ವಿರುಪಸಮುದ್ರ ಗ್ರಾಪಂನಲ್ಲಿ 15ನೇ ಹಣಕಾಸು ಅನುದಾನ ದುರ್ಬಳಕೆ: ಆರೋಪ
ಪಾವಗಡ, ಆ.22: ತಾಲೂಕಿನ ವಿರುಪಸಮುದ್ರ ಗ್ರಾಮ ಪಂಚಾಯತ್‌ನಲ್ಲಿ 15ನೇ ಹಣಕಾಸು ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿವಿಧ ಕಾಮಗಾರಿಗಳನ್ನು ನಡೆಸದೇ ಬಿಲ್ ಮಾಡಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರಾದ ಆಂಜಿನೇಯಲು, ಲಕ್ಷ್ಮೀಕಾಂತ, ಅನಿಲ್ ನಾಯ್ಕ ಸಹಿತ ಗ್ರಾಮದ ಯುವಕರು ಗ್ರಾಪಂ ಎದುರು ಪ್ರತಿಭಟಿಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2024-2025ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಎಸ್‌ಸಿ ಕಾಲನಿಯಲ್ಲಿ ಕುಡಿಯುವ ನೀರು ಸಂಪರ್ಕ, ಸ್ವಚ್ಛತೆ, ಶಾಲಾ ಕೊಠಡಿಗಳಿಗೆ ಬಣ್ಣ, ಶೌಚಾಲಯ ನಿರ್ಮಾಣ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕದ ವಾಹನದ ನಿರ್ವಹಣೆಯ ಕೆಸಲ ಮಾಡದೇ ಬಿಲ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕಾಮಗಾರಿ ಮಾಡದೇ ಬಿಲ್: ವಿರುಪಸಮುದ್ರ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಮಾಡದೇ 70 ಸಾವಿರ, ಘನ ತ್ಯಾಜ್ಯ ವಿಲೇವಾರಿ ವಾಹನ ರಿಪೇರಿಗೆಂದು 1.54 ಲಕ್ಷ ರೂ., ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡದೇ 40 ಸಾವಿರ ರೂ., ಬಸವನಲ್ಲಿ ಗ್ರಾಮದಲ್ಲಿ ಎಸ್.ಸಿ. ಕಾಲನಿಯೂ ಇಲ್ಲ, ಕಾಮಗಾರಿಯೂ ಮಾಡದೇ ಕುಡಿಯುವ ನೀರು ಸಂಪರ್ಕ ಕಾಮಗಾರಿಗೆ 60 ಸಾವಿರ ರೂ., ಡಿಜಿಟಲ್ ಗ್ರಂಥಾಲಯಕ್ಕೆ ಪ್ರಿಂಟರ್ ಇಂಟರ್ ನೆಟ್ ಅಳವಡಿಕೆ ಕೆಲಸ ಮಾಡದೆ 7.2 ಸಾವಿರ ರೂ., ಕಸದ ಬುಟ್ಟಿ ವಿತರಿಸಲಾಗಿದೆ ಎಂದು 30 ಸಾವಿರ ರೂ. ಸೇರಿದಂತೆ ವಿವಿಧ ಕಾಮಗಾರಿಗಳು ಮಾಡದೇ ಬಿಲ್ ಮಾಡಲಾಗಿದೆ ಎಂದು ವಿರುಪಸಮುದ್ರ ಗ್ರಾಮದ ಯುವಕರು ಆರೋಪಿಸಿದರು.
ಕಾಮಗಾರಿಗೆ ಸಂಬಂಧಿಸಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಉತ್ತಮ್,ಕಾರ್ಯನಿರ್ವಾಹಣಾ ಅಧಿಕಾರಿ