×
Ad

ಬೀಚ್‌ಗಳಲ್ಲಿ ಕಡಲಾಮೆಗಳ ಸಂರಕ್ಷಣೆಗೆ ಒತ್ತು

ಕಳೆದೆರಡು ವರ್ಷಗಳಲ್ಲಿ ಆಲಿವ್ ರಿಡ್ಲೇ ಸಂತತಿ ಹೆಚ್ಚಳ

Update: 2025-09-05 07:20 IST

ಮಂಗಳೂರು, ಸೆ.4: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೇ ಪ್ರಭೇದದ ಕಡಲಾಮೆಗಳ ಸಂತತಿಯನ್ನು ಸಂರಕ್ಷಿಸುವ ಕಾರ್ಯ ಮಂಗಳೂರು ಕಡಲ ತೀರಗಳಲ್ಲಿ ಕಳೆದೆರಡು ವರ್ಷಗಳಿಂದ ಅತ್ಯಂತ ಜತನದಿಂದ ನಡೆಯುತ್ತಿದೆ. ಮಂಗಳೂರು ವಲಯ ಅರಣ್ಯ ಇಲಾಖೆ ಹಾಗೂ ಕೋಸ್ಟಲ್ ಮತ್ತು ಮರೈನ್ ಇಕೋಸಿಸ್ಟಮ್ ಘಟಕದಿಂದ ಈ ವರ್ಷಾಂತ್ಯದಲ್ಲಿ ಕಳೆದೆರಡು ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಕಡಲಾಮೆಗಳು ಸಂತಾನಾಭಿವೃದ್ಧಿಗೆ ನಿರೀಕ್ಷೆ ಇರಿಸಲಾಗಿದೆ.

2023-24ನೇ ಸಾಲಿನಲ್ಲಿ ಮಂಗಳೂರಿನ ಸಸಿಹಿತ್ಲು, ಬೆಂಗರೆ, ಇಡ್ಯಾ ಬೀಚ್ ವ್ಯಾಪ್ತಿಯಲ್ಲಿ 927 ಮರಿಗಳ ಸಂರಕ್ಷಣೆ ಮಾಡಲಾಗಿದ್ದರೆ, 2024-25ನೇ ಸಾಲಿನಲ್ಲಿ 1,842 ಮರಿಗಳು ಸಂರಕ್ಷಣೆಗೊಂಡು ಸಮುದ್ರ ಸೇರಿವೆ. ಈ ವರ್ಷ ಮತ್ತೆ ನವೆಂಬರ್‌ನಿಂದ ತೀರಕ್ಕೆ ಬರುವ ಕಡಲಾಮೆಗಳನ್ನು ಅರಣ್ಯ ಇಲಾಖೆಯು ರಕ್ಷಣಾ ಕಾರ್ಯಕ್ಕೆ ಸಿದ್ಧತೆ ನಡೆಸಿದೆ.

ಅಂದಾಜು 75 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಆಲಿವ್ ರಿಡ್ಲೇ ಆಮೆಗಳು ಅಳಿವಿನಂಚಿನಲ್ಲಿದ್ದು, 2023ರ ಡಿಸೆಂಬರ್ 31ರಂದು ಸಸಿಹಿತ್ಲು ಕಡಲತೀರದಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಬೀಚ್ ಪ್ರದೇಶಗಳಲ್ಲಿ ಅಪರೂಪವಾಗಿ ಕಂಡು ಬರುವ ಈ ಕಡಲಾಮೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಹಕಾರದಲ್ಲಿ ನಗರದ ಕೋಸ್ಟಲ್ ಮತ್ತು ಮರೈನ್ ಇಕೋಸಿಸ್ಟಮ್ ಘಟಕವು ಆ ವರ್ಷ ಕಡಲಾಮೆ ಕಂಡು ಬಂದ 21 ಪ್ರದೇಶಗಳನ್ನು ಗುರುತಿಸಿ ಅವುಗಳು ಇಟ್ಟು ಹೋದ ಮೊಟ್ಟೆಗಳ ಸಂರಕ್ಷಿಸಿತ್ತು. 21 ಕಡೆಗಳಲ್ಲಿ 1,958 ಮೊಟ್ಟೆಗಳಲ್ಲಿ 927 ಮರಿ ಆಮೆಗಳು ಹೊರಬಂದಿದ್ದು, ಅವುಗಳನ್ನು ಸುರಕ್ಷಿತವಾಗಿ ಸಮುದ್ರ ಸೇರುವ ವ್ಯವಸ್ಥೆಯನ್ನು ಪ್ರಥಮ ವರ್ಷ ಮಾಡಲಾಗಿತ್ತು.

2024-25ನೇ ಸಾಲಿನಲ್ಲಿ 24 ಕಡೆಗಳಲ್ಲಿ ಹೆಣ್ಣು ಆಲಿವ್ ರಿಡ್ಲೇ ಆಮೆಗಳು 2,490 ಮೊಟ್ಟೆಗಳನ್ನು ಇರಿಸಿ ಕಡಲು ಸೇರಿದ್ದವು. ಈ ಮೊಟ್ಟೆಗಳಲ್ಲಿ 1,842 ಮರಿಗಳು ಜೀವಂತವಾಗಿ ಕಡಲು ಸೇರುವ ಮೂಲಕ ಸಜೀವ ಮೊಟ್ಟೆಗಳ ಮೂಲಕ ಶೇ.74ರಷ್ಟು ಆಲಿವ್ ರಿಡ್ಲೇಗಳ ಸಂತಾನೋತ್ಪತ್ತಿಯಾಗಿತ್ತು.

ಸಾಮಾನ್ಯವಾಗಿ ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕಡಲಿನಿಂದ ಹೆಣ್ಣು ಆಲಿವ್ ರಿಡ್ಲೇಗಳು ಮೊಟ್ಟೆ ಇಡಲು ದಡ ಸೇರಿ ಸುರಕ್ಷಿತ ತಾಣಗಳನ್ನು ಹುಡುಕಿಕೊಂಡು ಬರುತ್ತವೆ. ಸುಮಾರು ಎರಡು ಅಡಿಯಷ್ಟು ಆಳದ ಗುಂಡಿ ಮಾಡಿ ಅದರಲ್ಲಿ ಮೊಟ್ಟೆ ಇರಿಸಿ ಮಣ್ಣು ಹಾಕಿ ತೆರಳುತ್ತವೆ. ಮೊಟ್ಟೆ ಇಟ್ಟ 45ರಿಂದ 60 ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಮೊಟ್ಟೆ ಇಡುವ ಹಾಗೂ ಮೊಟ್ಟೆಯೊಡೆದು ಹೊರ ಬರುವ ಪ್ರಕ್ರಿಯೆ ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ನಡೆಯುತ್ತದೆ. ಮರಿ ಮೊಟ್ಟೆಯಿಂದ ಹೊರಬಂದ ಮೇಲೆ 48 ಗಂಟೆಯೊಳಗೆ ಕಡಲು ಸೇರಬೇಕು. ಹಾಗಾಗಿ ಮರಿಗಳು ಕೂಡಾ ಅಪಾಯವನ್ನು ಗ್ರಹಿಸಿಕೊಂಡು ರಾತ್ರಿ ವೇಳೆಯಲ್ಲೇ ಮೊಟ್ಟೆಯಿಂದ ಹೊರಬಂದು ಕಡಲು ಸೇರುತ್ತವೆ ಎನ್ನುತ್ತಾರೆ ಕೋಸ್ಟಲ್ ಮತ್ತು ಮರೈನ್ ಇಕೋಸಿಸ್ಟಮ್ ಘಟಕದ ಆರ್‌ಎಫ್‌ಒ ಮನೋಜ್ ಸೋನ.

ಕೋಟೆಕಾರಿನಿಂದ ಸಸಿಹಿತ್ಲುವಿನವರೆಗಿನ ಕಡಲ ತೀರವನ್ನು ಕಡಲಾಮೆಗಳ ಆಗಮನದ ಪ್ರದೇಶವಾಗಿ ಗುರುತಿಸಲಾಗಿದ್ದು, ಸಸಿಹಿತ್ಲು, ತಣ್ಣೀರುಬಾವಿ ಮತ್ತು ಪಣಂಬೂರು ಬೀಚ್‌ಗಳಲ್ಲಿ ಕಳೆದೆರಡು ವರ್ಷಗಳಲ್ಲಿ ಕಡಲಾಮೆಗಳು ಕಂಡುಬಂದಿವೆ. ರಾತ್ರಿ ವೇಳೆಯಲ್ಲೇ ಇವುಗಳು ಕಡಲ ತೀರಕ್ಕೆ ಬರುವುದರಿಂದ ಮೀನುಗಾರರಿಗೆ ಈ ಬಗ್ಗೆ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಕಾರ್ಯ ನಡೆಸಲಾಗುತ್ತಿದೆ. ರಾತ್ರಿ ವೇಳೆ ಆಮೆಯನ್ನು ಕಂಡು ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೀನುಗಾರರಿಗೆ ತಲಾ 5,000 ರೂ. ಪ್ರೋತ್ಸಾಹಧನವನ್ನೂ ಕಳೆದರಡು ವರ್ಷಗಳಿಂದ ನೀಡಲಾಗುತ್ತಿದೆ ಎಂದು ಮನೋಜ್ ವಿವರಿಸಿದ್ದಾರೆ.

ಸಿಸಿಟಿವಿ ಕ್ಯಾಮರಾ ಅಳವಡಿಕೆ :

‘ದಡಗಳಲ್ಲಿ ಇರಿಸಲಾಗುವ ದೋಣಿಗಳ ಸಮೀಪ ಇತರ ಪ್ರಾಣಿ, ಪಕ್ಷಿಗಳಿಂದ ಹಾನಿಯಾಗದಂತೆ ಎಚ್ಚರಿಕೆ ವಹಿಸಿಕೊಂಡು ಗುಂಡಿ ಮಾಡಿ ಮೊಟ್ಟೆ ಇಡುವ ಹೆಣ್ಣು ಆಲಿವ್ ರಿಡ್ಲೇಗಳು ಬಳಿಕ ಸಮುದ್ರ ಸೇರುತ್ತವೆ. ಈ ಜಾಗಗಳನ್ನು ಗುರುತಿಸಿ ಬಲೆಗಳ ಸಂರಕ್ಷಣೆಯ ಜೊತೆಗೆ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಿ ಮೊಟ್ಟೆಗಳ ಸಂರಕ್ಷಣೆಗಾಗಿ ವಾಚರ್‌ಗಳನ್ನು ನೇಮಕ ಮಾಡಲಾಗುತ್ತದೆ. ಮೊಟ್ಟೆಗಳು ಪ್ರೋಟೀನ್‌ಯುಕ್ತ ಎಂಬ ನಿಟ್ಟಿನಲ್ಲಿ ಅವುಗಳನ್ನು ಕೊಂಡೊಯ್ದು ಮಾರಾಟ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆಯೂ ನಿಗಾ ವಹಿಸಲಾಗುತ್ತದೆ. ಈ ವರ್ಷ ಮತ್ತಷ್ಟು ಹೆಚ್ಚಿನ ಆಮೆಗಳು ಮೊಟ್ಟೆ ಇಡಲು ಬರುವ ನಿರೀಕ್ಷೆ ಇದ್ದು, ಅದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದ್ದಾರೆ.

ಕಂಟಕವಾಗುವ ಪ್ಲಾಸ್ಟಿಕ್ ತ್ಯಾಜ್ಯ :

ಪ್ಲಾಸ್ಟಿಕ್ ತ್ಯಾಜ್ಯ ನಗರ ವಸತಿ ಪ್ರದೇಶಗಳಿಂದ ಕಡಲ ತಳಕ್ಕೂ ಭಾರೀ ಪ್ರಮಾಣದಲ್ಲಿ ಸೇರುತ್ತಿದ್ದು, ಜಲಚರಗಳಿಗೆ ಕಂಟಕವಾಗುತ್ತಿದೆ. ಸಮುದ್ರದ ಅಂಚಿಗೆ ತೇಲಿ ಬರುವ ಅಥವಾ ಮೀನುಗಾರರ ಬಲೆಗೆ ಬೀಳುವ ಬೃಹತ್ ಗಾತ್ರದ ಮೀನುಗಳು ಹಾಗೂ ಕಡಲಾಮೆಗಳ ಸಾವಿಗೆ ಪ್ಲಾಸ್ಟಿಕ್ ತ್ಯಾಜ್ಯ ಕಾರಣವಾಗಿರುವುದು ಕಂಡುಬಂದಿದೆ. ಬೀಚ್‌ಗಳ ಸಂಘಸಂಸ್ಥೆಗಳು, ಪರಿಸರ ಪ್ರೇಮಿಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಅಭಿಯಾನ ರೀತಿಯಲ್ಲಿ ನಡೆಯುತ್ತಿರುತ್ತದೆ. ಆದರೆ ಸಾಮಾನ್ಯ ಜನರು ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಸ್ವಯಂ ಜಾಗೃತಿಗೊಳ್ಳದೆ ಈ ರೀತಿ ನಮ್ಮ ಜಲಮೂಲಗಳು, ನಮ್ಮ ಪರಿಸರ ಹಾಳಾಗುವುದನ್ನು ತಡೆಗಟ್ಟಲು ಅಸಾಧ್ಯ.

ಕಳೆದೆರಡು ವರ್ಷಗಳಲ್ಲಿ ಆಮೆಗಳ ಆಗಮನ, ಅವುಗಳ ಚಲನವಲನಗಳನ್ನು ಗುರುತಿಸಲಾಗಿದೆ. ಈ ವರ್ಷ ಮತ್ತಷ್ಟು ಜಾಗರೂಕತೆಯಿಂದ ಕಡಲಾಮೆಗಳ ಮೊಟ್ಟೆಗಳ ಸಂರಕ್ಷಣಾ ಕಾರ್ಯ ನಡೆಸಲಾಗುವುದು. ಈ ಬಗ್ಗೆ ಈಗಾಗಲೇ ಸ್ಥಳೀಯ ಮೀನುಗಾರರಿಗೆ ಜಾಗೃತಿ ಮೂಡಿಸಲಾಗಿದೆ. ಮೀನುಗಾರರ ಬಲೆಗೆ ಬೀಳುವ ಆಮೆಗಳನ್ನು ಕೂಡಾ ಸುರಕ್ಷಿತವಾಗಿ ಕಡಲಿಗೆ ಬಿಡುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆಲಿವ್ ರಿಡ್ಲೇ ಜೊತೆಗೆ ಅಳಿವಿನಂಚಿನಲ್ಲಿರುವ ಹಾಕ್ಸ್‌ಬಿಲ್ ಮತ್ತು ಗ್ರೀನ್‌ಸೀ ಆಮೆಗಳು ಕೂಡಾ ನಮ್ಮ ಬೀಚ್‌ಗಳಲ್ಲಿ ಗಾಯಗೊಂಡು ಸತ್ತು ಬಿದ್ದಿರುವುದು ಪತ್ತೆಯಾಗಿವೆ. ಹಾಗಾಗಿ ಅವುಗಳು ಕೂಡ ಸಂತಾನಾಭಿವೃದ್ಧಿಗೆ ದಡಕ್ಕೆ ಬರುವ ಸಾಧ್ಯತೆ ಇದೆ.

-ಮನೋಜ್ ಸೋನ, ಆರ್‌ಎಫ್‌ಒ, ಕೋಸ್ಟಲ್ ಮತ್ತು ಮರೈನ್ ಇಕೋಸಿಸ್ಟಮ್ ಘಟಕ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತ್ಯಾ ಕೆ.

contributor

Similar News