×
Ad

ಚುನಾವಣಾ ಲಾಭಕ್ಕಾಗಿ ನೈತಿಕ ಬದ್ಧತೆಯನ್ನೇ ಮರೆಯುತ್ತಿದೆಯೇ ಕಾಂಗ್ರೆಸ್?

Update: 2025-08-01 12:55 IST

ಮುಂಬೈ ಸ್ಫೋಟದ ಎಲ್ಲಾ 12 ಆರೋಪಿಗಳನ್ನು 19 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಹೇಗೆ ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಯಿತು ಎಂಬುದು ಕೂಡಾ ಬಯಲಾಗಿದೆ. ಆದರೂ, ಆರೋಪಿಗಳು ಮುಸ್ಲಿಮರು ಎಂಬ ಕಾರಣಕ್ಕಾಗಿ ನಡೆಯುವ ರಾಜಕೀಯ ಮಾತ್ರ ಖುಲಾಸೆ ಬಳಿಕವೂ ಅವರ ಬೆನ್ನು ಬಿಡುತ್ತಿಲ್ಲ.

ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳ ನೋವು ಇಲ್ಲಿ ಅರ್ಥ ಮಾಡಿಕೊಳ್ಳಬಹುದಾದ ಸಂಗತಿ ಎಂಬುದು ನಿಜವಾದರೂ, ಆರೋಪಿಗಳೆಂದು ಯಾರನ್ನು ಇಷ್ಟು ಕಾಲ ಜೈಲ್‌ನಲ್ಲಿ ಇಡಲಾಯಿತೋ ಅವರೆಲ್ಲ ಅಮಾಯಕರು ಎಂದು ಸಾಬೀತಾಗಿರುವುದು ಕೂಡ ಸತ್ಯ. ಆದರೆ, ನ್ಯಾಯದ ಹೆಸರಿನ ರಾಜಕೀಯ ಈಗ ತಾನೆ ಶುರುವಾಗಲು, ಆರೋಪಿಗಳ ಖುಲಾಸೆ ಒಂದು ನೆಪವಾಗಿ ರಾಜಕೀಯ ಪಕ್ಷಗಳಿಗೆ ಒದಗಿದೆ.

ಅಚ್ಚರಿಯೆಂದರೆ, ಕಾಂಗ್ರೆಸ್ ಪಕ್ಷ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸುತ್ತಿರುವುದು.

ಕಾಂಗ್ರೆಸ್ ಹೀಗೇಕೆ ಮಾಡುತ್ತಿದೆ? ನ್ಯಾಯದ ಕುರಿತ ಕಳಕಳಿಯೇ? ಅಥವಾ ಪಕ್ಕಾ ರಾಜಕೀಯ ಲೆಕ್ಕಾಚಾರದ ನಡೆಯೇ? ಹೈಕೋರ್ಟ್ ಬಹಳ ಸ್ಪಷ್ಟವಾಗಿ ಎಲ್ಲವನ್ನೂ ಹೇಳಿರುವಾಗಲೂ, ಕಾಂಗ್ರೆಸ್ ಇಂಥದೊಂದು ಒತ್ತಾಯ ಮಾಡುತ್ತಿರುವುದು ಚುನಾವಣಾ ಲಾಭಕ್ಕಾಗಿ ಒಂದು ನೆಲೆ ರೂಪಿಸುವ ತಂತ್ರಗಾರಿಕೆಯೇ? ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಏಕೆ ತನ್ನ ನೈತಿಕ ಬದ್ಧತೆಗಿಂತಲೂ, ಚುನಾವಣೆಯ ಒತ್ತಡದಲ್ಲಿ ಬಿಜೆಪಿಯಂತಾಗಿಬಿಡುವ ಅನಿವಾರ್ಯತೆಗೆ ಸಿಲುಕುತ್ತಿದೆ?

ಕಾಂಗ್ರೆಸ್ ಇಂಥದೊಂದು ಒತ್ತಾಯ ಮಾಡುತ್ತಿದ್ದಂತೆ, ಅದರ ವಿರುದ್ಧ ಪ್ರಶ್ನೆಗಳೂ ಎದ್ದಿವೆ. ಮಾತ್ರವಲ್ಲ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ನ್ಯಾಯಪರತೆಯ ವಿಷಯದಲ್ಲಿ ಹೇಗೆ ವಿಫಲವಾಗಿತ್ತು ಎಂದೂ ಎತ್ತಿ ತೋರಿಸಲಾಗುತ್ತಿದೆ.

ಕಾಂಗ್ರೆಸ್ ಏನೋ ಮಾಡಲು ಹೋಗಿ, ಬೇಕಿರದ ಮತ್ತೇನನ್ನೋ ಮೈಮೇಲೆ ಎಳೆದುಕೊಳ್ಳುತ್ತಿದೆಯೆ?

ಮುಂಬೈ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಮುಂಬೈ ಕಾಂಗ್ರೆಸ್ ನಾಯಕಿ ವರ್ಷಾ ಗಾಯಕ್ವಾಡ್ ಒತ್ತಾಯಿಸಿ ಸುಪ್ರೀಂ ಕೋರ್ಟ್ ಗೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ಬಾಂಬೆ ಹೈಕೋರ್ಟ್ ತೀರ್ಪಿನ ನಂತರ ವರ್ಷಾ ಗಾಯಕ್ವಾಡ್ ಈ ಪ್ರತಿಕ್ರಿಯೆ ನೀಡಿದ್ದರು.

ಇದರ ಬಗ್ಗೆ ಪ್ರಶ್ನೆಯೆತ್ತಿರುವ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.

ಕಾಂಗ್ರೆಸ್ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ದ್ದಾಗ ನ್ಯಾಯ ನೀಡುವ ವಿಷಯದಲ್ಲಿ ದೊಡ್ಡ ವೈಫಲ್ಯ ಸಂಭವಿಸಿತ್ತು ಎಂದು ಎಐಎಂಪಿಎಲ್‌ಬಿ ಉಪಾಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮೌಲಾನಾ ಉಬೈದುಲ್ಲಾ ಖಾನ್ ಆಝ್ಮಿ ಅವರು ಟೀಕಿಸಿದ್ದಾರೆ. ಅವರು ಹಿರಿಯ ಕಾಂಗ್ರೆಸ್ ನಾಯಕರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಸಲು ಕೋರಿರುವ ಮುಂಬೈ ಕಾಂಗ್ರೆಸ್ ಮುಖ್ಯಸ್ಥೆ ವರ್ಷಾ ಗಾಯಕ್ವಾಡ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೌಲಾನಾ ಉಬೈದುಲ್ಲಾ ಖಾನ್ ಆಝ್ಮಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್ ಅವರಿಗೆ ಆಝ್ಮಿ ಪತ್ರ ಬರೆದಿದ್ದಾರೆ.

2006ರ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ ವಿರುದ್ಧ ವರ್ಷಾ ಗಾಯಕ್ವಾಡ್ ಮಾತಾಡಿರುವುದು ಹೃದಯಹೀನ ಪ್ರತಿಕ್ರಿಯೆಯಾಗಿದೆ ಎಂದು ಉಬೈದುಲ್ಲಾ ಆಝ್ಮಿ ಟೀಕಿಸಿದ್ದಾರೆ.

ವರ್ಷಾ ಅವರ ಹೇಳಿಕೆ, ಆರೆಸ್ಸೆಸ್‌ನವರದೇ ಸಿದ್ಧಾಂತಗಳನ್ನು ನೆನಪಿಸುತ್ತಿರುವುದಾಗಿ ಅವರು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

ಉಬೈದುಲ್ಲಾ ಆಝ್ಮಿ ಅವರು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದವರು ಮತ್ತು 1980ರ ದಶಕದ ಶಾ ಬಾನು ಪ್ರಕರಣದ ಚರ್ಚೆಗಳ ಸಮಯ ದಲ್ಲಿ ಪ್ರಮುಖ ಧ್ವನಿಯಾಗಿದ್ದವರು. ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವೇ ಇದ್ದಾಗ, ನ್ಯಾಯದ ವಿಷಯದಲ್ಲಿ ದೊಡ್ಡ ವೈಫಲ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.

ಅಮಾಯಕರನ್ನು ಬಂಧಿಸಿ 44,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಕ್ಕಾಗಿ ಪೊಲೀಸರನ್ನು ಆಝ್ಮಿ ಟೀಕಿಸಿದ್ದಾರೆ.

ಈ ಅಮಾಯಕರನ್ನು 19 ವರ್ಷಗಳ ನಂತರ ನ್ಯಾಯಾಲಯ ಬಿಡುಗಡೆ ಮಾಡಿದೆ. ಪೊಲೀಸರ ವರದಿಯನ್ನು ಕೋರ್ಟ್ ತಿರಸ್ಕರಿಸಿದೆ. ನಿಜವಾದ ಅಪರಾಧಿಗಳು ಸಿಗದೇ ಹೋದರು ಎಂದು ಉಬೈದುಲ್ಲಾ ಆಝ್ಮಿ ಹೇಳಿದ್ದಾರೆ.

ಅವರ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದು ಕಾಂಗ್ರೆಸ್‌ನ ಈಗಿನ ನಡವಳಿಕೆ ಬಗ್ಗೆ.

ಮುಸ್ಲಿಮರ ಕಲ್ಯಾಣದ ಬಗ್ಗೆ ಮಾತಾಡುವ ಕಾಂಗ್ರೆಸ್ ಈಗ ಖುಲಾಸೆ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂದು ಹೇಳುತ್ತಿದೆ. ನ್ಯಾಯಾಲಯವೇ ಬಿಡುಗಡೆ ಮಾಡಿರು ವಾಗ, ಆರೋಪಿಗಳನ್ನು ಮತ್ತೆ ಜೈಲಿಗೆ ತಳ್ಳಬೇಕು ಎಂದು ವರ್ಷಾ ಬಯಸುತ್ತಿದ್ದಾರೆ ಎಂದು ಉಬೈದುಲ್ಲಾ ಆಝ್ಮಿ ಟೀಕಿಸಿದ್ಧಾರೆ.

ವರ್ಷಾ ಅವರ ಹೇಳಿಕೆ ಕಾಂಗ್ರೆಸ್ ಮುಖಕ್ಕೆ ಹೊಡೆದಂತಿದೆ. ಅವರು ಮುಂಬೈ ಕಾಂಗ್ರೆಸ್ ಅಧ್ಯಕ್ಷರು. ಇದು ಅವರ ವೈಯಕ್ತಿಕ ದೃಷ್ಟಿಕೋನ ಎಂದು ಪಕ್ಷ ಹೇಳಲು ಸಾಧ್ಯವಿಲ್ಲ. ಅದು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ರಾಜಕೀಯ ವೃತ್ತಿಜೀವನದಲ್ಲಿ ಮುಸ್ಲಿಮ್ ಬೆಂಬಲದ ಮೇಲೆಯೇ ಅವಲಂಬಿತವಾಗಿರುವ ಗಾಯಕ್ವಾಡ್ ಅವರು ಹೀಗೆ ಹೇಳಿರುವುದು ಸಮುದಾಯವನ್ನು ಘಾಸಿಗೊಳಿಸಿದೆ ಎಂದು ಉಬೈದುಲ್ಲಾ ಆಝ್ಮಿ ಹೇಳಿದ್ದಾರೆ.

ಇದು ತೀವ್ರ ನೋವು ತಂದಿದೆ ಮತ್ತು ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವಿನ ಕುರಿತ ನಂಬಿಕೆಯನ್ನೇ ಕುಗ್ಗಿಸಿದೆ.ಇದು ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಕಾಂಗ್ರೆಸ್‌ನ ಬದ್ಧತೆಗೆ ಹೊರತಾದ ನಿಲುವನ್ನು ಸೂಚಿಸುತ್ತದೆ ಎಂದು ಆಝ್ಮಿ ಟೀಕಿಸಿದ್ಧಾರೆ.

ಗಾಯಕ್ವಾಡ್ ಅವರ ಹೇಳಿಕೆಗಳನ್ನು ಸಾರ್ವಜನಿಕ ವಾಗಿ ಖಂಡಿಸಬೇಕು ಮತ್ತು ಅವರ ಹೇಳಿಕೆಗಳು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ಅವರು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದ್ದಾರೆ.

19 ವರ್ಷಗಳ ಕಾಲ ವಿಚಾರಣೆ ಮತ್ತು ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಖುಲಾಸೆ ಗೊಂಡವರಿಗೆ ಪರಿಹಾರ ಸಿಗಬೇಕಿದೆ ಎಂದು ಕೂಡ ಅವರು ಒತ್ತಾಯಿಸಿದ್ಧಾರೆ.

ಗಾಯಕ್ವಾಡ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ಪಕ್ಷದ ಬಗ್ಗೆ ಮುಸ್ಲಿಮರ ವಿಶ್ವಾಸ ಮತ್ತಷ್ಟು ಕ್ಷೀಣಿಸುತ್ತದೆ ಮತ್ತು ಪಕ್ಷದ ನೈತಿಕ ಅಡಿಪಾಯ ದುರ್ಬಲಗೊಳ್ಳುತ್ತದೆ ಎಂದು ಉಬೈದುಲ್ಲಾ ಆಝ್ಮಿ ಎಚ್ಚರಿಸಿದ್ದಾರೆ.

ಈಗ ಉಬೈದುಲ್ಲಾ ಆಝ್ಮಿ ಅವರ ಈ ಆಕ್ಷೇಪದ ಬಗ್ಗೆ ಕಾಂಗ್ರೆಸ್ ಯೋಚಿಸಲೇಬೇಕಾಗುತ್ತದೆ.

ಬಾಂಬೆ ಹೈಕೋರ್ಟ್ ಮುಂಬೈ ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದಾಗ, ತನಿಖೆಯಲ್ಲಿನ ಲೋಪಗಳಿಗಾಗಿ ಪ್ರಾಸಿಕ್ಯೂಷನ್ ಅನ್ನು ಖಂಡಿಸಿತ್ತು. ವಿಶ್ವಾಸಾರ್ಹ ಪುರಾವೆಗಳ ಕೊರತೆಯ ಬಗ್ಗೆ ಹೇಳಿತ್ತು. 671 ಪುಟಗಳ ತೀರ್ಪಿನಲ್ಲಿ, ಆರೋಪಿಗಳ ತಪ್ಪೊಪ್ಪಿಗೆ ಪಡೆಯಲು ಚಿತ್ರಹಿಂಸೆ ನೀಡಲಾಗಿತ್ತೆಂಬ ಆರೋಪಗಳನ್ನು ಗಮನಕ್ಕೆ ತೆಗೆದುಕೊಂಡಿತ್ತು. ಹೀಗಿರುವಾಗ, ಕಾಂಗ್ರೆಸ್ ಕಡೆಯಿಂದ ಖುಲಾಸೆಯನ್ನು ಪ್ರಶ್ನಿಸುವ ಹೇಳಿಕೆ ಬರುವುದು ಸಹಜವಾಗಿಯೇ ಅನುಮಾನಗಳಿಗೆ ಕಾರಣವಾಗುತ್ತದೆ. ಅವರ ಕಳಕಳಿ ಏನೇ ಇದ್ದರೂ, ನಿಲುವು ಖುಲಾಸೆಗೊಂಡವರ ವಿರುದ್ಧವಿದೆ ಎನ್ನುವಂತೆ ಧ್ವನಿಸುತ್ತದೆ.

ಮುಂಬೈ ಸರಣಿ ರೈಲು ಸ್ಪೋಟವಾದಾಗ ಮಹಾರಾಷ್ಟ್ರದಲ್ಲಿ ಇದ್ದಿದ್ದು ಕಾಂಗ್ರೆಸ್ ಸರಕಾರ. ಹಾಗಾಗಿ ಆ 12 ಮಂದಿ ಅಮಾಯಕರು 19 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದು ಕಾಂಗ್ರೆಸ್ ಸರಕಾರದ ಅಧೀನದಲ್ಲಿದ್ದ ಎಟಿಎಸ್. ಈಗ ಎಟಿಎಸ್‌ನ ವೈಫಲ್ಯ ಹಾಗೂ ಅದರ ಅಧಿಕಾರಿಗಳ ಪಕ್ಷಪಾತಿ ಧೋರಣೆಯನ್ನು ಬಾಂಬೆ ಹೈಕೋರ್ಟ್ ಇಡೀ ದೇಶದ ಮುಂದೆ ಬಯಲು ಮಾಡಿದೆ. ಆ ಮೂಲಕ ಅಂದಿನ ಕಾಂಗ್ರೆಸ್ ಸರಕಾರ ಕೂಡ ಆ ಪಾಪದಲ್ಲಿ ಪಾಲು ಹೊಂದಿತ್ತು ಎಂಬುದನ್ನು ಸಾಬೀತುಪಡಿಸಿದೆ. ಆದರೆ ಆ ಬಗ್ಗೆ ಒಂದಿಷ್ಟೂ ಪಶ್ಚಾತ್ತಾಪ ಇಲ್ಲದ ಕಾಂಗ್ರೆಸ್ ನಾಯಕಿ ವೋಟಿಗಾಗಿ ಬಿಜೆಪಿ ನಾಯಕರ ಧಾಟಿಯಲ್ಲಿ ಮಾತಾಡುತ್ತಾರೆ. ಇದು ಕಾಂಗ್ರೆಸ್ ನಾಯಕರ ಬದ್ಧತೆ ಹಾಗೂ ಜನಪರ ಕಾಳಜಿಯೇ?

ಅನೇಕ ಸಲ ಸಾಫ್ಟ್ ಹಿಂದುತ್ವದ ವೇಷ ಧರಿಸುವ ಕಾಂಗ್ರೆಸ್‌ನ ಅವಸ್ಥೆ ವರ್ಷಾ ಗಾಯಕ್ವಾಡ್ ಹೇಳಿಕೆ ರೂಪದಲ್ಲೂ ಮತ್ತೊಮ್ಮೆ ಬಿಂಬಿತವಾಗಿದೆ.

ಬಹುಸಂಖ್ಯಾತರ ಮತಗಳು ತಪ್ಪಿಹೋಗಬಹುದು ಎಂಬ ಭೀತಿಯಲ್ಲಿಯೇ ಕಾಂಗ್ರೆಸ್ ಬಹಳ ಸಲ ದ್ವಂದ್ವ ನಿಲುವು ತೋರಿಸುತ್ತ, ವ್ಯರ್ಥ ಒದ್ದಾಡುವುದು ಕಾಣಿಸುತ್ತದೆ. ಈಗ ವರ್ಷಾ ಗಾಯಕ್ವಾಡ್ ಅವರ ಹೇಳಿಕೆ ಕೂಡ ಅದೇ ಭೀತಿಯಲ್ಲಿ ಬಂದುದಾಗಿದೆ.

ರಾಹುಲ್ ಗಾಂಧಿಯವರಂಥ ನಾಯಕರು ಚುನಾವಣಾ ಲಾಭವನ್ನೂ ಮೀರಿ ಸಾಮಾಜಿಕ ಬದ್ಧತೆಯ ಮಾತಾಡುತ್ತಿರುವಾಗ, ತಾವು ಸಂಘ ಪರಿವಾರದ ಸಿದ್ಧಾಂತವನ್ನು ಸ್ಪಷ್ಟವಾಗಿ ಖಂಡಿಸುವವ ರಾಗಿ ಹಾಗೂ ಅದರ ವಿರುದ್ಧ ಹೋರಾಟ ನಡೆಸುವವ ರಾಗಿ ಕಾಣಬೇಕೇ ವಿನಃ ಅದೇ ಜನವಿರೋಧಿ ನೀತಿಯನ್ನು ಅನುಸರಿಸುವವರಾಗಿ ಕಾಣಬಾರದು ಎಂಬ ಪ್ರಜ್ಞೆ ಕಾಂಗ್ರೆಸ್ ನಾಯಕರಿಗೆ ಬರುವುದು ಯಾವಾಗ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಜಿತ್ ಕೆ.ಸಿ.

contributor

Similar News