×
Ad

ಈರಣ್ಣ ಕೋಸಗಿಯಿಂದ ಹಸಿರು ರಾಯಚೂರು ಅಭಿಯಾನ

Update: 2025-06-21 11:27 IST

ರಾಯಚೂರು: ಬಿಸಿಲುನಾಡು ಎಂದೇ ಕರೆಯಲ್ಪಡುವ ರಾಯಚೂರನ್ನು ಹಸಿರು ರಾಯಚೂರು ಮಾಡಲು ಅನೇಕ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇಂತಹವರಲ್ಲಿ ಈರಣ್ಣ ಕೋಸಗಿ ಅವರು ಸೇರಿದ್ದಾರೆ.

20 ವರ್ಷಗಳಿಂದ ರಾಯಚೂರಿನ ಮಾವಿನಕೆರೆ, ಆಂಜನೇಯ ಬೆಟ್ಟ, ನೇತಾಜಿನಗರ ಸೇರಿದಂತೆ ಮತ್ತಿತರ ಸಾರ್ವಜನಿಕ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಈರಣ್ಣ ಅವರು ನೆಟ್ಟ ಅನೇಕ ಸಸಿಗಳು ಈಗ ಮರಗಳಾಗಿ ಅನೇಕರಿಗೆ ನೆರಳಾಗಿವೆ.

ತಾನು ಬೆಳೆಸುವುದಲ್ಲದೇ ಶಾಲಾ-ಕಾಲೇಜುಗಳಿಗೆ, ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಮನೆ ಮನೆಗೆ ಭೇಟಿ ನೀಡಿ ಸಸಿಗಳನ್ನು ನೆಟ್ಟು ಪೋಷಿಸುವಂತೆ ಮನವಿ ಮಾಡುತ್ತಾ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಅನೇಕ ಕಡೆಗಳಲ್ಲಿ ಸಸಿಗಳನ್ನು ನೆಟ್ಟಾಗ ಅದನ್ನು ಆಡು, ಮೇಕೆಗಳು ತಿನ್ನುವ ಕಾರಣ ತಮ್ಮ ಮನೆಯಲ್ಲಿಯೇ ಚಿಕ್ಕ ನರ್ಸರಿ ಮಾಡಿ ಗಿಡಗಳನ್ನು ಬೆಳೆಸಿ ಮಧ್ಯಮ ಗಾತ್ರಕ್ಕೆ ತಲುಪಿದಾಗ ಬೇರೆಡೆಗಳಲ್ಲಿ ನೆಟ್ಟು ಪೋಷಿಸುತ್ತಾರೆ ಈರಣ್ಣ ಕೋಸಗಿ. ಸಸಿಗಳನ್ನು ನೆಟ್ಟು ಸುಮ್ಮನಾಗದ ಅವರು, ಪ್ರತಿನಿತ್ಯ ನೀರು ಹಾಕುತ್ತಾ, ರೆಂಬೆ ಕೊಂಬೆಗಳು ಮುರಿದಾಗ ಅನವಶ್ಯ ಭಾಗ ಕತ್ತರಿಸಿ ಗಿಡ ಒಣಗದಂತೆ ನಿರ್ವಹಿಸುತ್ತಾರೆ. ಗಿಡಗಳು ನಾಶವಾಗದಂತೆ ಸ್ವಂತ ಖರ್ಚಿನಲ್ಲಿ ತಂತಿಬೇಲಿ ಹಾಕಿ ಸಂರಕ್ಷಿಸುತ್ತಾರೆ.

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವುದನ್ನು ಕಂಡು ರಾಯಚೂರನ್ನು ತಂಪಾಗಿಸಲು ಕಡ್ಡಾಯವಾಗಿ ಸಸಿ ನೆಡುವಂತೆ ತಮ್ಮ ಸುತ್ತಮುತ್ತಲಿನ ಜನರಿಗೆ ತಿಳಿಹೇಳುವ ಅವರ ಕಾರ್ಯವನ್ನು ಮೆಚ್ಚಿ ಅವರ ಬಡಾವಣೆಯ ಅನೇಕರು ಅವರೊಂದಿಗೆ ಕೈ ಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗುತ್ತಿದ್ದಾರೆ.

ಪರಿಸರ ಸಂರಕ್ಷಣೆಯೇ ನಿತ್ಯ ಕಾಯಕ

45 ವರ್ಷದ ಈರಣ್ಣ ಕೋಸಗಿ, ಆರಂಭದಲ್ಲಿ ಕೂಲಿ ಕೆಲಸ, ಖಾಸಗಿ ಕಂಪೆನಿಯಲ್ಲಿ ಕೆಲಸ, ಮಕ್ಕಳಿಗೆ ಟ್ಯೂಷನ್ ನೀಡುತ್ತಾ ಪರಿಸರ ಸಂರಕ್ಷಣೆಗೆ ಮುಂದಾಗಿದ್ದರು. ಆದರೆ ಈಗ ಟ್ಯೂಷನ್ ಮಾತ್ರ ನಿಡುತ್ತಾ ಚಿಕ್ಕ ಪುಟ್ಟ ಕೆಲಸ ಮಾಡಿ ಜೀವನ ನಡೆಸುವ ಜೊತೆಗೆ ದಿನ ಪೂರ್ತಿ ಗಿಡಮರಗಳ ಪೋಷಣೆಯ ನಿತ್ಯ ಕಾಯಕ ತೊಡಗಿಸಿಕೊಂಡಿದ್ದಾರೆ. ಅಡ್ಡಾದಿಡ್ಡಿಯಾಗಿ ಬೆಳೆದ ಗಿಡಗಳನ್ನು ಸರಿಯಾಗಿ ಬೆಳೆಯುವ ಹಾಗೆ ಕಟ್ಟಿಂಗ್ ಮಾಡುವುದು. ಅಲ್ಲದೆ ಸಸಿ ಬೆಳೆದು, ಆಸರೆ ಇಲ್ಲದೇ ನೆಲಕ್ಕೆ ಬಿದ್ದದ್ದನ್ನು ಕಂಡು ಅವುಗಳಿಗೆ ಆಸರೆಯಾಗಿ ಕಟ್ಟಿಗೆಯೊಂದನ್ನು ನೆಡುತ್ತಾರೆ. ಗಿಡದ ಸುತ್ತ ನೀರು ನಿಲ್ಲುವಂತೆ ಪಾತಿ ಮಾಡುತ್ತಾರೆ. ಮಣ್ಣನ್ನು ಸಡಿಲ ಮಾಡುತ್ತಾರೆ.

ಮಾವಿನಕೆರೆ ಅಭಿವೃದ್ಧಿಗಾಗಿ ಗಿಡಗಳ ನಾಶ: ಆಕ್ರೋಶ

ನಗರದ ಹೃದಯ ಭಾಗದಲ್ಲಿರುವ ಆಮ್ ತಲಾಬ್ (ಮಾವಿನಕೆರೆ) ಯ ದಡದ ಸಾಯಿಬಾಬಾ ಮಂದಿರ, ಝಹಿರಾಬಾದ್ ಬಡಾವಣೆಗೆ ಹೊಂದಿಕೊಂಡ ಕೆರೆಯ ದಡ ಸೇರಿ ಕೆರೆಯ ನಾಲ್ಕು ಭಾಗದಲ್ಲಿ ಅವರು 16 ವರ್ಷಗಳ ಹಿಂದೆ ಸಸಿಗಳನ್ನು ನೆಟ್ಟಿದ್ದರು. ಅದು ಈಗ ಮರವಾಗಿ ಬೆಳೆದಿವೆ. ಇತ್ತೀಚೆಗೆ ಮಾವಿನಕೆರೆ ಅಭಿವೃದ್ಧಿಗೆ ಮುಂದಾಗಿರುವ ಜಿಲ್ಲಾಡಳಿತ ಕೆರೆಯ ದಡದಲ್ಲಿ ಕೆಲವು ಮರಗಳನ್ನು ನಾಶ ಮಾಡಿದ್ದು ಇದನ್ನು ಈರಣ್ಣ ಕೋಸಗಿ ಅವರು ಖಂಡಿಸಿ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಕೆರೆ ಅಭಿವೃದ್ಧಿ ಮಾಡಲಿ ನನ್ನ ಅಭ್ಯಂತರವಿಲ್ಲ. ಆದರೆ ಕೆರೆಗೆ ಹೊಂದಿಕೊಂಡ ಗಿಡಗಳನ್ನು ಕತ್ತರಿಸದೇ ಕಾಮಗಾರಿ ಮಾಡಬೇಕು. ಅನೇಕ ವರ್ಷಗಳಿಂದ ಮಕ್ಕಳಂತೆ ಪೋಷಣೆ ಮಾಡಿದ್ದು ಈಗ ಏಕಾಏಕಿ ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡುವುದು ಯಾವ ನ್ಯಾಯ. ಗಿಡಗಳ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕು. ಒಂದು ಗಿಡ ಬೆಳೆಸಲು ವರ್ಷಗಳೇ ಬೇಕಾಗುತ್ತದೆ. ಬೆಳೆದ ಗಿಡ, ಮರಗಳನ್ನು ಕಣ್ಣು ಮುಂದೆಯೇ ನಾಶವಾದರೆ ಅತಿಯಾದ ನೋವಾಗುತ್ತದೆ ಎಂದು ಭಾವುಕರಾಗಿ ಈರಣ್ಣ ಅಸಮಾಧಾನ ಹೊರ ಹಾಕಿದರು. ಮಾವಿನಕೆರೆಯ ಸುತ್ತಮುತ್ತ ಒತ್ತುವರಿ ಮಾಡಿ ಬೃಹತ್ ಕಟ್ಟಡ, ಸಂಕೀರ್ಣ ನಿರ್ಮಿಸಲಾಗಿದೆ. ಈಗಲೂ ಒತ್ತುವರಿ ಎಗ್ಗಿಲ್ಲದೇ ಮುಂದುವರಿದಿದೆ ಎಂದು ಈರಣ್ಣ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News