ದೀಪಾ ಭಾಸ್ತಿ ಎಂಬ ಐತಿಹಾಸಿಕ ಸಾಧನೆಗೈದ ವಿದ್ಯಾರ್ಥಿನಿ...
ಪ್ರಸಕ್ತ 2025ನೇ ವರ್ಷದ ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕ್‌ರ ಕೃತಿ ‘ಹಾರ್ಟ್ ಲ್ಯಾಂಪ್’ಗೆ ದೊರಕಿದ್ದು ಇಡೀ ಕನ್ನಡ ಸಾರಸ್ವತ ಲೋಕ ಹೆಮ್ಮೆಪಡುವಂತಾಗಿದೆ. ನಿಜವಾಗಿ ನಾನು ರೋಮಾಂಚಿತನಾಗಿದ್ದೇನೆ. ಬೂಕರ್ ಪ್ರಶಸ್ತಿ ಎಂದರೆ ಸಾಮಾನ್ಯವಲ್ಲ. ಯು.ಆರ್. ಅನಂತಮೂರ್ತಿ ಮೊದಲುಗೊಂಡಂತೆ ಕನ್ನಡದ ಅನೇಕ ದಿಗ್ಗಜರು ಬಯಸಿಯೂ ಸಿಗಲಿಲ್ಲ. ಕನ್ನಡಕ್ಕೆ ಬೂಕರ್ ಬಂದಿದ್ದು ಇದೇ ಮೊದಲು. ಇದುವೇ ರೋಮಾಂಚಕಾರಿ ವಿಷಯ.
ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿರುವ ಈ ಕೃತಿಯ ಅನುವಾದಕಿ ದೀಪಾ ಭಾಸ್ತ್ತಿ ನನ್ನ ವಿದ್ಯಾರ್ಥಿನಿಯಾಗಿದ್ದಳು ಎಂದು ಹೇಳಲು ನನಗೆ ಅತೀವ ಹೆಮ್ಮೆ ಮತ್ತು ಆನಂದ.
ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತ್ತಿ ಇವರಿಬ್ಬರ ಬಗ್ಗೆ ಹಲವಾರು ವಾರಗಳಿಂದ ಅಲ್ಲಲ್ಲಿ ಲೇಖನ, ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಅವರ ‘ಹಾರ್ಟ್ ಲ್ಯಾಂಪ್’ ಪೆಂಗ್ವಿನ್‌ನಲ್ಲಿ ಪ್ರಕಟವಾದದ್ದೇ ಒಂದು ಸಾಧನೆ. ನಾನು ಬಾನು ಅವರ ಅಭಿಮಾನಿ. ಹಾಗಾಗಿ ಪತ್ರಿಕೆಗಳಲ್ಲಿ ಅವರ ಬಗ್ಗೆ ಇದ್ದ ಭಾಗಗಳನ್ನು ಮಾತ್ರ ಓದುತ್ತಿದ್ದೆ. ಈ ದೀಪಾ ಭಾಸ್ತ್ತಿ ಆ ಪುಸ್ತಕದ ಇಂಗ್ಲಿಷ್ ಅನುವಾದಕಿ ಎಂದು ತಿಳಿದರೂ ಆಕೆಯ ಬಗ್ಗೆ ಓದಬೇಕೆನ್ನುವ ಕುತೂಹಲ ಬರಲಿಲ್ಲ. ಆದರೆ ಮೊನ್ನೆ ಗೆಳೆಯರೊಬ್ಬರು, ‘‘ದೀಪಾ ನಿನ್ನ ವಿದ್ಯಾರ್ಥಿನಿ ಅಲ್ಲವೇ?’’ ಎಂದಾಗ ಪತ್ರಿಕೆಯ ಪುಟಗಳನ್ನೂ ಹುಡುಕಬೇಕೆನಿಸಿತು. ಕಳೆದ ರವಿವಾರವಷ್ಟೇ ‘ದಿ ಹಿಂದೂ’ ಪತ್ರಿಕೆಯಲ್ಲಿದ್ದ ಆಕೆಯ ಕುರಿತ ಲೇಖನದ ನೆನಪಾಯಿತು. ಅದು ನನ್ನ ಟೇಬಲ್‌ನಲ್ಲಿಯೇ ಇನ್ನೂ ಇತ್ತು. ತೆಗೆದು ತೀಕ್ಷ್ಣವಾಗಿ ಆ ಪತ್ರಿಕೆಯ ಲಿಟರರಿ ರಿವ್ಯೆವ್ ಪುಟ 2ರಲ್ಲಿದ್ದ ದೀಪಾಳ ಫೋಟೊವನ್ನು ದಿಟ್ಟಿಸಿ ಸೂಕ್ಷ್ಮವಾಗಿ ನೋಡಿದೆ. ಅರೆ ಇದು ಬಹಳ ಪರಿಚಿತ ಮುಖ, ಆದರೆ ಇದೀಗ ದೀಪಾ ತುಸುವೇ ದಪ್ಪಗಾಗಿದ್ದಾಳೆ. ಆದರವಳ ಮೂಲ ಕ್ಯಾರಿಕೇಚರುಗಳು ಕೊಂಚವೂ ಬದಲಾಗಿಲ್ಲ. ಅದೇ ಮುಗ್ಧತೆ, ಹಮ್ಮಿಲ್ಲದ ಮುಖಭಾವ, ಪ್ರಸನ್ನತೆಗಳೆಲ್ಲ ಹಚ್ಚ ಹಸುರಾಗಿ 2004-2005ರ ವರ್ಷಗಳಲ್ಲಿ ನಮ್ಮ ಮಂಗಳೂರು ವಿವಿಯ ಎಮ್‌ಸಿಜೆ ಡಿಪಾರ್ಟ್‌ಮೆಂಟ್ ಅಂದರೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಾಗ ಹೇಗಿತ್ತೋ ಹಾಗೆಯೆ ಇದೆ. ದೀಪಾ ಬಹಳ ಸೂಕ್ಷ್ಮ ಮನಸ್ಸಿನ ಬುದ್ಧಿವಂತೆ, ಆದರೆ ಅವಳ ಈ ಅಪಾರ ಸಾಹಿತ್ಯ ಆಸಕ್ತಿ ಮತ್ತು ಪ್ರತಿಭೆಗಳನ್ನು ಕ್ಯಾಂಪಸ್‌ನಲ್ಲಿ ಅಥವಾ ತರಗತಿಯಲ್ಲಾಗಲಿ ಪ್ರಕಟಿಸಿದ್ದು ಕಡಿಮೆ. ಇಲ್ಲವೇ ಇಲ್ಲ. ದೀಪಾಳಿಗೆ ಆಂಗ್ಲ ಸಾಹಿತ್ಯದ ಭಾಷೆಯ ಜ್ಞಾನ, ವಿದ್ವತ್ತುಗಳು ಇದ್ದದ್ದು ನನಗೀಗ ನೆನಪಾಗುತ್ತಿದೆ.
ಅದು 2005ನೇ ಇಸವಿಯ ಒಂದು ದಿನ. ನಮ್ಮ ವಿಭಾಗದಲ್ಲಿ ವಿದ್ಯಾರ್ಥಿಗಳ ಪತ್ರಿಕೋದ್ಯಮದ ಪ್ರಾಯೋಗಿಕ ಕಲಿಕೆಗಾಗಿ ‘ಮಾಧ್ಯಮ ಮಂಗಳ’ ಎಂಬ ಮ್ಯಾಗಝಿನ್ ಅನ್ನು ಪ್ರಕಟಿಸಲಾಗುತ್ತದೆ. ಅದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ. ಹಾಗೆಯೇ CAMPUS COURIER ಎಂಬ ಪ್ರಾಯೋಗಿಕ ದಿನಪತ್ರಿಕೆಯನ್ನು ಸಹ ಮುದ್ರಿಸುತ್ತಿದ್ದೆವು. ಸೋಶಿಯಲ್ ಮೀಡಿಯಾ ಇಲ್ಲದ ಆ ದಿನಗಳಲ್ಲಿ ನಮ್ಮ ವಿಭಾಗಕ್ಕೆ ಸುದ್ದಿ ಸಂಸ್ಥೆಗಳಿಂದ ಟೆಲಿ ಪ್ರಿಂಟರ್ಸ್ ಮುಖಾಂತರವಾಗಿ ತಾಜಾ ಸುದ್ದಿಗಳು ಲಭ್ಯವಾಗುತ್ತಿದ್ದವು. ತಾಜಾಸುದ್ದಿಗಳನ್ನು ಅಂದರೆ ಬ್ರೇಕಿಂಗ್ ನ್ಯೂಸ್‌ಗಳನ್ನೂ ಕ್ಯಾಂಪಸ್ ಕೊರಿಯರ್ ಎಂಬ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿತ್ತು. ಎ3 ಅಳತೆಯ ಕಾಗದದ ಮೇಲೆ ಮುದ್ರಿಸಿ ಪ್ರತೀ ಸಾಯಂಕಾಲ ನಮ್ಮ ಕ್ಯಾಂಪಸ್‌ನ ಕ್ಯಾಂಟೀನು, ಆಡಳಿತ ಕಚೇರಿ, ಲೈಬ್ರರಿಯಂತಹ ಪ್ರಮುಖ ಸ್ಥಳಗಳಲ್ಲಿ ಅವುಗಳನ್ನು ಅಂಟಿಸಲಾಗುತ್ತಿತ್ತು. ಅದನ್ನು ಓದಲು ಕ್ಯಾಂಪಸ್‌ನ ಉದ್ಯೋಗಿಗಳು, ವಿದ್ಯಾರ್ಥಿಗಳು ತವಕಿಸುತ್ತಿದ್ದರು.
ಅದೊಂದು ದಿನ ಕ್ಯಾಂಪಸ್ ಕೊರಿಯರ್ ಅನ್ನು ತಯಾರಿಸುವ ಅಂದರೆ ಆ ದಿನದ ಸಂಚಿಕೆಯನ್ನು ಎಡಿಟ್ ಮಾಡುವ ಸರದಿ ದೀಪಾ ಭಾಸ್ತ್ತಿ ಮತ್ತು ಸಂಗಡಿಗರದ್ದಾಗಿತ್ತು ಮತ್ತು ಆ ಗುಂಪಿಗೆ ನಾನು ಆ ದಿನ ಮಾರ್ಗದರ್ಶಕನಾಗಿದ್ದೆ. ಅದರಲ್ಲಿ ನನಗನಿಸಿದಂತೆ ALLEDGED ಎಂಬುದಾಗಿ ಕಂಪ್ಯೂಟರ್‌ನಲ್ಲಿ ದೀಪಾ ಟೈಪ್ ಮಾಡಿದ್ದಳು. ಆ ಪದವು ನಿಜವಾಗಿ ALLEGGED ಆಗಬೇಕು ಎಂಬುದು ನನ್ನ ತಕರಾರು. ದೀಪಾ ತಾನು ಟೈಪ್ ಮಾಡಿರುವುದೇ ಸರಿ ಎಂಬುವುದಾಗಿ ಹೇಳುತ್ತಿದ್ದಳು. ಇಂಟರ್‌ನೆಟ್‌ನಲ್ಲಿ ಅದನ್ನು ಹುಡುಕಿದಾಗ ಅವಳು ಹೇಳಿದ್ದೇ ಸರಿಯಾಗಿತ್ತು. ಆದರೆ ಅವಳ ವಾದವನ್ನು ಆಕೆ ತಿಳಿಸುತ್ತಿದ್ದ ರೀತಿ ಬಹಳ ಮೃದು ಮತ್ತು ವಿನಯಪೂರ್ವಕವಾಗಿತ್ತು. ಬಹಳ ಸಭ್ಯ ದಿರಿಸುಗಳನ್ನು ಧರಿಸುತ್ತಿದ್ದ ಆಕೆ ಬಹಳ ಗಂಭೀರ ಮತ್ತು ಸೌಮ್ಯ ಸ್ವಭಾವದವಳು, ಸಣ್ಣ ಸ್ವರದ ಮೃದು ಭಾಷಿ. ಆಕೆಯಷ್ಟು ಪ್ರತಿಭಾವಂತರಾಗಿದ್ದಲ್ಲಿ ಬೇರೆ ಯಾರಾದರೂ ತಲೆಯ ಮೇಲೆ ನಡೆದುಬಿಡುತ್ತಿದ್ದರು. ಆ ಸಂಗತಿಯನ್ನು ಆಗಿನ ನನ್ನ ಸಹದ್ಯೋಗಿ, ಗೆಳೆಯರೊಂದಿಗೆ ಹಂಚಿಕೊಂಡಿದ್ದೆ ಸಹ. ಅಷ್ಟರ ಮಟ್ಟಿಗೆ ನನಗೆ ದೀಪಾ ಭಾಸ್ತ್ತಿ ಎಂಬ ಯೋಗ್ಯ ಮತ್ತು ಸಮರ್ಥ ವಿದ್ಯಾರ್ಥಿಯ ಬಗ್ಗೆ ಜ್ಞಾಪಕವಿದೆ.
ನಾನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕನಾಗಿ ಉದ್ಯೋಗಕ್ಕೆ 2003ರಲ್ಲಿ ಸೇರಿದೆ. ಪ್ರತೀ ಶೈಕ್ಷಣಿಕ ವರ್ಷಗಳಲ್ಲಿ ಎಂಸಿಜೆ ಕೋರ್ಸ್‌ಗಾಗಿ 100ರಿಂದ 150ಕ್ಕೂ ಹೆಚ್ಚು ಅರ್ಜಿಗಳು ಬರುತ್ತಿದ್ದವು. ಅದರಲ್ಲಿ ಸುಮಾರು 25 ರಿಂದ 30 ಅಭ್ಯರ್ಥಿಗಳನ್ನು ಮಾತ್ರ ತೀವ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತು ಸಂದರ್ಶನಗಳನ್ನು ಮಾಡಿ ಆಯ್ಕೆ ಮಾಡ ಲಾಗುತ್ತಿತ್ತು, ಆಗಲೂ ಸಹ ನಾವು ಆಯ್ಕೆ ಮಾಡಿದ ವಿದ್ಯಾರ್ಥಿಗಳೆಲ್ಲರೂ ಯೋಗ್ಯರು ಎಂದು ಹೇಳಲಿಕ್ಕಾಗುತ್ತಿರಲಿಲ್ಲ. ಅವರಲ್ಲಿ ಅನೇಕರು ಡಮ್ಮಿಗಳೇ ಇರುತ್ತಿದ್ದರು. ಅಂತಹದರಲ್ಲಿ ಒಂದಷ್ಟು ಪ್ರಯೋಜಕ ಎನ್ನಬಹುದಾದ ವಿದ್ಯಾರ್ಥಿಗಳು ಇದ್ದೇ ಇರುತ್ತಿದ್ದರು. ಅದಲ್ಲದೆ ನಿಜಕ್ಕೂ ಯೋಗ್ಯ ಅಥವಾ ಜೀನಿಯಸ್ ಒಬ್ಬಳಿಗೆ ಜಂಪಿಂಗ್ ಪ್ಯಾಡ್ ಆಗುವಂತಹ ಯೋಗ್ಯ ವೇದಿಕೆ ಆಗಿತ್ತಲ್ಲವೇ ಎಂಬುದು ನನ್ನ ಈ ಕ್ಷಣದ ಜಿಜ್ಞಾಸೆ. ಆದರೆ ದೀಪಾ ಹೀಗೆ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುವ ಸಾಧನೆಗೈಯುವ ಪ್ರತಿಭಾವಂತೆ ಎಂಬುವುದನ್ನು ಸಹಜವಾಗಿಯೇ ಯಾರೂ ಊಹಿಸಿರಲಿಲ್ಲ. ಆದರೆ ಈಗ ದೀಪಾ ಭಾಸ್ತ್ತಿ ನಮ್ಮೆಲ್ಲರ ಊಹೆಗಳನ್ನು ಮೀರಿ ಐತಿಹಾಸಿಕ ಸಾಧನೆಗೈದು ಜಾಗತಿಕ ಸುದ್ದಿಯಾಗಿದ್ದಾಳೆ. ಆ ಮೂಲಕ ನಮ್ಮ ಎಂಸಿಜೆ ವಿಭಾಗ ಮಾತ್ರವಲ್ಲ, ಮಂಗಳೂರು ವಿವಿಯಲ್ಲ, ಬರೀ ಮಡಿಕೇರಿಯಲ್ಲ ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಸಂಭ್ರಮ ತಂದಿದ್ದಾಳೆ.
ಕನ್ನಡ ಭಾಷೆ ಮತ್ತು ನಾಡಿಗೆ ಈ ಸೌಮ್ಯ ಹೆಣ್ಣುಮಗಳು ತಂದು ಕೊಟ್ಟಿರುವ ಕೀರ್ತಿಯನ್ನು ಅಳೆಯಲು ಶಬ್ದಗಳಿಗಾಗಿ ಹುಡುಕಾಡಬೇಕಾಗಿದೆ.
ನಾನು ಸೋಶಿಯಲ್ ಮೀಡಿಯಾ ಬಳಸುವುದಿಲ್ಲ. ಪತ್ರಿಕೆ ಮತ್ತು ಮ್ಯಾಗಝಿನ್‌ಗಳನ್ನೂ ಮಾತ್ರ ಓದುವವನು. ನನ್ನ ಪ್ರಸಕ್ತ ಸಹದ್ಯೋಗಿಗಳನ್ನು ಹಿಡಿದು ಅವರ ಸ್ಮಾರ್ಟ್ ಫೋನ್‌ಗಳಲ್ಲಿದ್ದ ದೀಪಾ ಭಾಸ್ತ್ತಿ ಬಗೆಗಿನ ಬರಹಗಳನ್ನು ನನಗೆ ತೋರಿಸುವಂತೆ ದುಂಬಾಲುಬಿದ್ದೆ. ಆಕೆಯ ಕೆಲವು ಸಂದರ್ಶನಗಳು ಮತ್ತು ಅವಳದೇ ಸ್ವಂತ ಪರಿಚಯವನ್ನು ಬ್ಲಾಗ್ ಗಳಲ್ಲಿ ಓದಿದೆ. ಆಗ ನಿಜಕ್ಕೂ ಆಕೆ ಜೀನಿಯಸ್ ಎಂಬುದು ನನ್ನ ಮೆದುಳಿಗೆ ತಟ್ಟಿತು.
ಪ್ರಸಕ್ತ ‘ಗಾರ್ಡಿಯನ್’ನಂತಹ ಅಂಡರ್‌ರಾಷ್ಟ್ರೀಯ ಜರ್ನಲ್‌ಗಳಲ್ಲಿ ಸಹ ಲೇಖನಗಳನ್ನು ಬರೆಯುವ ಆಕೆ ಕುವೆಂಪು ಸಾಹಿತ್ಯವನ್ನು ‘ಕನ್ನಡದ ಮೂಲಭೂತ ಪಠ್ಯ’ ಎಂಬುದಾಗಿ ಹೇಳುತ್ತಾಳೆ. ಇದು ಸಾಮಾನ್ಯ ಸಾಹಿತ್ಯ ಆಸಕ್ತರಿಗೆ ಕಾಣಿಸದ ಒಂದು ಅಪೂರ್ವ ಒಳನೋಟ. ಅಲ್ಲದೆ ಮಡಿಕೇರಿಯ ಸದ್ಯದ ವಿಷಪೂರಿತ ಫ್ಯಾಶಿಸ್ಟ್ ವಾತಾವರಣದಲ್ಲಿ ಹೀಗೆ ಯೋಚಿಸಲು ಅಸಾಧಾರಣ ಎದೆಗಾರಿಕೆಯೊಂದಿಗೆ ತೀಕ್ಷ್ಣ ಗ್ರಹಿಕೆಯೂ ಇರಲೇಬೇಕಾಗುತ್ತದೆ. ದೀಪಾ, ಜಗತ್ತಿನ ಇತರ ಭಾಷೆಗಳ ಸಾಹಿತ್ಯಗಳ ಬಗ್ಗೆ ಮಾತನಾಡುತ್ತಾಳೆ. ನುಸ್ರತ್ ಫತೇಹ್ ಅಲಿ ಖಾನ್, ಅಲಿ ಸೇಥಿ, ಅರೂಜ್ ಅಫ್ತಾಬ್‌ನಂತಹ ಸಂಗೀತ ಕೇಳುವ ಅಭಿರುಚಿ ಉಳ್ಳವಳಾಗಿದ್ದಾಳೆ, ಉರ್ದು, ಅರೇಬಿಕ್ ಭಾಷೆಗಳನ್ನು ಕಲಿಯುವ ಆಸಕ್ತಿ ಉಳ್ಳವಳಾಗಿದ್ದಾಳೆ. ಜಗತ್ತಿನ ಹಲವು ಮೂಲೆಗಳಲ್ಲಿ ನಡೆಯುತ್ತಿರುವ ಯುದ್ಧಗಳು, ಗಲಭೆಗಳು, ಅಂತರ್ಕಲಹಗಳ ಕುರಿತು ಆತಂಕಿತಳಾಗಿದ್ದಾಳೆ. ಆಕೆಯ ಜಾಲತಾಣಗಳು ಮತ್ತಿತರ ಮಾಧ್ಯಮಗಳ ಸುದ್ದಿ ವಿಚಾರಗಳನ್ನು ನಾನಿನ್ನೂ ಓದುವುದು ಬಾಕಿಯಿದೆ. ಹಾಗೆಯೆ HEART LAMP ಅನ್ನೂ ಸಹ. ಎರಡು-ಮೂರು ವಾರಗಳ ಹಿಂದೆ ಈ ಪುಸ್ತಕದ ಬಗ್ಗೆ ಪತ್ರಿಕೆಯೊಂದರಲ್ಲಿ ಓದಿದಾಗ ಈ ‘ಎದೆಯ ದೀಪ’ ಎಂಬ ಶೀರ್ಷಿಕೆಯು HEART LAMP ಎಂದು ಅನುವಾದಗೊಂಡಿರುವುದು ನನಗೇನೋ ಸಮಂಜಸ ಅನ್ನಿಸಲಿಲ್ಲ. ಅದು LAMP IN THE HEART ಎಂದಿರಬೇಕಿತ್ತು ಎಂದು ನನಗೆ ನಾನೇ ವಾದಮಾಡಿಕೊಂಡಿದ್ದೆ. ಆದರೆ ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಿದವರು, ಅದಕ್ಕೂ ಮೊದಲು ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದ ಪೆಂಗ್ವಿನ್ ಸಂಸ್ಥೆಗಿಂತಲೂ ನಾನು ಹೆಚ್ಚು ತಿಳಿದವನಲ್ಲ ಎಂಬುದು ಮೊನ್ನೆ ಮಧ್ಯಾಹ್ನವಷ್ಟೇ ತಿಳಿಯಿತು. ಆ HEART ಎಂಬ ಪದ ಹಿಂದಿರಲಿ ಅಥವಾ ಮುಂದೆಯೇ ಬರಲಿ ಈ ಕ್ಷಣದಲ್ಲಿ ನನ್ನ ಪ್ರೀತಿಯ ವಿದ್ಯಾರ್ಥಿನಿಗೆ ಹೃದಯಾಳದ ಅಭಿನಂದನೆಗಳನ್ನು ಸಲ್ಲಿಸುವಷ್ಟು ಪುಣ್ಯವಂತನಾಗಿದ್ದೇನೆ. ದೀಪಾ ಭಾಸ್ತ್ತಿ ಇನ್ನೂ ಬಲುದೂರ ಸಾಗಲಿ ಎಂದು ಹಾರೈಸುತ್ತೇನೆ.