ಇನ್‌ಕ್ರೆಡಿಬಲ್ ಇಂಡಿಯಾ, ಅಡೆತಡೆ ಮೀರಿದ ಭಾರತ: ಮೋದಿ ಯುಗವು ಪ್ರವಾಸೋದ್ಯಮವನ್ನು ಮರು ವ್ಯಾಖ್ಯಾನಿಸಿದ ಪರಿ
ಮಹಾಕುಂಭಮೇಳ-2025 PC: PTI
ಕಳೆದ ದಶಕದಲ್ಲಿ, ಭಾರತದ ಪುಣ್ಯ ಕ್ಷೇತ್ರಗಳಿಗೆ ಜನರ ಭೇಟಿ ಕೇವಲ ತೀರ್ಥಯಾತ್ರೆಗೆ ಸೀಮಿತವಾಗಿಲ್ಲ, ಜೊತೆಗೆ ಆ ಸ್ಥಳಗಳನ್ನು ಮರುಶೋಧಿಸಲಾಗಿದೆ. ಪರ್ವತಗಳು ಕೇವಲ ಭೂದೃಶ್ಯಗಳಾಗಿ ಉಳಿದಿಲ್ಲ; ಅವು ಜೀವಂತ ಅಭಯಾರಣ್ಯಗಳಾಗಿವೆ. ಹಿಮದಿಂದ ಆವೃತವಾದ ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಂದ ಹಿಡಿದು ಬೋಧ್ ಗಯಾದ ಧ್ಯಾನದ ಶಾಂತತೆ ಮತ್ತು ಸಾರನಾಥದ ನಿಶ್ಚಲತೆಯವರೆಗೆ, ಭಾರತದ ಆಧ್ಯಾತ್ಮಿಕ ಆತ್ಮವು ಒಂದೊಂದು ಸಮಯದಲ್ಲಿ ಒಬ್ಬ ಯಾತ್ರಿಕನನ್ನು ಪ್ರೇರೇಪಿಸಿದೆ. ಈ ಯುಗದಲ್ಲಿ ಪ್ರವಾಸೋದ್ಯಮವನ್ನು ಕರಪತ್ರಗಳ ಮೂಲಕ ರೂಪಿಸಲಾಗಿಲ್ಲ. ಬದಲಿಗೆ, ಭಕ್ತಿ, ಸ್ಮರಣೆ ಮತ್ತು ಮರುಸಂಪರ್ಕಿಸುವ ನಾಗರಿಕ ಪ್ರಚೋದನೆಯ ಮೂಲಕ ಅದನ್ನು ರೂಪಿಸಲಾಗಿದೆ.
2014 ಮತ್ತು 2024ರ ನಡುವೆ ಉಂಟಾದ ಈ ಆಧ್ಯಾತ್ಮಿಕ ಜಾಗೃತಿಯು ದೇಶದ ಸಾಂಸ್ಕೃತಿಕ ನಕ್ಷೆಯನ್ನು ಮರುರೂಪಿಸಿದೆ. ಒಂದು ಕಾಲದಲ್ಲಿ ದುರಂತದ ಸಂಕೇತವಾಗಿದ್ದ ಕೇದಾರನಾಥವು 2024 ರಲ್ಲಿ 16 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸ್ವಾಗತಿಸಿದೆ. ಈ ಸಂಖ್ಯೆ ಒಂದು ದಶಕದ ಹಿಂದೆ ಕೇವಲ 40,000 ರಷ್ಟಿತ್ತು. ʻಮಹಾಕಾಲʼನಿಗೆ ಯೋಗ್ಯನಗರವಾಗಿ ಪುನರುಜ್ಜೀವನಗೊಂಡ ಉಜ್ಜಯಿನಿಯು 2024 ರಲ್ಲಿ 7.32 ಕೋಟಿ ಪ್ರವಾಸಿಗರನ್ನು ಆಕರ್ಷಿಸಿದೆ. ಪ್ರಕಾಶ ಮತ್ತು ಪಾವಿತ್ರ್ಯದಲ್ಲಿ ಪುನರ್ಜನ್ಮ ಪಡೆದ ಕಾಶಿಯಲ್ಲಿ 11 ಕೋಟಿ ಜನರು ಅದರ ಪವಿತ್ರ ಪಥಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಬೋಧ್ ಗಯಾ ಮತ್ತು ಸಾರನಾಥ್ ಸದ್ದಿಲ್ಲದೆ ಖಂಡಗಳಾದ್ಯಂತ ಪ್ರತಿಧ್ವನಿಸಿದ್ದು, 2023 ರಲ್ಲಿ 30 ಲಕ್ಷಕ್ಕೂ ಹೆಚ್ಚು ಯಾತ್ರಿಕರನ್ನು ಆಕರ್ಷಿಸಿದೆ.
ಇದೆಲ್ಲದರ ಜೊತೆಗೆ, ಅಂಕಿ-ಅಂಶಗಳನ್ನು ಮೀರಿದ ಒಂದು ಅಪೂರ್ವ ಕ್ಷಣಕ್ಕೆ ದೇಶವು ಸಾಕ್ಷಿಯಾಯಿತು – ಅದೇ ಜನವರಿ 2024ರಲ್ಲಿ ಅಯೋಧ್ಯೆಯ ʻರಾಮ ಲಲ್ಲಾʼನ ಪ್ರಾಣ ಪ್ರತಿಷ್ಠಾನ. ಅದು ಕೇವಲ ದೇಗುಲದ ಉದ್ಘಾಟನೆಯಾಗಿರಲಿಲ್ಲ; ಅದು ನಾಗರಿಕರ ಹೃದಯ ಬಡಿತದ ಪುನಃಸ್ಥಾಪನೆಯಾಗಿತ್ತು. ಕೇವಲ ಆರು ತಿಂಗಳಲ್ಲಿ, 11 ಕೋಟಿಗೂ ಹೆಚ್ಚು ಭಕ್ತರು ಇಲ್ಲಿಗೆ ಭೇಟಿ ನೀಡಿದ್ದಾರೆ. ಅವರು ಕೇವಲ ಇಲ್ಲಿನ ಭಕ್ತಿ ಪರಾಕಾಷ್ಠೆಗೆ ಸಾಕ್ಷಿಯಾಗಲು ಬಂದಿದ್ದು ಮಾತ್ರವಲ್ಲ, ಅದರಲ್ಲಿ ತಲ್ಲೀನರಾಗಲು ಇಲ್ಲಿಗೆ ಆಗಮಿಸಿದ್ದಾರೆ. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟವಾದ ʻಮಹಾಕುಂಭ-2025ʼ ಕೂಡ ಅಷ್ಟೇ ಸ್ಮರಣೀಯವಾಗಿದ್ದು, ನಂಬಿಕೆ ಮತ್ತು ಅತಿಶಯದ ಸಂಗಮದಲ್ಲಿ 65 ಕೋಟಿಗೂ ಹೆಚ್ಚು ಯಾತ್ರಾರ್ಥಿಗಳು ಭಾಗವಹಿಸಿದ್ದರು. ಅಯೋಧ್ಯೆ ಮತ್ತು ಪ್ರಯಾಗ್ರಾಜ್ ಒಟ್ಟಾಗಿ ಭಾರತದ ಆಧ್ಯಾತ್ಮಿಕ ಪುನರುಜ್ಜೀವನದ ಅವಳಿ ದೀಪಸ್ತಂಭಗಳಾದವು.
ಇದು ಕೇವಲ ಪ್ರವಾಸೋದ್ಯಮವಾಗಿರಲಿಲ್ಲ - ಇದು ಮತ್ತೆ ನಮ್ಮ ಮೂಲನೆಲೆಗೆ ಮರಳುವಿಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಈ ಮರಳುವಿಕೆಗೆ ಆಕಾರ, ಮೂಲಸೌಕರ್ಯ ಮತ್ತು ಆತ್ಮವನ್ನು ನೀಡಲಾಯಿತು. ಪ್ರವಾಸೋದ್ಯಮ ಈಗ ʻಚೆಕ್ ಲಿಸ್ಟ್ʼ ಆಧರಿತ ಉದ್ಯಮವಾಗಿಲ್ಲ. ಬದಲಿಗೆ ಅದು ಪವಿತ್ರ ಆತ್ಮವನ್ನು ಮರುಶೋಧಿಸುವ ರಾಷ್ಟ್ರೀಯ ಯೋಜನೆಯಾಗಿದೆ. "ಭಾರತದಲ್ಲಿ ಮದುವೆಯಾಗಿ, ಭಾರತಕ್ಕೆ ಭೇಟಿ ನೀಡಿ, ಭಾರತದಲ್ಲಿ ಹೂಡಿಕೆ ಮಾಡಿ" ಎಂಬ ಪ್ರಧಾನಿ ಮೋದಿಯವರ ದೂರದೃಷ್ಟಿಯ ಮಂತ್ರವು ಪ್ರವಾಸೋದ್ಯಮವನ್ನು ಸಾಂಸ್ಕೃತಿಕ ಕರೆಯಾಗಿ ಮರುಸಂಕೇತಿಸಿದೆ.
ಮೊದಲಿನಿಂದಲೂ, ಮೋದಿ ಸರ್ಕಾರವು ಪ್ರವಾಸೋದ್ಯಮವನ್ನು ರಾಷ್ಟ್ರೀಯ ಪುನರುಜ್ಜೀವನದ ಶಕ್ತಿಯಾಗಿ ನೋಡಿತು. ʻಸ್ವದೇಶ ದರ್ಶನʼ ಮತ್ತು ಅದರ ನವೀಕರಿಸಿದ ʻಸ್ವದೇಶ ದರ್ಶನ-2.0ʼ ಉಪಕ್ರಮದ ಮೂಲಕ, ಪ್ರವಾಸೋದ್ಯಮ ಸಚಿವಾಲಯವು ರಾಮಾಯಣ, ಬೌದ್ಧ, ಕರಾವಳಿ ಮತ್ತು ಬುಡಕಟ್ಟು ಮುಂತಾದ ವಿಷಯಾಧಾರಿತ ಸರ್ಕ್ಯೂಟ್ಗಳ ಅಡಿಯಲ್ಲಿ 110 ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ. 2014-15ರಲ್ಲಿ ಪ್ರಾರಂಭಿಸಲಾದ ಮೂಲ ಯೋಜನೆಯಲ್ಲಿ 5,287.90 ಕೋಟಿ ರೂ.ಗಳ 76 ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ʻಸ್ವದೇಶ ದರ್ಶನ- 2.0ʼ ಉಪಕ್ರಮವು 2,106.44 ಕೋಟಿ ರೂ.ಗಳ ವೆಚ್ಚದಲ್ಲಿ ಸುಸ್ಥಿರ ತಾಣಗಳನ್ನು ಅಭಿವೃದ್ಧಿಪಡಿಸಲು ಇನೂ 52 ಯೋಜನೆಗಳನ್ನು ಇದಕ್ಕೆ ಸೇರಿಸಿದೆ.
ʻಸವಾಲು ಆಧರಿತ ಪ್ರವಾಸಿತಾಣ ಅಭಿವೃದ್ಧಿʼ(ಚಾಲೆಂಜ್ ಬೇಸ್ಡ್ ಡೆಸ್ಟಿನೇಷನ್ ಡೆವಲಪ್ಮೆಂಟ್ -ಸಿಬಿಡಿಡಿ) ಉಪ ಯೋಜನೆಯಡಿ 36 ಯೋಜನೆಗಳಿಗೆ 623.13 ಕೋಟಿ ರೂ., ʻಎಸ್ಎಎಸ್ಸಿಐʼ ಯೋಜನೆಯಡಿ 3,295.76 ಕೋಟಿ ರೂ.ಗಳ 40 ಯೋಜನೆಗಳಿಗೆ ಹಸಿರು ನಿಶಾನೆ ತೋರಲಾಗಿದೆ.
ಇದರ ಜೊತೆಗೆ, ʻಪ್ರಸಾದ್ʼ(PRASHAD) ಯೋಜನೆಯು ನವೀಕರಿಸಿದ ಸೌಲಭ್ಯಗಳು, ಬೀದಿದೀಪಗಳು ಮತ್ತು ನೈರ್ಮಲ್ಯದೊಂದಿಗೆ 100 ಯಾತ್ರಾ ಪಟ್ಟಣಗಳನ್ನು ಪುನರುಜ್ಜೀವನಗೊಳಿಸಿತು. ಈ ಪ್ರಯತ್ನಗಳು 2023ರಲ್ಲಿ ಭಾರತಕ್ಕೆ 250 ಕೋಟಿ ದೇಶೀಯ ಪ್ರವಾಸಿಗರ ಭೇಟಿಯನ್ನು ದಾಖಲಿಸಲು ಸಹಾಯ ಮಾಡಿತು- ಇದು ಸಾರ್ವಕಾಲಿಕ ಗರಿಷ್ಠವಾಗಿದೆ.
2024-25ರ ಕೇಂದ್ರ ಆಯವ್ಯಯವು 50 ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಹೂಡಿಕೆ ಮತ್ತು ಹಣಕಾಸು ಸುಗಮಗೊಳಿಸಲು ಈ ತಾಣಗಳನ್ನು ʻಮೂಲಸೌಕರ್ಯ ಹಾರ್ಮೋನೈಸ್ಡ್ ಮಾಸ್ಟರ್ ಲಿಸ್ಟ್ʼಗೆ (ಐಎಚ್ಎಂಎಲ್) ಸೇರಿಸಲಾಗಿದೆ.
ಈ ಪುನರುಜ್ಜೀವನವು ಕೇವಲ ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ. 2018ರಲ್ಲಿ ಅನಾವರಣಗೊಂಡ ಏಕತಾ ಪ್ರತಿಮೆಯು ದೇಶದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಮಾರಕಗಳಲ್ಲಿ ಒಂದಾಗಿದೆ, 2023 ರಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಇದು ಆಕರ್ಷಿಸಿದೆ. ಅದರ ಸುತ್ತಲೂ ಪರಿಸರ ಪ್ರವಾಸೋದ್ಯಮ ಉದ್ಯಾನವನಗಳು, ಟೆಂಟ್ ನಗರಗಳು ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯಗಳು ಪ್ರವರ್ಧಮಾನಕ್ಕೆ ಬಂದದಿದ್ದು, ಇದು ಗೌರವವನ್ನು ಅವಕಾಶವನ್ನಾಗಿ ಪರಿವರ್ತಿಸಿದೆ.
ಭಾರತದ ನಾಗರಿಕ ವಿಶ್ವಾಸವು ದೇಶದ ರಾಜತಾಂತ್ರಿಕತೆಯಲ್ಲಿ ಪ್ರತಿಬಿಂಬಿಸಲು ಪ್ರಾರಂಭಿಸಿದೆ. ಫ್ರಾನ್ಸ್, ಜಪಾನ್, ಯುಎಇ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ನಾಯಕರನ್ನು ದೆಹಲಿಯಲ್ಲಿ ಮಾತ್ರವಲ್ಲದೆ, ವಾರಣಾಸಿ, ಉದಯಪುರ, ಅಯೋಧ್ಯೆ ಮತ್ತು ಮಹಾಬಲಿಪುರಂನಲ್ಲಿ ಸ್ವಾಗತಿಸಲಾಯಿತು. ಭಾರತದ ಮೃದು ಶಕ್ತಿಯು ಇನ್ನು ಮುಂದೆ ಕೇವಲ ಮೃದುವಾಗಿರುವುದು ಮಾತ್ರವಲ್ಲ, ಅದು ಮತ್ತಷ್ಟು ಆಳವಾಗಿದೆ. ನದಿ ವಿಹಾರಗಳು, ದೀಪೋತ್ಸವಗಳು, ಆಧ್ಯಾತ್ಮಿಕ ನಡಿಗೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ರಾಜನೀತಿಯನ್ನು ಹೃದಯಕ್ಕೆ ಹತ್ತಿರವಾದ ವಿಷಯವಾಗಿ ಪರಿವರ್ತಿಸಿವೆ.
ಏತನ್ಮಧ್ಯೆ, ʻಇನ್ಕ್ರೆಡಿಬಲ್ ಇಂಡಿಯಾ-2.0ʼ ಉಪಕ್ರಮವು ರಾಷ್ಟ್ರವನ್ನು ಸ್ಮಾರಕಗಳ ಭೂಮಿಯಿಂದ ಪರಿವರ್ತನೆಯ ಭೂಮಿಯನ್ನಾಗಿ ಪರಿವರ್ತಿಸಿದೆ. ಹೃಷಿಕೇಶದಲ್ಲಿ ಯೋಗ, ಕೇರಳದಲ್ಲಿ ಆಯುರ್ವೇದ, ಈಶಾನ್ಯದಲ್ಲಿ ಬುಡಕಟ್ಟು ಉತ್ಸವಗಳು ಮತ್ತು ಕಛ್ ನಲ್ಲಿ ಕರಕುಶಲ ಹಾದಿಗಳು ರೋಮಾಂಚಕ ಪ್ರವಾಸೋದ್ಯಮ ಪರಿಸರ ವ್ಯವಸ್ಥೆಗೆ ಕಾರಣವಾಗಿವೆ. ಮಾರ್ಕೆಟಿಂಗ್ ಎನ್ನುವುದು ಈಗ ನೆನಪಿನಿಂದ ಬೇರ್ಪಡಿಸಲಾಗದ ವಿಷಯವಾಗಿದೆ.
ಈ ವಲಯದ ಆರ್ಥಿಕ ಹೆಜ್ಜೆಗುರುತು ಅಷ್ಟೇ ಪ್ರಭಾವಶಾಲಿಯಾಗಿ ಬೆಳವಣಿಗೆ ಕಂಡಿದೆ. ಏಪ್ರಿಲ್ 2000 ಮತ್ತು ಡಿಸೆಂಬರ್ 2023ರ ನಡುವೆ, ಭಾರತವು ಪ್ರವಾಸೋದ್ಯಮದಲ್ಲಿ 18 ದಶಲಕ್ಷ ಅಮೆರಿಕನ್ ಡಾಲರ್ ವಿದೇಶ ನೇರ ಹೂಡಿಕೆಯನ್ನು ಆಕರ್ಷಿಸಿದೆ. ಪ್ರಮುಖ ಆತಿಥ್ಯ ಮೂಲಸೌಕರ್ಯ ಯೋಜನೆಗಳು 2014-22 ರಿಂದ 9 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆಯನ್ನು ಕಂಡಿವೆ. ಕೇವಲ 2023ರಲ್ಲೇ, ಭಾರತವು 9.52 ದಶಲಕ್ಷ ವಿದೇಶಿ ಪ್ರವಾಸಿಗರೊಂದಿಗೆ 2.31 ಲಕ್ಷ ಕೋಟಿ (28.7 ಶತಕೋಟಿ ಡಾಲರ್) ವಿದೇಶಿ ವಿನಿಮಯವನ್ನು ಗಳಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.47.9ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಈ ವಲಯವು 2023-24ರಲ್ಲಿ 84.63 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 8.46 ದಶಲಕ್ಷ ಹೆಚ್ಚಾಗಿದೆ - ಇದು ಭಾರತದ ಅಭಿವೃದ್ಧಿ ಮತ್ತು ಉದ್ಯೋಗ ವಲಯಕ್ಕೆ ಮೂಲಾಧಾರವಾಗಿ ಹೊರಹೊಮ್ಮಿದೆ.
ಪ್ರವಾಸೋದ್ಯಮವು ಪೂರ್ಣ-ಪ್ರಮಾಣದ ಯೋಜನೆಯಾಗಿ ವಿಕಸನಗೊಂಡಿದೆ. ʻಅಡಾಪ್ಟ್ ಎ ಹೆರಿಟೇಜ್ʼ ಯೋಜನೆಯು ಪ್ರಮುಖ ತಾಣಗಳಿಗೆ ಸಾಂಸ್ಥಿಕ ಉಸ್ತುವಾರಿಯನ್ನು ಒದಗಿಸಿದರೆ, ʻಉಡಾನ್ʼ ಯೋಜನೆಯು ಶಿರಡಿ, ಜಿರೋ ಮತ್ತು ಮಿನಿಕೋಯ್ ನಂತಹ ದೂರದ ಸ್ಥಳಗಳನ್ನು ವಿಮಾನದ ಮೂಲಕ ಸಂಪರ್ಕಿಸಿದೆ. ಬುಕಿಂಗ್, ಡೇಟಾ ಮತ್ತು ಪ್ರಯಾಣದ ವಿವರಗಳನ್ನು ಒಂದೇ ಸಮಗ್ರ ವೇದಿಕೆಯಲ್ಲಿ ಏಕೀಕರಿಸಲು ʻರಾಷ್ಟ್ರೀಯ ಡಿಜಿಟಲ್ ಪ್ರವಾಸೋದ್ಯಮ ಯೋಜನೆʼಯನ್ನು ಪ್ರಾರಂಭಿಸಲಾಗಿದೆ.
ಒಂದು ಕಾಲದಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದ ಈಶಾನ್ಯ ಭಾರತವು ಈಗ ಕಿರೀಟದ ಮುಕುಟಮಣಿಯಾಗಿ ಹೊರಹೊಮ್ಮಿದೆ. ʻಆಕ್ಟ್ ಈಸ್ಟ್ ನೀತಿʼ ಮತ್ತು ಕೇಂದ್ರೀಕೃತ ಮೂಲಸೌಕರ್ಯಗಳಿಂದಾಗಿ ಅರುಣಾಚಲ, ಸಿಕ್ಕಿಂ ಮತ್ತು ಮೇಘಾಲಯದಂತಹ ರಾಜ್ಯಗಳಲ್ಲಿ ಪ್ರವಾಸಿಗರ ಆಗಮನವು 2014 ಮತ್ತು 2022ರ ನಡುವೆ ದ್ವಿಗುಣಗೊಂಡಿದೆ. ʻರೋಮಾಂಚಕ ಹಳ್ಳಿಗಳುʼ(ವೈಬ್ರೆಂಟ್ ವಿಲೇಜಸ್) ಕಾರ್ಯಕ್ರಮವು ಕಿಬಿತು ಮತ್ತು ಮಾನಾದಂತಹ ದೂರದ ಕುಗ್ರಾಮಗಳನ್ನು ದೇಶಭಕ್ತಿ, ಪ್ರಕೃತಿ ಮತ್ತು ಪರಂಪರೆಯ ತಾಣಗಳಾಗಿ ಪರಿವರ್ತಿಸಿದೆ.
ಪ್ರವಾಸೋದ್ಯಮದ ಕಲ್ಪನೆಯೂ ಒಂದು ಮಹತ್ವಾಕಾಂಕ್ಷೆಯಾಗಿ ಮಾರ್ಪಟ್ಟಿದೆ. "ವೆಡ್ ಇನ್ ಇಂಡಿಯಾ" ಅಭಿಯಾನವು ರಾಜಸ್ಥಾನ ಮತ್ತು ಗೋವಾದಂತಹ ವಿವಾಹ ಕೇಂದ್ರಗಳಲ್ಲಿ ಪ್ರೋತ್ಸಾಹಕಗಳು, ಅಭಿಯಾನಗಳು ಮತ್ತು ಮೂಲಸೌಕರ್ಯ ಬೆಂಬಲವಾಗಿ ಪರಿವರ್ತನೆಗೊಂಡಿತು. ಏತನ್ಮಧ್ಯೆ, ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮವು 2022 ರಲ್ಲಿ 6 ಲಕ್ಷಕ್ಕೂ ಹೆಚ್ಚು ವಿದೇಶಿ ರೋಗಿಗಳನ್ನು ಆಕರ್ಷಿಸಿದೆ - ಭಾರತವನ್ನು ವಿಶ್ವದ ಪ್ರಮುಖ ರೋಗಶಮನ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ.
2023ರಲ್ಲಿ ಭಾರತದ ʻಜಿ 20ʼ ಅಧ್ಯಕ್ಷತೆಯು ಸಾಂಸ್ಕೃತಿಕ ರಾಜತಾಂತ್ರಿಕತೆಯ ಮೇರುಕೃತಿಯಾಗಿದೆ. ದೆಹಲಿಗೆ ಸೀಮಿತವಾಗುವ ಬದಲು, ಖಜುರಾಹೊದಿಂದ ಕುಮರಕೊಮ್ ವರೆಗೆ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾಗತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು, ಈ ಪ್ರತಿಯೊಂದೂ ಸ್ಥಳೀಯ ಕಲೆ, ಆಹಾರ ಮತ್ತು ಪರಂಪರೆಯಿಂದ ಗಮನ ಸೆಳೆಯಿತು. ಜಗತ್ತು ಕೇವಲ ಭಾರತದೊಂದಿಗೆ ಮಾತುಕತೆ ನಡೆಸಲಿಲ್ಲ - ಅದು ಭಾರತವನ್ನು ಅನುಭವಿಸಿತು.
ಆದರೆ ಈ ಎಲ್ಲಾ ಅಂಕಿ-ಸಂಖ್ಯೆಗಳ ಹಿಂದೆ, ನೈಜ ಪರಿವರ್ತನೆ ಎಂದರೆ ಅದು ಆಧ್ಯಾತ್ಮಿಕತೆ. ಭಾರತವು ತನ್ನ ಸ್ಮಾರಕಗಳನ್ನು ನೋಡಲು ಬರುವಂತೆ ಜಗತ್ತನ್ನು ಕೇಳಿಕೊಳ್ಳುವುದನ್ನು ನಿಲ್ಲಿಸಿದೆ. ಭಾರತ ಮಾತೆಯು ತನ್ನ ನೆನಪನ್ನು ಅನುಭವಿಸಲು, ತನ್ನ ಮೌನದಲ್ಲಿ ರೋಗಶಮನ ಹೊಂದಲು ಮತ್ತು ತನ್ನ ವೈವಿಧ್ಯತೆಯನ್ನು ಆಚರಿಸಲು ಜಗತ್ತನ್ನು ಆಹ್ವಾನಿಸುತ್ತಿದ್ದಾಳೆ.
ಈ ನವ ಭಾರತದಲ್ಲಿ, ಪ್ರವಾಸೋದ್ಯಮವು ಕಾಲೋಚಿತವಲ್ಲ - ಅದು ನಾಗರಿಕತೆಯಾಗಿದೆ. ಇಲ್ಲಿ ದರ್ಶನವು ಅಭಿವೃದ್ಧಿಯನ್ನು ಭೇಟಿಯಾಗುತ್ತದೆ, ತೀರ್ಥಯಾತ್ರೆಯು ಪ್ರಗತಿಯನ್ನು ಸಂಧಿಸುತ್ತದೆ ಮತ್ತು ಹಬ್ಬಗಳು ಮೂಲಸೌಕರ್ಯಗಳನ್ನು ಭೇಟಿಯಾಗುತ್ತವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು ಜಗತ್ತನ್ನು ಸ್ವಾಗತಿಸಲಿಲ್ಲ- ಭಾರತ ಮಾತೆಯು ಜಗತ್ತನ್ನು ಅಪ್ಪಿಕೊಂಡಳು.
ಸನ್ಯಾಸಿಗಳು ಬೋಧಿ ಮರವನ್ನು ಪ್ರದಕ್ಷಣೆ ಮಾಡುತ್ತಿರುವ ಸಮಯದಲ್ಲಿ, ಯಾತ್ರಾರ್ಥಿಗಳು ಕೇದಾರನಾಥದ ತಂಗಾಳಿಯಲ್ಲಿ ಮಂತ್ರ ಪಠಿಸುತ್ತಿರುವ ಸಮಯದಲ್ಲಿ, ವಧುಗಳು ಭವ್ಯವಾದ ಗುಮ್ಮಟಗಳ ಕೆಳಗೆ ಮದುವೆಯಾಗುತ್ತಿರುವ ಸಮಯದಲ್ಲಿ ಮತ್ತು ಗಡಿ ಹಳ್ಳಿಗಳು ಕುತೂಹಲಕಾರಿ ಪ್ರಯಾಣಿಕರಿಗೆ ಆತಿಥ್ಯ ವಹಿಸುತ್ತಿರುವ ಈ ಸಮಯದಲ್ಲಿ, ಪ್ರತಿಯೊಂದು ಪವಿತ್ರ ಮಾರ್ಗ ಮತ್ತು ಮೌನ ಪಥಗಳ ಮೂಲಕ ಒಂದು ಸತ್ಯವು ಪ್ರತಿಧ್ವನಿಸುತ್ತದೆ, ಅದೆಂದರೆ: ಭಾರತವು ನೀವು ಭೇಟಿ ನೀಡುವ ತಾಣವಲ್ಲ - ಅದು ಶಾಶ್ವತವಾದದ್ದನ್ನು ಹುಡುಕುತ್ತಾ ನೀವು ಮತ್ತೆ ಮತ್ತೆ ಹಿಂತಿರುಗುವ ದೇಶ.