ಅಪಾಯದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ?

Update: 2024-01-08 05:38 GMT

Photo: PTI 

ಶೇ. 80 ಹೊರರಾಜ್ಯಗಳ ಜನರಿರುವ ನಮ್ಮ ಅಪಾರ್ಟ್ ಮೆಂಟ್ (600 ಫ್ಯ್ಲಾಟ್‌ಗಳು) ಒಳಗೆ ವಾಕಿಂಗ್ ಮಾಡುತ್ತಿದ್ದೆ. ಸುಮಾರು ಹತ್ತು ವರ್ಷದ ಇಬ್ಬರು ಹುಡುಗರು ಸೈಕಲ್ ತುಳಿಯುತ್ತಾ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಅವರನ್ನು ನಿಲ್ಲಿಸಿ, ‘ನಿಮ್ಮ ತಾಯಿ ಭಾಷೆ ಯಾವುದು?’ ಕೇಳಿದರೆ, ಒಬ್ಬ ಹುಡುಗ ಹಿಂದಿ ಎಂದರೆ ಇನ್ನೊಬ್ಬ ಹುಡುಗ ತಡವರಿಸುತ್ತಾನೆ ‘ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ?’ ಎಂದರೆ, ‘ನಮ್ಮ ತಾಯಿ ತಂದೆ ಇಬ್ಬರೂ ನನ್ನೊಂದಿಗೆ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ. ಯಾವಾಗಲಾದರೂ ಒಮ್ಮೆ ಇಬ್ಬರೂ ಹಿಂದಿಯಲ್ಲಿ ಜಗಳವಾಡುತ್ತಾರೆ’ ಎನ್ನುತ್ತಾನೆ. ‘‘ನಿನಗೆ ಹಿಂದಿ ಬರುವುದಿಲ್ಲವೆ?’’ ಎಂದು ಕೇಳಿದರೆ, ‘ಇಲ್ಲ, ಶಾಲೆಯಲ್ಲಿ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಾರೆ, ಶಾಲೆಯಿಂದ ಬಂದಕೂಡಲೇ ಮ್ಯಾಥ್ಸ್, ಫಿಸಿಕ್ಸ್, ಸ್ಪೋರ್ಟ್ಸ್ , ಟ್ಯೂಷನ್‌ಗೆ ಹೋಗುತ್ತೇನೆ, ಮನೆಯಲ್ಲಿ ತಾಯಿ-ತಂದೆ ಇಬ್ಬರೂ ಇಂಗ್ಲಿಷ್‌ನಲ್ಲಿ ಮಾತನಾಡುತ್ತ ಹೋಮ್ ವರ್ಕ್ ಮಾಡಿಸುತ್ತಾರೆ’ ಎಂದ.

ನಮ್ಮ ಫ್ಲ್ಯಾಟ್ ವೈಟ್‌ವಾಶ್ ಮಾಡಲು ಬಂದ ಮಹಾರಾಷ್ಟ್ರದವ ಇಲ್ಲಿ ಎರಡು ದಶಕಗಳಿಂದ ಡ್ರಾಫ್ಟ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದವ, ಅವನ ಕುಟುಂಬ/ಸಂಬಂಧಿಗಳ ಇಪ್ಪತ್ತು ಜನರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಖಾಸಗಿ ಕಂಪೆನಿಗಳಲ್ಲಿ ಸೇರಿಸಿದ್ದಾನೆ. ಈತ ಮನೆಗೆ ಬಣ್ಣ ಹಚ್ಚಲು ಕರೆದುಕೊಂಡು ಬಂದಿದ್ದ ಮೂವರು ಉತ್ತರ ಪ್ರದೇಶದ ಗೋರಖ್‌ಪುರದ ಕಡೆಯ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ‘ನಿಮಗೆ ದಿನಕೂಲಿಯೋ ಇಲ್ಲ ಒಪ್ಪಂದವೋ?’ ಎಂದು ಕೇಳಿದರೆ ‘ಒಪ್ಪಂದ’ ಎಂದ. ‘ನಮ್ಮ ಫ್ಲ್ಯಾಟ್‌ಗೆ ಬಣ್ಣ ಹಚ್ಚಲು ಎಷ್ಟು ರೂಪಾಯಿಗಳಿಗೆ ಒಪ್ಪಿಕೊಂಡಿ ದ್ದೀರಿ?’ ಎಂದಿದ್ದಕ್ಕೆ, ‘30 ಸಾವಿರ ರೂ.’ ಎನ್ನುತ್ತಾರೆ. ಮೂವರು-ನಾಲ್ಕು ದಿನಗಳಲ್ಲಿ ಕೆಲಸ ಮುಗಿಸಿದ್ದರು. ಅಂದರೆ ದಿನಕ್ಕೆ ಒಬ್ಬನ ಸಂಪಾದನೆ 2,500 ರೂ. ಹೆಚ್ಚು ಕಡಿಮೆ ದಿನಾ ಕೆಲಸ ಸಿಗುತ್ತದೆ ಎಂದು ಹೇಳಿದರು. ಇವರ್ಯಾರೂ ಹತ್ತನೇ ತರಗತಿ ತಲುಪಿಲ್ಲ. ಇವರಿಗೆ ಇಬ್ಬರಿಂದ ಮೂವರು ಮಕ್ಕಳಿದ್ದು ಅವರೆಲ್ಲ ಬೆಂಗಳೂರಿನ ಇಂಗ್ಲಿಷ್ ಶಾಲೆಗಳಲ್ಲಿ ಓದುತ್ತಿದ್ದು, ಇವರ ಹೆಣ್ಣುಮಕ್ಕಳು ಮನೆ ಕೆಲಸಗಳನ್ನು ಮಾಡುತ್ತಿದ್ದು ತಿಂಗಳಿಗೆ 10-25 ಸಾವಿರ ರೂ. ದುಡಿಯುತ್ತಿರುವುದಾಗಿ ಹೇಳಿದರು. ಗೋಡೆಗೆ ವಾಲ್ ಪೇಪರ್ ಹಾಕಲು ಬಂದವನೂ ಯು.ಪಿ.ಯವನೇ ಆಗಿದ್ದು ಅವನಿಗೆ ನಾಲ್ಕು ಮಕ್ಕಳಿದ್ದು ಕುಟುಂಬ ಸಮೇತ ಇಲ್ಲೇ ನೆಲೆಸಿರುವುದಾಗಿ ಹೇಳಿದ.

ಯು.ಪಿ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒಡಿಶಾ, ಬಂಗಾಳ, ಈಶಾನ್ಯ ಭಾರತ ಹೀಗೆ ದೇಶದ ಎಲ್ಲಾ ರಾಜ್ಯಗಳ ಜನರು ಬೆಂಗಳೂರಿನಲ್ಲಿ ಅರ್ಧ ಜನಸಂಖ್ಯೆಯಷ್ಟು ತುಂಬಿಕೊಂಡಿದ್ದಾರೆ. ಬನಶಂಕರಿ ದಕ್ಷಿಣದಿಂದ ಹಿಡಿದುಕೊಂಡು ಕೆಂಪೇಗೌಡ ಏರ್‌ಪೋರ್ಟ್ ವರೆಗೆ ರಿಂಗ್‌ರಸ್ತೆಯ ಎರಡೂ ಕಡೆ ಕನಿಷ್ಠ ಹತ್ತು ಕಿ.ಮೀ.ಗಳ ದೂರದವರೆಗೂ ಹರಡಿಕೊಂಡಿರುವ ಬಹುಮಹಡಿಯ ಕಟ್ಟಡಗಳು ಮತ್ತು ಕೂಲಿ ಕಾರ್ಮಿಕರು ವಾಸಿಸುವ ಬಸ್ತಿಗಳು ಎಲ್ಲಾ ರಾಜ್ಯಗಳ ಜನರಿಂದ ತುಂಬಿಕೊಂಡಿವೆ. ಬೆಂಗಳೂರಿನಲ್ಲಿ ಹಿಂದಿನಿಂದಲೂ ವಾಸಿಸುತ್ತಿರುವ ತೆಲುಗು ಮತ್ತು ತಮಿಳು ಭಾಷಿಕರು ಯಾವಾಗಲೋ ಬೆಂಗಳೂರಿಗರಾಗಿ ಮಾರ್ಪಟ್ಟಿದ್ದಾರೆ. ಆದರೆ ಉತ್ತರ ರಾಜ್ಯಗಳಿಂದ ಬಂದಿರುವ ಇವರು ಇನ್ನೂ ಐವತ್ತು ವರ್ಷಗಳಾದರೂ ನಮ್ಮ ನೆಲ ಮತ್ತು ಭಾಷೆಯನ್ನು ಅಪ್ಪಿಕೊಳ್ಳಲಾರರು! ಅದಕ್ಕೆ ನಾವೇ ಕಾರಣ ಎನ್ನುವುದು ಬೇರೆ ಮಾತು. ಯಾಕೆಂದರೆ ಅವರ ಭಾಷೆಗಳನ್ನೆಲ್ಲ ನಾವೇ ಕಲಿತುಕೊಂಡು ಮಾತನಾಡುತ್ತೇವೆ.

ಈಗ ನಮ್ಮ ಗ್ರಾಮೀಣ ವಿದ್ಯಾರ್ಥಿಗಳ ವಿಷಯಕ್ಕೆ ಬರೋಣ. ನಮ್ಮ ನೂರಾರು ಕನ್ನಡ ಶಾಲೆಗಳನ್ನು (ಪ್ರಾಥಮಿಕ-ಮಾಧ್ಯಮಿಕ) ಈಗಾಗಲೇ ಮುಚ್ಚಲಾಗಿದೆ, ಉಳಿದವು ಅದೇ ದಾರಿಯಲ್ಲಿವೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು, ಶಾಲೆಗಳಲ್ಲಿ ಸರಿಯಾದ ಶಿಕ್ಷಕರು/ಇಂಗ್ಲಿಷ್ ಕಲಿಸುವ ಶಿಕ್ಷಕರು ಇಲ್ಲದೆ ಇರುವುದು. ಜೊತೆಗೆ ಯಾವುದೇ ಸವಲತ್ತುಗಳು, ಕಟ್ಟಡಗಳಿಲ್ಲದೆ ದುರಸ್ತಿಯಲ್ಲಿರುವ ಶಾಲೆಗಳು ಮತ್ತು ಅವುಗಳ ವಾತಾವರಣ. ಗ್ರಾಮೀಣ ಶಾಲೆಗಳಲ್ಲಿ ಸರಿಯಾದ ಶಿಕ್ಷಕರಿಲ್ಲದ ಕಾರಣ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳು ಗ್ರಾಮೀಣ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿವೆ. ಬಹಳಷ್ಟು ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿಯವರೆಗೂ ಒಬ್ಬರೋ ಇಬ್ಬರೋ ಶಿಕ್ಷಕರಿರುತ್ತಾರೆ. ಅವರಲ್ಲಿ ಬಹಳಷ್ಟು ಶಿಕ್ಷಕರು ಅರ್ಹತೆ ಇಲ್ಲದ ಅಥವಾ ಸರಿಯಾದ ಸಮಯಕ್ಕೆ ಶಾಲೆಗೆ ಹೋಗದವರೇ ಹೆಚ್ಚು. ಇನ್ನು ಗ್ರಾಮೀಣ ವಿದ್ಯಾರ್ಥಿಗಳು ಹಾಗೋ ಹೀಗೋ ಪಿಯುಸಿ/ಡಿಗ್ರಿ ಮುಗಿಸಿ ಆಯ್ದುಕೊಳ್ಳುವ ವಿಷಯಗಳೆಂದರೆ ಹೆಚ್ಚಾಗಿ ಕನ್ನಡ ಮತ್ತು ಕೆಲವು ಕಲೆ/ವಾಣಿಜ್ಯ ವಿಷಯಗಳು. ಯಾರೇ ಗ್ರಾಮೀಣ ವಿದ್ಯಾರ್ಥಿಗಳನ್ನು ಯಾವ ಕೆಲಸಕ್ಕೆ ಹೋಗುತ್ತೀಯ ಎಂದರೆ, ಅವರ ಮೊದಲ ಉತ್ತರ ಕನ್ನಡ ಶಿಕ್ಷಕರಾಗುವುದು. ಕಾರಣ ಇಂಗ್ಲಿಷ್ ಮತ್ತು ಗಣಿತ-ವಿಜ್ಞಾನದ ಗುಮ್ಮ ಅವರನ್ನು ಕಾಡುತ್ತಿರುವುದು. ಇದು ಸಾಲದೆ ಸರಕಾರ ಹತ್ತಾರು ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಮಾಡುತ್ತಿದ್ದು ಅವುಗಳಿಗೆ ಶಿಕ್ಷಕರೂ ಇಲ್ಲ ಕಟ್ಟಡಗಳೂ ಇಲ್ಲ. ಈಗಿರುವ ಕಟ್ಟಡಗಳು ಮತ್ತು ಉಪನ್ಯಾಸಕರೇ ಗತಿ.

ಬಹಳಷ್ಟು ಗ್ರಾಮೀಣ ವಿದ್ಯಾರ್ಥಿಗಳ ದೊಡ್ಡ ಕನಸೆಂದರೆ ಸರಕಾರದ ಯಾವುದೋ ಒಂದು ಇಲಾಖೆಯಲ್ಲಿ ಒಂದು ಸಣ್ಣ ಕೆಲಸ ಸಿಕ್ಕಿದರೆ ಸಾಕು ಎನ್ನುವುದು. ಇನ್ನು ರಾಜ್ಯ ಸರಕಾರ ಉದ್ಯೋಗಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಗೋಜಿಗೆ ಇವರು ಹೋಗುವುದಿಲ್ಲ. ಅದು ಸಾಧ್ಯವಿಲ್ಲದ ಮಾತು ಕೂಡ. ಬ್ಯಾಂಕುಗಳು ಮತ್ತು ಕೇಂದ್ರ ಸರಕಾರದ ಇಲಾಖೆಗಳ ಉದ್ಯೋಗಗಳ ಬಗ್ಗೆ ಅವರಿಗೆ ಗೊತ್ತೇ ಇಲ್ಲ ಎನ್ನಬಹುದು! ಕನ್ನಡದಲ್ಲಿ ಹೇಗೋ ಡಿಗ್ರಿ ಮುಗಿಸಿ ಸರಕಾರಿ ಹಾಸ್ಟೆಲ್‌ಗಳಲ್ಲಿ ಮಾಸ್ಟರ್ ಡಿಗ್ರಿ ಮತ್ತು ಪಿಎಚ್.ಡಿ.ಗಳಿಗೆ ಸೇರಿಕೊಂಡರೆ 40 ವರ್ಷಗಳ ವಯಸ್ಸಿನವರೆಗೂ ಅಲ್ಲೇ ಇರುತ್ತಾರೆ. ಅಲ್ಲಿಗೆ ಅವರ ಹಣೆಬರಹ ಮುಗಿದಂತೆ. ಇನ್ನು ಇತ್ತೀಚಿನ ಎಲ್ಲಾ ಪಕ್ಷಗಳ ಸರಕಾರಗಳು ಎಲ್ಲಾ ಕಡೆ, ಎಲ್ಲಾ ವಿಭಾಗಗಳಲ್ಲೂ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ವಿಪರ್ಯಾಸವೆಂದರೆ ಡಿಗ್ರಿ/ಮಾಸ್ಟರ್ ಡಿಗ್ರಿ/ಪಿಎಚ್.ಡಿ. ಓದಿದವರಿಗೆ ಸಿಗುವ ಗುತ್ತಿಗೆ ಕೆಲಸದ ಸಂಬಳಕ್ಕಿಂತ ಏನೂ ಓದದೆ ಇರುವ ಮನೆ ಕೆಲಸ ಮಾಡುವ ಹೆಣ್ಣು ಮಕ್ಕಳೇ ಹೆಚ್ಚು ಹಣ ಗಳಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಅಭ್ಯರ್ಥಿಗಳ ಸಂಬಳ ದಶಕಗಳಾದರೂ ಏರುವುದಿಲ್ಲ, ಕೆಲಸವೂ ಶಾಶ್ವತವಾಗುವುದಿಲ್ಲ.

ಅನ್ಯರಾಜ್ಯಗಳಿಂದ ಬಂದು ಮನೆ, ಅಡುಗೆ, ಸೆಕ್ಯೂರಿಟಿ ಕೆಲಸ, ಹೊಟೇಲ್ ಸಪ್ಲೆಯರ್ಸ್‌, ಬ್ಯೂಟಿ ಪಾರ್ಲರ್ಸ್‌, ಡೆಲಿವರಿ ಬಾಯ್ಸ್; ಸಣ್ಣಪುಟ್ಟ ಅಂಗಡಿಗಳಾದ ಪಾನಿಪೂರಿ, ಬೀಡಿ ಸಿಗರೇಟು, ಚಹಾ ಅಂಗಡಿಗಳವರು ದುಡಿದಷ್ಟು ಹಣವನ್ನು ನಮ್ಮ ವಿದ್ಯಾವಂತ ಯುವಕರು ದುಡಿಯುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮ ಕನ್ನಡ ಕಟ್ಟಾಳುಗಳು, ಕನ್ನಡ ಚಳವಳಿಗಾರರು, ಸಾಹಿತಿಗಳು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿಸಬೇಕು ಎಂದು ಒತ್ತಾಯ ಮಾಡುತ್ತಾರೆ. ಕನ್ನಡ ಮಾಧ್ಯಮದಲ್ಲಿ ಕಲಿಸದಿದ್ದರೆ ಹೋರಾಟ ನಡೆಸುತ್ತಾರೆ ಮತ್ತು ಅದನ್ನು ಎಷ್ಟೋ ವರ್ಷಗಳಿಂದ ಮಾಡುತ್ತಲೂ ಬಂದಿದ್ದಾರೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಪ್ರಾಥಮಿಕ/ಮಾಧ್ಯಮಿಕ ಶಾಲೆಯ ಹಂತದಿಂದಲೇ ಎರಡು ವಿಷಯಗಳನ್ನಾದರೂ ಇಂಗ್ಲಿಷ್ ಭಾಷೆಯಲ್ಲಿ ಕಲಿಸಬೇಕು ಎಂದಾಗ ಅದನ್ನು ವಿರೋಧ ಮಾಡಿ ನಿಲ್ಲಿಸಿದರು. ದೇಶದ ಎಲ್ಲಾ ಕೇಂದ್ರ ವಿದ್ಯಾನಿಲಯಗಳಲ್ಲಿ ಕನಿಷ್ಠ ಎರಡು ವಿಷಯಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬೋಧಿಸುತ್ತಿದ್ದು ವಿದ್ಯಾರ್ಥಿಗಳು ಯಾವುದೇ ಸನ್ನಿವೇಶದಲ್ಲಿ ಎಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯವನ್ನು ಪಡೆದುಕೊಳ್ಳುತ್ತಾರೆ. ಆದರೆ ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ಎಲ್ಲಾ ರೀತಿಯಲ್ಲೂ ವಂಚನೆಗೆ ಒಳಗಾಗಿದ್ದಾರೆ.

ಇನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಾರ್ಷಿಕ ಎಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ನೀಡುತ್ತವೆ ಎನ್ನುವುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ವಿಶ್ವವಿದ್ಯಾನಿಲಯಗಳಿಂದ ಪ್ರತಿವರ್ಷ ಹೊರಬೀಳುವ ಪದವೀಧರರಿಗೆ ದೊರಕುವ ಸರಕಾರಿ ಕೆಲಸಗಳೆಂದರೆ ಕೇವಲ ಒಂದೆರಡು ಶೇಕಡಾ ಎನ್ನಬಹುದು. ಹಾಗಾದರೆ ವಿಶ್ವವಿದ್ಯಾನಿಲಯಗಳೆಂಬ ಕಾರ್ಖಾನೆಗಳಿಂದ ಪ್ರತಿವರ್ಷ ಹೊರಬೀಳುವ ಲಕ್ಷಾಂತರ ಪದವೀಧರರು ಎಲ್ಲಿಗೆ ಹೋಗುತ್ತಾರೆ? ಇಂಜಿನಿಯರ್ಸ್‌ ಪದವಿ ಪಡೆಯುವ ಶೇ. 5-7ರಷ್ಟು ಅಭ್ಯರ್ಥಿಗಳು ಮಾತ್ರ ಕೆಲಸ ಗಿಟ್ಟಿಸಿಕೊಳ್ಳುವ ಅರ್ಹತೆ ಪಡೆದಿರುತ್ತಾರೆ ಎಂಬುದಾಗಿ ಖಾಸಗಿ ಕಂಪೆನಿಗಳ ಮುಖ್ಯಸ್ಥರು ಹೇಳುತ್ತಾರೆ, ಹಾಗಾದರೆ ವಿಶ್ವವಿದ್ಯಾನಿಲಯಗಳು ಇವರಿಗೆ ಏನನ್ನು ಕಲಿಸುತ್ತವೆ? ಐ.ಐ.ಎಂ., ಐ.ಐ.ಟಿ., ಆರ್.ಇ.ಸಿ., ಬಿಟ್ಸ್ ಪಿಲಾನಿ ಇತ್ಯಾದಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಗೆ ಖಾಸಗಿ ಕಂಪೆನಿಗಳಲ್ಲಿ ಕೆಲಸ ದೊರಕುತ್ತದೆ. ಈಗ ನಮ್ಮ ದೇಶ ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆ ಮತ್ತು ಯುವದಂಡನ್ನು ಹೊಂದಿರುವ ದೇಶ ಎನ್ನುವ ಹೆಮ್ಮೆ ಬೇರೆ ನಮಗೆ!

ಒಂದಷ್ಟು ಅಭ್ಯರ್ಥಿಗಳು ಖಾಸಗಿ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡರೆ, ಹಣವಿರುವ ಪೋಷಕರ ಮಕ್ಕಳು ಲಕ್ಷಾಂತರ ಹಣ ಸುರಿದು ವಿದೇಶಗಳಲ್ಲಿ ಓದಿ ಭಾರತದ ಕಡೆಗೆ ತಿರುಗಿಯೂ ನೋಡದೆ ಅಲ್ಲೇ ಉಳಿದುಕೊಳ್ಳುತ್ತಾರೆ. ಕೆಲವರಂತೂ ರಶ್ಯ, ಚೀನಾ, ಕೊರಿಯಾ, ಜಪಾನ್ ದೇಶಗಳ ಭಾಷೆಗಳಲ್ಲಿ ವೈದ್ಯಶಿಕ್ಷಣ ಪಡೆದುಕೊಂಡು ಎಲ್ಲಿಯೂ ಸಲ್ಲದವರಾಗುತ್ತಾರೆ. ಈಗ ಕೇಂದ್ರ ಸರಕಾರ ನಡೆಸುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನಿಷ್ಠ ಇಂಗ್ಲಿಷ್, ಇಲ್ಲ ಹಿಂದಿ ಜ್ಞಾನ ಇರಲೇಬೇಕು. ಅವೆರಡೂ ಅರ್ಹತೆಗಳು ನಮ್ಮ ಗ್ರಾಮೀಣ ವಿದ್ಯಾಥಿಗಳಿಗೆ ಇಲ್ಲ. ಆದರೆ ಉತ್ತರ ಭಾರತದ ಹಿಂದಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದಿದ್ದರೂ ಪರವಾಗಿಲ್ಲ ಹಿಂದಿ ಜ್ಞಾನವಿದ್ದರೆ ಸಾಕು. ಅವರು ಕೆಲಸಗಳನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಇತ್ತೀಚೆಗೆ ಬ್ಯಾಂಕ್‌ಗಳಲ್ಲಿ ಆಯ್ಕೆಯಾಗುತ್ತಿರುವ ಹಿಂದಿಬಲ್ಲ ಅಭ್ಯರ್ಥಿಗಳು.

ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಮತ್ತು ಕೂಲಿ ಕೆಲಸಗಳನ್ನು ಮಾಡುತ್ತಿರುವ ಅನ್ಯರಾಜ್ಯಗಳ ಜನರ ಮಕ್ಕಳು ಇಲ್ಲಿಯೇ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಓದಿ ಖಾಸಗಿ ಕಂಪೆನಿಗಳು ಮತ್ತು ಕೇಂದ್ರ ಸರಕಾರದ ಎಲ್ಲಾ ವಿಭಾಗಗಳಲ್ಲೂ ತುಂಬಿಕೊಳ್ಳುತ್ತಿರುವುದನ್ನು ನಮ್ಮ ಜನರು/ವಿದ್ಯಾರ್ಥಿಗಳು ನೋಡುತ್ತಾ ಕುಳಿತಿರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಈಗ ನಮ್ಮ ಗ್ರಾಮೀಣ ಕನ್ನಡ ಶಾಲೆಗಳು ಮತ್ತು ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಪರಿಸ್ಥಿತಿ ಏನು ಎನ್ನುವುದನ್ನು ನಮ್ಮ ರಾಜಕಾರಣಿಗಳು, ನಮ್ಮ ಕನ್ನಡ ಕಟ್ಟಾಳುಗಳು ಮತ್ತು ಸಾಹಿತಿಗಳು ಗಂಭೀರವಾಗಿ ಯೋಚಿಸಬೇಕಿದೆ. ಈಗ ಫ್ರೀಬೀಸ್ ಗ್ಯಾರಂಟಿ ಪಟ್ಟಿಯಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನು ಸೇರಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದು ವಿಷಯವೆಂದರೆ ಈಗ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪ್ರಾಥಮಿಕ/ಮಧ್ಯಮಿಕ ಶಾಲೆಗಳಿಂದಲೇ ಆಧುನಿಕ ಶಿಕ್ಷಣದ ಕಡೆಗೆ ಹೆಚ್ಚು ಒತ್ತಾಯ ಕೊಡುತ್ತಿರುವುದಾಗಿ ತಿಳಿದು ಬಂದಿದೆ.

ಫೆಡರಲ್ ಸಿಸ್ಟಮ್ ಕೆಳಗೆ ರಾಜ್ಯಗಳಿಗೆ ಹಣ ಹಂಚಿಕೆ, ಉತ್ತರ ದಕ್ಷಿಣ ಜನಸಂಖ್ಯಾ ಅಸಮತೋಲನ, ಇಂಗ್ಲಿಷ್ ವ್ಯಾಮೋಹ ಮತ್ತು ಹಿಂದಿ ಹೇರಿಕೆ, ದಕ್ಷಿಣ ಭಾರತದ ಗ್ರಾಮೀಣ ಶಿಕ್ಷಣ ಮತ್ತು ಉದ್ಯೋಗಗಳಿಗೆ ಗಂಡಾಂತರ ತಂದಿದೆ ಎನ್ನುವುದರಲ್ಲಿ ಈಗ ಯಾವ ಸಂದೇಹವೂ ಉಳಿದುಕೊಂಡಿಲ್ಲ. ಇನ್ನೂ ಸ್ವಾರಸ್ಯಕರ ವಿಷಯವೆಂದರೆ ಮಹಾರಾಷ್ಟ್ರವೂ ಸೇರಿ ದಕ್ಷಿಣ ರಾಜ್ಯಗಳು ದೇಶದಲ್ಲಿಯೇ ಹೆಚ್ಚು ತೆರಿಗೆಗಳನ್ನು ಸಂಗ್ರಹಿಸುತ್ತವೆ. ಕರ್ನಾಟಕ ರಾಜ್ಯ ನಾಲ್ಕು ಲಕ್ಷ ಕೋಟಿ ರೂ. ತೆರಿಗೆ ಹಣ ಸಂಗ್ರಹಿಸಿಕೊಟ್ಟರೆ, ರಾಜ್ಯ ಹಿಂದಕ್ಕೆ ಪಡೆದಿದ್ದು ಕೇವಲ 50 ಸಾವಿರ ಕೋ. ರೂ. ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ. ಆದರೆ, ತೀರಾ ಕಡಿಮೆ ತೆರಿಗೆ ಹಣ ಸಂಗ್ರಹಿಸುವ ಉತ್ತರದ ರಾಜ್ಯಗಳು ಫೆಡರಲ್ ಸಿಸ್ಟಮ್ ಕೆಳಗೆ ಮೂವರು/ನಾಲ್ಕು ಪಟ್ಟು ಹೆಚ್ಚು ಹಣವನ್ನು ಪಡೆದುಕೊಳ್ಳುತ್ತಿವೆ. ಅಂದರೆ ಅತ್ತ ಉತ್ತರದ ರಾಜ್ಯಗಳು, ಇತ್ತ ದಕ್ಷಿಣ ರಾಜ್ಯಗಳು ಎರಡೂ ಉದ್ಧಾರವಾಗುತ್ತಿಲ್ಲ. ಕಡಿಮೆ ದುಡಿದವನಿಗೆ ಮೃಷ್ಟಾನ್ನ, ಹೆಚ್ಚು ದುಡಿದವನಿಗೆ ಗಂಜೀನೀರು ಎನ್ನುವಂತಹ ಪರಿಸ್ಥಿತಿ ಈಗ ನಿರ್ಮಾಣಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ.ಎಂ. ವೆಂಕಟಸ್ವಾಮಿ

contributor

Contributor - ಎನ್.ಸಿ.ಮುನಿಯಪ್ಪ

contributor

Similar News