×
Ad

ಬಿಎನ್‌ಎಸ್‌ನ ಗುಂಪು ಹತ್ಯೆ ನಿಬಂಧನೆ ಪೊಲೀಸರಿಗೆ ಅನ್ವಯವಾಗುವುದಿಲ್ಲವೆ?

Update: 2025-08-10 10:21 IST

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(2) ರ ಅಡಿಯಲ್ಲಿ ಗುಂಪು ಹತ್ಯೆ ವಿರೋಧಿ ಕಾನೂನು ಜುಲೈ 2024ರಲ್ಲಿ ಜಾರಿಗೆ ಬಂದಿದೆ. ಅದಾದ ನಂತರವೂ, ಆರು ರಾಜ್ಯಗಳಲ್ಲಿ ಪೊಲೀಸರು ಕನಿಷ್ಠ ಒಂಭತ್ತು ಪ್ರಕರಣಗಳಲ್ಲಿ ಅದನ್ನು ನಿರ್ಲಕ್ಷಿಸಿದ್ದಾರೆ ಎಂಬುದನ್ನು ಆರ್ಟಿಕಲ್ 14. ಕಾಂ ಕಂಡುಕೊಂಡಿದೆ. ಸಯ್ಯದ್ ಅಫ್ಫಾನ್ ಅವರ ವರದಿ ಈ ಕುರಿತು ಬೆಳಕು ಚೆಲ್ಲುತ್ತದೆ.

ಗುಜರಾತ್, ಹರ್ಯಾಣ, ಜಾರ್ಖಂಡ್, ಕರ್ನಾಟಕ , ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿ ಹೀಗಾಗಿದೆ.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯದ್ದೇ ಸರಕಾರವಿದ್ದು, ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

ಗೋರಕ್ಷಕರು ಎಂಬ ಹಲ್ಲೆಕೋರರಿಗೆ ರಕ್ಷಣೆ ಸಿಗುತ್ತಿರುವಾಗ, ಬಲಿಪಶುಗಳು ನ್ಯಾಯಕ್ಕಾಗಿ ಹತಾಶ ಹೋರಾಟ ನಡೆಸುತ್ತಲೇ ಇರಬೇಕಾಗಿದೆ. ವಿಷಯವೇನೆಂದರೆ, ಹೊಸ ಬಿಎನ್‌ಎಸ್ ನಿಬಂಧನೆಯಲ್ಲಿ ಲಿಂಚಿಂಗ್ ಎಂಬ ಪದ ಇಲ್ಲದೇ ಇರುವುದು, ಪೊಲೀಸರಿಗೆ ಅಂಥ ಪ್ರಕರಣಗಳನ್ನು ಸಾಮಾನ್ಯ ಕೊಲೆಗಳೆಂದು ಪರಿಗಣಿಸಲು ಅವಕಾಶ ಮಾಡಿಕೊಟ್ಟಿದೆ.

ಆರ್ಟಿಕಲ್ 14.ಕಾಂ ಕಂಡುಕೊಂಡಿರುವ ಪ್ರಕಾರ, ಐದು ಅಥವಾ ಐದಕ್ಕೂ ಹೆಚ್ಚು ಜನರಿಂದ ಆದ ಹತ್ಯೆಯನ್ನು ಗುಂಪುಹತ್ಯೆ ಎಂದು ವ್ಯಾಖ್ಯಾನಿಸುವ ಸೆಕ್ಷನ್ ಅಡಿ ದಾಖಲಿಸದೆ ಕೊಲೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿ 5 ಪಕ್ರರಣಗಳನ್ನು ದಾಖಲಿಸಲಾಗಿದೆ.

ಇನ್ನು ಕೊಲೆಯೆನ್ನಲಾಗದ ಅಪರಾಧಿಕ ನರಹತ್ಯೆ ಮತ್ತು ಮಾರಕ ಅಪಘಾತ ಎಂಬ ಸೆಕ್ಷನ್‌ಗಳ ಅಡಿಯಲ್ಲಿ ಒಂದೊಂದರಂತೆ ಎರಡು ಪ್ರಕರಣಗಳು ದಾಖಲಾಗಿವೆ.

ಮಂಗಳೂರಿನಲ್ಲಿ ನಡೆದ ಒಂದು ಪ್ರಕರಣದಲ್ಲಿ, ಪೊಲೀಸರು ಆರಂಭದಲ್ಲಿ ಗುಂಪು ಹತ್ಯೆಯನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡರು. ನಂತರ ಗುಂಪು ಹತ್ಯೆ ಆರೋಪದಡಿ ಕೇಸ್ ಹಾಕಲಾಯಿತು.

ಜಾರ್ಖಂಡ್‌ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಬಲಿಪಶುವಿನ ಪತ್ನಿಯ ದೂರಿನ ಮೇರೆಗೆ ಪೊಲೀಸರು ಗುಂಪು ಹತ್ಯೆ ಆರೋಪ ಹೊರಿಸಿದರಾದರೂ, ನಂತರ ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ಅದನ್ನು ಅಪಘಾತ ಎಂದು ದಾಖಲಿಸಿದರು.

ಒಂಭತ್ತು ಪ್ರಕರಣಗಳಲ್ಲಿ, ಐದು ಗೋರಕ್ಷಕರೆಂಬವರಿಂದ ನಡೆದ ಗುಂಪು ಹತ್ಯೆಗಳಾಗಿವೆ. ಇತರ ನಾಲ್ಕು ಘಟನೆಗಳಲ್ಲಿ ಹಣ ನೀಡಲು ನಿರಾಕರಿಸಿದ್ದಕ್ಕೆ, ಅಪಘಾತದಿಂದ ಗಾಯವಾದದ್ದಕ್ಕೆ, ಕಳ್ಳತನದ ಆರೋಪದ ಮೇಲೆ ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗಿದ ಆಧಾರರಹಿತ ಆರೋಪ ಮಾಡಿ ಗುಂಪುಹತ್ಯೆಗಳು ನಡೆದಿವೆ.

ನಾಲ್ಕು ಪ್ರಕರಣಗಳಲ್ಲಿ ದಾಳಿಕೋರರೇ ಮಾಡಿದ್ದ ವೀಡಿಯೊಗಳು, ಅವರೇ ಸ್ವತಃ ದಾಳಿಯ ಹೊಣೆ ಹೊತ್ತುಕೊಳ್ಳುವುದನ್ನು ಅಥವಾ ದಾಳಿ ನಡೆಸಿರುವುದನ್ನು ತೋರಿಸಿವೆ.

ಒಂದು ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿಲ್ಲ. ಇನ್ನೊಂದು ಪ್ರಕರಣದಲ್ಲಿ, ಗೋಮಾಂಸದ ನೆಪ ಮುಂದೆ ಮಾಡಿ, ವಿಧಿವಿಜ್ಞಾನ ಪರೀಕ್ಷೆಗೆ ಮೊದಲೇ ಗೋಸಂರಕ್ಷಣಾ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಆಕಸ್ಮಿಕ ಸಾವುಗಳು ಎನ್ನಲಾದ ಎರಡು ಪ್ರಕರಣಗಳಲ್ಲಿ ಪುರಾವೆಗಳು ಪೊಲೀಸರ ಹೇಳಿಕೆಗಳಿಗೆ ಪೂರ್ತಿ ವಿರುದ್ಧವಾಗಿವೆ.

ನಾಲ್ಕು ಪ್ರಕರಣಗಳಲ್ಲಿನ ಎಫ್‌ಐಆರ್‌ಗಳಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಿರುವುದು ಮತ್ತು ಸತ್ಯಗಳನ್ನು ಮರೆಮಾಚಿರುವುದು ನಡೆದಿದೆ.

ಮೂರು ಪ್ರಕರಣಗಳಲ್ಲಿ, ಚಿಕಿತ್ಸೆ ವೇಳೆ ಬಲಿಪಶುಗಳು ಸತ್ತಿರುವ ಎಫ್‌ಐಆರ್‌ಗಳಲ್ಲಿಯೂ, ಬಲಿಪಶುಗಳನ್ನು ರಕ್ಷಿಸಿದ್ದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.

ಆರ್ಟಿಕಲ್ 14. ಕಾಂ ವಿಶ್ಲೇಷಿಸಿದ ಈ ಎಲ್ಲ ಪ್ರಕರಣಗಳಲ್ಲಿ, ಕಾನೂನುಬಾಹಿರ ನಕಲಿ ಗೋರಕ್ಷಕರ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಬಲಿಪಶುಗಳ ವಿರುದ್ಧವೇ ಪೊಲೀಸರು ಆರೋಪ ಹೊರಿಸಿರುವ ಮಾದರಿಯೊಂದು ಕಾಣಿಸಿದೆ.

ಅಂದರೆ ಗುಂಪು ಹತ್ಯೆಯನ್ನು ಮರೆಮಾಚಲಾಗಿದೆ. ಗುಂಪು ಹಲ್ಲೆಯಿಂದ ಸಾವು ಸಂಭವಿಸಿಲ್ಲ ಎಂದು ನಿರೂಪಿಸುವ ಯತ್ನ ನಡೆಸಿದೆ.

ಡಿಸೆಂಬರ್ 30, 2024ರ ರಾತ್ರಿ, ಮೊರಾದಾಬಾದ್ ನಿವಾಸಿ 37 ವರ್ಷದ ಶಾಹಿದೀನ್ ಖುರೇಷಿ ಅವರನ್ನು ಗೋಹತ್ಯೆ ಆರೋಪದ ಮೇಲೆ ಗುಂಪೊಂದು ತೀವ್ರವಾಗಿ ಥಳಿಸಿದ ಬಳಿಕ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ರಾಷ್ಟ್ರೀಯ ಬಜರಂಗ ದಳದ ಸ್ಥಳೀಯ ನಾಯಕ ರೋಹನ್ ಸಕ್ಸೇನಾ ವೀಡಿಯೊದಲ್ಲಿ ಘಟನೆಯ ಹೊಣೆ ಹೊತ್ತುಕೊಂಡಿದ್ಡ. ಆದರೂ, ಮೊರಾದಾಬಾದ್ ಪೊಲೀಸರು ಈ ಹತ್ಯೆಯನ್ನು ಗುಂಪುಹತ್ಯೆ ಎಂದು ಪರಿಗಣಿಸಲಿಲ್ಲ.

ಡಿಸೆಂಬರ್ 31ರ ರಾತ್ರಿ, ಮೊರಾದಾಬಾದ್‌ನ 25 ವರ್ಷದ ಅದ್ನಾನ್ ಎಂಬ ವ್ಯಕ್ತಿಯನ್ನು ಶಾಹಿದೀನ್ ಕೊಲೆ ಮತ್ತು ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ಮನೆಯಿಂದ ಕರೆದೊಯ್ದರು. ಆತ ಸೇಡು ತೀರಿಸಿಕೊಳ್ಳಲು ಶಾಹಿದೀನ್ ಕೊಲೆಯನ್ನು ಮಾಡಿರುವುದಾಗಿ ಆರೋಪಿಸಲಾಯಿತು. ಆದರೆ ಎರಡು ಎಫ್‌ಐಆರ್‌ಗಳಲ್ಲಿಯೂ ಆತನ ಹೆಸರು ಇರಲಿಲ್ಲ.

ಅದ್ನಾನ್ ಜಾಮೀನು ಅರ್ಜಿಯಲ್ಲಿ ಆರೋಪಗಳು ನಿಜವಲ್ಲ ಎಂದು ವಾದಿಸಲಾಯಿತು. ಶಾಹಿದೀನ್ ಗುಂಪು ಹಲ್ಲೆಯಿಂದ ಸಾವನ್ನಪ್ಪಿದ್ದರೂ, ಎರಡೂ ಪ್ರಕರಣಗಳಲ್ಲಿ ಅದ್ನಾನ್ ವಿರುದ್ಧ ತಪ್ಪು ಆರೋಪ ಹೊರಿಸಲಾಗಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆದರೆ, ಶಾಹಿದೀನ್ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಅದ್ನಾನ್ ಅವರನ್ನು ಕೊಂದಿರುವುದಾಗಿ ಪೊಲೀಸರು ಆರೋಪಿಸಿದ್ದರು. ಎಫ್‌ಐಆರ್ ಅಥವಾ ಸಾಕ್ಷಿಗಳ ಹೇಳಿಕೆಗಳಲ್ಲಿ ಅಂಥ ಆರೋಪಕ್ಕೆ ಯಾವುದೇ ಪುರಾವೆ ಕಂಡುಬಂದಿಲ್ಲ.

ಶಾಹಿದೀನ್ ಕುಟುಂಬದ ಪರ ವಕೀಲ ಶಾರಿಕ್ ಹುಸೈನ್ ಪ್ರಕಾರ, ಪ್ರಕರಣವನ್ನು ಗುಂಪು ಹತ್ಯೆ ಎಂದು ನೋಂದಾಯಿಸದೆ, ಕೇವಲ ಕೊಲೆ ಎಂದು ದಾಖಲಿಸಲಾಗಿದ್ದು, ಅದಕ್ಕಾಗಿ ಪೊಲೀಸರು ಕಥೆ ಕಟ್ಟಿದ್ದಾರೆ.

ಗುಂಪು ಹಲ್ಲೆ ಬಿಎನ್‌ಎಸ್ ಅಡಿಯಲ್ಲಿ ಒಂದು ವಿಶಿಷ್ಟ ಅಪರಾಧ ಎಂದು ವರ್ಗೀಕರಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

ಬಿಎನ್‌ಎಸ್ ಸೆಕ್ಷನ್ 103(2)ರ ಬಗ್ಗೆ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಇದೇ ಎಪ್ರಿಲ್ 1ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು.

2018ರಲ್ಲಿ ತೆಹ್ಸೀನ್ ಪೂನಾವಾಲಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿ ಪ್ರತ್ಯೇಕ ಗುಂಪು ಹಲ್ಲೆ ವಿರೋಧಿ ಕಾನೂನು ಜಾರಿಗೆ ಸಂಸತ್ತನ್ನು ಒತ್ತಾಯಿಸಿತ್ತು.ಸುಪ್ರೀಂ ಕೋರ್ಟ್ ತನ್ನ ಮಾರ್ಗದರ್ಶಿ ಸೂತ್ರಗಳಲ್ಲಿ, ಇಂಥ ಪ್ರಕರಣಗಳ ವಿಚಾರವಾಗಿ ಹೇಗೆ ಕಣ್ಣಿಡಬೇಕು ಮತ್ತು ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಹೇಳಿತ್ತು. ಪೊಲೀಸರಿಗೆ ವ್ಯಾಪಕವಾದ ನಿರ್ದೇಶನಗಳನ್ನು ನೀಡಲಾಗಿತ್ತು.

ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೂ ಇಂಥ ಪ್ರಕರಣಗಳನ್ನು ಎಲ್ಲ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರ ಮಾಡುವಂತೆ ಸೂಚಿಸಿತ್ತು.

ಗುಂಪು ಹಿಂಸಾಚಾರ ಮತ್ತು ಥಳಿತದ ಘಟನೆಗಳ ತಡೆಗೆ ಕ್ರಮ ಕೈಗೊಳ್ಳಲು ಪ್ರತೀ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಗಿಂತ ಕಡಿಮೆಯಿಲ್ಲದ ಹಿರಿಯ ಪೊಲೀಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಪೀಠ ಸೂಚಿಸಿತ್ತು.

ಆದರೂ, ಸುಮಾರು ಏಳು ವರ್ಷಗಳ ನಂತರವೂ, ಮಾರ್ಗಸೂಚಿಗಳನ್ನು ನಿರ್ಲಕ್ಷಿಸಲಾಗಿದೆ. ಬಿಎನ್‌ಎಸ್‌ನ ಸೆಕ್ಷನ್ 103(2) ಅನ್ನು ಪೊಲೀಸರು ತಪ್ಪಿಸುತ್ತಿದ್ದಾರೆ. ಸಾವಿಗೆ ಗುಂಪುಹತ್ಯೆ ಕಾರಣವಲ್ಲ ಎನ್ನುವುದನ್ನು ಅವರು ಮುಂದುವರಿಸಿದ್ದಾರೆ.

ಬಿಎನ್‌ಎಸ್‌ಗಿಂತ ಮುಂಚೆ ಕೂಡ ಪೊಲೀಸರು ಮಾರ್ಗಸೂಚಿಗಳ ಅನುಸರಣೆಯಿಂದಲೂ ತಪ್ಪಿಸಿಕೊಳ್ಳುತ್ತಿರುವುದರ ಬಗ್ಗೆ ಕಾನೂನು ತಜ್ಞರು ಹೇಳುತ್ತಾರೆ. ಇಲ್ಲಿರುವುದು ಹೊಸ ಕಾನೂನುಗಳ ಪ್ರಶ್ನೆಯಲ್ಲ. ಬದಲಿಗೆ, ಈಗಾಗಲೇ ಇರುವ ಕಾನೂನುಗಳನ್ನು ಜಾರಿಗೊಳಿಸದೆ ಇರುವಲ್ಲಿ ಎಂಬುದು ಪರಿಣಿತರ ಅಭಿಪ್ರಾಯ.

ಕನಿಷ್ಠ 13 ರಾಜ್ಯಗಳಲ್ಲಿ ಜಾರಿಗೊಳಿಸಲಾದ ಗೋ ಸಂರಕ್ಷಣಾ ಕಾಯ್ದೆಗಳು ಮತ್ತು ಗುಂಪು ಹತ್ಯೆಗಳನ್ನು ತಡೆಗಟ್ಟಲು ಉದ್ದೇಶಿಸಲಾದ ನಿಬಂಧನೆಗಳ ನಡುವೆ ಈ ವಿರೋಧಾಭಾಸ ಇರುವ ಬಗ್ಗೆ ಹೇಳಲಾಗುತ್ತಿದೆ.

ಸ್ಥಳೀಯ ಸಮಿತಿಗಳನ್ನು ರಚಿಸುವ ನಿಬಂಧನೆಗಳು ಮೇಲ್ನೋಟಕ್ಕೆ ಈ ಕಾನೂನುಗಳು ಗೋ ರಕ್ಷಣೆಗಾಗಿ ಇವೆ ಎಂದು ಕಾಣುವಂತೆ ಮಾಡಿವೆ. ಆದರೆ ಗೋರಕ್ಷಣೆ ಹೆಸರಲ್ಲಿ ಈ ನಿಬಂಧನೆಗಳು ಆ ಜನರಿಗೆ ಅರೆ ಪೊಲೀಸಿಂಗ್ ಅಧಿಕಾರ ನೀಡುತ್ತವೆ. ಇದು ಗುಂಪು ಹತ್ಯೆಗಳಿಗೆ ಕಾರಣವಾಗುತ್ತಿದೆ.

ಸೆಪ್ಟಂಬರ್ 2024ರಲ್ಲಿ ಹರ್ಯಾಣದ ಚರ್ಖಿ ದಾದ್ರಿಯಲ್ಲಿ ಬಂಗಾಳದ ಗುಜರಿ ಕೆಲಸಗಾರ ಸಬೀರ್ ಮಲಿಕ್ ಗುಂಪುಹತ್ಯೆಗೆ ಬಲಿಯಾದರು. ಗೋಮಾಂಸ ಬೇಯಿಸಿದ ಆರೋಪದ ಮೇಲೆ ಅವರನ್ನು ಹೊಡೆದು ಕೊಲ್ಲಲಾಗಿತ್ತು.

ಮಲಿಕ್ ಹತ್ಯೆಯಾದ ಒಂದೂವರೆ ತಿಂಗಳ ನಂತರ, ಅದು ಗೋಮಾಂಸವಲ್ಲ ಎಂದು ವಿಧಿವಿಜ್ಞಾನ ವರದಿ ದೃಢಪಡಿಸಿತ್ತು.

ನಕಲಿ ಗೋರಕ್ಷಕರು ಸಾರ್ವಜನಿಕವಾಗಿಯೇ ಹತ್ಯೆಯನ್ನು ಒಪ್ಪಿಕೊಂಡಿದ್ದರೂ, ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು.

2024ರ ಆಗಸ್ಟ್ 23ರಂದು ಫರೀದಾಬಾದ್‌ನ 19 ವರ್ಷದ ಆರ್ಯನ್ ಮಿಶ್ರಾ ಅವರನ್ನು ಗೋಮಾಂಸ ಸಾಗಿಸುತ್ತಿದ್ದ ಅನುಮಾನದ ಮೇಲೆ ನಕಲಿ ಗೋ ರಕ್ಷಕರು ಬೆನ್ನಟ್ಟಿ ಗುಂಡು ಹಾರಿಸಿ ಕೊಂದರು. ಎಫ್‌ಐಆರ್ ಅನ್ನು ಆರಂಭದಲ್ಲಿ ಕೊಲೆ ಎಂದು ದಾಖಲಿಸಲಾಯಿತು. ನವೆಂಬರ್‌ನಲ್ಲಿ ಪೊಲೀಸರು ಸೆಕ್ಷನ್ 103(2) ಗುಂಪು ಹತ್ಯೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

2024ರ ಡಿಸೆಂಬರ್ 8ರಂದು ಜಾರ್ಖಂಡ್‌ನ ಸರೈಕೇಲಾ-ಖರ್ಸವಾನ್ ಜಿಲ್ಲೆಯ ಸಪ್ರಾ ಗ್ರಾಮದಲ್ಲಿ ಜಾನುವಾರು ಮತ್ತು ತರಕಾರಿ ವ್ಯಾಪಾರಿ ಶೇಕ್ ತಾಜುದ್ದೀನ್ ಅವರ ಮೇಲೆ ದನ ಕಳ್ಳತನದ ಶಂಕೆಯ ಮೇಲೆ ಗುಂಪುಹಲ್ಲೆ ನಡೆಸಿತು. ಐದು ದಿನಗಳ ನಂತರ ಅವರು ಸಾವನ್ನಪ್ಪಿದರು.

ಪೊಲೀಸರು ಉದ್ದೇಶಪೂರ್ವಕವಾಗಿ ಅಪರಾಧಿಗಳನ್ನು ರಕ್ಷಿಸಲು ಗುಂಪು ಥಳಿತದ ಆರೋಪ ಹೊರಿಸುವುದನ್ನು ತಪ್ಪಿಸಿದ್ದಾಗಿ ಮೃತನ ಕುಟುಂಬದವರ ವಕೀಲರು ಹೇಳಿದ್ದಾರೆ.

ಜನವರಿಯಲ್ಲಿ, ಘಟನೆಯ ತನಿಖೆಗಾಗಿ ತಂಡ ರಚಿಸಿದ್ದ ಜಾರ್ಖಂಡ್ ರಾಜ್ಯ ಅಲ್ಪಸಂಖ್ಯಾತ ಆಯೋಗ (ಜೆಎಸ್‌ಎಂಸಿ) ಇದನ್ನು ಗುಂಪು ಹಲ್ಲೆ ಪ್ರಕರಣ ಎಂದು ಒಪ್ಪಿಕೊಂಡಿತು.

ಮೇ 9, 2025ರಂದು, ಒಡಿಶಾದ ಕಟಕ್ ಜಿಲ್ಲೆಯ ದಿವಾನ್ ಬಜಾರ್ ನಿವಾಸಿ 25 ವರ್ಷದ ಎಸ್.ಕೆ. ರಾಹಿಲ್ ಅವರನ್ನು ಕುಟುಂಬದ ಕಾರಿನಲ್ಲಿ ಸ್ನೇಹಿತ ಮತ್ತು ಸಂಬಂಧಿಯೊಂದಿಗೆ ರಾತ್ರಿ ಪ್ರಯಾಣಿಸುತ್ತಿದ್ದಾಗ, ನಕಲಿ ಗೋರಕ್ಷಕರು ಬೆನ್ನಟ್ಟಿ, ಟೈರ್‌ಗಳನ್ನು ಪಂಚರ್ ಮಾಡಿದ ಬಳಿಕ ಅವರನ್ನು ಹೊಡೆದು ಕೊಂದು ಕಾರಿಗೆ ಬೆಂಕಿ ಹಚ್ಚಿದ್ದರು.

‘‘ನನ್ನ ಮಗ ದನ ವ್ಯಾಪಾರಿ ಎಂದು ಶಂಕಿಸಿ, ಮುಸ್ಲಿಮ್ ಎಂಬ ಕಾರಣಕ್ಕಾಗಿ ಕೊಲ್ಲಲಾಗಿದೆ’’ ಎಂದು ರಾಹಿಲ್ ತಂದೆ ಹೇಳಿದ್ದರು. ಈ ಸಂಬಂಧ ಪೊಲೀಸರು 13 ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಡಕಾಯಿತಿ ಯತ್ನ ತಡೆಯಲು ಹೋದದ್ದಕ್ಕೆ ಕೊಲೆಯಾಗಿದೆ ಎನ್ನಲಾಯಿತು.

ದರೋಡೆ, ಕಳ್ಳತನ ಅಥವಾ ಜಾನುವಾರು ಹತ್ಯೆಗೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಗುಂಪುಹತ್ಯೆ ನಡೆದಾಗೆಲ್ಲ, ಬಲಿಪಶುಗಳ ವಿರುದ್ಧ ಪ್ರತಿ ಪ್ರಕರಣ ದಾಖಲಿಸುವುದು ಸಾಮಾನ್ಯ ಟ್ರೆಂಡ್ ಆಗಿದೆ.

ಹಲವಾರು ಘಟನೆಗಳಲ್ಲಿ, ನಕಲಿ ಗೋರಕ್ಷಕರು ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ಕೊಡಲು ನಿರಾಕರಿಸಿದವರನ್ನು ಥಳಿಸಿ ಕೊಂದಿರುವುದೂ ಇದೆ.

ಅಹಮದಾಬಾದ್‌ನ ಮಿರ್ಜಾಪುರದ 32 ವರ್ಷದ ಮಾಂಸ ವ್ಯಾಪಾರಿ ಮುಹಮ್ಮದ್ ಭೂರಾ ಹಬೀಬುಲ್ಲಾ ಮತ್ತು ಸಯೀದ್ ಅವರ ವಿಷಯದಲ್ಲಿ ಹೀಗೆಯೇ ಆಗಿತ್ತು.

2025ರ ಎಪ್ರಿಲ್ 21ರಂದು ಅವರ ಸುಟ್ಟ ವಾಹನದಲ್ಲಿ ಹಬೀಬುಲ್ಲಾ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಕೇಸ್ ಮಾತ್ರ ನಿರ್ಲಕ್ಷ್ಯದ ಚಾಲನೆ, ಅಪಾಯಕಾರಿ ಚಾಲನೆ ಮೊದಲಾದ ಸೆಕ್ಷನ್‌ಗಳ ಅಡಿಯಲ್ಲಿತ್ತು.

ಮೃತ ಮತ್ತು ಬದುಕುಳಿದ ಮತ್ತೋರ್ವ ಇಬ್ಬರನ್ನೂ ಆರೋಪಿಗಳೆಂದು ಹೆಸರಿಸಿ, ವಸ್ತುವೊಂದಕ್ಕೆ ಢಿಕ್ಕಿ ಹೊಡೆದ ನಂತರ ಕಾರು ಬೆಂಕಿಗೆ ಆಹುತಿಯಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಅದಕ್ಕೆ ವಿರುದ್ಧವಾಗಿ, ಮರಣೋತ್ತರ ಪರೀಕ್ಷೆ ಹಲ್ಲೆಯ ಸತ್ಯವನ್ನು ಹೇಳಿತ್ತು.

ನಕಲಿ ಗೋರಕ್ಷಕರು ಹಣಕ್ಕಾಗಿ ಬೇಡಿಕೆ ಇಟ್ಟರು ಮತ್ತು ಸಯೀದ್ ಅವರನ್ನು ಹೊಡೆದು ಹಬೀಬುಲ್ಲಾ ಅವರನ್ನು ಜೀವಂತವಾಗಿ ಸುಟ್ಟುಹಾಕಿದರು ಎಂಬುದು ನಂತರ ಬಯಲಾಗಿತ್ತು.

ಹೀಗೆ ನಕಲಿ ಗೋರಕ್ಷಕರು ಸುಟ್ಟು ಕೊಂದಿರುವುದು ಹಬೀಬುಲ್ಲಾ ಅವರನ್ನು ಮಾತ್ರವಲ್ಲ. ಸೆಪ್ಟಂಬರ್ 2024ರಿಂದ, ಗುಜರಾತ್‌ನಲ್ಲಿ ಇತರ ಇಬ್ಬರನ್ನು ಕೂಡ ಸುಟ್ಟು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಕರ್ನಾಟಕದ ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ಸಮಯದಲ್ಲಿ 37 ವರ್ಷದ ಮುಹಮ್ಮದ್ ಅಶ್ರಫ್ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಆರೋಪದ ಮೇಲೆ ಗುಂಪೊಂದು ಹೊಡೆದು ಕೊಂದಿದ್ದಾಗಿ ಗೃಹಸಚಿವ ಪರಮೇಶ್ವರ್ ಹೇಳಿದ್ದರು. ನಂತರ ಅವರು ತಮ್ಮ ಹೇಳಿಕೆ ಹಿಂದೆಗೆದುಕೊಂಡಿದ್ದರು.

ಇದೇ ವರ್ಷ ಎಪ್ರಿಲ್ 27ರಂದು ಅಶ್ರಫ್ ಕೊಲೆಯಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಅವರೇ ಪಾಕಿಸ್ತಾನ ಪರ ಹೇಳಿಕೆ ನೀಡಿದ ಪುರಾವೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅಶ್ರಫ್ ಮಾನಸಿಕ ಅಸ್ವಸ್ಥ ಎಂಬುದೂ ತಡವಾಗಿ ಬಯಲಿಗೆ ಬಂತು.

ಮಂಗಳೂರು ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಮೊದಲನೆಯದರಲ್ಲಿ, ಅಸ್ವಾಭಾವಿಕ ಸಾವು ಎಂದು ದಾಖಲಿಸಿ, ಅಶ್ರಫ್ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ಹೇಳಲಾಗಿತ್ತು.

ಎಪ್ರಿಲ್ 28ರಂದು ಬಿಎನ್‌ಎಸ್‌ನ ಸೆಕ್ಷನ್ 103(2) ರ ಅಡಿಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಯಿತು.ಎರಡನೇ ಎಫ್‌ಐಆರ್‌ನಲ್ಲಿ ಪಾಕ್ ಪರ ಘೋಷಣೆಯ ಯಾವುದೇ ಉಲ್ಲೇಖವಿರಲಿಲ್ಲ.

ಗುಂಪು ಹಲ್ಲೆ ಎಂದು ತಿಳಿದಿದ್ದರೂ ಅಸಹಜ ಸಾವು ಎಂದು ದಾಖಲಿಸಿದ್ದಕ್ಕಾಗಿ ಇನ್‌ಸ್ಪೆಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಮಂಗಳೂರು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದರು.

ಇನ್ನು ಬೇರೆ ಪ್ರಕರಣಗಳಲ್ಲಿ ಪೊಲೀಸರು ಬಲಿಪಶುಗಳ ವಿರುದ್ಧವೇ ಆರೋಪ ಹೊರಿಸಿ, ಗುಂಪು ಹತ್ಯೆ ಆರೋಪ ತಪ್ಪಿಸುವ ಕೆಲಸ ಮಾಡಿದ್ದಿದೆ.

ಜುಲೈ 3, 2024ರಂದು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಬಂಡಿ ಎಳೆಯುವ ಫಿರೋಝ್ ಖುರೇಷಿಯ ಮೇಲೆ ಕಳ್ಳತನದ ಆರೋಪದ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಲಾಯಿತು. ಎರಡು ಗಂಟೆಗಳ ನಂತರ ಆತ ಸಾವನ್ನಪ್ಪಿದ್ದ. ಆದರೆ ಪೊಲೀಸರು ಗುಂಪುಹತ್ಯೆ ಎಂದು ಅದನ್ನು ದಾಖಲಿಸಲೇ ಇಲ್ಲ.

ಗುಂಪು ಹತ್ಯೆ ಮಾಡಲಾಗಿಲ್ಲ ಎಂದು ಸಮರ್ಥಿಸಿಕೊಂಡರಲ್ಲದೆ, ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಹಲ್ಲೆ ಕಾರಣವೆಂದು ದೃಢಪಟ್ಟಿಲ್ಲ ಎಂದರು. ಇನ್ನೆರಡು ಘಟನೆಗಳು ಕೂಡ ಇದೇ ರೀತಿಯಲ್ಲಿ ಮುಚ್ಚಿಹೋದವು.

ಜಾರ್ಖಂಡ್‌ನ ಹಝಾರಿಬಾಗ್‌ನಲ್ಲಿ, ಮೌಲಾನಾ ಶಹಬುದ್ದೀನ್ ಅವರನ್ನು ಜೂನ್ 30, 2024ರಂದು ಅವರ ಬೈಕ್ ಆಕಸ್ಮಿಕವಾಗಿ ಅವಂತಿ ಯಾದವ್ ಎಂಬ ಮಹಿಳೆಗೆ ಢಿಕ್ಕಿ ಹೊಡೆದ ನಂತರ ಹತ್ಯೆ ಮಾಡಲಾಯಿತು. ಆದರೆ ಪೊಲೀಸರು, ಶಹಬುದ್ದೀನ್ ಸಾವು ಬೈಕ್ ಅಪಘಾತದಲ್ಲಿ ತಲೆಗೆ ಆದ ಗಾಯದಿಂದ ಸಂಭವಿಸಿದೆ ಎಂದು ಆರೋಪಿಸಿದರು.

ಅದೇ ರೀತಿ, ಅಕ್ಟೋಬರ್ 19, 2024ರಂದು ಗುಜರಾತ್‌ನ ವಡೋದರಾದಲ್ಲಿ 21 ವರ್ಷದ ಶಹಬಾಝ್ ಖಾನ್ ಅವರನ್ನು ಕಳ್ಳತನದ ಆರೋಪದ ಮೇಲೆ ಗುಂಪು ಹತ್ಯೆ ಮಾಡಲಾಯಿತು. ಆದರೆ ಅವರ ಸಹಚರ ಇಮ್ರಾನ್ ತಿಲಿಯಾವಾಡಾ ದಾಳಿಯಿಂದ ಬದುಕುಳಿದರು.

ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ, ಇಬ್ಬರ ಮೇಲೆ ದರೋಡೆ ಉದ್ದೇಶದ ಆರೋಪ ಹೊರಿಸಿದ್ದರು. ಹೀಗೆ, ಪುರಾವೆಗಳಿದ್ದರೂ, ಗುಂಪು ಹತ್ಯೆಯನ್ನು ಪೊಲೀಸರು ನಿರಾಕರಿಸುವುದು ನಡೆಯುತ್ತಲೇ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹರೀಶ್ ಎಚ್.ಕೆ.

contributor

Similar News