×
Ad

ಸಾಮಾಜಿಕ ನ್ಯಾಯದ ಹರಿಕಾರ ಛತ್ರಪತಿ ಶಾಹುಮಹಾರಾಜರು

ಶಾಹು ಮಹಾರಾಜರು ಸಾಮಾಜಿಕ ಸುಧಾರಣೆಯ ಕ್ರಾಂತಿಕಾರಿ ಹೆಜ್ಜೆಯಾಗಿ ಕೊಲ್ಲಾಪುರದಲ್ಲಿ 1902ರ ಜುಲೈ 26ರಂದು ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ. 50ರ ಮೀಸಲಾತಿಗಾಗಿ ಆದೇಶ ಹೊರಡಿಸಿದರು.

Update: 2025-07-25 11:54 IST

ಛತ್ರಪತಿ ಶಾಹುಮಹಾರಾಜರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜೂನ್ 26, 1874ರಲ್ಲಿ ಜನಿಸಿದರು. ಇವರು ಹಿಂದುಳಿದ ಜಾತಿಯ ಕುಣಲಿ ಮರಾಠಾ ಸಮಾಜಕ್ಕೆ ಸೇರಿದವರು. ಇವರ ವಿದ್ಯಾಭ್ಯಾಸದ ನಂತರ 20ರ ವಯಸ್ಸಿನಲ್ಲಿ ಯುವಕನಾಗಿದ್ದ ಶಾಹುಮಹಾರಾಜರವರು ಎಪ್ರಿಲ್ 2ರ 1894ರಲ್ಲಿ ಬ್ರಿಟಿಷ್ ಸಂಸ್ಥಾನದ ಸಾಮಂತ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ರಾಜ ಮನೆತನದ ಪ್ರಕಾರ ಕಿರೀಟಧಾರರಾದ ರಾಜರು ಅರಮನೆಯ ಆವರಣದಲ್ಲಿರುವ ಪಂಚಗಂಗಾ ಕಲ್ಯಾಣಿಯಲ್ಲಿ ಸ್ನಾನಮಾಡುವುದರ ಮೂಲಕ, ಪುರೋಹಿತರು ವೇದಘೋಷಗಳನ್ನು ಪಠಣ ಮಾಡಿ, ಮೆರವಣಿಗೆಯಲ್ಲಿ ಕರೆತಂದು, ಪುರೋಹಿತರೇ ನಿಂತು ಮಹಾರಾಜರನ್ನು ಸಿಂಹಾಸನದ ಮೇಲೆ ಕುಳ್ಳಿರಿಸುವ ಪದ್ಧತಿಯಿತ್ತು. ಆದರೆ ಶಾಹುಮಹಾರಾಜರಿಗೆ ಕಿರೀಟಧಾರಣೆ ಮಾಡುವ ಸಮಾರಂಭಕ್ಕೆ ಮಂತ್ರಪಠಣ ಮಾಡಲು ಬ್ರಾಹ್ಮಣರು ನಿರಾಕರಿಸುತ್ತಾ ಶೂದ್ರನಿಗೆ ಇದರ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಾರೆ.

ಬ್ರಾಹ್ಮಣರ ನಿರಾಕರಣೆಯಾದರೂ ಕಿರೀಟಧಾರಣೆಗೊಂಡ ಛತ್ರಪತಿ ಶಾಹುಮಹಾರಾಜರು ಸಮಾರಂಭ ಬಹಿಷ್ಕರಿಸಿದ ಬ್ರಾಹ್ಮಣರ ವತನ್(ಇನಾಂ ಜಮೀನು) ಅನ್ನು ಮತ್ತು ಅವರಿಗೆ ನೀಡುತ್ತಿದ್ದ ರಾಜಧನವನ್ನು ರದ್ದು ಮಾಡುತ್ತಾರೆ. ರಾಜನಾದ ತನಗೆ ಈ ರೀತಿ ಮಾಡುವ ಇವರು ಸಾಮಾನ್ಯ ಜನರನ್ನು ಯಾವ ರೀತಿ ನೋಡಬಹುದು ಎಂದು ಅವರು ಬ್ರಾಹ್ಮಣರ ವಿರುದ್ಧ ಕಠಿಣ ನಿಯಮಗಳನ್ನು ತಳೆಯುತ್ತಾರೆ. ವತನ್ ಭೂಮಿ ಮತ್ತು ರಾಜಧನ ಕಳೆದುಕೊಂಡ ಪುರೋಹಿತರು ಅವರ ಜಗದ್ಗುರುಗಳಾದ ಶಂಕರಾಚಾರ್ಯರಿಗೆ ದೂರು ನೀಡಿ ಅವರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದರಿಂದ ಮತ್ತೆ ಕೋಪಗೊಂಡ ಮಹಾರಾಜರು ಅವರ ಜಗದ್ಗುರುಗಳನ್ನು ಕೊಲ್ಲಾಪುರ ಪ್ರಾಂತದಿಂದಲೇ ಗಡಿಪಾರು ಮಾಡುವುದರ ಮೂಲಕ ಜಗದ್ಗುರುಗಳ ಸಾವಿರಾರು ಎಕರೆ ಇನಾಂ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕೊಲ್ಲಾಪುರ ಪ್ರಾಂತದಲ್ಲಿ ಎಲ್ಲಾ ಹಂತದ ಅಧಿಕಾರಗಳಲ್ಲಿ ನೂರಕ್ಕೆ ನೂರರಷ್ಟು ಬ್ರಾಹ್ಮಣರೇ ಇದ್ದರು. ಬ್ರಾಹ್ಮಣರ ಈ ಕುತಂತ್ರವನ್ನು ಅರಿತ ಶಾಹುಮಹಾರಾಜರು ಮಹಾತ್ಮಾ ಜ್ಯೋತಿಬಾ ಫುಲೆಯವರು ಸ್ಥಾಪಿಸಿದ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು ನಿರ್ಧರಿಸಿದರು. ಶೂದ್ರರ ಅವನತಿಗೆ ಶಿಕ್ಷಣದ ಕೊರತೆಯೇ ಮೂಲ ಕಾರಣ ಎಂದು ಅರಿತಿದ್ದ ಛತ್ರಪತಿ ಶಾಹುಮಹಾರಾಜರು 1886ರಲ್ಲಿ ಶೂದ್ರ ಜಾತಿಗಳಿಗೆ ವಿಶೇಷವಾಗಿ ಅಸ್ಪಶ್ಯ ಜಾತಿಗಳನ್ನೊಳಗೊಂಡು 22 ಶಾಲೆ ಮತ್ತು ಹಾಸ್ಟೆಲ್‌ಗಳನ್ನು ಪ್ರಾರಂಭಿಸುತ್ತಾರೆ, ಅಲ್ಲದೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಪ್ರೇರೇಪಿಸಲು 3 ತಿಂಗಳ ಸ್ಕಾಲರ್‌ಶಿಪ್ ಕೂಡಾ ನೀಡುತ್ತಾರೆ. ಅಲ್ಲದೆ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕವಾದ ಎರಡು ಶಾಲೆ ಮತ್ತು ಹಾಸ್ಟೆಲ್‌ಗಳನ್ನು ಮೊತ್ತಮೊದಲ ಬಾರಿಗೆ ಪ್ರಾರಂಭಿಸುತ್ತಾರೆ. ಇಂಗ್ಲೆಂಡ್‌ನ ರಾಣಿ ಕುಟುಂಬದ ವಿವಾಹವೊಂದರಲ್ಲಿ ಭಾಗವಹಿಸಿದ್ದ ಅವರು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂಗ್ಲೆಂಡಿನಿಂದಲೇ ಒಂದು ರಾಜಾಜ್ಞೆಯನ್ನು ಹೊರಡಿಸಿ ಅಸ್ಪಶ್ಯ, ಹಿಂದುಳಿದ ಅಲ್ಪಸಂಖ್ಯಾತರಿಗೆ ಸರಕಾರಿ ನೌಕರಿಯಲ್ಲಿ ಶೇ. 50ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ಇದು ಜುಲೈ 26, 1902ರಲ್ಲಿ ಕೊಲ್ಲಾಪುರದಲ್ಲಿ ಗೆಜೆಟ್‌ನಲ್ಲಿ ಪ್ರಕಟವಾಗಿರುತ್ತದೆ.

ಜುಲೈ 10, 1917ರಲ್ಲಿ ವಿಧವಾ ವಿವಾಹ ಕಾಯ್ದೆಯನ್ನು ಜಾರಿ ಮಾಡಿದರು. 30-07-1917ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿ ಎಲ್ಲರೂ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದರು. 1919ರಲ್ಲಿ ಅಸ್ಪಶ್ಯತಾ ನಿಷೇಧ ಕಾಯ್ದೆ ಜಾರಿ ಮಾಡಿದ ಮಹಾರಾಜರು ಗಂಗಾರಾಂ ಕಾಂಬಳೆ ಎಂಬ ಅಸ್ಪಶ್ಯನೊಬ್ಬನಿಗೆ ಹಣ ನೀಡಿ ಅರಮನೆಯ ಮುಂಭಾಗದಲ್ಲಿ ‘ಸತ್ಯ ಸುಧಾಕರ’ ಎಂಬ ಹೊಟೇಲ್ ಅನ್ನು ತೆರೆಸಿದರು. ಹೋಟೆಲ್‌ನ ಪ್ರಾರಂಭೋತ್ಸವಕ್ಕೆ ಅರಮನೆಯ ಎಲ್ಲಾ ಹಂತದ ಅಧಿಕಾರಿಗಳನ್ನು ಕರೆಸಿ ಗಂಗಾರಾಂ ಕಾಂಬಳೆಯಿಂದ ಕಾಪಿ, ತಿಂಡಿಯನ್ನು ತಿನ್ನುವಂತೆ ಹೇಳುತ್ತಾರೆ. ಕೆಲವರು ತಿನ್ನಲು ನಿರಾಕರಿಸಿದಾಗ ನಾಳೆಯಿಂದ ಅರಮನೆಯಲ್ಲಿನ ಕೆಲಸದಿಂದ ವಜಾ ಮಾಡುವುದಾಗಿ ಹೇಳಿದ ನಂತರ ಎಲ್ಲರೂ ಕಣ್ಣು-ಬಾಯಿ ಮುಚ್ಚಿಕೊಂಡು ಗಂಗಾರಾಂ ಕಾಂಬಳೆ ಬಡಿಸಿದ ಊಟ, ತಿಂಡಿಯನ್ನು ತಿಂದರು. ಆನಂತರ ‘‘ಮಹಾರ್ ಜಾತಿಯ ಕಾಂಬಳೆ ಬಡಿಸಿದ ಊಟ ತಿಂಡಿ ತಿಂದ ಯಾರಾದರೂ ಸತ್ತಿರಬಹುದೇನೋ ನೋಡಿ’’ ಎಂಬ ಹಾಸ್ಯ ಮಿಶ್ರಿತ ಚಾಟಿ ಏಟನ್ನು ಕೊಡುತ್ತಾರೆ. ಮಾತ್ರವಲ್ಲ, ಮಹಾರಾಜರು ಪ್ರತೀ ದಿನ ಅರಮನೆಯಿಂದ ಬಂದು ಕಾಂಬಳೆ ಹೋಟೆಲ್‌ನಲ್ಲಿ ಕಾಫಿ, ಟೀ ಕುಡಿದು ಸರಕಾರಿ ಕೆಲಸ ಮಾಡಲು ಕಚೇರಿಗೆ ಹೋಗುತ್ತಿದ್ದರು. ಅಸ್ಪಶ್ಯತಾ ಆಚರಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ಶಾಹುಮಹಾರಾಜರು 1920ರಲ್ಲಿ ಚಮ್ಮಾರ ಜಾತಿಗೆ ಸೇರಿದ ಯುವಕನನ್ನು ಕೊಲ್ಲಾಪುರ ಮುನಿಸಿಪಾಲಿಟಿಯ ಚೇರ್ಮನ್ ಆಗಿ ನೇಮಿಸಿದ್ದರು. 1919ರಲ್ಲಿ ಅಂತರ್‌ಜಾತಿಯ ವಿವಾಹ ಕಾಯ್ದೆಯನ್ನು ಮೊತ್ತಮೊದಲ ಬಾರಿಗೆ ಜಾರಿ, 1920ರಲ್ಲಿ ದೇವದಾಸಿ ಪದ್ಧತಿಯ ನಿರ್ಮೂಲ ಕಾಯ್ದೆ ಜಾರಿ ಮಾಡಿದ್ದರು.

ಅಲ್ಲದೆ ಮಹಾರಾಜರು ಬ್ರಾಹ್ಮಣರ ಬಳಿ ಇದ್ದ ಸಾವಿರಾರು ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಮೊತ್ತ ಮೊದಲ ಬಾರಿಗೆ ಭೂಮಿ ಮಂಜೂರಾತಿ ಕಾಯ್ದೆಯನ್ನು ಜಾರಿ ಮಾಡಿ ಎಲ್ಲಾ ಶೋಷಿತ ಜಾತಿಗಳಿಗೆ ಭೂಮಿಯನ್ನು ಹಂಚಿದರು. ಜೊತೆಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಟ್ಟು ಸಣ್ಣ ರೈತರಿಗೆ ಅನುಕೂಲವಾಗಲು ಬಡ್ಡಿ ರಹಿತ ಸಾಲ, ಧನ ಸಹಾಯ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದರು. ಜೊತೆಗೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಕಾರಿ ಮಾರುಕಟ್ಟೆಯನ್ನು ಸ್ಥಾಪನೆ ಮಾಡಿದ್ದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಕೂಸಾದ ಪತ್ರಿಕೆ ‘ಮೂಕ ನಾಯಕ’ ಮರಾಠಿ ಪತ್ರಿಕೆಯನ್ನು 1920ರಲ್ಲಿ ಪ್ರಾರಂಭಿಸಲು, ಪ್ರಾರಂಭಿಕ ಬಂಡವಾಳವಾಗಿ 2,500 ರೂ.ಗಳನ್ನು ಛತ್ರಪತಿ ಶಾಹು ಮಹಾರಾಜರೇ ದೇಣಿಗೆಯಾಗಿ ನೀಡಿರುವರು. ಪತ್ರಿಕೆ ಪ್ರಾರಂಭವಾದ ನಂತರ ಹೊರದೇಶಗಳಲ್ಲಿದ್ದುಕೊಂಡೇ ಬಾಬಾ ಸಾಹೇಬರು ಬರೆಯುತ್ತಿದ್ದ ಲೇಖನಗಳನ್ನು ಇದರಲ್ಲಿ ಪ್ರಕಟಿಸಿದ ನಂತರ, ಅಸ್ಪಶ್ಯರು ವಾಸ ಮಾಡುವ ಪ್ರದೇಶಗಳಲ್ಲಿ ಈ ಪತ್ರಿಕೆಯನ್ನು ಅವಿದ್ಯಾವಂತರಿಗೂ ಓದಿ ಹೇಳಲು, ಓದಿ ಹೇಳುವವರನ್ನು ತಿಂಗಳಿಗೆ 20ರೂ. ಸಂಬಳದ ಆಧಾರದ ಮೇಲೆ ಮಹಾರಾಜರು ನೇಮಿಸಿದ್ದನ್ನು ನೆನೆಸಿಕೊಂಡರೆ ಅವರಿಗೆ ಬಾಬಾ ಸಾಹೇಬರ ಮೇಲಿದ್ದ ಗೌರವ ಪ್ರೀತಿ ಎದ್ದು ಕಾಣುತ್ತದೆ. ಛತ್ರಪತಿ ಶಾಹುಮಹಾರಾಜರ ಕೆಳಜಾತಿಗಳ ಪ್ರೇಮಾಭಿಮಾನವನ್ನು ಬ್ರಾಹ್ಮಣರು ಸಹಿಸದಿದ್ದರೂ ವಿರೋಧಿಸಲಾಗದೆ ಒಳಗೊಳಗೆ ಕುದಿಯುತ್ತಿದ್ದರು. ರಾಜಾರಾಮ್ ಮೋಹನ್ ರಾಯ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಜಾಪುರ್‌ಕರ್ ನಾಯಕತ್ವದ 7 ಜನ ಬ್ರಾಹ್ಮಣರ ಅಕ್ರಮಕೂಟ ಮಹಾರಾಜರನ್ನು ಕೊಲೆ ಮಾಡಲು ಸಂಚು ಹೂಡಿ ಕೊಲ್ಲಾಪುರದಿಂದ ಮಹಾರಾಜರು ಮುಂಬೈಗೆ ಪಯಣಿಸುತ್ತಿದ್ದ ರೈಲು ಬೋಗಿಗೆ 10 ಕೆ.ಜಿ. ಆರ್‌ಡಿಎಕ್ಸ್ ಸ್ಫೋಟಕ ಇಟ್ಟು ಬೋಗಿಯನ್ನು ಸಿಡಿಸಿದರು. ಆದರೆ ಮಹಾರಾಜರು ಆ ವೇಳೆಗೆ ಬೋಗಿ ಪ್ರವೇಶಿಸದೆ ಆಕಸ್ಮಿಕವಾಗಿ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಈ ಏಳು ಜನರ ಕೂಟದ ಮೇಲೆ ಕೇಸು ದಾಖಲಾಯಿತು. ಪ್ರಾಥಮಿಕ ನ್ಯಾಯಾಲಯದಲ್ಲಿ ಬ್ರಾಹ್ಮಣ ನ್ಯಾಯಾಧೀಶರಿಂದ ಬಚಾವಾದ ಇವರು ಬಾಂಬೆ ಸೆಷನ್ಸ್ ನ್ಯಾಯಾಲಯದಲ್ಲಿ 7 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಇಷ್ಟೇ ಅಲ್ಲದೆ ಬ್ರಾಹ್ಮಣರು ಮಹಾರಾಜರನ್ನು ಕೊಲ್ಲಲ್ಲು ಅನೇಕ ರೀತಿಯಲ್ಲಿ ನಡೆಸಿದ ವಿಫಲ ಸಂಚುಗಳಿಗೆ ಲೆಕ್ಕವೇ ಇರಲಿಲ್ಲ.

ಮಹಾರಾಜರು ಪ್ರಾರಂಭಿಸಿದ 22 ಶಾಲೆಗಳಿಂದ 1920ನೇ ಇಸವಿಯ ವರೆಗೆ, ವಿಶೇಷವಾಗಿ ಅಸ್ಪಶ್ಯ ಜಾತಿಗಳಲ್ಲಿ ಒಂದಾದ ಮಹಾರ್ ಜಾತಿಯ 418 ವಿದ್ಯಾರ್ಥಿಗಳು ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಪದವೀಧರರಾಗಿದ್ದರು. ಈ ಪದವೀಧರರು ಹಾಗೂ ಅವರ ಪೋಷಕರನ್ನೊಳಗೊಂಡ ಮಹಾರ್ ಸಮಾವೇಶ 1920-ಮಾರ್ಚ್ 27ರಂದು ಮನಗಾಂವ್ ಎಂಬ ಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದಿತ್ತು.

ಆ ಬೃಹತ್ ಮಹಾರ್ ಪರಿಷತ್ತಿನಲ್ಲಿ ಮೊದಲನೇ ದಿನ ಮಾತನಾಡಿದ ಮಹಾರಾಜರು, ‘‘ನಾನು ನನ್ನ ಸಣ್ಣ ಸಂಸ್ಥಾನದಲ್ಲಿ ಅಧಿಕಾರ ಹಿಡಿದ ಮೇಲೆ ನಿಮಗೆಲ್ಲ ಏನೆಲ್ಲ ಮಾಡಬೇಕಾಗಿತ್ತೋ ಆ ಕಾನೂನುಗಳನ್ನು ಜಾರಿ ಮಾಡಿ ಅಸ್ಪಶ್ಯರ, ಹಿಂದುಳಿದವರ ಏಳಿಗೆಗೆ ಸಣ್ಣ ಪ್ರಮಾಣದಲ್ಲಿ ಪ್ರಯತ್ನಿಸಿದ್ದೇನೆ. ಎಲ್ಲಾ ಸಂಸ್ಥಾನಗಳಲ್ಲಿ ಮುಂದಿನ ದಿನಗಳಲ್ಲಿ ಕೊಲ್ಲಾಪುರದ ಮಾದರಿಯಲ್ಲಿ ಬದಲಾವಣೆ ತರಬೇಕಾದರೆ ಈ ದೇಶದಲ್ಲಿರುವ ಏಕೈಕ ವ್ಯಕ್ತಿಯನ್ನು ಈ ದಿನ ಈ ದೇಶದ ಜನತೆಗೆ ಪರಿಚಯಿಸುತ್ತೇನೆ. ಅವರು ಬೇರೆ ಯಾರೂ ಅಲ್ಲ. ವಿದ್ಯಾವಂತ, ಬುದ್ಧಿವಂತ ಮುತ್ಸದ್ದಿ ಈ ದೇಶದ ಭವಿಷ್ಯದ ಮುಂದಿನ ರುವಾರಿ, ಅಂಬೇಡ್ಕರ್’’ ಎನ್ನುವ ಸಂದೇಶವನ್ನು ಕೊಟ್ಟಿದ್ದರು. ಆ ಸಭೆಯ 2ನೇ ದಿನದ ಅಧಿವೇಶನದಲ್ಲಿ ಮಾತನಾಡಿದ ಬಾಬಾ ಸಾಹೇಬರು ದಲಿತರು ಮತ್ತು ಹಿಂದುಳಿದವರಿಗೆ: ‘‘ನೀವುಗಳು ನಿಮ್ಮದಲ್ಲದ ಬ್ರಾಹ್ಮಣರು ಸೃಷ್ಟಿ ಮಾಡಿದ ಅನೇಕ ಮೂಢನಂಬಿಕೆಯ ಹಬ್ಬಹರಿದಿನಗಳನ್ನು ಆಚರಿಸುತ್ತ ಹಣ ಮತ್ತು ಸಮಯವನ್ನು ಕಳೆದುಕೊಳ್ಳುತ್ತಿದ್ದೀರಿ! ನೀವು ಹಬ್ಬಗಳನ್ನು ಆಚರಿಸಲೇ ಬೇಕೆಂದರೆ, ಭಗವಾನ್ ಬುದ್ಧನ ಹುಟ್ಟು ಹಬ್ಬವನ್ನು ಆಚರಿಸಿ. ನಾವು ಕತ್ತಲೆಯಲ್ಲಿ ಸಾವಿರಾರು ವರ್ಷ ಕಳೆಯುತ್ತಿದ್ದಾಗ ನಮ್ಮ ಬಾಳಿಗೆ ವಿದ್ಯೆಯೆಂಬ ಬೆಳಕನ್ನು ನೀಡಿದ ಮಹಾತ್ಮಾ ಜ್ಯೋತಿಬಾ ಫುಲೆಯವರ ಮತ್ತು ಅವರ ಸಂಗಾತಿ ಮಾತೆ ಸಾವಿತ್ರಿ ಬಾಯಿಯವರ ಜನ್ಮದಿನವನ್ನು ಹಬ್ಬವಾಗಿ ಆಚರಿಸಬಹುದು. ಅಲ್ಲದೆ ಈಗ ನಮ್ಮ ಮುಂದಿರುವ ನಮಗಾಗಿ ಅನೇಕ ತ್ಯಾಗಗಳನ್ನು ಮಾಡಿದ ನಮಗಾಗಿ ‘ದೇಡ್ ಮಹಾರಾಜ’ ಎಂದು ಬೈಸಿಕೊಂಡರೂ ಭಾರತ ದೇಶದ ಚರಿತ್ರೆಯಲ್ಲಿ ಮೊದಲಬಾರಿಗೆ ಮೀಸಲಾತಿಯನ್ನು ಜಾರಿ ಮಾಡಿದ ಛತ್ರಪತಿ ಶಾಹುಮಹಾರಾಜರ ಹುಟ್ಟಿದ ಹಬ್ಬವನ್ನು ಬಹುವಿಜೃಂಭಣೆಯಿಂದ ನಾವು ಆಚರಿಸಬೇಕು’’ ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕರೆನೀಡಿದ್ದರು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಈ ಕರೆ ನೀಡಿ ಶತಕವೇ ಕಳೆದರೂ ಶೋಷಿತ ಸಮುದಾಯ ಅವರ ಮಾತನ್ನು ಇನ್ನೂ ಅರ್ಥೈಸಿಕೊಳ್ಳದಿರುವುದು ವಿಪರ್ಯಾಸವೇ ಎನ್ನಬೇಕಾಗಿದೆ.

ಅಂಬೇಡ್ಕರ್‌ರವರನ್ನು ಈ ದೇಶಕ್ಕೆ ಪರಿಚಯ ಮಾಡಿಕೊಟ್ಟ, ಅಸ್ಪಶ್ಯರಿಗೆ-ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿದ ಹರಿಕಾರ ಛತ್ರಪತಿ ಶಾಹುಮಹಾರಾಜರು ಮೇ 6, 1922ರಲ್ಲಿ ನಿಧನರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ. ದೇವದಾಸ್, ಬಜಪೆ

contributor

Similar News