×
Ad

ತರಗತಿ ಆರಂಭಗೊಂಡಿದ್ದರೂ ತಲೆಯೆತ್ತದ ಕಟ್ಟಡ : ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಮತ್ತೆ ಅಲೆದಾಡುತ್ತಿರುವ ಹಾಜಬ್ಬ

► ಪ್ರೌಢಶಾಲೆಯಲ್ಲೇ ಪಿಯು ತರಗತಿ ► ವಿದ್ಯಾರ್ಥಿಗಳ ಸೇರ್ಪಡೆಗೆ ಹರಸಾಹಸ

Update: 2025-11-11 08:48 IST

ಮಂಗಳೂರು, ನ.10: ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ತನ್ನೂರಿನಲ್ಲಿ ವರ್ಷದ ಹಿಂದೆ ಪಿಯು ಕಾಲೇಜು ತರಗತಿ ಆರಂಭಿಸಿದ್ದರೂ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಹೊಸ ಕಟ್ಟಡ ತಲೆಯೆತ್ತದಿದ್ದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾದೀತು ಎಂದು ಆತಂಕಗೊಂಡಿರುವ ಹಾಜಬ್ಬ, ಈ ನಿಟ್ಟಿನಲ್ಲಿ ಸರಕಾರಿ ಹಂತದ ಪ್ರಯತ್ನವಲ್ಲದೆ ಖಾಸಗಿ ಸಂಸ್ಥೆ, ಕಂಪೆನಿ, ವ್ಯಕ್ತಿಗಳನ್ನು ಸಂಪರ್ಕಿಸಿ ಸಹಕಾರ ಕೇಳುತ್ತಿದ್ದಾರೆ. ಅದೆಷ್ಟೋ ವರ್ಷದ ಬಳಿಕ ಮಂಜೂರಾದ ಪಿಯು ಕಾಲೇಜನ್ನು ಉಳಿಸಲೇಬೇಕು ಎಂಬ ಪಣ ತೊಟ್ಟಿರುವ ಹಾಜಬ್ಬ ಪತ್ನಿಯ ಅಗಲಿಕೆ ಮತ್ತು ವೈಯಕ್ತಿಕ ಸಮಸ್ಯೆಯ ಮಧ್ಯೆಯೂ ಶಾಸಕರು, ಅಧಿಕಾರಿಗಳು, ಸರಕಾರಿ ಕಚೇರಿ, ಉದ್ಯಮ ಕಂಪೆನಿಗಳ ಕದ ಬಡಿಯತೊಡಗಿದ್ದಾರೆ. ಇದಕ್ಕಾಗಿ ದಿನನಿತ್ಯ ಅತ್ತಿಂದಿತ್ತ ಅಲೆದಾಡುತ್ತಿದ್ದಾರೆ.

ಹರೇಕಳ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಕಾಲೇಜು ಇಲ್ಲ. ಹಾಗಾಗಿ ಸರಕಾರಿ ಪಿಯು ಕಾಲೇಜು ಮಂಜೂರುಗೊಳಿಸಬೇಕು ಎಂದು 2009ರ ಎಪ್ರಿಲ್ 21ರಿಂದ ಮುಖ್ಯಮಂತ್ರಿ, ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹರೇಕಳ ಹಾಜಬ್ಬ ಮನವಿ ಮಾಡುತ್ತಲೇ ಬಂದಿದ್ದರೂ ಅದಕ್ಕೆ ನಿರೀಕ್ಷಿತ ಸ್ಪಂದನ ಸಿಕ್ಕಿರಲಿಲ್ಲ. ಆದರೆ ಹಾಜಬ್ಬರಿಗೆ ಪದ್ಮಶ್ರೀ ಪುರಸ್ಕೃತ ಲಭಿಸಿದ ಬಳಿಕ ಅವರ ಬೇಡಿಕೆಗೆ ಹೆಚ್ಚು ತೂಕ ಬಂದಿತ್ತು. ಸತತ 15 ವರ್ಷಗಳ ಪ್ರಯತ್ನದ ಬಳಿಕ ಅಂದರೆ 2022ರ ನವೆಂಬರ್ 21ರಂದು ಹರೇಕಳ ಗ್ರಾಮದ ನ್ಯೂಪಡ್ಪು-ಗ್ರಾಮ ಚಾವಡಿಯ ಮಧ್ಯೆ ಮುಖ್ಯರಸ್ತೆಗೆ ತಾಗಿ 1.30 ಎಕರೆ ಜಮೀನನ್ನು ಸರಕಾರ ಮಂಜೂರುಗೊಳಿಸಿತ್ತು.

ಅಲ್ಲದೆ 2024ರ ಜನವರಿ 9ರಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ)ಯ ಅಧೀನ ಕಾರ್ಯದರ್ಶಿಯಾಗಿದ್ದ ಪದ್ಮಿನಿ ಎಸ್.ಎನ್. ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಅನುಮತಿ ನೀಡಿದ್ದರು. ಅದರಂತೆ 2024-25ನೇ ಶೈಕ್ಷಣಿಕ ವರ್ಷದಿಂದ ಹಾಜಬ್ಬರು ಸರಕಾರಿ ಪ್ರೌಢಶಾಲೆಯ ಕಟ್ಟಡದಲ್ಲೇ ಪಿಯು ತರಗತಿ ಆರಂಭಿಸಿದ್ದರು.

2025ರ ಜೂನ್ 17ರಂದು ಲೋಕೋಪಯೋಗಿ ಇಲಾಖೆಯು ಹೊಸ ಕಟ್ಟಡದ ನೀಲನಕ್ಷೆಯೊಂದಿಗೆ 5.30 ಕೋ.ರೂ. ಅಂದಾಜು ಪಟ್ಟಿ ತಯಾರಿಸಿದೆ. 2025ರ ಜುಲೈ 8ರಂದು ಸ್ಪೀಕರ್ ಯು.ಟಿ.ಖಾದರ್ ಕೂಡ ಶಿಕ್ಷಣ ಸಚಿವರಿಗೆ ಈ ಅನುದಾನ ಬಿಡುಗಡೆಗೊಳಿಸಲು ಪತ್ರ ಬರೆದಿದ್ದಾರೆ. ಹರೇಕಳ ಹಾಜಬ್ಬ ಕೂಡಾ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಅಲ್ಲದೆ ಖಾಸಗಿ ವ್ಯಕ್ತಿಗಳು, ದಾನಿಗಳು, ಉದ್ಯಮ ಕಂಪೆನಿಗಳ ಮುಖ್ಯಸ್ಥರು, ಅಧಿಕಾರಿಗಳ ಬಳಿ ತೆರಳಿ ಸಹಾಯಧನ ನೀಡಲು ಮನವಿ ಮಾಡತೊಡಗಿದ್ದಾರೆ.

ಹರೇಕಳ ಗ್ರಾಮದ ನ್ಯೂಪಡ್ಪುವಿನ ಮದ್ರಸವೊಂದರಲ್ಲಿ 1999-2000ರಲ್ಲಿ ಹಾಜಬ್ಬ ಶಾಲೆಯೊಂದನ್ನು ತೆರೆದು ಅದನ್ನು ಉಳಿಸಿ- ಬೆಳೆಸಲು ಪಟ್ಟ ಶ್ರಮ ಅವಿಸ್ಮರಣೀಯ. ಆರಂಭದಲ್ಲಿ ಪ್ರಾಥಮಿಕ ಮತ್ತು ಬಳಿಕ ಪ್ರೌಢಶಾಲೆಯ ಒಂದೊಂದೇ ತರಗತಿಯನ್ನು ಏರಿಸಿಕೊಂಡು ಹೋದ ಹಾಜಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾದ ಬಳಿಕ ದೇಶ-ವಿದೇಶಗಳಲ್ಲಿ ಮನೆ ಮಾತಾಗಿದ್ದಾರೆ.

ಪಿಯು ಕಾಲೇಜಿಗಾಗಿ ಜಮೀನು ಲಭಿಸಿದ ಬಳಿಕ ತರಗತಿ ಆರಂಭಿಸಲು ಸರಕಾರ ಅನುಮತಿ ನೀಡಿತ್ತು. ಆ ಜಮೀನನ್ನು ಸಮತಟ್ಟು ಮಾಡಲಾಗಿದೆ. ಬೋರ್‌ವೆಲ್ ಕೊರೆಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕರು ಐದು ಲಕ್ಷ ರೂ. ನೀಡಿದ್ದಾರೆ. ಪಿ.ಎ. ಶಿಕ್ಷಣ ಸಂಸ್ಥೆಯವರು ಸುಮಾರು 6:50 ಲಕ್ಷ ರೂ. ವೆಚ್ಚದ ಪೀಠೋಪಕರಣ ಒದಗಿಸಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಶಿಕ್ಷಣ ಸಚಿವರಿಗೆ ಪತ್ರ ಬರೆದು ಅನುದಾನ ಬಿಡುಗಡೆಗೊಳಿಸಲು ಕೋರಿದ್ದಾರೆ. ನಾವೀಗ ಪಿಯು ಕಾಲೇಜು ಕಟ್ಟಡ ನಿರ್ಮಿಸಲೇಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಕಷ್ಟವಾಗಬಹುದು. ಅದಕ್ಕಾಗಿ ಸರಕಾರದ ಅನುದಾನದೊಂದಿಗೆ ಖಾಸಗಿ ಉದ್ಯಮ ಕಂಪೆನಿಗಳು, ಸಂಸ್ಥೆಗಳು, ಖಾಸಗಿ ವ್ಯಕ್ತಿಗಳ ನೆರವಿನ ನಿರೀಕ್ಷೆಯಲ್ಲಿದ್ದೇನೆ.

-ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತರು

 

2024-25ನೆ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜು (ಪಿಯುಸಿ) ಆರಂಭಿಸಲು ಸರಕಾರದಿಂದ ಅನುಮತಿ ಪಡೆದು 20 ವಿದ್ಯಾರ್ಥಿಗಳೊಂದಿಗೆ ಪ್ರಥಮ ಪಿಯು ತರಗತಿಯನ್ನು (ಕಲೆ-ವಾಣಿಜ್ಯ) ಪ್ರೌಢಶಾಲೆಯಲ್ಲೇ ಆರಂಭಿಸಲಾಗಿತ್ತು. ಇದೀಗ ದ್ವಿತೀಯ ಪಿಯು ತರಗತಿ ಕೂಡ ಈ ಶಾಲೆಯ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ಈ ವರ್ಷ ಪ್ರಥಮ ಪಿಯುಸಿಯಲ್ಲಿ ಇಬ್ಬರು ಬಾಲಕರು ಮತ್ತು ಒಂಭತ್ತು ಬಾಲಕಿಯರ ಸಹಿತ 11 ವಿದ್ಯಾರ್ಥಿಗಳಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಎಂಟು ಬಾಲಕರು ಮತ್ತು ಐವರು ಬಾಲಕಿಯರ ಸಹಿತ 13 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ಹಾಜಬ್ಬರ ಪಿಯು ಕಾಲೇಜಿನಲ್ಲಿ ಇದೀಗ 24 ವಿದ್ಯಾರ್ಥಿಗಳಿದ್ದಾರೆ. ಅತಿಥಿ ಉಪನ್ಯಾಸಕರ ಸಹಿತ ಪ್ರಭಾರ ಪ್ರಾಂಶುಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಹಂಝ ಮಲಾರ್

contributor

Similar News