×
Ad

ಬಿಸಿಲೂರು ರಾಯಚೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ

Update: 2025-03-12 10:15 IST

ರಾಯಚೂರು : ಬಿಸಿಲೂರು, ಭತ್ತದ ನಾಡು ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಜಿಲ್ಲಾಡಳಿತ ಸಮಸ್ಯೆ ಎದುರಿಸಲು ಸಿದ್ಧವಾಗಿ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಬೇಸಿಗೆ ಆರಂಭವಾಗಿದ್ದು ನೆತ್ತಿಯ ಮೇಲೆ ಸೂರ್ಯ ತಾಂಡವವಾಡುತ್ತಿದ್ದು, ಪ್ರತೀ ವರ್ಷ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಇನ್ನೂ ಅನೇಕ ಹಳ್ಳಿಗಳಲ್ಲಿ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಸಂಚರಿಸಿ ಹರಸಾಹಸ ಪಡುವ ಸ್ಥಿತಿ ಇನ್ನೂ ಬದಲಾಗಿಲ್ಲ.

ಜಿಲ್ಲೆಯಲ್ಲಿ ಒಂದು ಕಡೆ ಕೃಷ್ಣಾ ಮತ್ತೊಂದೆಡೆ ತುಂಗಭದ್ರಾ ನದಿಗಳು ಹರಿಯುವ ಕಾರಣ ದೊಅಬ್ ಪ್ರದೇಶ ಎಂದು ರಾಯಚೂರಿಗೆ ಮತ್ತೊಂದು ಹೆಸರಿದೆ. ಆದರೆ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನುವುದು ಸತ್ಯ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉದ್ಭವಿಸುತ್ತಿದ್ದು ಅನೇಕ ಗ್ರಾಮಗಳಲ್ಲಿ ಪರದಾಡುವಂತಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಜೀ ವನ್ ಮಿಷನ್, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, 24x7 ಕುಡಿಯುವ ನೀರಿನ ಯೋಜನೆ ಸೇರಿ ಅನೇಕ ಯೋಜನೆಗಳಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ನದಿಗಳ ಮೂಲಕ ಪೈಪ್ ಲೈನ್ ಸಂಪರ್ಕ ಕಲ್ಪಿಸಿ ಮನೆಮನೆಗೆ ನಳದ ಮೂಲಕ 24 ತಾಸು ಕುಡಿಯುವ ನೀರು ಪೂರೈಸಲು ಮುಂಬೈ ಮೂಲದ ಗುತ್ತಿಗೆ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಅನೇಕ ವರ್ಷಗಳಾದರೂ ಶೇಕಡಾ ಅರ್ಧದಷ್ಟು ಕಾಮಗಾರಿ ಮಾಡದೇ ಮಕಾಡೆ ಮಲಗಿದೆ. ಅನೇಕ ಗ್ರಾಮಗಳಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿಯೇ ಮನೆಮನೆಗೆ ನಳ ಅದಕ್ಕೆ ಮೀಟರ್ ಅಳವಡಿಸಿ ತುಕ್ಕು ಹಿಡಿದರೂ ಇದುವರೆಗೆ ಹನಿ ನೀರು ಹರಿದಿಲ್ಲ ಎನ್ನುವುದು ನಾಗರಿಕರ ಅಳಲಾಗಿದೆ.

ಕುಡಿಯುವ ನೀರಿಗೆ ಹಾಹಾಕಾರ-ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ: ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ವಾರ್ಡ್ ನಂ.2ರ ಕೃಷ್ಣಾನಗರ ಬಡಾವಣೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಹನಿ ನೀರಿಗಾಗಿ ಮಹಿಳೆಯರು, ಮಕ್ಕಳು ಎಲ್ಲ ಕೆಲಸ ಬಿಟ್ಟು ನಳದ ಮುಂದೆ ಬಿಂದಿಗೆ ಹಿಡಿದು ನೂಕುನುಗ್ಗಲು ಮಾಡುತ್ತಿದ್ದ ದೃಶ್ಯಗಳು ಬೆಳಿಗ್ಗೆ ಕಂಡು ಬರುತ್ತಿವೆ.

ಕೃಷ್ಣಾನಗರ ಬಡಾವಣೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿದ್ದು, ನಿವಾಸಿಗಳು ನಿತ್ಯ ಕುಡಿಯುವ ನೀರಿಗಾಗಿ ಸುಮಾರು 02 ಕಿ.ಮೀ.ದೂರ ಬೇರೊಂದು ವಾರ್ಡ್‌ಗೆ ತೆರಳಿ ಕುಡಿವ ನೀರು ತಂದುಕೊಳ್ಳಬೇಕಾದಂತಹ ಅವ್ಯವಸ್ಥೆ ಇದೆ. ದ್ವಿಚಕ್ರ ವಾಹನಗಳು ಇದ್ದರೆ ಮಾತ್ರ ಕುಡಿಯುವ ನೀರು ಸಿಗುತ್ತವೆ. ಇಲ್ಲದಿದ್ದರೆ ಹನಿ ನೀರಿಗೂ ಪರದಾಡಬೇಕಾದ ದುಸ್ಥಿತಿಯಿದೆ ಎಂಬುದು ಆವೇದನೆಯಾಗಿದೆ.

ನಿರ್ಲಕ್ಷ್ಯ :

ಕೃಷ್ಣಾನಗರ ಬಡಾವಣೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಈ ಹಿಂದೆ ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕನಂತೆ ಪಂಚಾಯತ್ ಆಡಳಿತ ಮಂಡಳಿ ಕೈ ಕಟ್ಟಿ ಕುಳಿತಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.

ಪೈಪ್ ಲೈನ್ ಕಬಳಿಕೆ :

ಗ್ರಾಮದಲ್ಲಿ ಈ ಹಿಂದೆ ಓವರ್ ಟ್ಯಾಂಕ್ ನಿರ್ಮಿಸಿ ಕೃಷ್ಣಾನಗರಕ್ಕೆ ಕುಡಿಯುವ ಸರಬರಾಜು ಮಾಡಲು ಹಾಕಲಾಗಿದ್ದ 4 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಪೈಪ್ ಲೈನ್‌ಗೆ, ಬೇರೆ ವಾರ್ಡಿನ ನಿವಾಸಿಗಳು ಮನೆ ಮುಂದೆ ಹಾದು-ಹೋಗಿರುವ ಪೈಪ್‌ಲೈನ್ ಒಡೆದು ಅಕ್ರಮವಾಗಿ ನೀರು ಕಬಳಿಕೆ ಮಾಡಿಕೊಂಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಕೃಷ್ಣಾನಗರ ಬಡಾವಣೆಯಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆಯನ್ನು ಇದುವರೆಗೆ ಯಾರು ಪರಿಹರಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇತ್ತಕಡೇ ಗಮನಹರಿಸಿ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

ರಾಯಚೂರು ತಾಲೂಕಿನ ಕಾಡ್ಲೂರು, ಪೂರತಿಪ್ಲಿ, ಎಲ್.ಕೆ.ದೊಡ್ಡಿ, ಜೆ.ಮಲ್ಲಾಪೂರು, ಜೇಗರಕಲ್, ಮರ್ಚೆಟ್ಹಾಳ, ಬಿಚ್ಚಲಿ, ಸಂಕನೂರು, ಕುರುಬದೊಡ್ಡ, ಮಾನ್ವಿ ತಾಲೂಕಿನ ಸಂಗಾಪುರ, ಕರಡಿಗುಡ್ಡ, ಸಿಕ್ಕಲ್, ಪೋತ್ನಾಳ, ಖರಾಬದಿನ್ನಿ, ನೀರಮಾನ್ವಿ, ದೇವದುರ್ಗ ತಾಲೂಕಿನ ಹೇಮನಾಳ, ಜೇರಬಂಡಿ, ಹೊಸೂರು ಸಿದ್ದಾಪುರ, ವಂದಲಿ, ಕರಿಗುಡ್ಡ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಗಳು, ದೊಡ್ಡಿ ಹಾಗೂ ತಾಂಡಗಳನ್ನು ಜಿಲ್ಲಾಡಳಿತ ಗುರುತಿಸಿದೆ.

ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳು :  

ದೇವದುರ್ಗ ತಾಲೂಕು- 69

ಲಿಂಗಸುಗೂರು ತಾಲೂಕು-29

ರಾಯಚೂರು ತಾಲೂಕು-17

ಸಿಂಧನೂರು-19

ಮಸ್ಕಿ-55

ಸಿರವಾರ-56

ಬೋರ್‌ವೆಲ್ ಕೊರೆತ :

ದೇವದುರ್ಗ-71

ಸಿಂಧನೂರು-7

ಮಾನ್ವಿ-7

ಮಸ್ಕಿ -29

ಕುಡಿಯುವ ನೀರು ತಂದುಕೊಳ್ಳಲು ನಿತ್ಯ ಬೇರೆ ವಾರ್ಡ್‌ಗಳಿಗೆ ದ್ವಿಚಕ್ರ ವಾಹನದ ಮೂಲಕ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಗ್ರಾಮದಲ್ಲಿ ಒಂದಿನ ಬಿಟ್ಟು ಒಂದಿನ ನೀರು ಪೂರೈಸಲಾಗುತ್ತಿದ್ದು ಇದರಿಂದಾಗಿ ಕೃಷ್ಣಾನಗರ ನಿವಾಸಿಗಳಿಗೆ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ.

-ಶಿವಪ್ಪ ನಾಯಕ, ಕಲ್ಲೂರು ಗ್ರಾಮಸ್ಥ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ್ದು, ಆಯಾ ನೋಡಲ್ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಜಿಲ್ಲಾಧಿಕಾರಿಯ ಅನುಮತಿ ಪಡೆಯದೇ ರಜೆ ತೆಗೆದುಕೊಳ್ಳಬಾರದು ಮತ್ತು ಕೇಂದ್ರ ಸ್ಥಾನ ಬಿಡಬಾರದು. ಒಂದು ವೇಳೆ ಕರ್ತವ್ಯದಲ್ಲಿ ಬೇಜವಾಬ್ದಾರಿ ವಹಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.

-ನಿತಿಶ್ ಕೆ., ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಬೋರ್ ವೆಲ್ ಅವಲಂಬಿಸಿದ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತಿದ್ದು, ಇದರಿಂದಾಗಿ 3-4 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರದ ಅನತಿ ದೂರದ ಗ್ರಾಮಗಳಲ್ಲಿಯೇ 2-3 ಕಿ.ಮೀ ದೂರದಿಂದ ನೀರು ತರಬೇಕಿದೆ. ಅನೇಕ ಮಹಿಳೆಯರು ಕೆಲಸ ಕಾರ್ಯಗಳನ್ನು ಬಿಟ್ಟು ನೀರು ತುಂಬಬೇಕಿದೆ.

-ಸಾದಿಕ್ ಖಾನ್ ಯರಗೇರಾ, ಯುವ ಹೋರಾಟಗಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News