×
Ad

ನಾನೇಕೆ ಬುದ್ಧ ದಮ್ಮ ಸ್ವೀಕರಿಸಿದೆ?

ಇಂದು ಡಾ. ಬಿ.ಆರ್. ಅಂಬೇಡ್ಕರ್ ಬುದ್ಧ ದಮ್ಮ ಸ್ವೀಕರಿಸಿದ ದಿನ

Update: 2025-10-14 09:38 IST

1936 ಮೇ ತಿಂಗಳಲ್ಲಿ ಮುಂಬೈಯಲ್ಲಿ ನಡೆದ ಅಖಿಲ ಭಾರತ ಅಸ್ಪಶ್ಯ ಸಮ್ಮೇಳನದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮಾಡಿದ ಭಾಷಣದಲ್ಲಿ:

‘‘ಮತಾಂತರ ಮಕ್ಕಳಾಟವಲ್ಲ, ಅದು ಮನರಂಜನೆಯ ವಸ್ತುವೂ ಅಲ್ಲ. ಮನುಷ್ಯನ ಬದುಕನ್ನು ಯಶಸ್ವಿಗೊಳಿಸುವುದು ಹೇಗೆ ಎನ್ನುವುದೇ ಅದರ ತಿರುಳು. ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ಮತಾಂತರದ ವಿಚಾರ ತುಂಬಾ ಪ್ರಮುಖವಾದದ್ದು. ಆದರೆ ಅರ್ಥ ಮಾಡಿಕೊಳ್ಳಲು ಕಠಿಣವಾದ ವಿಚಾರ.

ಮತಾಂತರಕ್ಕೆ ಎರಡು ಮುಖಗಳಿವೆ. ಒಂದನೆಯದು ಸಾಮಾಜಿಕ ಮತ್ತು ಧಾರ್ಮಿಕ. ಎರಡನೆಯದು ಐಹಿಕ ಮತ್ತು ಆಧ್ಯಾತ್ಮಿಕ. ಯೋಚನೆಯ ಧಾಟಿ ಯಾವುದೇ ಆಗಿರಲಿ, ಮೊದಲು ಇದರ ಆರಂಭವನ್ನು ಅಂದರೆ ಅಸ್ಪಶ್ಯತೆಯ ಸ್ವರೂಪ- ಆಚರಣೆಯನ್ನು ಅರಿಯುವುದು ಅತ್ಯಗತ್ಯ. ಈ ತಿಳಿವಳಿಕೆ ಇಲ್ಲದೆ ಹೋದರೆ ಮತಾಂತರದ ನಿಜವಾದ ಅಂತರಾರ್ಥವನ್ನು ನೀವು ತಿಳಿಯಲು ಅಸಾಧ್ಯ. ಇದು ಇಬ್ಬರು ಪ್ರತಿಸ್ಪರ್ಧಿಗಳ ನಡುವಣ ವ್ಯಾಜ್ಯವಲ್ಲ. ಅಸ್ಪಶ್ಯತೆಯ ಸಮಸ್ಯೆಯು ಒಂದು ವರ್ಗ ಸಂಘರ್ಷದ ರೀತಿಯದು. ಇದು ಸವರ್ಣೀಯರು ಮತ್ತು ಅಸ್ಪಶ್ಯರ ನಡುವಣ ಸಂಘರ್ಷ. ನೀವು ಇತರರೊಡನೆ ಸಮಾನ ಸ್ಥಾನ ಕೇಳಿದ ಕೂಡಲೇ ಸಂಘರ್ಷ ಶುರುವಾಗುತ್ತದೆ. ಅಸ್ಪಶ್ಯತೆ ಎನ್ನುವುದು ಅಲ್ಪಕಾಲಿಕವಾದ ಸ್ಥಿತಿಯಲ್ಲ. ಅದು ಶಾಶ್ವತವಾದದ್ದು.

ಯಾವುದೇ ಸಂಘರ್ಷದಲ್ಲಿ ಬಲಶಾಲಿಯಾದವನೇ ಗೆಲ್ಲುವನೆಂದು ಒಪ್ಪಲೇ ಬೇಕು. ಬಲವಿಲ್ಲದವನು ಗೆಲುವನ್ನು ನಿರೀಕ್ಷಿಸಲಾಗದು. ಮನುಷ್ಯನ ಶಕ್ತಿಯು ಮೂರು ಬಗೆಯದು ಒಂದು ಮಾನವ ಬಲ (ಸಂಖ್ಯಾ ಬಲ), ಎರಡನೆಯದು ಹಣಕಾಸು ಬಲ ಮತ್ತು ಮೂರನೆಯದು ಬೌದ್ಧಿಕ ಶಕ್ತಿ. ಸಂಖ್ಯಾಬಲ ನೋಡುವುದಾದರೆ ನೀವು ಅಲ್ಪ ಸಂಖ್ಯಾತರು. ಅದೂ ಅಸಂಘಟಿತರಾಗಿದ್ದೀರಿ. ಅವರ ಒಳಜಾತಿಗಳೇ ಅವರನ್ನು ಒಟ್ಟಾಗಲು ಬಿಟ್ಟಿಲ್ಲ. ನಿಮ್ಮಲ್ಲಿ ಹಣಕಾಸಿನ ಬಲವಂತೂ ಏನೇನೂ ಇಲ್ಲ, ನಿಮ್ಮಲ್ಲಿ ಯಾವುದೇ ವಾಣಿಜ್ಯ, ವ್ಯಾಪಾರವಿಲ್ಲ, ಉದ್ಯೋಗವಿಲ್ಲ, ಭೂಮಿ ಇಲ್ಲ. ಮೇಲ್ಜಾತಿಯವರು ಬಿಸಾಕುವ ರೊಟ್ಟಿಯ ತುಣುಕೇ ನಿಮ್ಮ ಜೀವನಾಧಾರ. ಬೌದ್ಧಿಕ ಶಕ್ತಿಯ ಪ್ರಶ್ನೆ ಬಂದರೆ, ಇನ್ನೂ ಶೋಚನೀಯ ಸ್ಥಿತಿ. ಇಷ್ಟು ಕಾಲ ಅಪಮಾನದ ದಬ್ಬಾಳಿಕೆಯನ್ನು ವಿರೋಧವಿಲ್ಲದೆ ತಾಳ್ಮೆಯಿಂದ ಸಹಿಸಿಕೊಂಡ ಮನೋಭಾವವೇ ಪ್ರತೀಕಾರ ಮತ್ತು ಬಂಡಾಯದ ಪ್ರಜ್ಞೆಯನ್ನು ಕೊಂದು ಬಿಟ್ಟಿದೆ. ಆತ್ಮವಿಶ್ವಾಸದ ಚುರುಕುತನ ಮತ್ತು ಆಕಾಂಕ್ಷೆಗಳೇ ನಿಮ್ಮಿಂದ ಮಾಯವಾಗಿ ಬಿಟ್ಟಿದೆ. ನೀವಷ್ಟೇ ಅಲ್ಪಸಂಖ್ಯಾತರಲ್ಲ ಮುಸ್ಲಿಮರೂ ಅಲ್ಪಸಂಖ್ಯಾತರೇ. ಹೊಲೆಯ ಮಾದಿಗರಂತೆ ಹಳ್ಳಿಗಳಲ್ಲಿ ಮುಸ್ಲಿಮರ ಮನೆಗಳೂ ಕಡಿಮೆಯೇ. ಆದರೆ ಮುಸ್ಲೀಮರನ್ನು ಮುಟ್ಟುವ ಧೈರ್ಯ ಯಾರಿಗೂ ಬರುವುದಿಲ್ಲ. ನೀವು ಮಾತ್ರ ಸದಾಕಾಲ ದಬ್ಬಾಳಿಕೆಯ ಬಲಿಪಶುವಾಗುತ್ತೀರಿ. ಯಾಕೆ ಹೀಗೆ? ಹಳ್ಳಿಗಳಲ್ಲಿ ಮುಸ್ಲೀಮರದ್ದು ಎರಡೇ ಮನೆಯಿರಲಿ, ಅವರನ್ನು ಯಾರೂ ಮುಟ್ಟುವುದಿಲ್ಲ. ಅದೇ ನಿಮ್ಮದು ಹತ್ತು ಮನೆಯಿದ್ದರೂ ಇಡೀ ಹಳ್ಳಿಯೇ ನಿಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತದೆ. ಹೀಗೆ ಯಾಕಾಗುತ್ತದೆ? ತುಂಬಾ ಪ್ರಸ್ತುತವಾದ ಪ್ರಶ್ನೆಯಿದು. ಇದಕ್ಕೆ ನೀವು ಉತ್ತರವನ್ನು ಹುಡುಕಬೇಕು.

ತಹಶೀಲ್ದಾರರು, ಪೊಲೀಸರು ಸವರ್ಣೀಯರಾಗಿರುತ್ತಾರೆ ಮತ್ತು ಹಿಂದೂಗಳು, ದಲಿತರ ವ್ಯಾಜ್ಯಗಳಲ್ಲಿ ಅವರು ತಮ್ಮ ಕರ್ತವ್ಯಕ್ಕಿಂತ ತಮ್ಮ ಜಾತಿಗೆ ಹೆಚ್ಚು ನಿಷ್ಠರಾಗಿರುತ್ತಾರೆ. ನೀವು ನಿಸ್ಸಹಾಯಕರೆಂಬ ಕಾರಣದಿಂದಲೇ ಸವರ್ಣೀಯ ಹಿಂದೂಗಳು ನಿಮ್ಮ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗುತ್ತಾರೆ. ದಬ್ಬಾಳಿಕೆಯನ್ನು ಎದುರಿಸಲು ನೀವು ಹೊರಗಿನಿಂದ ಶಕ್ತಿ ಪಡೆಯಬೇಕು. ಈ ಶಕ್ತಿಯನ್ನು ಸಂಪಾದಿಸುವುದು ಹೇಗೆ ಎನ್ನುವುದೇ ಈಗ ಮುಖ್ಯ ಪ್ರಶ್ನೆ.

ಯಾವುದು ಮನುಷ್ಯರನ್ನು ಆಳುತ್ತದೋ ಅದೇ ಧರ್ಮ. ಇದು ಧರ್ಮದ ನಿಜ ವ್ಯಾಖ್ಯಾನ. ಹಿಂದೂ ಧರ್ಮದಲ್ಲಿ ವ್ಯಕ್ತಿಗೆ ಯಾವುದೇ ಸ್ಥಾನವಿಲ್ಲ. ಹಿಂದೂ ಧರ್ಮದ ರಚನೆಗೆ ವರ್ಗ ಕಲ್ಪನೆಯೇ ಆಧಾರ. ಒಬ್ಬ ವ್ಯಕ್ತಿಯ ಉನ್ನತಿಗೆ ಮೂರು ಅಂಶಗಳು ಬೇಕು. ಅವು ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ್ಯ. ಈ ಮೂರರಲ್ಲಿ ಯಾವ ಅಂಶವೂ ಹಿಂದೂ ಧರ್ಮದಲ್ಲಿ ಇರುವುದಿಲ್ಲ. ಮನುಕುಲದ ಇತಿಹಾಸಲ್ಲೇ ಅಸ್ಪಶ್ಯತೆಯನ್ನು ಹೊರಿಸುವಂತಹ ಉಗ್ರ ಅಸಮಾನತೆ ಇನ್ನೆಲ್ಲೂ ಕಂಡುಬರುವುದಿಲ್ಲ. ನಡೆ ಮತ್ತು ನುಡಿ ಎರಡು ವಿರುದ್ಧ ಧ್ರುವಗಳಾಗಿರುವಂತಹ ಶೂದ್ರ ಜನಾಂಗಗಳೊಡನೆ ಹಿಂದೂಗಳನ್ನು ಜೊತೆಗೂಡಿ ನಿಲ್ಲಿಸಬಹುದು. ನಾವು ಹಿಂದೂಗಳ ಕಣ್ಣಲ್ಲಿ ಕನಿಷ್ಠ ಜನರಲ್ಲ, ಹಿಂದೂಗಳು ನಮ್ಮನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಇಡೀ ಇಂಡಿಯಾದಲ್ಲೇ ಕನಿಷ್ಠವಾಗಿ ಬಿಟ್ಟಿದ್ದೇವೆ. ಹಿಂದೂ ಧರ್ಮದ ಸಂಕೋಲೆಗಳನ್ನು ಕಿತ್ತೆಸೆದು, ನಿಮ್ಮನ್ನು ಬಂಧಿಸಿರುವ ಹಿಂದೂ ಧರ್ಮದ ಕಟ್ಟುಗಳನ್ನು ಕಳಚಿ ಒಗೆಯುವುದೇ ಮುಖ್ಯ.

ಯಾವುದು ಮನುಷ್ಯರನ್ನು ಆಳುತ್ತದೋ ಅದೇ ಧರ್ಮ. ಇದು ಧರ್ಮದ ನಿಜ ವ್ಯಾಖ್ಯಾನ. ಹಿಂದೂ ಧರ್ಮದಲ್ಲಿ ವ್ಯಕ್ತಿಗೆ ಯಾವುದೇ ಸ್ಥಾನವಿಲ್ಲ. ಹಿಂದೂ ಧರ್ಮದ ರಚನೆಗೆ ವರ್ಗ ಕಲ್ಪನೆಯೇ ಆಧಾರ. ಒಬ್ಬ ವ್ಯಕ್ತಿಯ ಉನ್ನತಿಗೆ ಮೂರು ಅಂಶಗಳು ಬೇಕು. ಅವು ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ್ಯ. ಈ ಮೂರರಲ್ಲಿ ಯಾವ ಅಂಶವೂ ಹಿಂದೂ ಧರ್ಮದಲ್ಲಿ ಇರುವುದಿಲ್ಲ. ಮನುಕುಲದ ಇತಿಹಾಸಲ್ಲೇ ಅಸ್ಪಶ್ಯತೆಯನ್ನು ಹೊರಿಸುವಂತಹ ಉಗ್ರ ಅಸಮಾನತೆ ಇನ್ನೆಲ್ಲೂ ಕಂಡುಬರುವುದಿಲ್ಲ. ನಡೆ ಮತ್ತು ನುಡಿ ಎರಡು ವಿರುದ್ಧ ಧ್ರುವಗಳಾಗಿರುವಂತಹ ಶೂದ್ರ ಜನಾಂಗಗಳೊಡನೆ ಹಿಂದೂಗಳನ್ನು ಜೊತೆಗೂಡಿ ನಿಲ್ಲಿಸಬಹುದು. ನಾವು ಹಿಂದೂಗಳ ಕಣ್ಣಲ್ಲಿ ಕನಿಷ್ಠ ಜನರಲ್ಲ, ಹಿಂದೂಗಳು ನಮ್ಮನ್ನು ನಡೆಸಿಕೊಳ್ಳುವ ರೀತಿಯಿಂದಾಗಿ ಇಡೀ ಇಂಡಿಯಾದಲ್ಲೇ ಕನಿಷ್ಠವಾಗಿ ಬಿಟ್ಟಿದ್ದೇವೆ. ಹಿಂದೂ ಧರ್ಮದ ಸಂಕೋಲೆಗಳನ್ನು ಕಿತ್ತೆಸೆದು, ನಿಮ್ಮನ್ನು ಬಂಧಿಸಿರುವ ಹಿಂದೂ ಧರ್ಮದ ಕಟ್ಟುಗಳನ್ನು ಕಳಚಿ ಒಗೆಯುವುದೇ ಮುಖ್ಯ.

ರುಚಿ ಬದಲಾಗಬಹುದು ಆದರೆ ವಿಷವೆಂದೂ ಅಮೃತವಾಗಲಾರದು. ಜಾತಿನಾಶ ಮಾಡುವುದು ಒಂದೇ, ವಿಷವನ್ನು ಅಮೃತವನ್ನಾಗಿ ಮಾಡುವ ಮಾತೂ ಒಂದೇ. ಆದ್ದರಿಂದ ಅಸ್ಪಶ್ಯತೆ ನಾಶವಾಗಬೇಕಾದರೆ ಧರ್ಮ ಪರಿವರ್ತನೆಯೊಂದೇ ಮದ್ದು. ನೀವು ಮತಾಂತರಗೊಂಡರೆ ಒಂದು ಸಮಾಜ ಒಡೆದು ಹೋಯಿತೆಂದು ಯಾರೂ ಹೇಳಲು ಸಾಧ್ಯವಿಲ್ಲ. ನೀವು ಈಗಿನಂತೆಯೇ ಆಗಲೂ ಪ್ರತ್ಯೇಕವಾಗಿರುತ್ತೀರಿ. ಧರ್ಮ ಬದಲಾವಣೆಯೆಂಬುವುದು ಹೆಸರಿನ ಬದಲಾವಣೆಯ ಹಾಗೆ. ಧರ್ಮ ಬದಲಾವಣೆ ಮತ್ತು ಹೆಸರಿನ ಬದಲಾವಣೆ ಮಾಡಿಕೊಂಡರೆ ನಿಮಗೆ ಅನುಕೂಲವಿದೆ. ಪ್ರಾಚೀನ ಆರ್ಯ ಧರ್ಮಕ್ಕೆ ವೈದಿಕ ಧರ್ಮವೆಂಬ ಹೆಸರಿತ್ತು. ಈ ಧರ್ಮದ ಪ್ರಮುಖ ಲಕ್ಷಣಗಳು ಮೂರು; ಗೋಭಕ್ಷಣೆ, ಮದ್ಯಪಾನ ಮತ್ತು ಭೋಗವಿಲಾಸ.

ಹಿಂದೂ ಧರ್ಮ ನಮ್ಮ ಸನಾತನ ಧರ್ಮ ಅಲ್ಲ. ಅದು ನಮ್ಮ ಮೇಲೆ ಹೇರಿದ ಗುಲಾಮಗಿರಿ. ಹಾಗೂ ಹಿಂದೂ ಸಮಾಜದ ಸುಧಾರಣೆ ನಮ್ಮ ಗುರಿಯೂ ಅಲ್ಲ, ನಮ್ಮ ಕಾರ್ಯಕ್ಷೇತ್ರವೂ ಅಲ್ಲ. ಸ್ವಾತಂತ್ರ್ಯ ಗಳಿಕೆಯೇ ನಮ್ಮ ಗುರಿ. ಸಮಾನತೆಯ ಸಾಧನೆಗೆ ಎರಡು ಮಾರ್ಗಗಳಿವೆ. ಒಂದು ಹಿಂದೂವಾಗಿಯೇ ಉಳಿದುಕೊಳ್ಳುವುದು, ಎರಡನೆಯದು ಮತಾಂತರದ ಮೂಲಕ. ಹಿಂದೂ ಚೌಕಟ್ಟಿನಲ್ಲಿ ಉಳಿದೇ ಸಮಾನತೆ ಸಾಧಿಸಬೇಕಾದರೆ ಸ್ಪಶ್ಯ-ಅಸ್ಪಶ್ಯ ಪ್ರಜ್ಞೆ ನಿವಾರಣೆ ಒಂದಾದರೆ ಸಾಲದು. ಅಂತರ್‌ಜಾತಿ ವಿವಾಹ, ಸಹ-ಭೋಜನ ಮತ್ತು ಮದುವೆಗಳು ನಡೆದಾಗಲಷ್ಟೇ ಇದು ಸಾಧ್ಯ. ಅಂದರೆ ಚಾತುರ್ವರ್ಣ ಪದ್ಧತಿ ನಿರ್ಮೂಲ ಮಾಡಿ ಬ್ರಾಹ್ಮಣ ಧರ್ಮವನ್ನು ಬುಡಮೇಲು ಮಾಡಬೇಕು ಎಂದರ್ಥ. ಇದು ಸಾಧ್ಯವೇ!? ಇಲ್ಲವಾದರೆ ಹಿಂದೂ ಧರ್ಮದಲ್ಲೇ ಉಳಿದುಕೊಂಡು ಸಮಾನತೆಯನ್ನು ನಿರೀಕ್ಷಿಸುವುದು ವಿವೇಕ ಅನ್ನಿಸಿಕೊಳ್ಳುವುದೇ? ಮತ್ತು ಸಮಾನತೆ ತರುವ ಪ್ರಯತ್ನಗಳಲ್ಲಿ ನೀವು ಜಯಗಳಿಸುವುದು ಸಾಧ್ಯವೇ? ಸಾಧ್ಯ ಇಲ್ಲ. ಇದಕ್ಕಿಂತ ಮತಾಂತರದ ಹಾದಿಯೇ ಎಷ್ಟೋ ಸರಳವಾದದ್ದು.

ಹಿಂದೂ ಸಮಾಜವು ಮುಸ್ಲಿಮ್ ಹಾಗೂ ಕ್ರೈಸ್ತರನ್ನು ಸಮಾನರಂತೆ ನಡೆಸಿಕೊಳ್ಳುತ್ತದೆ. ಆದ್ದರಿಂದ ಮತಾಂತರದಿಂದ ಸಾಮಾಜಿಕ ಸಮಾನತೆ ಸಾಧ್ಯವೆಂದು ಸ್ಪಷ್ಟವಾಗುತ್ತದೆ. ಮತಾಂತರಗೊಂಡ ಕೂಡಲೇ ವೈಷಮ್ಯದ ಬೇರುಗಳೇ ನಾಶವಾಗುತ್ತದೆ. ಇಂಡಿಯಾದ ಇಂದಿನ ಬಹುತೇಕ ಸಿಖ್ಖರು, ಮುಸ್ಲಿಮರು ಮತ್ತು ಕ್ರೈಸ್ತರು ಹಿಂದೆ ಹಿಂದೂಗಳೇ ಆಗಿದ್ದರು. ಅದರಲ್ಲೂ ಬಹುತೇಕರು ಶೂದ್ರರು ಮತ್ತು ಅಸ್ಪಶ್ಯರು. ಇಂಡಿಯಾಗೆ ಸ್ವರಾಜ್ಯ ಎಷ್ಟು ಅಗತ್ಯವೋ, ದಲಿತರಿಗೆ ಮತಾಂತರ ಅಷ್ಟೇ ಅಗತ್ಯ. ಅಸ್ಪಶ್ಯತೆ ನಿಮ್ಮ ಪ್ರಗತಿಯ ಹಾದಿಯಲ್ಲಿರುವ ಶಾಶ್ವತ ಕಂಟಕ. ಅದನ್ನು ತೆಗೆದು ಹಾಕದೆ ನಿಮ್ಮ ಹಾದಿ ಸುರಕ್ಷಿತವಾಗಲಾರದು. ಮತಾಂತರವಿಲ್ಲದೆ, ಈ ಕಂಟಕ ನಿವಾರಣೆಯೂ ಆಗದು. ನಿಮ್ಮ ವಿದ್ಯಾವಂತಿಕೆಗೆ ಬೆಲೆ ಸಿಕ್ಕಬೇಕೆಂದಿದ್ದರೆ, ನಿಮ್ಮ ಶಿಕ್ಷಣದಿಂದ ಏನಾದರೂ ಉಪಯೋಗವಾಗಬೇಕು ಎಂಬ ಗಾಢ ಆಕಾಂಕ್ಷೆಯಿದ್ದರೆ, ನೀವು ಅಸ್ಪಶ್ಯತೆಯ ಸಂಕೋಲೆಯನ್ನು ಕಳಚಿ ಒಗೆಯಲೇ ಬೇಕು. ಅಂದರೆ ನೀವು ಧರ್ಮವನ್ನು ಬದಲಾಯಿಸಲೇ ಬೇಕು. ಇನ್ನು ರಾಜಕೀಯ ಹಕ್ಕುಗಳ ಕುರಿತಾಗಿ - ರಾಜಕೀಯ ಸವಲತ್ತುಗಳನ್ನು ಅವಲಂಭಿಸಿ ನಿಲ್ಲುವುದು ಸರಿಯಲ್ಲ. ಕೋಮುವಾರು ಪ್ರಾತಿನಿಧ್ಯದ ಪ್ರಕಾರ ನಮ್ಮ ರಾಜಕೀಯ ಹಕ್ಕುಗಳಿಗೆ 20 ವರ್ಷ ಕಾಲಮಿತಿ. ಪೂನಾ ಒಡಂಬಡಿಕೆಯಲ್ಲಿ ಇಂತಹ ಕಾಲಮಿತಿ ಏನೂ ನಿಗದಿಯಾಗದಿದ್ದರೂ ಇವು ಶಾಶ್ವತವೆಂದು ಯಾರೂ ಹೇಳಲಾರರು. ಈ ಸವಲತ್ತುಗಳು ರದ್ದಾದ ದಿನ ನಾವು ಸಾಮಾಜಿಕ ಶಕ್ತಿಯನ್ನೇ ಅವಲಂಬಿಸಬೇಕಾಗುತ್ತದೆ. ನೀವು ಎಲ್ಲಿ ಹೋದರೂ ನಿಮ್ಮ ಸವಲತ್ತುಗಳು ನಿಮ್ಮೊಡನೆ ಬರುತ್ತದೆ. ಧರ್ಮ ಇರುವುದು ಮನುಷ್ಯನಿಗಾಗಿ, ಮನುಷ್ಯನಿರುವುದು ಧರ್ಮಕ್ಕಲ್ಲ.’’ ಎನ್ನುತ್ತಾರೆ.

‘‘ನಾನು ಹಿಂದೂ ಆಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ 1935 ಯವೋಳ ಸಮ್ಮೇಳನದಲ್ಲಿ ಘೋಷಿಸಿರುವಂತೆ 1956 ಅಕ್ಟೋಬರ್ 14ರಂದು ನಾಗಪುರದ ಚೈತ್ಯಭೂಮಿಯಲ್ಲಿ 5 ಲಕ್ಷ ಅನುಯಾಯಿಗಳೊಂದಿಗೆ ಶ್ರೀಲಂಕಾದ ಮಹಸ್ತವೀರ್ ಬಿಕ್ಕು ಚಂದ್ರಮಣಿಯವರಿಂದ ಅಂಬೇಡ್ಕರ್ ಪತ್ನಿ ಸಮೇತರಾಗಿ ಬುದ್ಧ ದಮ್ಮ ದೀಕ್ಷೆ ಸ್ವೀಕರಿಸಿರುವರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಧಮ್ಮ ಸ್ವೀಕರಿಸಿರುವುದು ಇಡೀ ವಿಶ್ವದಲ್ಲೇ ಪ್ರಥಮ.

ಬಾಬಾ ಸಾಹೇಬ್ ಅಂಬೇಡ್ಕರ್ ಬುದ್ಧ ದಮ್ಮ ಸ್ವೀಕರಿಸಿ 70 ವರ್ಷ ಆಗುತ್ತಾ ಬಂದರೂ ದಲಿತರು ಕೇವಲ ಮೀಸಲಾತಿ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಾರೆ ವಿನಃ ಬೌದ್ಧ ದಮ್ಮವನ್ನು ಅರ್ಥೈಸಿಕೊಂಡು ಸ್ವೀಕರಿಸಿ ಸ್ವಾಭಿಮಾನ, ಆತ್ಮಗೌರವದಿಂದ ಬದುಕುವ ಬಗ್ಗೆ ಚಿಂತಿಸುತ್ತಿಲ್ಲ. ಹಾಗೆಯೇ ದಲಿತ ಸಂಘಟನೆಗಳು ಅಂಬೇಡ್ಕರ್ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸದೆ, ರಾಜಕಾರಣಿಗಳನ್ನು, ಪ್ರಭಾವಿ ವ್ಯಕ್ತಿಗಳನ್ನು ಬರಮಾಡಿಸಿಕೊಂಡು ಓಲೈಕೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಇನ್ನಾದರೂ ಆತ್ಮಾವಲೋಕನ ಮಾಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ. ದೇವದಾಸ್, ಬಜಪೆ

contributor

Similar News