×
Ad

ಡೊನಾಲ್ಡ್ ಟ್ರಂಪ್ ಒತ್ತಡ ತಂತ್ರಕ್ಕೆ ನೇಟೊ ಮಣಿಯಿತೇ?

ನೇಟೊ ರಕ್ಷಣಾ ಬಜೆಟನ್ನು ಶೇ. 5ರಷ್ಟು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡರೆ, ಅದು ಟ್ರಂಪ್‌ಗೆ ದೊಡ್ಡ ಜಯವಾಗಿರುತ್ತದೆ. ಏಕೆಂದರೆ ಅವರು ಬಹಳ ಸಮಯದಿಂದ ಅದಕ್ಕಾಗಿ ಒತ್ತಾಯಿಸುತ್ತಿದ್ದರು. ಅಮೆರಿಕ ವಿಶ್ವದ ಅತಿದೊಡ್ಡ ರಕ್ಷಣಾ ರಫ್ತುದಾರ. ಇತರ ದೇಶಗಳು ರಕ್ಷಣೆಗಾಗಿ ತಮ್ಮ ವೆಚ್ಚವನ್ನು ಹೆಚ್ಚಿಸಿದರೆ ಅಮೆರಿಕಕ್ಕೆ ಹೆಚ್ಚಿನ ಲಾಭವಾಗುತ್ತದೆ. ನೇಟೊ ಹಣದಿಂದ ಅಮೆರಿಕ ಮತ್ತೂ ಬಲಗೊಳ್ಳುತ್ತದೆ. ನೇಟೊದ ಇತರ ದೇಶಗಳು ಈ ಗುರಿಯನ್ನು ಎಷ್ಟರ ಮಟ್ಟಿಗೆ ಪೂರೈಸಲು ಸಮರ್ಥವಾಗಿವೆ ಅಥವಾ ಎಷ್ಟರ ಮಟ್ಟಿಗೆ ಒಪ್ಪುತ್ತವೆ ಎಂಬುದನ್ನು ನೋಡಬೇಕಾಗಿದೆ.

Update: 2025-06-27 10:43 IST

✍️ ಎಸ್. ಸುದರ್ಶನ್

ಹೇಗ್‌ನಲ್ಲಿ ನಡೆದ ನೇಟೊ (ಓಂಖಿಔ) ಶೃಂಗ ಸಭೆಯ ಸ್ಕ್ರೀನ್ ಶಾಟ್‌ಗಳನ್ನು ಟ್ರಂಪ್ ಜೂನ್ 24ರಂದು ಟ್ರುಥ್ ಸೋಷಿಯಲ್‌ನಲ್ಲಿ ಶೇರ್ ಮಾಡಿದರು. ಅದರಲ್ಲಿ ನೇಟೊ ಪ್ರಧಾನ ಕಾರ್ಯದರ್ಶಿ ಮರ್ಕ್ ರುಟ್ ಜೊತೆಗಿನ ಟ್ರಂಪ್ ಚಾಟ್‌ಗಳಿದ್ದವು.

ಅನೇಕ ಅಮೆರಿಕನ್ ಅಧ್ಯಕ್ಷರು ಮಾಡಲಾಗದ ಕೆಲಸವನ್ನು ನೀವು ಮಾಡಿದ್ದೀರಿ ಎಂದು ರುಟ್ ಟ್ರಂಪ್ ಅವರನ್ನು ಹೊಗಳಿ ಬರೆದಿದ್ದರು. ಆದರೆ ಸಭೆಗೆ ಮೊದಲು ರುಟ್ ಬರೆದಿದ್ದ ಎರಡು ವಿಷಯಗಳು ಇಡೀ ಯುರೋಪಿನ ಮನಸ್ಸನ್ನು ಕೆಡಿಸಿದವು.

ತಮ್ಮ ಎರಡನೇ ಅವಧಿಯಲ್ಲಿ ಟ್ರಂಪ್ ಶತ್ರುಗಳಿಗಿಂತ ಮಿತ್ರರಾಷ್ಟ್ರಗಳ ಮೇಲೆ ಹೆಚ್ಚು ದಾಳಿ ಮಾಡುತ್ತಿದ್ದಾರೆ. ನೇಟೊ ದೇಶಗಳು ಭದ್ರತೆಗಾಗಿ ಖರ್ಚು ಮಾಡುವುದಿಲ್ಲ. ಅದಕ್ಕಾಗಿಯೇ ಅಮೆರಿಕದ ಖಜಾನೆ ಖಾಲಿಯಾಗುತ್ತಿದೆ ಮತ್ತು ಈಗ ನೇಟೊ ದೇಶಗಳು ತಮ್ಮ ರಕ್ಷಣೆಗಾಗಿ ಹೆಚ್ಚು ವೆಚ್ಚ ಮಾಡಬೇಕಿದೆ ಎಂದು ಟ್ರಂಪ್ ಹೇಳುತ್ತಾ ಬಂದಿದ್ದಾರೆ. ಇದೇ ವಿಷಯಗಳನ್ನು ಮರ್ಕ್ ರುಟ್ ಅವರು ಟ್ರಂಪ್‌ಗೆ ಬರೆದ ಸಂದೇಶದಲ್ಲಿ ಹೇಳಿದ್ದರು.

‘‘ನಾವು ರಕ್ಷಣೆಗಾಗಿ ಶೇ. 5 ಖರ್ಚು ಮಾಡಲು ಎಲ್ಲರ ಮನವೊಲಿಸಿದ್ದೇವೆ’’ ಎಂದು ರುಟ್ ಹೇಳಿದ್ದರು. ಯುರೋಪ್ ದೊಡ್ಡ ಪ್ರಮಾಣದಲ್ಲಿ ಪಾವತಿಸಲಿದೆ ಎಂದೂ ಅವರು ಹೇಳಿದ್ದರು.

ನೇಟೊ ಶೃಂಗಸಭೆ ಜಿಡಿಪಿಯ ಶೇ. 5ನ್ನು ರಕ್ಷಣೆಗಾಗಿ ಖರ್ಚು ಮಾಡುವ ಪ್ರಸ್ತಾವವನ್ನು ಪರಿಗಣಿಸಬಹುದು ಎಂಬ ಸುದ್ದಿ ಬರತೊಡಗಿತು. ಅದು ಬಹಳ ದೊಡ್ಡ ಮೊತ್ತವಾಗಿರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಅಮೆರಿಕ, ಇಸ್ರೇಲ್ ಮುಂತಾದ ಮಿಲಿಟರಿ ಹಾರ್ಡ್‌ವೇರ್‌ನ ದೊಡ್ಡ ರಫ್ತುದಾರರು ಬಹಳಷ್ಟು ಲಾಭ ಪಡೆಯುತ್ತಾರೆ. ಆದರೆ ಯುರೋಪ್‌ನ ಹೆಚ್ಚಿನ ದೇಶಗಳ ಬಜೆಟ್ ಸರಿ ಹೊಂದದೆ ಹೋಗಬಹುದು.

ನೇಟೊ ಅಂದರೆ, ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ. ಇದನ್ನು 1949ರಲ್ಲಿ ಸ್ಥಾಪಿಸಲಾಯಿತು. ಸೋವಿಯತ್ ಒಕ್ಕೂಟದ ವಿಸ್ತರಣೆ ತಡೆಯುವುದು ಅದರ ಉದ್ದೇಶವಾಗಿತ್ತು. ಹಾಗಾದರೆ, ಈಗ ಸೋವಿಯತ್ ಒಕ್ಕೂಟ ಇಲ್ಲದಿರುವಾಗ ಈ ಸಂಸ್ಥೆಯ ಕೆಲಸವೇನು?

ವಾಸ್ತವವಾಗಿ ಈ ಸಂಸ್ಥೆ ಕಾಲಕ್ರಮೇಣ ಸ್ವರೂಪ ಬದಲಾಯಿಸಿಕೊಂಡಿದೆ. 1991ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆಯಾದಾಗ, ಅದು ವಿಶ್ವ ಶಾಂತಿ ಎಂದು ಕರೆಯಲಾಗುವ ಹೊಣೆ ತೆಗೆದುಕೊಂಡಿತು. ವಿಪರ್ಯಾಸ ಅಂದರೆ, ಈ ನೇಟೊ ವಿಶ್ವ ಶಾಂತಿ, ಪ್ರಜಾಪ್ರಭುತ್ವ, ಮಹಿಳಾ ಹಕ್ಕುಗಳು ಅಥವಾ ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವಲ್ಲೆಲ್ಲ ಬಾಂಬ್ ದಾಳಿ ಮಾಡಲು ಪ್ರಾರಂಭಿಸುತ್ತದೆ. ಯುಗೊಸ್ಲಾವಿಯಾ, ಕೊಸೊವೊ, ಅಫ್ಘಾನಿಸ್ತಾನ ಮೊದಲಾದೆಡೆ ಇದನ್ನು ಕಂಡಿದ್ದೇವೆ.

ನೇಟೊನಲ್ಲಿ ಒಟ್ಟು 32 ಸದಸ್ಯ ದೇಶಗಳಿವೆ. ಇವುಗಳಲ್ಲಿ ಅಮೆರಿಕ, ಕೆನಡಾ, ಫ್ರಾನ್ಸ್, ಇಟಲಿ, ಬ್ರಿಟನ್, ತುರ್ಕಿಯಾ, ಜರ್ಮನಿಯಂತಹ ಪ್ರಬಲ ದೇಶಗಳೂ ಸೇರಿವೆ. ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಹೊಸದಾಗಿ ಸೇರ್ಪಡೆಯಾಗಿವೆ.

ಫಿನ್‌ಲ್ಯಾಂಡ್ 2023ರಲ್ಲಿ ಮತ್ತು ಸ್ವೀಡನ್ 2024ರಲ್ಲಿ ಈ ಸಂಸ್ಥೆಯನ್ನು ಸೇರಿದವು. ಅವುಗಳ ಸೇರ್ಪಡೆಗೆ ತುರ್ಕಿಯ ದೊಡ್ಡ ಅಡಚಣೆ ಉಂಟುಮಾಡಿತ್ತು. ಏಕೆಂದರೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಈ ದೇಶಗಳಲ್ಲಿದೆ. ಅದನ್ನು ತುರ್ಕಿಯವು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುತ್ತದೆ. ಕಡೆಗೆ ಅವುಗಳ ಸೇರ್ಪಡೆಯನ್ನು ತುರ್ಕಿಯ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಿತು.

ನೇಟೊ ಜಂಟಿ ಮಿಲಿಟರಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಇಡೀ ಸಂಸ್ಥೆಯ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಎಲ್ಲಾ ಸದಸ್ಯರು ಅದರ ರಕ್ಷಣೆಗೆ ತಮ್ಮ ಸೈನ್ಯ ನಿಯೋಜಿಸಬೇಕಾಗುತ್ತದೆ. ಇದು ನೇಟೊದ ಐದನೇ ವಿಧಿಯಲ್ಲಿದೆ.

ಸೆಪ್ಟಂಬರ್ 11, 2001ರಂದು ಅಮೆರಿಕದ ಮೇಲಿನ ಭಯೋತ್ಪಾದಕ ದಾಳಿಯ ನಂತರ ನೇಟೊ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತು. ಆನಂತರ ಅಮೆರಿಕನ್ ಸೇನೆ 20 ವರ್ಷಗಳ ಕಾಲ ಅಲ್ಲಿಯೇ ಇತ್ತು. ಶತಕೋಟಿ ಡಾಲರ್ ಖರ್ಚು ಮಾಡಿ 2021ರಲ್ಲಿ ಅಲ್ಲಿಂದ ವಾಪಸಾಯಿತು.

ನೇಟೊ ತನ್ನದೇ ಆದ ಸೈನ್ಯವನ್ನು ಹೊಂದಿಲ್ಲ. ಬಿಕ್ಕಟ್ಟಿನ ಸಮಯದಲ್ಲಿ, ಎಲ್ಲಾ ದೇಶಗಳ ಸೈನ್ಯ ಒಟ್ಟಾಗಿ ಹೋರಾಡಬೇಕಿರುತ್ತದೆ. ನೇಟೊ ಸದಸ್ಯ ರಾಷ್ಟ್ರಗಳು ಒಟ್ಟು 35 ಲಕ್ಷ ಸೈನಿಕರ ಬಲ ಹೊಂದಿವೆ. ನೇಟೊ ಸದಸ್ಯ ರಾಷ್ಟ್ರಗಳ ಸೈನ್ಯ ಕಾಲಕಾಲಕ್ಕೆ ಸಮರಾಭ್ಯಾಸಗಳನ್ನು ನಡೆಸುತ್ತದೆ. ಹಾಗಾದರೆ ಹಣಕಾಸು ಎಲ್ಲಿಂದ ಬರುತ್ತದೆ?

ಇದಕ್ಕಾಗಿಯೇ ಎಲ್ಲಾ ದೇಶಗಳು ತಮ್ಮ ಜಿಡಿಪಿಯ ಶೇ. 2ರಷ್ಟನ್ನು ತಮ್ಮ ರಕ್ಷಣಾ ಬಜೆಟ್‌ನಲ್ಲಿ ತಮ್ಮದೇ ಸೈನ್ಯಕ್ಕಾಗಿ ಖರ್ಚು ಮಾಡಬೇಕು ಎಂಬುದು ನಿಯಮ. ಆದರೆ ವಾಸ್ತವದಲ್ಲಿ ಈ ವೆಚ್ಚ ಮಾಡಲಾಗುತ್ತಿಲ್ಲ.

ಬಹಳಷ್ಟು ಹಣವನ್ನು, ಅಪಾರ ಸಂಪತ್ತನ್ನು ಹೊಂದಿರುವ ಅಮೆರಿಕ ತನ್ನ ಜಿಡಿಪಿಯ ಶೇ. 3.5ನ್ನು ಖರ್ಚು ಮಾಡುವ ಮೂಲಕವೇ ಬರುತ್ತದೆ. ಆದರೆ ನೇಟೊದಲ್ಲಿ ತಮ್ಮ ಜಿಡಿಪಿಯ ಶೇ. 2ನ್ನು ಸಹ ಖರ್ಚು ಮಾಡಲು ಸಾಧ್ಯವಾಗದ ಅನೇಕ ದೇಶಗಳಿವೆ. ಅದಕ್ಕಾಗಿಯೇ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ನೇಟೊವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು. ‘‘ನಾವೇ ಖರ್ಚು ಮಾಡುವುದಾದರೆ, ನಾವು ಬೇರೆಯವರಿಗಾಗಿ ಏಕೆ ಖರ್ಚು ಮಾಡಬೇಕು?’’ ಎಂಬುದು ಅವರ ಪ್ರಶ್ನೆಯಾಗಿತ್ತು.

2014ರಲ್ಲಿ ರಶ್ಯ ಕ್ರೈಮಿಯಾವನ್ನು ಆಕ್ರಮಿಸಿಕೊಂಡಾಗ, ನೇಟೊ ಅದರ ವಿರುದ್ಧ ಪ್ರತಿಭಟಿಸಿತು. ಆದರೆ ರಶ್ಯದ ವಿರುದ್ಧ ಯುದ್ಧಭೂಮಿಗೆ ಬಹಿರಂಗವಾಗಿ ಪ್ರವೇಶಿಸಲಿಲ್ಲ.

ಪುಟಿನ್ ಉಕ್ರೇನ್‌ಗೆ ಪ್ರವೇಶಿಸಿದಾಗ, ಪೂರ್ವ ಯುರೋಪ್ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳಲ್ಲಿ ಅದು ಬಲಿಷ್ಠ ಎಂಬ ಭೀತಿ ಹರಡಿತು. ನೇಟೊ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಮಾಹಿತಿ ನೀಡಲು ಪ್ರಾರಂಭಿಸಿದವು. ಆದರೆ ತಮ್ಮ ಸೈನ್ಯವನ್ನು ಇಳಿಸಲಿಲ್ಲ.

ಉಕ್ರೇನ್ ನೇಟೊ ಸದಸ್ಯತ್ವ ಪಡೆಯಬಾರದು ಎಂದು ರಶ್ಯ ಹೇಳುತ್ತದೆ. ಅದು ಅದಕ್ಕೆ ಬೆದರಿಕೆ ಒಡ್ಡುತ್ತದೆ.

1997ರ ನಂತರ ನೇಟೊ ಸದಸ್ಯರಾದ ಎಲ್ಲಾ ದೇಶಗಳನ್ನು ನೇಟೊನಿಂದ ತೆಗೆದುಹಾಕಬೇಕು ಮತ್ತು ಭವಿಷ್ಯದಲ್ಲಿ ಯಾವುದೇ ದೇಶವನ್ನು ನೇಟೊಗೆ ಸೇರಿಸಲಾಗುವುದಿಲ್ಲ ಎಂದು ಖಾತರಿ ನೀಡಬೇಕು ಎಂದು ರಶ್ಯ ಹೇಳುತ್ತದೆ.

ಉಕ್ರೇನ್ ಸದಸ್ಯತ್ವ ಪಡೆದರೆ, ರಶ್ಯದ ಪಶ್ಚಿಮ ಗಡಿಯ 2/3ಕ್ಕಿಂತ ಹೆಚ್ಚು ಭಾಗ ನೇರವಾಗಿ ನೇಟೊ ವ್ಯಾಪ್ತಿಗೆ ಬರುತ್ತದೆ. ಬಹುಶಃ ಅದಕ್ಕಾಗಿಯೇ ಟ್ರಂಪ್ ಈಗ ಉಕ್ರೇನನ್ನು ನೇಟೊಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಟ್ರಂಪ್ ರಶ್ಯದೊಂದಿಗೆ ನೇರವಾಗಿ ಹೋರಾಡಲು ಬಯಸುವುದಿಲ್ಲ.

ಟ್ರಂಪ್ ಬಜೆಟ್‌ಗಾಗಿ ನೇಟೊ ದೇಶಗಳನ್ನು ಗುರಿಯಾಗಿಸಿಕೊಂಡು ಈಗ ಉಕ್ರೇನ್‌ಗೆ ಸಂಬಂಧಿಸಿ ಹಿಂದೆ ಸರಿದಿರುವುದು ಯುರೋಪಿನ ನೇಟೊ ದೇಶಗಳಲ್ಲಿ ಆತಂಕ ಮೂಡಿಸಿದೆ. ನಾಳೆ ಟ್ರಂಪ್ ಕೂಡ ತಾನು ಐದನೇ ವಿಧಿಯನ್ನು ನಂಬುವುದಿಲ್ಲ ಎಂದು ಹೇಳಬಹುದು ಎಂಬುದು ಆ ದೇಶಗಳ ಆತಂಕ. ಈಗ ಉಕ್ರೇನ್ ಅನುಭವಿಸಬೇಕಾಗಿರುವ ಸ್ಥಿತಿ ಯುರೋಪನ್ನು ಚಿಂತೆಗೀಡು ಮಾಡಿದೆ.

ಈಗ ಜಿಡಿಪಿಯ ಶೇ. 5 ಖರ್ಚು ಮಾಡಬೇಕಾಗುತ್ತದೆ ಎಂಬ ರುಟ್ ಅವರ ಸಂದೇಶ ಬಂದಿದೆ. ಹಾಗಾಗಿ ಶೃಂಗಸಭೆಯಲ್ಲಿ ಟ್ರಂಪ್, ತಾನು ಐದನೇ ವಿಧಿಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಎಲ್ಲಾ ನೇಟೊ ದೇಶಗಳೊಂದಿಗೆ ಎಲ್ಲಾ ರೀತಿಯಲ್ಲಿ ಇರುವುದಾಗಿ ಟ್ರಂಪ್ ಹೇಳಿದರು.

ಟ್ರಂಪ್ ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಚರ್ಚಿಸಿದರು.

ಅವರು ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ಹಿರೋಶಿಮಾ ಮತ್ತು ನಾಗಸಾಕಿಯೊಂದಿಗೆ ಹೋಲಿಸಿದರು. ‘‘ಹಿರೋಶಿಮಾ ಮತ್ತು ನಾಗಸಾಕಿ ಯೊಂದಿಗೆ ಹೋಲಿಸಲು ನಾನು ಬಯಸುವುದಿಲ್ಲ. ಆದರೆ ವಾಸ್ತವದಲ್ಲಿ ನಾವು ಆಕ್ರಮಣ ಮಾಡಿದರಿಂದಲೇ ಈ ಯುದ್ಧ ಕೊನೆಗೊಂಡಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕಾಗಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಖರ್ಚು ಮಾಡಿದೆ. ಆದರೆ ಇಲ್ಲಿಯವರೆಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’’ ಎಂದರು.

ಅಮೆರಿಕದ ದಾಳಿ ಈ ಯುದ್ಧವನ್ನು ಕೊನೆಗೊಳಿಸಿದೆ ಎಂದು ಟ್ರಂಪ್ ಕೊಚ್ಚಿಕೊಂಡರು. ಅಮೆರಿಕ ಪ್ರವೇಶಿಸದಿದ್ದರೆ ಇರಾನ್ ಇನ್ನೂ ಹೋರಾಡುತ್ತಿತ್ತು ಎಂದರು. ಇರಾನ್ ಮೇಲಿನ ಅಮೆರಿಕದ ದಾಳಿ ಗಾಝಾ ಸಮಸ್ಯೆಯ ಮೇಲೂ ಪರಿಣಾಮ ಬೀರಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದರ ಹೊರತಾಗಿ, ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧದ ಬಗ್ಗೆ ಚರ್ಚಿಸಲಾಯಿತು. ಎಲ್ಲರೂ ಹಣವನ್ನು ಖರ್ಚು ಮಾಡುತ್ತಿರುವುದರಿಂದ ಈ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬೇಕು ಎಂದು ಎಲ್ಲಾ ಸದಸ್ಯರು ಹೇಳಿದರು.

ನೇಟೊ ಸದಸ್ಯ ರಾಷ್ಟ್ರಗಳ ರಕ್ಷಣಾ ಬಜೆಟ್ ಮಿತಿ ಶೇ. 2ರಿಂದ ಶೇ. 5ಗೆ ಹೆಚ್ಚಿಸುತ್ತಿರುವಾಗ, ಅನೇಕ ದೇಶಗಳು ಈ ನಿರ್ಧಾರವನ್ನು ವಿರೋಧಿಸುತ್ತಿವೆ. ಉದಾಹರಣೆಗೆ, ಸ್ಪೇನ್ ತನ್ನ ಜಿಡಿಪಿಯ ಶೇ. 2.1ಕ್ಕಿಂತ ಹೆಚ್ಚು ಹಣವನ್ನು ರಕ್ಷಣೆಗಾಗಿ ಖರ್ಚು ಮಾಡುವುದಿಲ್ಲ ಎಂದು ಹೇಳಿದೆ.

ಏನೇ ಇದ್ದರೂ, ಇದು ಟ್ರಂಪ್ ಅವರ ಒತ್ತಡ ತಂತ್ರ ಎಂಬ ಅಭಿಪ್ರಾಯವೂ ಇದೆ. ಅವರು ಗುರಿಯನ್ನು ತುಂಬಾ ಹೆಚ್ಚಿಸಲು ಬಯಸುತ್ತಾರೆ. ಆ ಶೇ. 5 ಜಿಡಿಪಿ ಒಂದು ದೊಡ್ಡ ಸಂಖ್ಯೆ. ಸಣ್ಣ ದೇಶವಾಗಲಿ ಅಥವಾ ದೊಡ್ಡ ದೇಶವಾಗಲಿ, ಯಾರೂ ಇಷ್ಟೊಂದು ಖರ್ಚು ಮಾಡುವುದಿಲ್ಲ. ಅಮೆರಿಕ ಕೂಡ ಖರ್ಚು ಮಾಡುವುದಿಲ್ಲ.

ಗುರಿಯನ್ನು ಶೇ. 5ಕ್ಕೆ ಹೆಚ್ಚಿಸುವ ಒತ್ತಡ ಹೇರಿದರೆ, ಕನಿಷ್ಠ ಶೇ. 2ರ ಮೂಲ ಬದ್ಧತೆ ಈಡೇರುತ್ತದೆ ಎಂದು ಟ್ರಂಪ್ ಮತ್ತು ಅವರ ಸಲಹೆಗಾರರು ನಂಬಿರಬಹುದು. ಆಗ ಅಮೆರಿಕದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಪ್ರಸ್ತುತ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ವೆಚ್ಚ ಹೆಚ್ಚಿಸುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆಯಿಲ್ಲ ಎಂದು ನೇಟೊ ಮರ್ಕ್ ರುಟ್ ಹೇಳಿದ್ದಾರೆ. ಅದಕ್ಕಾಗಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.

ರಶ್ಯ ಮತ್ತು ಚೀನಾ ತಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತಿರುವ ಬಗ್ಗೆ ಕೂಡ ರುಟ್ ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದ್ದಾರೆ.

ಚೀನಾ, ಉತ್ತರ ಕೊರಿಯಾ ಮತ್ತು ಇರಾನ್ ಕೂಡ ಒಂದು ಸವಾಲಾಗಬಹುದು. ಏಕೆಂದರೆ ಈ ದೇಶಗಳು ಯುದ್ಧಕ್ಕೆ ಪ್ರವೇಶಿಸಲು ಉತ್ಸುಕವಾಗಿವೆ. ಆದ್ದರಿಂದ, ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ ಎಂದಿದ್ದಾರೆ.

ರಕ್ಷಣಾ ಬಜೆಟನ್ನು ಶೇ. 5ರಷ್ಟು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡರೆ, ಅದು ಟ್ರಂಪ್‌ಗೆ ದೊಡ್ಡ ಜಯವಾಗಿರುತ್ತದೆ. ಏಕೆಂದರೆ ಅವರು ಬಹಳ ಸಮಯದಿಂದ ಅದಕ್ಕಾಗಿ ಒತ್ತಾಯಿಸುತ್ತಿದ್ದರು. ಅಮೆರಿಕ ವಿಶ್ವದ ಅತಿದೊಡ್ಡ ರಕ್ಷಣಾ ರಫ್ತುದಾರ. ಇತರ ದೇಶಗಳು ರಕ್ಷಣೆಗಾಗಿ ತಮ್ಮ ವೆಚ್ಚವನ್ನು ಹೆಚ್ಚಿಸಿದರೆ ಅಮೆರಿಕಕ್ಕೆ ಹೆಚ್ಚಿನ ಲಾಭವಾಗುತ್ತದೆ.

ನೇಟೊ ಹಣದಿಂದ ಅಮೆರಿಕ ಮತ್ತೂ ಬಲಗೊಳ್ಳುತ್ತದೆ. ನೇಟೊದ ಇತರ ದೇಶಗಳು ಈ ಗುರಿಯನ್ನು ಎಷ್ಟರ ಮಟ್ಟಿಗೆ ಪೂರೈಸಲು ಸಮರ್ಥವಾಗಿವೆ ಅಥವಾ ಎಷ್ಟರ ಮಟ್ಟಿಗೆ ಒಪ್ಪುತ್ತವೆ ಎಂಬುದನ್ನು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News