×
Ad

ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಹೇಗೆ?

Update: 2025-06-02 12:17 IST

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ,

ನಿನ್ನೆಯ ಕರ್ನಾಟಕ ಅಭಿವೃದ್ಧಿ ಪರಾಮರ್ಶೆ ಸಭೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಕುಸಿದಿರುವ ಬಗ್ಗೆ ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿ, ಸಂಬಂಧಿಸಿದ ಡಿಡಿಪಿಐಗಳಿಗೆ ನೋಟಿಸ್ ಜಾರಿ ಮಾಡುವಂತೆ ತಾವು ನಿರ್ದೇಶನ ನೀಡಿರುವುದು ಸ್ವಾಗತಾರ್ಹ.

ರಾಜ್ಯ ಮಂಡಳಿಗೆ ಸಂಯೋಜನೆ ಹೊಂದಿರುವ ಸರಕಾರಿ, ಸರಕಾರಿ ಅನುದಾನಿತ ಮತ್ತು ಸಾಮಾನ್ಯ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಅತ್ಯಂತ ಬಡ ಹಾಗೂ ಕೆಳವರ್ಗದ ಮಕ್ಕಳಾಗಿದ್ದು, ಈ ಮಕ್ಕಳ ಫಲಿತಾಂಶ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕಳಪೆಯಾಗಿರುವ ಬಗ್ಗೆ ತಾವು ವ್ಯಕ್ತಪಡಿಸಿರುವ ಸಿಟ್ಟು ಸಾತ್ವಿಕ ಮತ್ತು ಕಾಳಜಿಯುಳ್ಳದ್ದಾಗಿದೆ. ಈ ವೈಫಲ್ಯಕ್ಕೆ ಶಿಕ್ಷಣ ಸಚಿವರು ಸೇರಿದಂತೆ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಉತ್ತರದಾಯಿತ್ವ ಮತ್ತು ಹೊಣೆ ಹೊರಬೇಕಾಗಿರುವುದು ನೈತಿಕ ಜವಾಬ್ದಾರಿಯಾಗಿದೆ.

ಆದರೆ, ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಶೇಕಡಾವಾರು ಫಲಿತಾಂಶ ಸುಧಾರಿಸಬೇಕಾದರೆ 1 ರಿಂದ 10 ನೇ ತರಗತಿಯ ಕಲಿಕಾ ವ್ಯವಸ್ಥೆ ಮತ್ತು ಒಟ್ಟು ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಿದೆ. ಒಟ್ಟು ಗುಣಮಟ್ಟ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಿಸದೆ ಕೇವಲ ಪರೀಕ್ಷಾ ವ್ಯವಸ್ಥೆಯಿಂದ ಫಲಿತಾಂಶ ಸುಧಾರಿಸುವುದಿಲ್ಲ ಎಂಬ ಕಟು ಸತ್ಯವನ್ನು ನಾವು ಅರಿಯಬೇಕಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಜೊತೆಗೆ, ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲೇಬೇಕಿದೆ. ಖಾಯಂ ಶಿಕ್ಷಕರು, ಉತ್ತಮ ಕಲಿಕಾ ಕೊಠಡಿ, ಕಲಿಕಾ ವಾತಾವರಣ, ಕಲಿಕೋಪಕರಣ ಮತ್ತು ಶಿಕ್ಷಕರ ನಿರಂತರ ವೃತ್ತಿ ನೈಪುಣ್ಯ ತರಬೇತಿ ಶಿಕ್ಷಕರ ಬೆಂಬಲ ವ್ಯವಸ್ಥೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಿಂದ ಹಿಡಿದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರವರೆಗೆ ಎಲ್ಲರೂ ಕಲಿಕಾ ವ್ಯವಸ್ಥೆಯನ್ನು ಸಕಾರಾತ್ಮಕವಾಗಿ ಮೇಲುಸ್ತುವಾರಿ ಮಾಡಬೇಕಿದೆ.

ಈ ನಿಟ್ಟಿನಲ್ಲಿ, ತಾವು ಈ ಕೆಳಕಂಡ ವಿಷಯಗಳಿಗೆ ಒತ್ತು ನೀಡಬೇಕೆಂದು ನಾನು ತಮ್ಮಲ್ಲಿ ಆಗ್ರಹಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ .

1.ನಮ್ಮ ರಾಜ್ಯದಲ್ಲಿ ಪ್ರೌಢ ಶಾಲಾ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಶೇಕಡಾವಾರು 22.1 ರಷ್ಟಿದೆ. ಇದು ದೇಶದ ಸರಾಸರಿಗಿಂತ (14.1) ಶೇಕಡಾ 8ರಷ್ಟು ಹೆಚ್ಚಿದೆ. ಇದನ್ನು ನಾವು ಗಣನೀಯವಾಗಿ ಕಡಿಮೆ ಮಾಡಬೇಕು.

2.ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಫ್ರೌಡ ಹಂತದವರೆಗೆ ಸರಿಸುಮಾರು ಶೇಕಡ 25 ರಷ್ಟು ಶಿಕ್ಷಕರ ಖಾಯಂ ಹುದ್ದೆಗಳು ಖಾಲಿ ಇವೆ. ವಾಸ್ತವ ಸಂಖ್ಯೆಯಲ್ಲಿ ಇದು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 49,338 ಮತ್ತು ಪ್ರೌಢ ಶಾಲೆಗಳಲ್ಲಿ 11,796 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ತುಂಬಲು ಕಾಲಮಿತಿ ಯೋಜನೆಯನ್ನು ರೂಪಿಸಬೇಕು.

3. ಈ ಖಾಲಿ ಹುದ್ದೆಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ, 40,000 ಪ್ರಾಥಮಿಕ ಶಾಲಾ ಮತ್ತು 11,000 ಪ್ರೌಢ ಶಾಲಾ ಹಂತದಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರಕಾರ ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ, ತಾತ್ಕಾಲಿಕವಾಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೇಮಕವಾಗುವ ಅತಿಥಿ ಶಿಕ್ಷಕರಿಗೆ ಕ್ರಮವಾಗಿ ನಿಗದಿಗೊಳಿಸಿರುವ ತಲಾ ರೂ. 12,000 ಮತ್ತು 12,500 ಗೌರವಧನ ಕೌಶಲಾಧಾರಿತ ಕೆಲಸದ ಕನಿಷ್ಠ ವೇತನಕ್ಕಿಂತ ಕಡಿಮೆಯಿದ್ದು, ಅದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

4. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರ ಅಂದರೆ, 8,091 ಪ್ರಾಥಮಿಕ ಮುಖ್ಯ ಶಿಕ್ಷಕರು ಮತ್ತು 676 ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗಳು ಖಾಲಿ ಇದ್ದು ಶಾಲಾ ಹಂತದ ಶೈಕ್ಷಣಿಕ ನಾಯಕತ್ವ ಬಿಕ್ಕಟ್ಟಿನಲ್ಲಿದೆ.

5. ಶಿಕ್ಷಣ ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಸೇರಿ 23 ವರ್ಷಗಳು ಮತ್ತು ಈ ಮೂಲಭೂತ ಹಕ್ಕನ್ನು ಸಾಕಾರಗೊಳಿಸಲು ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರಕಾರವು ರೂಪಿಸಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯ್ದೆ 2009 ಜಾರಿಗೆ ಬಂದು ಸುಮಾರು 15 ವರ್ಷಗಳು ತುಂಬಿದೆ. ಆದರೆ, ನಾವು ಈವರೆಗೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಮೂಲಭೂತ ಸೌಕರ್ಯಗಳಾದ ಖಾಯಂ ಶಿಕ್ಷಕರು, ಕಲಿಕಾ ಕೊಠಡಿ, ಅಗತ್ಯ ಪಾಠೋಪಕರಣ, ಪೀಠೋಪಕರಣ, ಕ್ರೀಡಾ ಸಾಮಗ್ರಿ, ಕುಡಿಯುವ ನೀರು, ಶೌಚಾಲಯ ಇತ್ಯಾದಿಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಆರ್‌ಟಿಇ ಅನುಪಾಲನೆ ಕೇವಲ ಶೇಕಡ.26.3. ಅಂದರೆ, 100 ಶಾಲೆಗಳಲ್ಲಿ ಕೇವಲ 23 ಶಾಲೆಗಳು ಈ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಈ ಕಾರಣದಿಂದ, ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಿನ ಮೂರು ವರ್ಷಕ್ಕೆ ಒಂದು ಕ್ರಿಯಾ ಯೋಜನೆ ರೂಪಿಸಬೇಕು.

ಕರ್ನಾಟಕ ಅಭಿವೃದ್ಧಿ ಮಾದರಿಯ ಭಾಗವಾಗಿ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನು ವಿಸ್ತರಿಸಲು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ವಿಸ್ತರಿಸಲು ಶಿಕ್ಷಣ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವ ಮೂಲಕ ರಾಜ್ಯದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು 18 ವರ್ಷದವರೆಗೆ ನಿಷೇಧಿಸಲು ಮತ್ತು ಸಂವಿಧಾನದ ವಿಧಿ 45 ರ ಆಶಯದಂತೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸಲು ಅಗತ್ಯ ಸೌಕರ್ಯ ಮತ್ತು ನರ್ಸರಿ ಶಿಕ್ಷಕರ ತರಬೇತಿಗೆ / ನೇಮಕಾತಿಗೆ ವಿಶೇಷ ಕ್ರಮಗಳನ್ನು ವಹಿಸಬೇಕು.

ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಬಡವರ ಹಾಗೂ ದಮನಿತರ ಪರವಾಗಿ ಕೆಲಸ ನಿರ್ವಹಿಸುವ ಭರವಸೆಯನ್ನು ಹೊಂದಿರುವ ತಾವು, ರಾಜ್ಯ ಸರಕಾರ ಬಡ ಜನರ ಮೂಲ ಆಶಯವಾಗಿರುವ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಭಾಗವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ ಅದನ್ನು ಗಟ್ಟಿಗೊಳಿಸಲು ಸಂಪನ್ಮೂಲಗಳು ಸೇರಿದಂತೆ ಎಲ್ಲಾ ಬಗೆಯ ಕ್ರಮ ವಹಿಸಬೇಕೆಂದು ನಾನು ತಮ್ಮಲ್ಲಿ ವಿನಮ್ರವಾಗಿ ಆಗ್ರಹಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿರಂಜನಾರಾಧ್ಯ ವಿ.ಪಿ.

contributor

Similar News