×
Ad

ಮುಚ್ಚುವ ಭೀತಿಯಲ್ಲಿ ಕೊಡಗು ವಿಶ್ವವಿದ್ಯಾನಿಲಯ; ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

Update: 2025-02-17 14:36 IST

ಮಡಿಕೇರಿ, ಫೆ.16: ಕಳೆದ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಸ್ಥಾಪಿಸಿದ 10 ಹೊಸ ವಿಶ್ವವಿದ್ಯಾಲನಿಯಗಳ ಪೈಕಿ 9 ವಿಶ್ವವಿದ್ಯಾಲನಿಯಗಳನ್ನು ಮುಚ್ಚಲು ರಾಜ್ಯ ಸರಕಾರದ ನಿರ್ಧರಿಸಿದ್ದು, ಕೊಡಗಿನ ಶೈಕ್ಷಣಿಕ ಮಟ್ಟ ಏರಿಕೆ, ಸ್ಥಳೀಯವಾಗಿಯೇ ಉನ್ನತ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಕೊಡಗು ವಿಶ್ವವಿದ್ಯಾನಿಲಯವೂ ಇದೀಗ ಮುಚ್ಚುವ ಭೀತಿಯನ್ನು ಎದುರಿಸುತ್ತಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಿಸಿದ್ದ 10 ಹೊಸ ವಿವಿಗಳ ಪೈಕಿ 9 ವಿವಿಗಳನ್ನು ಮುಚ್ಚಲು ಸಂಪುಟ ಉಪಸಮಿತಿ ತೀರ್ಮಾನ ಕೈಗೊಂಡಿದೆ. ವಿವಿಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಫೆ.13ರಂದು ಮೊದಲ ಸಭೆ ನಡೆದಿದ್ದು, ಸಭೆಯಲ್ಲಿ ಬೀದರ್ ವಿವಿ ಹೊರತುಪಡಿಸಿ, ಕೊಡಗು ವಿವಿ ಸೇರಿ ರಾಜ್ಯದ ಎಲ್ಲ ಹೊಸ 9 ವಿವಿಗಳನ್ನು ಮುಚ್ಚಲು ಉಪಸಮಿತಿ ತೀರ್ಮಾನಿಸಿದೆ. ಆರ್ಥಿಕ ಸಂಕಷ್ಟ ಮತ್ತು ಭೂ ಕೊರತೆಯೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಬೀದರ್ ವಿವಿ 150 ಸಂಯೋಜಿತ ಕಾಲೇಜುಗಳನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ವಿವಿ ಸುಗಮವಾಗಿ ನಡೆಯಲು ಸಂಯೋಜಿತ ಕಾಲೇಜುಗಳ ಶುಲ್ಕ ಮುಖ್ಯ. ಆದ್ದರಿಂದ ಈ ವಿವಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಹೊಸ ವಿವಿಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ರೂ.ಗಳ ಅಗತ್ಯವಿದ್ದು, ಇದರೊಂದಿಗೆ 100 ರಿಂದ 200 ಎಕರೆ ವಿಸ್ತೀರ್ಣದ ಜಾಗ ಅಗತ್ಯವಿದೆ. ಬಹುತೇಕ ವಿವಿಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ. 342 ಕೋಟಿ ರೂ.ಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ, ಮೂಲ ಸೌಕರ್ಯ, ಸಲಕರಣೆ, ವಾಹನ, ಪೀಠೋಪಕರಣ ಇತರ ವಸ್ತುಗಳನ್ನು ಖರೀದಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಕೊಡಗು ವಿವಿ ಮುಚ್ಚುವ ಸ್ಥಿತಿ ಬಂದರೆ, ಈಗಾಗಲೇ ವಿವಿ ಅಧಿನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಪರಿಸ್ಥಿತಿ ಮುಂದೇನು ಎಂಬಂತಾಗಿದೆ.ವಿವಿಗೆ ಸರಕಾರದಿಂದ ಅನುದಾನವೂ ಬಂದಿರಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದೀಗ ಸರಕಾರವೇ ವಿವಿ ಮುಚ್ಚುವ ಬಗ್ಗೆ ಚರ್ಚಿಸಿರುವುದು ಅಸಮಾಧಾನಕ್ಕೂ ಕಾರಣವಾಗಿದೆ.

ಹೊರ ಜಿಲ್ಲೆಯ ವಿವಿಗೆ ಅವಲಂಬನೆ :

ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಇಲ್ಲದಿರುವ ಕಾರಣ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗ ಪಡೆಯುವವರ ಸಂಖ್ಯೆ ಶೇ.15ರಷ್ಟು ಮಾತ್ರವಿದೆ. ನೆರೆಯ ಜಿಲ್ಲೆಯಲ್ಲಿ ಇದರ ಪ್ರಮಾಣ ಹೆಚ್ಚಿದೆ. ಕೊಡಗಿನ ಬಹುತೇಕ ಮಂದಿ ಉನ್ನತ ವ್ಯಾಸಂಗ ಪಡೆಯಲು ಮೈಸೂರು, ಬೆಂಗಳೂರು ಹಾಗೂ ಮಂಗಳೂರನ್ನು ಅವಲಂಬಿಸಿದ್ದಾರೆ. ಇಂತಹ ಸ್ಥಿತಿಯನ್ನು ಮನಗಂಡಿದ್ದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ಸತತ ಪ್ರಯತ್ನದ ಫಲವಾಗಿ ಕೊಡಗು ವಿವಿ ಆರಂಭಗೊಂಭಗೊಡಿತ್ತು. ಇದೀಗ ಕೊಡಗಿನ ಏಕೈಕ ವಿವಿ ಕೊಡಗಿನ ಕೈ ತಪ್ಪುವ ಆತಂಕದಲ್ಲಿದೆ. ಕೊಡಗು ವಿವಿಯನ್ನು ಪಕ್ಕದ ಮಂಗಳೂರು ವಿವಿಗೆ ಸೇರ್ಪಡೆಗೊಳಿಸುವ ಸಾಧ್ಯತೆಯೂ ಇದೆ.

ಹೊಸ ವಿವಿ ಘೋಷಣೆ ಮಾಡಿದ ಬಳಿಕ ಸರಕಾರದಿಂದ ಇದುವರೆಗೂ ಯಾವುದೇ ಅನುದಾನಗಳು ಹರಿದು ಬರದಿದ್ದರೂ ಕೂಡ ತಮ್ಮದೇ ಆದ ಹೊಸ ಅಭಿವೃದ್ಧಿಯ ಆಲೋಚನೆಗಳೊಂದಿಗೆ ಹೊಸದಾದ ವಿವಿಗಳ ಉನ್ನತ ಕುಲಪತಿಗಳು ತಮ್ಮ ಪರಿಧಿಗೆ ಬರುವ ಮಹಾವಿದ್ಯ್ಞಾಜಿಲಯಗಳ ಸಂಯೋಜನೆ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ಈ ಪೈಕಿ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಅವರ ವಿಶೇಷ ಪರಿಶ್ರಮದಿಂದಾಗಿ ಪದವಿ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆ ಹಾಗೂ ಸ್ನಾತಕೋತ್ತರ ಶಿಕ್ಷಣದ ನೋಂದಣಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲಾಗಿತ್ತು. ಯೂನಿವರ್ಸಿಟಿ ಗ್ರಾಂಟ್ ಕಮಿಷನ್‌ನಿಂದ ‘2 ಎಫ್’ ಮಾನ್ಯತೆ ಕೂಡ ಪಡೆಯಲಾಗಿತ್ತು ಹಾಗೂ ಸರಕಾರಗಳಿಂದ ದೊರಕಬಹುದಾದ ವಿವಿಧ ರೀತಿಯ ಅನುದಾನಗಳಿಗಾಗಿ ‘12 ಬಿ’ ಪ್ರಕ್ರಿಯೆಗಳು ಕೂಡ ನಡೆದಿದ್ದವು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಸರಕಾರ ಕೊಡಗು ವಿವಿ ಮುಚ್ಚುವ ನಿರ್ಧಾರ ಕೈಗೊಂಡಿರುವುದು ಮಾತ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯ ಉಪಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆಯೇ ಹೊರತು ಅಧಿಕೃತ ಆದೇಶ ಹೊರಬಂದಿಲ್ಲ. ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳು ದೂರದ ಪ್ರದೇಶಕ್ಕೆ ತೆರಳಿ ಉನ್ನತ ವ್ಯಾಸಂಗ ಪಡೆಯಲು ಇಂದಿಗೂ ಸಾಧ್ಯವಾಗದ ಸ್ಥಿತಿ ಇದೆ. ಆದರಿಂದ ಉನ್ನತ ಶಿಕ್ಷಣ ಪಡೆಯಲು ಕೊಡಗು ವಿವಿಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕವಾಗಿಯೇ ಸರಕಾರ ಮುಂದುವರೆಯುತ್ತದೆ ಎಂಬ ಆಶಯ ನಮ್ಮದು.

- ಪ್ರೊ.ಅಶೋಕ್ ಸಂಗಪ್ಪ ಆಲೂರ, ಕೊಡಗು ವಿವಿಯ ಕುಲಪತಿ

ಅನುದಾನದ ನೆಪವೊಡ್ಡಿ ಕೊಡಗು ವಿವಿಯನ್ನು ಮುಚ್ಚುವ ನಿರ್ಧಾರವನ್ನು ಸರಕಾರ ಕೈಗೊಂಡಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ, ಕೊಡಗು ಬಂದ್ ಮಾಡಬೇಕಾಗುತ್ತದೆ. ಸರಕಾರ ಎರಡು ವರ್ಷದಿಂದ ಒಂದು ಪೈಸೆ ಕೊಡದಿದ್ದರೂ ಕೊಡಗು ವಿವಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕೊಡಗಿಗೆ ಬರುವ ಯೋಜನೆಗಳ ವಿಚಾರದಲ್ಲಿ ರಾಜಕೀಯ ಮಾಡಬಾರದು.

- ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News