ಕರಾವಳಿಯಲ್ಲಿ ಅವಸಾನದತ್ತ ಗೇರು ಬೆಳೆ
100ಕ್ಕೂ ಅಧಿಕ ಫ್ಯಾಕ್ಟರಿಗಳು ಬಂದ್; 50ರಷ್ಟು ದಿವಾಳಿಯತ್ತ!
ಮಂಗಳೂರು: ಒಂದು ಕಾಲದಲ್ಲಿ ಬೀಡಿ ಉದ್ಯಮದ ಜೊತೆಯಲ್ಲೇ ಕರಾವಳಿ ಜಿಲ್ಲೆಯ ಸಾಮಾನ್ಯ ಜನರ ಜೀವನಾಧಾರವಾಗಿದ್ದ ಗೇರುಬೀಜ ಉದ್ಯಮ, ನಿಧಾನಗತಿಯಲ್ಲಿ ಅವಸಾನದತ್ತ ಸಾಗುತ್ತಿದೆ. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿ ಅಸ್ತಿತ್ವಕ್ಕೆ ಬಂದು ಸಾವಿರಾರು ಕೈಗಳಿಗೆ ಉದ್ಯೋಗ ನೀಡಿರುವ ಗೋಡಂಬಿ ಫ್ಯಾಕ್ಟರಿಗಳಲ್ಲಿ ಬೆರಳೆಣಿಕೆಯ ಫ್ಯಾಕ್ಟರಿಗಳು ಮಾತ್ರವೇ ಲಾಭದ ಹಾದಿಯಲ್ಲಿ ಮುಂದುವರಿಯುತ್ತಿವೆ. ಕಳೆದ ಒಂದೂವರೆ ದಶಕದಲ್ಲೇ 100ಕ್ಕೂ ಅಧಿಕ ಸಣ್ಣ ಪ್ರಮಾಣದ ಗೇರುಬೀಜ ಫ್ಯಾಕ್ಟರಿಗಳಿಗೆ ಬೀಗ ಬಿದ್ದಿವೆೆ. ಸದ್ಯ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿಗಳಲ್ಲಿ 50ಕ್ಕೂ ಅಧಿಕ ಮುಚ್ಚುವ ಹಂತದಲ್ಲಿವೆ!
ಮಾಹಿತಿ ಪ್ರಕಾರ ಮೂರು ದಶಕಗಳ ಹಿಂದೆ ಉತ್ತರ ಕನ್ನಡ ಸೇರಿದಂತೆ ಕರಾವಳಿಯಲ್ಲಿ 350ರಷ್ಟು ಗೋಡಂಬಿ ಸಂಸ್ಕರಣಾ ಫ್ಯಾಕ್ಟರಿಗಳಿದ್ದವು. ಸುಮಾರು 55,000ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡುತ್ತಿದ್ದ ಈ ಉದ್ಯಮವು ಕರಾವಳಿ ಜನರ ಜೀವನಾಡಿಯಾಗಿತ್ತು. ಉತ್ತರ ಕನ್ನಡದಲ್ಲಿ ಸುಮಾರು 20 ಫ್ಯಾಕ್ಟರಿಗಳು ಕಾರ್ಯಾಚರಿಸುತ್ತಿದ್ದರೆ, ಉಳಿದೆಲ್ಲವೂ ದ.ಕ. ಮತ್ತು ಉಡುಪಿಯಲ್ಲಿದ್ದವು. ಆದರೆ ಕಳೆದೊಂದು ದಶಕದಿಂದ ಬಾಗಿಲು ಮುಚ್ಚುತ್ತಾ ಸಾಗಿದ ಗೇರುಬೀಜ ಫ್ಯಾಕ್ಟರಿಗಳು ಸದ್ಯ ಕರಾವಳಿಯಲ್ಲಿ 250ಕ್ಕೆ ಇಳಿಕೆಯಾಗಿವೆ. ಕಳೆದ ಕೆಲ ವರ್ಷಗಳಿಂದೀಚೆಗಷ್ಟೇ 40ಕ್ಕೂ ಅಧಿಕ ಕಿರು ಫ್ಯಾಕ್ಟರಿಗಳು ದಿವಾಳಿಯಾಗಿ ಬೀಗ ಹಾಕಿಸಿಕೊಂಡಿವೆ.
ಒಂದು ಕಾಲದಲ್ಲಿ ಕರಾವಳಿಯ ಮನೆಗಳ ಸುತ್ತಮುತ್ತ ಖಾಲಿ ಜಾಗ, ಕಾಡುಗಳಲ್ಲಿ ಗೇರು ಬೆಳೆ ಸಾಮಾನ್ಯವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಎಕರೆಗಟ್ಟಲೆ ಪ್ರದೇಶಗಳಲ್ಲಿ ಗೇರುಬೀಜ ಬೆಳೆಯಲಾಗುತ್ತಿತ್ತು. ಈಗ ಅವೆಲ್ಲಾ ಮಾಯವಾಗಿವೆ. ನಗರ ವ್ಯಾಪ್ತಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕಾಗಿ ಈ ಗೇರು ಮರಗಳು ನಾಶವಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಲಾಭದಾಯಕವಲ್ಲದ ವಾಣಿಜ್ಯ ಬೆಳೆಯ ಸಾಲಿಗೆ ಗೇರು ಸೇರಿ ಅದರ ಜಾಗದಲ್ಲಿ ಅಡಿಕೆ, ರಬ್ಬರ್, ಕಾಳುಮೆಣಸಿನಂತಹ ಇತರ ಬೆಳೆಗಳು ಆವರಿಸಿಕೊಂಡಿವೆ.
ಉತ್ಪಾದನೆ 7 ಲಕ್ಷ ಟನ್- ಆಮದು 12 ಲಕ್ಷ ಟನ್!
ಗೇರು ಅಭಿವೃದ್ಧಿ ಮಂಡಳಿಯ ನಿರ್ದೇಶನಾಲಯದ ಪ್ರಕಾರ ಭಾರತದಲ್ಲಿ ಏಳು ಲಕ್ಷ ಟನ್ ಗೇರುಬೀಜವನ್ನು ಬೆಳೆಯಲಾಗುತ್ತದೆ. ಆದರೆ ಅಷ್ಟೂ ಅಲ್ಲ, ಇದು ಕೇವಲ ಐದು ಲಕ್ಷ ಟನ್‌ನಿಂದ 5.50 ಲಕ್ಷ ಟನ್ ಮಾತ್ರ ಎಂಬುದು ಗೇರುಬೀಜ ಸಂಸ್ಕರಣಾ ಘಟಕಗಳವರ ಮಾಹಿತಿ. ದೇಶದಲ್ಲಿ ಗೇರುಬೀಜಕ್ಕೆ ಭಾರೀ ಬೇಡಿಕೆ ಇದೆ. ಈ ಬೇಡಿಕೆಯನ್ನು ಪೂರೈಸಲು ಸುಮಾರು 11ರಿಂದ 12 ಲಕ್ಷ ಟನ್ ಗೇರುಬೀಜವನ್ನು ಆಫ್ರಿಕಾ, ಇಂಡೋನೇಶ್ಯ, ವಿಯೆಟ್ನಾಂ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಸರಕಾರಿ ದಾಖಲೆ ಪ್ರಕಾರ ಕರ್ನಾಟಕದಲ್ಲಿ 55 ಸಾವಿರ ಟನ್ ಗೇರುಬೀಜ ಉತ್ಪಾದಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ರಾಜ್ಯದಲ್ಲಿ ಬೆಳೆಸಲಾಗುತ್ತಿರುವುದು ಕೇವಲ 25 ಸಾವಿರದಿಂದ 30 ಸಾವಿರ ಟನ್ ಮಾತ್ರ. ಕರ್ನಾಟಕದಲ್ಲಿ ಗೇರುಬೀಜ ಸಂಸ್ಕರಣಾ ಫ್ಯಾಕ್ಟರಿಗಳಿಗೆ ಐದು ಲಕ್ಷ ಟನ್ ಗೇರುಬೀಜದ ಬೇಡಿಕೆ ಇದೆ. ಹಾಗಾಗಿ ಕರ್ನಾಟಕದ ಗೇರುಬೀಜ ಸಂಸ್ಕರಣಾ ಘಟಕಗಳು ಕೂಡಾ ಬಂದರುಗಳ ಮೂಲಕ ಹೊರ ರಾಷ್ಟ್ರಗಳ ಗೇರು ಬೀಜಗಳನ್ನೇ ಅವಲಂಬಿಸಿವೆ.
ಗೇರು ಬೆಳೆಯಲು ನಿರಾಸಕ್ತಿ
ಕರ್ನಾಟಕದಲ್ಲಿ ಗೇರುಬೀಜ ಉದ್ಯಮ ಶೇ.70ರಷ್ಟು ಕರಾವಳಿ ಭಾಗಕ್ಕೆ ಸೀಮಿತವಾಗಿದೆ. ಮೂರು ದಶಕಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲೇ ಅಂದಾಜು 60,000 ಟನ್‌ಗೂ ಅಧಿಕ ಗೇರುಬೀಜ ಬೆಳೆಸಲಾಗುತ್ತಿತ್ತು. ಆದರೆ ಕ್ರಮೇಣದಲ್ಲಿ ಸ್ಥಳೀಯ ರೈತರು ತೆಂಗು, ಕಾಳು ಮೆಣಸಿನಂತಹ ಹೆಚ್ಚು ಲಾಭ ನೀಡುವ ಬೆಳೆಗಳತ್ತ ಆಕರ್ಷಿತರಾದ ಹಿನ್ನೆಲೆಯಲ್ಲಿ ಹಾಗೂ ಎಂಡೋಸಲ್ಫಾನ್‌ನ ಪರಿಣಾಮ ಗೇರು ಬೆಳೆಯುವ ಆಸಕ್ತಿ ಕುಸಿಯುತ್ತಾ ಸಾಗಿದೆ. ಅಡಿಕೆ, ರಬ್ಬರ್‌ನಂತಹ ವಾಣಿಜ್ಯ ಬೆಳೆಯು ಹೆಚ್ಚಿನ ಪ್ರಮಾಣದ ಲಾಭವನ್ನು ನೀಡುವ ಕಾರಣ, ಗೇರುಬೀಜದ ಇಳುವರಿಯು ರೈತರಲ್ಲಿ ನಿರಾಸಕ್ತಿ ಮೂಡಿಸಿದೆ ಎನ್ನಲಾಗುತ್ತಿದೆ.
ಎಕರೆಯೊಂದಕ್ಕೆ ಇಳುವರಿ 250 ಕೆಜಿ ಮಾತ್ರ
ಗೇರುಬೀಜ ಸಂಸ್ಕರಣಾ ಉದ್ಯಮದಲ್ಲಿ ಭಾರತಕ್ಕೆ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ವಿಯೆಟ್ನಾಂನಲ್ಲಿ ಎರಡೂವರೆ ಎಕರೆ (ಒಂದು ಹೆಕ್ಟೇರ್)ಯಲ್ಲಿ ಎರಡು ಟನ್ ಗೇರುಬೀಜ ಇಳುವರಿ ಪಡೆಯಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಎಕರೆಯೊಂದಕ್ಕೆ ಇಳುವರಿ 250 ಕೆಜಿ ಮಾತ್ರ!
ಭಾರತದಲ್ಲಿ ಸಿಹಿತಿಂಡಿ, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಗೇರುಬೀಜದ ತಿಂಡಿ ತಿನಿಸು ಹಾಗೂ ಇತರ ಉತ್ಪನ್ನಗಳಿಗೆ ಬೇಡಿಕೆ 10 ವರ್ಷಗಳಲ್ಲಿ ದ್ವಿಗುಣಗೊಂಡಿವೆ ಎನ್ನುತ್ತಾರೆ ಗೇರುಬೀಜ ಫ್ಯಾಕ್ಟರಿಗಳ ಮಾಲಕರು.
ಕರಾವಳಿಯಲ್ಲಿ ಬೆಳೆದ ಗೇರುಬೀಜ ಹಾಗೂ ಸಂಸ್ಕರಿಸಲ್ಪಟ್ಟ ಉತ್ಪನ್ನಗಳಿಗೆ ಮಧ್ಯಪ್ರಾಚ್ಯ ಹಾಗೂ ಅಮೆರಿಕ ದೇಶಗಳು ಪ್ರಮುಖ ಮಾರುಕಟ್ಟೆಗಳಾಗಿವೆ. ಸಂಸ್ಕರಿಸಲ್ಪಡುವ ಗೇರುಬೀಜಗಳು ವಿವಿಧ ರೀತಿಯ ಉತ್ಪನ್ನಗಳಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಮಧ್ಯವರ್ತಿಗಳ ಮೂಲಕ ಹೊರ ದೇಶಗಳಿಗೆ ರಫ್ತಾಗುತ್ತವೆ.
ಅಕ್ರಮ ಆಮದಿನ ಮೇಲೆ ಕಡಿವಾಣ ಅಗತ್ಯ
ಆಫ್ರಿಕಾ, ವಿಯೆಟ್ನಾಂಗಳಲ್ಲಿ ಗೇರುಬೀಜವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯ ಜೊತೆಗೆ ಸಂಸ್ಕರಣೆಯನ್ನೂ ನಡೆಸಲಾಗುತ್ತದೆ. ಆದರೆ ಭಾರತದಲ್ಲಿರುವಂತೆ ಅಲ್ಲಿ ಮಾರುಕಟ್ಟೆ ಇಲ್ಲ. ಹಾಗಾಗಿ ಕಸ್ಟಮ್ಸ್ ಡ್ಯೂಟಿ ತಪ್ಪಿಸಿಕೊಂಡು ಹೊರ ದೇಶಗಳಿಂದ ಅಕ್ರಮವಾಗಿ ಪಶು ಆಹಾರ ಇನ್ನಿತರ ಹೆಸರಿನಲ್ಲಿ ಗೇರುಬೀಜವನ್ನು ಭಾರತಕ್ಕೆ ತರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಬಿದ್ದರೆ, ಸಣ್ಣಪುಟ್ಟ ಫ್ಯಾಕ್ಟರಿಗಳು ಕೂಡಾ ಬದುಕಬಹುದು ಎನ್ನುವುದು ಕರಾವಳಿಯ ಗೇರುಬೀಜ ಉತ್ಪಾದಕರು ಮತ್ತು ಸಂಸ್ಕರಣಾ ಫ್ಯಾಕ್ಟರಿಗಳವರ ಅಭಿಪ್ರಾಯ.
ಗೇರುಬೆಳೆ ಬಗ್ಗೆ ನಿರಾಸಕ್ತಿಯ ಜೊತೆಗೆ ದೇಶವ್ಯಾಪಿಯಾಗಿ ಗೇರುಬೀಜ ಸಂಸ್ಕರಣಾ ಫ್ಯಾಕ್ಟರಿಗಳು ಭಾರೀ ಪ್ರಮಾಣದಲ್ಲಿ ಹುಟ್ಟಿಕೊಂಡ ಕಾರಣ, ಕಿರುಗಾತ್ರದ ಗೇರು ಸಂಸ್ಕರಣಾ ಘಟಕಗಳು ಮಾರುಕಟ್ಟೆಯ ಸ್ಪರ್ಧೆಯ ವೇಗ ತಡೆದುಕೊಳ್ಳಲಾರದೆ ಬಾಗಿಲು ಮುಚ್ಚುತ್ತಿವೆ. ಬೃಹತ್ ಫ್ಯಾಕ್ಟರಿಗಳು ಕಾರ್ಮಿಕರಿಗಿಂತ ಹೆಚ್ಚಾಗಿ ಯಂತ್ರಗಳ ಮೇಲೆ ಅವಲಂಬಿತವಾಗಿವೆ. ಕಾರ್ಮಿಕರನ್ನು ಬಳಸಿಕೊಂಡು ಸಂಸ್ಕರಣೆ ಕಾರ್ಯ ನಡೆಸುವ ಮತ್ತು ಯಂತ್ರಗಳ ಮೂಲಕ ನಡೆಯುವ ಫ್ಯಾಕ್ಟರಿಗಳ ನಡುವಿನ ಸಂಸ್ಕರಣೆಯ ವೆಚ್ಚದಲ್ಲಿ ಶೇ. 50ರಷ್ಟು ಅಂತರವಿದೆ. ಇದು ಈ ಸಣ್ಣ ಫ್ಯಾಕ್ಟರಿಗಳು ಮುಚ್ಚುತ್ತಿರಲು ಪ್ರಮುಖ ಕಾರಣ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.