಂಡ ಪ್ರವೀಣ್ ಕುಶಾಲಪ್ಪ ಎಂಬವರು ತೊಡಗಿದ್ದಾರೆ. ಮಲಚ್ಚೀರ ರವಿ ಹಾಗೂ ಮುತ್ತಪ್ಪ ಎಂಬವರಿಗೆ ಸೇರಿದ ಪಾಳು ಬಿಟ್ಟಿದ್ದ ಸುಮಾರು 15 ಎಕರೆ ಭತ್ತದ ಗದ್ದೆಯನ್ನು ಮತ್ರಂಡ ಪ್ರವೀಣ್ ಕುಶಾಲಪ್ಪ ಅವರು ಗುತ್ತಿಗೆಗೆ ಪಡೆದು, ಮಂಡ್ಯದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿಯೇ ತಯಾರಿಸಿದ ಆರ್.ಎನ್.ಆರ್. ಎಂಬ ಭತ್ತದ ಸಸಿ ಮಡಿಗಳನ್ನು ಹಾಗೂ ಭತ್ತದ ನಾಟಿ ಮಾಡುವ ಯಂತ್ರವನ್ನು ತರಿಸಿ ಭತ್ತದ ನಾಟಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೃಷಿ ತಜ್ಞರು, ಯಂತ್ರದ ಮೂಲಕ ಭತ್ತದ ನಾಟಿ ಕಾರ್ಯ ಮಾಡಿ ಪಾಳುಬಿಟ್ಟಿದ್ದ ಭತ್ತದ ಗದ್ದೆಗೆ ಮರುಜೀವ ನೀಡುತ್ತಿರುವ ಕೃಷಿಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ಅವರ ಪ್ರಯತ್ನಕ್ಕೆ ಕೃಷಿ ಇಲಾಖೆ, ಅರಣ್ಯ ಮಹಾ ವಿದ್ಯಾಲಯ ಮತ್ತು ಅಗ್ರಿಕಲ್ಚರ್ ಸೈನ್ಸ್ ಆಫ್ ಫೋರಂ ಕೊಡಗು ಸಂಸ್ಥೆ ಕೈಜೋಡಿಸಿದೆ. ರೈತರು ಸದಾ ಕಾರ್ಮಿಕರ ಸಮಸ್ಯೆಗಳು ಇದೆ ಎಂದು ಹೇಳುತ್ತಾರೆ. ಆದರೆ ಪ್ರವೀಣ್ ಈ ಕಾರ್ಯ ಶ್ಲಾಘನೀಯ. ಜಿಲ್ಲೆಯ ರೈತರು ಕೃಷಿ ಇಲಾಖೆ, ಸಂಘ ಸಂಸ್ಥೆಗಳು ಹಾಗೂ ಯಂತ್ರೋಪಕರಣಗಳ ಸಹಾಯದಿಂದ ಪಾಳು ಬಿಟ್ಟ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಬೇಕು ಎಂದು ಕೊಡಗು ಕೃಷಿ ವಿಜ್ಞಾನ ವೇದಿಕೆ ಮಾಜಿ ಅಧ್ಯಕ್ಷ ಡಾ.ಚೆಪ್ಪುಡಿರ ಕುಶಾಲಪ್ಪ ಹೇಳಿದ್ದಾರೆ.

ಇತ್ತಿಚೀನ ವರ್ಷಗಳಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ವಿರಳವಾಗುತ್ತಿದೆ. ಸಮರ್ಪಕವಾದ ರೀತಿಯಲ್ಲಿ ಭತ್ತದ ಕೃಷಿಯನ್ನು ಮಾಡಿದಾಗ ಲಾಭದಾಯಕವಾಗಿರುತ್ತದೆ. ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಯಂತ್ರಿಕೃತ ಕೃಷಿಯ ಮೊರೆ ಹೋಗುವುದರಿಂದ ಭತ್ತದ ಬೇಸಾಯದ ಖರ್ಚು ವೆಚ್ಚ ಕಡಿಮೆಯಾಗುತ್ತದೆ ಹಾಗೂ ಉತ್ತಮ ಫಸಲು ದೊರೆಯುತ್ತದೆ. ಭತ್ತದ ಕೃಷಿ ಕೇವಲ ಆಹಾರಕ್ಕಾಗಿ ಅಲ್ಲದೆ ಜಲಮೂಲಗಳ ಸಂರಕ್ಷಣೆಗಾಗಿಯೂ ಮಾಡಬೇಕಾಗಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಎನ್ ಕೆಂಚರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಭತ್ತದ ಬೆಳೆ ಬೆಳೆಯುವುದು ಕಡಿಮೆಯಾಗಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾಕ್ಟರ್ ವೀರೇಂದ್ರ ಕುಮಾರ್ ವಿಷಾದಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ 50 ಹೆಕ್ಟೇರ್ ಭತ್ತದ ಕೃಷಿ ಕಾಣಸಿಗುತ್ತಿತ್ತು. ಆದರೆ ಕಳೆದ 5 ವರ್ಷಗಳಿಂದ ಕೇವಲ 20 ರಿಂದ 30 ಹೆಕ್ಟೇರ್ ಭತ್ತದ ಕೃಷಿ ಭೂಮಿ ಕಾಣಸಿಗುತ್ತದೆ. ಕಾರಣ ಕಾರ್ಮಿಕರ ಸಮಸ್ಯೆ, ಹೆಚ್ಚಾಗಿ ಮಳೆ ಬೀಳುವುದು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಭತ್ತ ಬೆಳೆಯುವ ಕೃಷಿ ಭೂಮಿ ಹೆಚ್ಚಾಗಬೇಕೆಂಬ ರೈತರ ಕೂಗಿಗೆ ಓಗೊಟ್ಟು ಕೃಷಿ ವಿಜ್ಞಾನ ಕೇಂದ್ರ, ಅರಣ್ಯ ಮಹಾವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರ ಒಟ್ಟಾಗಿ ಸುಮಾರು 200 ಹೆಕ್ಟೇರ್ ಭತ್ತ ಬೆಳೆಯುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಭತ್ತದ ಕೃಷಿ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಕಾರ್ಮಿಕರ ಅಭಾವವಿದೆ. ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿ ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನಿಗಳೊಂದಿದೆ ಮೇಕನೈಸಲ್ ಕೃಷಿ ಮಾಡಲಾಗುತ್ತಿದೆ. ವನ್ಯ ಪ್ರಾಣಿಗಳಿಂದ ಕೃಷಿ ಫಸಲು ನಷ್ಟವಾಗದಂತೆ ತಡೆಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಂಡಲ್ಲಿ ಹಲವಾರು ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.

-ಮತ್ರಂಡ ಪ್ರವೀಣ್ ಕುಶಾಲಪ್ಪ, ಕೃಷಿಕ


Tags:    

Writer - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Editor - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News