×
Ad

ಕಾಡಿನಲ್ಲಿದ್ದ ಆನೆಗಳು ಮನೆ ಬಾಗಿಲಿಗೆ | ಮಲೆನಾಡಿನಲ್ಲಿ ನಿಲ್ಲದ ಉಪಟಳ; ಶಾಶ್ವತ ಪರಿಹಾರ ಮರೀಚಿಕೆ

Update: 2025-11-03 08:27 IST

ಚಿಕ್ಕಮಗಳೂರು, ನ.2: ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆಗಳು ರಕ್ತಸಿಕ್ತ ಹೆಜ್ಜೆ ಗುರುತುಗಳನ್ನು ಮೂಡಿಸಿ ಜನರಲ್ಲಿ ಜೀವ ಭಯವನ್ನು ಹುಟ್ಟಿಸುತ್ತಿವೆ. ಕಾಡಿನಲ್ಲಿದ್ದ ಆನೆಗಳು ಮನೆ ಬಾಗಿಲಿಗೆ ಬಂದು ನಿಂತಿವೆ. ಕಾಡಾನೆಗಳ ದಾಳಿಗೆ ಬಡ ಜೀವಗಳು ಬಲಿಯಾಗುತ್ತಿವೆ.

ಮಲೆನಾಡಿನಲ್ಲಿ ಆರು ತಿಂಗಳಿಗೆ, ಮೂರು ತಿಂಗಳಿಗೊಮ್ಮೆ ಕಾಡಾನೆ ದಾಳಿಗೆ ಸಿಲುಕಿ ಜೀವ ಹಾನಿಯಾಗುತ್ತಿವೆ. ಕುಟುಂಬಗಳು ಅನಾಥವಾಗುತ್ತಿವೆ. ಆದರೆ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.

ಶುಕ್ರವಾರ ಮುಂಜಾನೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಪಂ ಸಮೀಪದ ಮೂಡುಬ ಗ್ರಾಮದ ಎಲ್ಸಾರ್‌ನಲ್ಲಿ ಕೊಟ್ಟಿಗೆಗೆ ಸೊಪ್ಪು ತರಲು ತೆರಳಿದ್ದ ಹರೀಶ್ ಶೆಟ್ಟಿ ಮತ್ತು ಉಮೇಶ್‌ಗೌಡ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಮಲೆನಾಡಿಗರ ಆಕ್ರೋಶ ಕಟ್ಟೆ ಒಡೆದಿದೆ. ಹೋರಾಟದ ಕಿಚ್ಚುಹತ್ತಿದೆ. ಇಂತಹ ಹೋರಾಟ ಇದೇ ಮೊದಲಲ್ಲ, ಮೂಡಿಗೆರೆ ತಾಲೂಕಿನ ಶೋಭಾ ಎಂಬ ಮಹಿಳೆ ಮೃತಪಟ್ಟಾಗ ಆಕ್ರೋಶಭರಿತ ಜನರು ಅಂದಿನ ಶಾಸಕರ ಮೇಲೆ ಹಲ್ಲೆ ನಡೆಸಿದ್ದರು. ಬಾಳೆಹೊನ್ನೂರು ಸುಬ್ರಾಯಗೌಡ ಆನೆ ದಾಳಿಯಿಂದ ಮೃತಪಟ್ಟಾ ಗ ದೊಡ್ಡ ಹೋರಾಟ ರೂಪಿಸಲಾಗಿತ್ತು. ಹೋರಾಟಕ್ಕೆ ಬೆದರಿದ ಸರಕಾರ ಆನೆ ಹಿಡಿಯಲು ಮುಂದಾಗಿತ್ತು. ಆನೆ ಹಿಡಿದು ಅರಣ್ಯ ಇಲಾಖೆ ಸುಮ್ಮನಾಗಿತ್ತು. ಸದ್ಯ ಮತ್ತೆ ಮಲೆನಾಡಿನಲ್ಲಿ ಆನೆಗಳು ಘರ್ಜಿಸಿವೆ. ರಕ್ತಸಿಕ್ತ ಹೆಜ್ಜೆಗುರುತುಗಳನ್ನು ಮತ್ತೆ ಮೂಡಿಸಿವೆ. ಆಕ್ರೋಶ ಭರಿತ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.

ಮನೆ ಬಾಗಿಲಿಗೆ ಆನೆಗಳು :

ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಕಾಡಾನೆಗಳದ್ದೇ ಸದ್ದು, ಜೀವ ಹಾನಿ ಜತೆಗೆ ಬೆಳೆಹಾನಿ ಮಾಡುತ್ತಿವೆ. ಕಾಡಿನಲ್ಲಿ ಸೌಮ್ಯವಾಗಿದ್ದ ಆನೆಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಅಲ್ಲೋ ಇಲ್ಲೋ ಕಾಣಿಸಿಕೊಳ್ಳುತ್ತಿದ್ದ ಆನೆಗಳು ಹಗಲು ರಾತ್ರಿ ಎನ್ನದೆ ಮನೆ ಬಾಗಿಲಿಗೆ ಬರುತ್ತಿವೆ. ಪ್ರತಿನಿತ್ಯ ಇಲ್ಲಿನ ಜನರು ಜೀವಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಕಾಡಾನೆಗಳ ದಾಳಿಯನ್ನು ನಿಯಂತ್ರಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವುದು ಇಲ್ಲಿನ ಜನರ ಬಹುದಿನಗಳ ಬೇಡಿಕೆ. ಆದರೆ, ಸರಕಾರ ಮಾತ್ರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಜನರಿಗೆ ಉಪಟಳ ನೀಡುವ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು, ಆನೆ ಕಾರಿಡಾರ್, ಆನೆ ಕಂದಕ, ಸೋಲಾರ್ ಬೇಲಿ, ಆನೆ ಕಾರ್ಯಪಡೆ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಸರಕಾರ ಆನೆ ದಾಳಿಯಾದಾಗ ಪರಿಹಾರ ನೀಡಿ ಸುಮ್ಮನಾಗುತ್ತಿದೆ. ಕಾರ್ಯಾ ಚರಣೆ ನಡೆಸಿ ಜನರ ಕಣ್ಣೊರೆಸುತ್ತಿದೆ. ಆದರೆ, ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಇಲ್ಲಿನ ಜನರ ಆರೋಪವಾಗಿದೆ.

ಹೆಚ್ಚಾದ ಆನೆ ಸಂತತಿ ಆಹಾರ ಕೊರತೆ :

ಆನೆಗಳ ಸಂತತಿ ಈ ಹಿಂದಿಗಿಂತ ಈಗ ಹೆಚ್ಚಾಗಿದೆ. ಭದ್ರಾ ಹಿನ್ನೀರು, ಮುತ್ತೋಡಿ, ಭದ್ರಾ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇಲ್ಲಿ ನೆಲೆ ನಿಂತಿರುವ ಆನೆಗಳು ಕಾಡನ್ನು ತೊರೆದು ನಾಡಿಗೆ ಆಗಮಿಸುತ್ತಿವೆ. ಕಾಫಿತೋಟ, ದಟ್ಟಾರಣ್ಯವನ್ನು ಆವಾಸಸ್ಥಾನ ಮಾಡಿಕೊಂಡಿವೆ. ಆನೆ ಸಂತತಿ ಹೆಚ್ಚಳವಾಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಆಹಾರದ ಕೊರತೆ ಎದುರಾಗುತ್ತಿದೆ. ಕಾಡಂಚಿನ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದಿರುವ ಬೆಳೆಗಳನ್ನು ಅರಸಿ ನಾಡಿಗೆ ಲಗ್ಗೆ ಇಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಮಲೆನಾಡಿನಲ್ಲಿ ಮಿತಿಮೀರಿದೆ. ಆನೆಗಳಿಗೆ ಅಂಕುಶ ಹಾಕಲು ಸರಕಾರ ಮತ್ತು ಅರಣ್ಯ ಇಲಾಖೆ ಮುಂದಾಗಬೇಕಿದೆ. ಬಡ ಜೀವಗಳನ್ನು ಉಳಿಸಬೇಕಿದೆ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.

2018ರಿಂದ 22 ಜನ ಬಲಿ :

ಕಾಡಾನೆಗಳ ದಾಳಿಗೆ 2018ರಿಂದ 22 ಜನ ಬಲಿಯಾಗಿದ್ದಾರೆ. ಎಚ್.ಎಂ.ಸುನೀಲ್, ಕುಮಾರ ನಾಯ್ಕ್, ಪ್ರೇಮನಾಥ್, ಜಯಮ್ಮ, ರಂಗಯ್ಯ, ವಿ.ಪುಟ್ಟರಾಜ್, ಸರೋಜಬಾಯಿ, ಆನಂದ ದೇವಾಡಿಗ, ಅರ್ಜುನ್, ಶೋಭಾ, ಕಿನ್ನ, ಕುಮಾರಿ, ಕಾರ್ತಿಕ್ ಗೌಡ, ಶ್ರೀಧರ್, ಆನಂದ್, ಉಮೇಶ್, ಎಲಿಯಾಸ್, ವೆಂಕಟೇಶ್, ಅನಿತಾ, ಸುಬ್ಬೇಗೌಡ, ಹರೀಶ್ ಶೆಟ್ಟಿ, ಉಮೇಶ್ ಗೌಡ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.

ಘಟನೆ ಮರುಕಳಿಸದಂತೆ ಆನೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ ಸಚಿವರ ಬಳಿ ಸಮಸ್ಯೆಯ ಗಂಭೀರತೆ ಬಗ್ಗೆ ಚರ್ಚಿಸಲಾಗುತ್ತದೆ. ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ ನೀಡುವ ಪರಿಹಾರವಲ್ಲದೆ, ವೈಯಕ್ತಿಕ ಪರಿಹಾರವನ್ನು ನೀಡುತ್ತೇನೆ.

-ಟಿ.ಡಿ.ರಾಜೇಗೌಡ, ಶಾಸಕ, ಶೃಂಗೇರಿ.

ಇಂದಿನಿಂದ ಕಾರ್ಯಾಚರಣೆ :

ಚಿಕ್ಕಮಗಳೂರು, ನ.2: ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಮನೆ ಗ್ರಾಮದಲ್ಲಿ ಶುಕ್ರವಾರ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿದ್ದು, ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಆನೆ ಸೆರೆಗೆ ಆದೇಶಿಸಿದೆ.

ಶೃಂಗೇರಿ ಕೆರೆಕಟ್ಟೆ ಸಮೀಪದ ಕೆರೆಮನೆ ಗ್ರಾಮದಲ್ಲಿ ಕೊಟ್ಟಿಗೆಗೆ ಸೊಪ್ಪು ತರಲು ತೆರಳಿದ್ದ ಉಮೇಶ್ ಗೌಡ ಮತ್ತು ಹರೀಶ್ ಶೆಟ್ಟಿ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಘಟನೆ ಬಳಿಕ ಮಲೆನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಸರಕಾರ ಆನೆಯನ್ನು ಸೆರೆ ಹಿಡಿಯುವಂತೆ ಆದೇಶಿಸಿದೆ. ದುಬಾರೆ ಹಾಗೂ ಹಾರಂಗಿ ಆನೆ ಶಿಬಿರದ ಕುಮ್ಕಿ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಸೂಚಿಸಿದೆ.

ಆರು ಆನೆಗಳ ಆಗಮನ: ಆನೆ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ ಸರಕಾರ ಆದೇಶಿಸಿದ ಬೆನ್ನಲ್ಲೇ ರವಿವಾರ ಕಾಡಾನೆ ಸೆರೆಗೆ 6 ಸಾಕಾನೆಗಳನ್ನು ಶೃಂಗೇರಿಯ ಕೆರೆಕಟ್ಟೆಗೆ ಕರೆ ತರಲಾಗಿದೆ.

ಏಕಲವ್ಯ, ಧನಂಜಯ, ಪ್ರಶಾಂತ ಹಾಗೂ ಹರ್ಷ ಸೇರಿ 6 ಆನೆಗಳು ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ಬಂದಿಳಿದಿವೆ. ಆನೆಗಳು ನ.3ರಿಂದ ಇಬ್ಬರನ್ನು ಬಲಿ ಪಡೆದ ಒಂಟಿ ಸಲಗವನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು, ಚಿಕ್ಕಮಗಳೂರು

contributor

Similar News