ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಬೆಂಬಲಿಸಬೇಕಾಗಿದೆ

Update: 2024-05-25 08:30 GMT

ಮಾನ್ಯರೇ,

ಇತ್ತೀಚೆಗೆ ಮಾಧ್ಯಮಗಳಲ್ಲಿ ಬಹಳ ಸದ್ದು ಮಾಡುತ್ತಿರುವ ಪೆನ್‌ಡ್ರೈವ್ ಪ್ರಕರಣ ಸಾಮಾನ್ಯ ಪ್ರಕರಣವಲ್ಲ. ಇದು ಮಹಿಳಾ ದೌರ್ಜನ್ಯ ಪ್ರಕರಣ. ಆ ಪೆನ್‌ಡ್ರೈವ್ ಯಾರಿಂದಲೋ ಪ್ರಸರಣಗೊಂಡಿತು. ಪ್ರಸರಣಗೊಂಡ ಕಾರಣ ಅತ್ಯಂತ ಘೋರವಾದ ಮಹಿಳಾ ದೌರ್ಜನ್ಯದ ವಿಷಯವೊಂದು ಎಲ್ಲರಿಗೂ ಗೊತ್ತಾಗುವ ಹಾಗಾಯಿತು. ಈಗ ಪೆನ್ ಡ್ರೈವ್ ಹಂಚಿದ್ದು ದೊಡ್ಡ ಅಪರಾಧವೆಂದು ಬಿಂಬಿಸುವ ಮೂಲಕ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯದ ಮುಖ್ಯ ವಿಚಾರವನ್ನು ನಗಣ್ಯಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಈ ಮಹಿಳಾ ದೌರ್ಜನ್ಯದ ಘಟನೆಯ ಹಿಂದೆ ಮುಂದೆ ಇರುವ ಒಂದು ಮುಖ್ಯ ವಿಷಯವನ್ನು ಎಲ್ಲರೂ ಗಮನಿಸಬೇಕಾಗಿದೆ. ಅದೇನೆಂದರೆ ಪುರುಷ ಪ್ರಾಬಲ್ಯದ ಎಗ್ಗಿಲ್ಲದ ಅಭಿವ್ಯಕ್ತಿ. ಪೆನ್‌ಡ್ರೈವ್ ಹಂಚಿದ ವಿಷಯದ ಬಗ್ಗೆಯೇ ಹೇಳಿಕೆ ಪ್ರತಿಹೇಳಿಕೆಗಳು ದಿನನಿತ್ಯ ಸುದ್ದಿಯಾಗುತ್ತಿದೆ ಹೊರತು, ಸಂಬಂಧ ಪಟ್ಟ ವ್ಯಕ್ತಿ ಮಾಡಿದ ಘೋರ ಅತ್ಯಾಚಾರದ ವಿಷಯ ಈಗ ಮುಖ್ಯವಾಗುತ್ತಿಲ್ಲ. ಮಹಿಳಾ ದೌರ್ಜನ್ಯ ಆಗಿರಬಹುದು; ಅಂತಹದ್ದು ಆಗುತ್ತಾ ಇರುತ್ತದೆ, ಅದರಲ್ಲೂ ದೊಡ್ಡ ದೊಡ್ಡ ಸ್ಥಾನಮಾನಗಳನ್ನು ಹೊಂದಿರುವವರಲ್ಲಿ ಇದು ಸಾಮಾನ್ಯ ಎಂಬಂತಹ ಭಾವನೆ ಎಲ್ಲೆಡೆ ಕಂಡುಬರುತ್ತಿದೆ. ಮಹಿಳೆಯ ಮೇಲೆ ಪುರುಷನೋರ್ವ ದೌರ್ಜನ್ಯ ನಡೆಸುವುದು ದೊಡ್ಡ ವಿಷಯವಲ್ಲ ಎಂಬಂತೆ ಎಲ್ಲರೂ ನಡೆದುಕೊಳ್ಳುವುದು ಏಕೆಂದರೆ ಎಲ್ಲರೂ ಈ ಪುರುಷಪ್ರಾಬಲ್ಯವನ್ನು ಒಪ್ಪಿ ನಡೆಯುತ್ತಿರುವುದರಿಂದ. ಮಹಿಳೆಯರು ಕೂಡ ಇದಕ್ಕೆ ಪರೋಕ್ಷವಾಗಿ ಸಹನೆ ತೋರಿದ್ದಾರೆ.

ಸದ್ಯ ಈ ಪ್ರಕರಣದ ಹಿನ್ನೆಲೆಯಲ್ಲ್ ಸಾರ್ವಜನಿಕರೆಲ್ಲ ಎಚ್ಚತ್ತು ತಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕಾಗಿದೆ. ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾವೆಲ್ಲ ಮಹಿಳೆಯರು ಒಳಗಾಗಿದ್ದಾರೋ, ಅವರೆಲ್ಲ ಅಮಾಯಕರು ಮತ್ತು ನಿರಪರಾಧಿಗಳು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ದೌರ್ಜನ್ಯ ನಡೆಸಿದ ವ್ಯಕ್ತಿ ರಾಜಕೀಯವಾಗಿ ಅಧಿಕಾರಯುತನೂ ಆರ್ಥಿಕವಾಗಿ ಸಶಕ್ತನೂ ಆಗಿರುವ ಕಾರಣ, ಮಹಿಳೆಯರು ಈತನ ಒತ್ತಡಕ್ಕೆ ಬಲಿಯಾಗುವುದು ಸಹಜವೇ. ಈತನ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ಅವರು ಅನಿವಾರ್ಯವಾಗಿ ಶರಣಾಗುತ್ತಾರೆ. ಪುರುಷಪ್ರಾಬಲ್ಯವುಳ್ಳ ಸಮಾಜದಲ್ಲಿ ಗಂಡಿನ ದರ್ಪಕ್ಕೆ, ತೆವಲಿಗೆ ಮಹಿಳೆಯರು ಸಹಕರಿಸುವುದು ಅವರು ಮನಃಪೂರ್ವಕ ಮಾಡಿದ ತಪ್ಪಾಗಿರುವುದಿಲ್ಲ.

ಈ ಪ್ರಭಾವಿ ವ್ಯಕ್ತಿಯನ್ನು ಅನುಸರಿಸುವ ಗುಂಪಿನಲ್ಲಿರುವ ಮಹಿಳೆಯರಿರಬಹುದು ಅಥವಾ ಸರಕಾರಿ ಮಟ್ಟದಲ್ಲಿ ತನ್ನದೊಂದು ಸಮಸ್ಯೆ ನಿವಾರಣೆಗಾಗಿ ಆತನ ಬಳಿ ಬಂದ ಮಹಿಳೆಯರಿರಬಹುದು, ಅಥವಾ ಮಹಿಳಾ ಸರಕಾರಿ ಉದ್ಯೋಗಿಗಳು, ಅಧಿಕಾರಿಗಳು, ತಮಗೆ ಅನಿವಾರ್ಯವಾಗಿ ಬೇಕಿದ್ದ ವರ್ಗಾವಣೆಗಾಗಿಯೋ ಇನ್ಯಾವುದೋ ಸಮಸ್ಯೆ ನಿವಾರಣೆಗೆ, ಈ ವ್ಯಕ್ತಿಯ ಬಳಿ ಸಹಾಯ ಕೇಳಿ ಹೋದ ಸಂದರ್ಭ ಇರಬಹುದು; ಆ ಎಲ್ಲ ಸಂದರ್ಭಗಳನ್ನು ಆತ ದುರುಪಯೋಗಪಡಿಸಿ ದೌರ್ಜನ್ಯ ನಡೆಸಿರಬಹುದು. ಈ ಎಲ್ಲ ಮಹಿಳೆಯರು ನಿಜಕ್ಕೂ ನಿರಪರಾಧಿಗಳು. ಪರಿಸ್ಥಿತಿಯ ಬಲಿಪಶುಗಳಾಗಿ ಅವರು ಆತನೊಡನೆ ಸಹಕರಿಸಬೇಕಾಯಿತು ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ವಿವಾಹಿತೆಯಾಗಿರಲಿ, ಅಲ್ಲದಿರಲಿ, ವಯಸ್ಸಾದವರಾಗಿರಲಿ, ಯಾರೇ ಆಗಿರಲಿ, ಒತ್ತಡಕ್ಕೆ ಒಳಪಟ್ಟು ಈ ಪ್ರಬಲ ವ್ಯಕ್ತಿಯ ಮುಂದೆ ಶರಣಾದಾಗ ಅದು ಆತನ ದೌರ್ಜನ್ಯವೇ ಹೊರತು, ಆ ಮಹಿಳೆ ಏಕೆ ಒಪ್ಪಿದಳು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ದುಷ್ಟನಾದ ಪ್ರಭಾವಿ ವ್ಯಕ್ತಿಯೋರ್ವ ನಡೆಸಿದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರನ್ನು ಯಾರೂ ಕೆಟ್ಟ ದೃಷ್ಟಿಯಿಂದ ನೋಡಬಾರದು. ತಪ್ಪು ಮಾಡಿದವರೆಂದು ಭಾವಿಸಬಾರದು. ಅವರು ಅಮಾಯಕರು ಮತ್ತು ನಿರಪರಾಧಿಗಳು. ಅವರ ಬಗ್ಗೆ ಸಹಾನುಭೂತಿ ತೋರಿ ಅವರಿಗೆ ನ್ಯಾಯ ಒದಗಿಸಲು ಎಲ್ಲರೂ ಮುಂದಾಗಬೇಕು. ಒತ್ತಡಕ್ಕೆ ಒಳಗಾಗಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರೂ ಅಷ್ಟೆ. ಅವರು ಕೂಡಾ ತಲೆ ತಗ್ಗಿಸಿ, ತಲೆ ಮರೆಸಿ ನಾವು ಇರಬೇಕಾದವರಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡು ಈ ಪುರುಷ ಪ್ರಾಬಲ್ಯದ ವಿರುದ್ಧ ನಿಲ್ಲುವುದನ್ನು ಕಲಿಯಬೇಕಾಗಿದೆ.

-ಕೆ.ಎಸ್. ಮಂಗಳೂರು

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News