ಅಕಾಲಿಕ ಮಳೆಗೆ ತತ್ತರಿಸಿದ ರೈತರು, ನೆಲಕಚ್ಚಿದ ಭತ್ತ, ಹತ್ತಿ ಬೆಳೆ
ರಾಯಚೂರು : ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವೆಡೆ ಭತ್ತ, ಜೋಳ, ಹತ್ತಿ, ಈರುಳ್ಳಿ, ಟೊಮ್ಯಾಟೊ, ಚೆಂಡು ಹೂ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಯೂ ಹಾನಿಗೀಡಾಗಿದೆ.
ಸಿಂಧನೂರು ತಾಲೂಕಿನ ಜವಳಗೇರ ಹೋಬಳಿಯ ಜವಳಗೇರಾ, ಗೌಡನಬಾವಿ ಸೇರಿದಂತೆ ಹಲವೆಡೆ ಭಾರೀ ಮಳೆಗೆ ಭತ್ತ ನೀರು ಪಾಲಾಗಿದೆ. ಹತ್ತಿ, ಟೊಮ್ಯಾಟೋ, ಈರುಳ್ಳಿ, ಜೋಳ ಹಾಗೂ ಮೆಣಸಿನಕಾಯಿ ಬೆಳೆಗಳು ಕೂಡ ಧಾರಾಕಾರ ಮಳೆಗೆ ತತ್ತರಿಸಿವೆೆ.
ಜವಳಗೇರಾ ಗ್ರಾಮದ ಲಕ್ಕಿ ಗಂಡ ವೆಂಕಟೇಶ ಇವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಭತ್ತದ ಬೆಳೆಗೆ ಮಳೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಭತ್ತ ನೀರು ಪಾಲಾಗಿದೆ. ಮಳೆ ನೀರು ನುಗ್ಗಿದ ಹಿನ್ನೆಲೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕ್ಕುರುಳಿದೆ. ಅನೇಕ ತಿಂಗಳು ಕಷ್ಟಪಟ್ಟು ಬೆಳೆಸಿದ್ದ ಬೆಳೆ ಕಣ್ಣಮುಂದೆಯೇ ಹಾಳಾಗುತ್ತಿರುವುದನ್ನು ಕಂಡು ರೈತರು ಮಮ್ಮಲ ಮರುಗಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಸ್ವಾತಿ ಮಳೆಗೆ ಭತ್ತಕ್ಕೆ ಸಾಕಷ್ಟು ಹಾನಿಯಾಗಿದ್ದು, ರಾಯಚೂರು, ದೇವದುರ್ಗ, ಸಿರವಾರ, ಮಾನ್ವಿ ರಾಯಚೂರು ತಾಲೂಕಿನಲ್ಲಿ ಬೆಳೆಹಾನಿಯಾಗಿದ್ದು ಮಳೆ ಶನಿವಾರವೂ ಮುಂದುವರೆದ ಕಾರಣ ರೈತರ ಬದುಕನ್ನು ಛಿದ್ರ ಛಿದ್ರಗೊಳಿಸುತ್ತಿದೆ. ಹಕವೆಡೆ ಹತ್ತಿ ಬಿಡಿಸಲು ಸಿದ್ಧವಾಗಿದ್ದ ಹೊಲಗಳಿಗೂ ಮಳೆ ನೀರು ನುಗ್ಗಿದ್ದು, ಹತ್ತಿಯೆಲ್ಲಾ ನೆಲಕ್ಕೆ ಸೋರಿಹೋಗಿದೆ. ನಿರಂತರ ಮಳೆ ಹಾಗೂ ತೇವಾಂಶ ಹೆಚ್ಚಳದಿಂದ ಈರುಳ್ಳಿ ಮತ್ತು ಟೊಮ್ಯಾಟೋ ಬೆಳೆಗಳಿಗೆ ಉಳಿಗಾಲವಿಲ್ಲದಂತಾಗಿದೆ. ಇತ್ತೀಚೆಗಷ್ಟೆ ರಾಯಚೂರು ತಾಲೂಕಿನಲ್ಲಿ ಟೊಮ್ಯಾಟೊ ಬೆಳೆದಿದ್ದ ರೈತನೋರ್ವ ಕೊಳೆತು ಹೋಗಿದ್ದನ್ನು ಕಂಡು ನೆಲಕ್ಕೆ ಸುರಿದು ಬೇಸರ ವ್ಯಕ್ತಪಡಿಸಿದ್ದ.
ಕಲ್ಯಾಣ ಕರ್ನಾಟಕ ಭಾಗದ ಮಂತ್ರಿಗಳು ರಾಜಕೀಯವನ್ನು ಬಿಟ್ಟು ಪಕ್ಷಾತೀತವಾಗಿ ರೈತರ ಸಮಸ್ಯೆಗೆ ಸ್ಪಂದಿಸಿ ನೆರವಿಗೆ ಬರಬೇಕು. ಕಳೆದ ತಿಂಗಳು ಭಾರಿ ಮಳೆಯಿಂದಾಗಿ ಹತ್ತಿ,ಭತ್ತ, ತೊಗರಿ ಬೆಳೆ ಸಾಕಷ್ಟು ಹಾನಿಯಾಗಿದ್ದು ಸರಕಾರದಿಂದ ಪರಿಹಾರ ನೀಡಿಲ್ಲ, ಇದ್ದ ಬೆಳೆಯನ್ನು ಉಳಿಸಿಕೊಳ್ಳಲು ಆಗದೇ ಈಗ ಪುನಃ ಮಳೆ ಶುರುವಾಗಿದ್ದರಿಂದ ದಿಕ್ಕು ತೋಚದಾಗಿದೆ. ಕೃಷಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸರಕಾರ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತರ ಮನವಿಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾಗಿದ್ದು, ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಪರಿಹಾರ ಮಾತ್ರ ಇನ್ನೂ ರೈತರಿಗೆ ತಲುಪಿಲ್ಲ. ಕೇಂದ್ರದಿಂದ ರೂ.321 ಕೋಟಿ ಪರಿಹಾರ ಬಂದಿದೆ ಎಂದು ಹೇಳಲಾಗುತ್ತಿದ್ದು, ಅದೆಲ್ಲ ಎಲ್ಲಿ ಹೋಯಿತು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಇದಕ್ಕೆಲ್ಲಾ ಉತ್ತರಿಸಬೇಕು
-ಚಾಮರಸ ಮಾಲಿ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ.
ಸಿಂಧನೂರು ಸೇರಿದಂತೆ ಜಿಲ್ಲೆಯ ಹಲವೆಡೆ ಹೊಲದಲ್ಲೇ ಈರುಳ್ಳಿ ಕೊಳೆತು ಹೋಗಿದ್ದರಿಂದ ಹರಿಯದೆ ಹಾಗೆಯೇ ಬಿಟ್ಟು ಸಾಕಷ್ಟು ನಷ್ಟದ ಹಾದಿ ಹಿಡಿಸಿತ್ತು. ಆದಕಾರಣ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆ ರೈತರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಆತ್ಮಸ್ಥೆರ್ಯ ತುಂಬಬೇಕು
-ಶರಣಪ್ಪ ಮರಳಿ ಸುಲ್ತಾನಪುರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ