×
Ad

ಜನರ ಹೂಡಿಕೆ ಮುಳುಗುತ್ತಿದ್ದರೂ ಸಫಾರಿಯ ಆನಂದದಲ್ಲಿ ಪ್ರಧಾನಿ ನಿರಾಳ!

ಸೋಮವಾರ ಬೆಳಗ್ಗೆ ಮಾರುಕಟ್ಟೆಯಲ್ಲಿ ಕೆಂಪು ಬಣ್ಣ ನೋಡಿ, ಹೂಡಿಕೆ ಮಾಡಿದವರು ಕಂಗೆಡುತ್ತಿದ್ದರೆ, ಮೋದಿ ಗುಜರಾತ್‌ನ ಗಿರ್ ಕಾಡಿನಲ್ಲಿ ಸಫಾರಿಯನ್ನು ಆನಂದಿಸುತ್ತಿದ್ದರು. ದೇಶದ ಜನರ ದೊಡ್ಡ ಬಿಕ್ಕಟ್ಟುಗಳ ನಡುವೆಯೂ ಅವರಿಗೆ ಯಾವುದೇ ಚಿಂತೆಯಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. 93 ಲಕ್ಷ ಕೋಟಿ ರೂ. ಮುಳುಗಿದ ಬಗ್ಗೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮಾತ್ರ ತುಂಬಾ ನಿರಾಳವಾಗಿದ್ದಾರೆ.

Update: 2025-03-05 12:09 IST

ಕೋಟ್ಯಂತರ ಜನರ ಹೂಡಿಕೆಗಳು ಮುಳುಗುತ್ತಿರುವಾಗ, ಮೋದಿ ದೇವಾಲಯಗಳು, ಧಾರ್ಮಿಕ ಸ್ಥಳಗಳು ಮತ್ತು ಸಫಾರಿಗಳಿಗೆ ಭೇಟಿ ನೀಡುವುದರಲ್ಲಿಯೇ ಮಗ್ನರಾಗಿದ್ದಾರೆ.

ಈ ಐದು ತಿಂಗಳಲ್ಲೇ ರೂ. 93 ಲಕ್ಷ ಕೋಟಿಗಿಂತ ಹೆಚ್ಚು ಮೌಲ್ಯದ ಜನರ ಬಂಡವಾಳ ಮುಳುಗಿಹೋಗಿದೆ. ಆದರೆ ದೇಶದ ಪ್ರಧಾನಿ ಮೋದಿಯವರ ಮುಖದಲ್ಲಿ ಅದರ ಬಗ್ಗೆಯೇನೂ ಚಿಂತೆಯಿಲ್ಲ.

ಸೋಮವಾರ ಬೆಳಗ್ಗೆ ಮಾರುಕಟ್ಟೆಯಲ್ಲಿ ಕೆಂಪು ಬಣ್ಣ ನೋಡಿ, ಹೂಡಿಕೆ ಮಾಡಿದವರು ಕಂಗೆಡುತ್ತಿದ್ದರೆ, ಮೋದಿ ಗುಜರಾತ್‌ನ ಗಿರ್ ಕಾಡಿನಲ್ಲಿ ಸಫಾರಿಯನ್ನು ಆನಂದಿಸುತ್ತಿದ್ದರು. ದೇಶದ ಜನರ ದೊಡ್ಡ ಬಿಕ್ಕಟ್ಟುಗಳ ನಡುವೆಯೂ ಅವರಿಗೆ ಯಾವುದೇ ಚಿಂತೆಯಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. 93 ಲಕ್ಷ ಕೋಟಿ ರೂ. ಮುಳುಗಿದ ಬಗ್ಗೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮಾತ್ರ ತುಂಬಾ ನಿರಾಳವಾಗಿದ್ದಾರೆ.

ನರೇಂದ್ರ ಮೋದಿಗೆ ಜಂಗಲ್ ಸಫಾರಿಗೆ ಹೋಗಲು ಸಮಯವಿದೆ, ಆದರೆ ಮಣಿಪುರಕ್ಕೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಟೀಕಿಸಿದ್ದಾರೆ. ಅಂದಹಾಗೆ, ಅವರು ಎಂದಿಗೂ ರಜೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವಾಗ ಈ ಪ್ರವಾಸ ಏನು? ಎಂದೂ ಅವರು ಪ್ರಶ್ನಿಸಿದ್ದಾರೆ.

ಮಾರ್ಚ್ 3ರಂದು ಭಾರತದ ಉತ್ಪಾದನಾ ವಲಯ ನಿಧಾನವಾಗಿದೆ. ಇದು 14 ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಬಂದಿದೆ ಎಂಬ ಸುದ್ದಿ ಇದೆ.

ಈ ವಿಷಯವನ್ನು HSBC ಭಾರತದ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕದ ಮಾಸಿಕ ವರದಿಯಲ್ಲಿ ಹೇಳಲಾಗಿದೆ. ಬೇಡಿಕೆಗಳು ಕಡಿಮೆಯಾಗಿವೆ, ಉತ್ಪಾದನೆ ನಿಧಾನವಾಗಿದೆ, ಇದೆಲ್ಲವೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಲಾಗುತ್ತಿದೆ.

ಮೋದಿ ಸರಕಾರದ 10 ವರ್ಷಗಳಲ್ಲಿ ಉತ್ಪಾದನಾ ವಲಯದ ಬಗ್ಗೆ ಇದೇ ರೀತಿಯ ಸುದ್ದಿಗಳು ಬರುತ್ತಲೇ ಇದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ಅವುಗಳ ಬಗ್ಗೆ ಎಂದಿಗೂ ಚಿಂತಿಸಲಿಲ್ಲ ಮತ್ತು ಅವನ್ನು ಬಗೆಹರಿಸುವುದು ಅವರಿಂದ ಸಾಧ್ಯವಾಗಿಲ್ಲ.

2014ಕ್ಕಿಂತ ಮೊದಲು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾಗ ಸರಕಾರವೂ ತೊಂದರೆ ಅನುಭವಿಸುತ್ತಿತ್ತು. ಆದರೆ ಇವೆಲ್ಲವೂ ಈಗ ಹಳೆಯ ವಿಷಯಗಳು.

ಸಾರ್ವಜನಿಕರು ಎಷ್ಟೇ ತೊಂದರೆ ಅನುಭವಿಸಿದರೂ, ಸರಕಾರ ಈಗ ತೊಂದರೆ ಅನುಭವಿಸುವುದಿಲ್ಲ. ಸರಕಾರ ಮಾತ್ರ ಆರಾಮವಾಗಿರುತ್ತದೆ, ಅದು ಸಫಾರಿಯಲ್ಲಿರುತ್ತದೆ.

100 ಕೋಟಿ ಜನರ ಬಳಿ ಆಹಾರ ಪದಾರ್ಥಗಳನ್ನು ಹೊರತುಪಡಿಸಿ ಗ್ರಾಹಕ ವಸ್ತುಗಳನ್ನು ಖರೀದಿಸಲು ಹಣವಿಲ್ಲ. ಕಂಪೆನಿಗಳ ಸರಕುಗಳು ಮಾರಾಟವಾಗುತ್ತಿಲ್ಲ ಎಂಬ ಸುದ್ದಿಗಳಿಂದ ಪ್ರಧಾನಿ ಮೋದಿ ಸ್ವಲ್ಪವೂ ವಿಚಲಿತರಾಗುವುದಿಲ್ಲ.

ಭಾರತದ ಆರ್ಥಿಕತೆಯ ಸ್ಥಿತಿ ಕೆಟ್ಟದಾಗಿದೆ ಮತ್ತು ಷೇರು ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಇದೆ, ಜನರ ಹಣ ಷೇರು ಮಾರುಕಟ್ಟೆಯಲ್ಲಿ ಮುಳುಗುತ್ತಿದೆ. ಆದರೆ ಇದಾವುದೂ ದೇಶದ ಪ್ರಧಾನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು.

ಮಾರುಕಟ್ಟೆ ಏರಿದಾಗೆಲ್ಲ ಅದು ಮೋದಿ ಹೆಸರಿನೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ಮೀಡಿಯಾಗಳು ಹಾಗೆ ಸುದ್ದಿ ಪ್ರಕಟಿಸುತ್ತವೆ.ಮೋದೀಜಿಯಿಂದಾಗಿ ಷೇರು ಮಾರುಕಟ್ಟೆ ಜಿಗಿದಿದೆ ಎಂದು ಭರ್ಜರಿ ಪ್ರಚಾರ ಮಾಡುತ್ತವೆ.

2024ರ ಜೂನ್ 3ರ ‘ಬಿಸಿನೆಸ್ ಟುಡೇ’ಯಲ್ಲಿ ರೂ. 1 ಲಕ್ಷ ಹೂಡಿಕೆ ನಂತರ ಲಾಭ ರೂ. 8 ಲಕ್ಷ ಕೋಟಿಗಳವರೆಗೆ ಬಂದಿದೆ, ಬೆಲೆ ಶೇ.10,000 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಇದೆಲ್ಲವೂ ಮೋದಿ ಸರಕಾರದ ಎರಡನೇ ಅವಧಿಯಲ್ಲಿ ಅಂದರೆ 2019ರಿಂದ 24ರ ನಡುವೆ ಸಂಭವಿಸಿದೆ ಎಂದು ಹೇಳಲಾಗಿದೆ.

2024ರ ಮೇ 31ರ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಪ್ರಕಾರ, ಚುನಾವಣೆ ಹೊತ್ತಿನಲ್ಲಿ ಬೇರೆ ಬೇರೆ ಪಿಎಸ್‌ಯುಗಳ ಷೇರುಗಳು ಒಟ್ಟು ಸೇರಿ ರೂ. 7 ಲಕ್ಷ ಕೋಟಿ ಸಂಪತ್ತು ಹೆಚ್ಚಾಗಿದೆ.

ಇದನ್ನು ಬರೆಯುವಾಗ, ಇದು ಮೋದಿಯವರ ಸ್ವರ್ಣ ಸ್ಪರ್ಶ, ಅಂದರೆ, ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ಎಂಬುದು ಮೋದಿಯವರ ಪವಾಡವೇ? ಎಂಬ ಅಂಶವನ್ನು ಶೀರ್ಷಿಕೆಯಲ್ಲಿ ತರಲಾಗಿತ್ತು.

2024ರ ಫೆಬ್ರವರಿ 8ರ ‘ಇಕನಾಮಿಕ್ ಟೈಮ್ಸ್’ ವರದಿಯಲ್ಲಿ ಪಿಎಸ್‌ಯು ಷೇರುಗಳ ಮೇಲೆ ಮೋದಿಯವರ ಗ್ಯಾರಂಟಿ ಎಂದು ಹೇಳಲಾಗಿತ್ತು.

ಅವಿಶ್ವಾಸ ಮತಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿಯವರ ಲೋಕಸಭಾ ಭಾಷಣದ ನಂತರ 22 ಷೇರುಗಳು ಮಲ್ಟಿಬ್ಯಾಗರ್‌ಗಳಾದವು. ರೂ. 24 ಲಕ್ಷ ಕೋಟಿ ಲಾಭವಿತ್ತು ಎಂಬುದು ಆ ವರದಿಯ ಮುಖ್ಯಾಂಶವಾಗಿತ್ತು.

ನಮ್ಮ ಪ್ರಧಾನಿ ಷೇರು ಮಾರುಕಟ್ಟೆಯಲ್ಲಿ ಹಣ ಹಾಕಲು ಸಲಹೆ ನೀಡುತ್ತಾರೆ, ಎಲ್‌ಐಸಿಯಲ್ಲಿ ಹಣ ಹೂಡಲು ಸಲಹೆ ನೀಡುತ್ತಾರೆ.

ಆದರೆ ಕಳೆದ ಆರು ತಿಂಗಳಲ್ಲಿ ಎಲ್‌ಐಸಿಯ ಷೇರು ಶೇ. 31ರಷ್ಟು ಕುಸಿದಿದೆಯೆಂದು ಅವರನ್ನು ಕೇಳುವವರು ಯಾರು?

ಸೆಪ್ಟಂಬರ್‌ನಲ್ಲಿ ಎಲ್‌ಐಸಿಯ ಒಂದು ಷೇರಿನ ಬೆಲೆ ರೂ. 1,050ಕ್ಕಿಂತ ಹೆಚ್ಚಿತ್ತು. ಮಾರ್ಚ್ 3ರಂದು ಅದರ ಷೇರು ರೂ. 715ಕ್ಕೆ ಏಕೆ ಇಳಿದಿದೆ ಎಂಬ ಪ್ರಶ್ನೆ ಎತ್ತಬೇಕಾಗಿದೆ. ಆದರೆ ಈ ಪ್ರಶ್ನೆ ಕೇಳುವವರು ಯಾರು ಎಂಬುದೇ ದೊಡ್ಡ ಪ್ರಶ್ನೆ

ಜೂನ್ 4ರಂದು ಚುನಾವಣಾ ಫಲಿತಾಂಶಗಳಿಗೆ ಒಂದು ವಾರದ ಮೊದಲು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮಾಧ್ಯಮ ಕಾರ್ಯಕ್ರಮಗಳಲ್ಲಿ ಜೂನ್ 4ರ ಮೊದಲು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಂದರು.

ಹೂಡಿಕೆ ಮಾಡಲಾಯಿತು. ಆದರೆ ಫಲಿತಾಂಶಗಳು ಬಂದ ನಂತರ ಮಾರುಕಟ್ಟೆ ತೀವ್ರವಾಗಿ ಕುಸಿಯಿತು.

ಆ ಸಮಯದಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದರು.

ಅಮಿತ್ ಶಾ ಜೂನ್ 4ರ ಮೊದಲು ಷೇರುಗಳನ್ನು ಖರೀದಿಸಿ ಎಂದು ಹೇಳುತ್ತಾರೆ, ಜೂನ್ 4ರಂದು ಷೇರು ಮಾರುಕಟ್ಟೆ ದಾಖಲೆಗಳನ್ನು ಮುರಿಯುತ್ತದೆ ಎಂದು ನರೇಂದ್ರ ಮೋದಿ ಹೇಳುತ್ತಾರೆ,

ಆಗ ಮಾಧ್ಯಮಗಳು ಸುಳ್ಳು ಮತಗಟ್ಟೆ ಸಮೀಕ್ಷೆಗಳನ್ನು ಬಿಡುಗಡೆ ಮಾಡಿದ್ದವು. ಆದರೆ ಬಿಜೆಪಿಯ ಅಧಿಕೃತ ಆಂತರಿಕ ಸಮೀಕ್ಷೆ ಅವರಿಗೆ ಬರುವುದು 220 ಸ್ಥಾನಗಳು ಮಾತ್ರ ಎಂಬುದನ್ನು ಹೇಳಿತ್ತು. ಈ ಮಾಹಿತಿ ಬಿಜೆಪಿ ನಾಯಕರ ಬಳಿ ಇತ್ತು. ಗುಪ್ತಚರ ಸಂಸ್ಥೆಗಳು ಸರಕಾರಕ್ಕೆ ಅವರ ಸ್ಥಾನಗಳು 200 ರಿಂದ 220ರ ನಡುವೆ ಇರುತ್ತವೆ ಎಂದು ಹೇಳಿದ್ದವು.

ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯಾಗಿತ್ತು. ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಿದ್ದರು ಮತ್ತು ಅದರ ನಂತರ 30 ಲಕ್ಷ ಕೋಟಿ ರೂ.ಗಳ ನಷ್ಟವಾಯಿತು.

ಇದು ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ಹಗರಣ.

ಮಾರುಕಟ್ಟೆ ಏರುತ್ತಿದ್ದಾಗ, ಸುದ್ದಿಗಳಲ್ಲಿ ಮೋದಿಯ ಬಗ್ಗೆ ಬಹಳಷ್ಟು ಬರೆಯಲಾಗುತ್ತಿತ್ತು. ಮೋದಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎಂದು ಬರೆಯಲಾಗುತ್ತಿತ್ತು.

2025ರ ಮಾರ್ಚ್‌ನಲ್ಲಿ ಪಿಎಸ್‌ಯು ಷೇರುಗಳು ಮುಳುಗುತ್ತಿರುವಾಗ ಮತ್ತು ಈಗಲೂ ಮೋದಿಯೇ ಪ್ರಧಾನಿಯಾಗಿರುವಾಗ ಮೋದಿಯ ಹೆಸರು ಆ ಕುಸಿತದ ಜೊತೆ ತಳುಕು ಹಾಕಿಕೊಂಡಿಲ್ಲ.

2025ರ ಫೆಬ್ರವರಿ 28ರ ಸಿಎನ್‌ಬಿಸಿ ಶೀರ್ಷಿಕೆ ಕಳೆದ ಏಳು ತಿಂಗಳಲ್ಲಿ ಪಿಎಸ್‌ಯು ಷೇರುಗಳಲ್ಲಿ ರೂ. 25 ಲಕ್ಷ ಕೋಟಿ ನಷ್ಟದ ಬಗ್ಗೆ ಹೇಳುತ್ತದೆ.

ಆದರೆ ಅದರಲ್ಲಿ ಮೋದಿಯ ಹೆಸರು ಇಲ್ಲ,

2024ರ ಮಾರ್ಚ್ 3ರ ಮನಿ ಕಂಟ್ರೋಲ್ ಹೆಡ್‌ಲೈನ್ ಪಿಎಸ್‌ಒ ಷೇರುಗಳ ಭಾರೀ ಮಾರಾಟದ ಬಗ್ಗೆ ಹೇಳುತ್ತದೆ.

ಬೆಲೆ ಶೇ.60ರಷ್ಟು ಕುಸಿದಿರುವ ಬಗ್ಗೆ ಹೇಳುತ್ತದೆ,

ಮೊದಲು ರೈಲ್ವೆಯ ಷೇರುಗಳ ಬಗ್ಗೆ ಎಷ್ಟು ಚರ್ಚೆ ನಡೆಯುತ್ತಿತ್ತು? ಎಷ್ಟೆಲ್ಲ ಹೆಡ್‌ಲೈನ್‌ಗಳು ಬರುತ್ತಿದ್ದವು? ಆದರೆ ಇಂದು ಆ ಷೇರುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಟ್ರಂಪ್ ಅವರ ತೆರಿಗೆ ನೀತಿಯಿಂದಾಗಿ ರೈಲ್ವೆ ಷೇರುಗಳು ಸಹ ಕುಸಿಯುತ್ತಿವೆಯೇ? ಹಾಗಾದರೆ ಅಶ್ವಿನಿ ವೈಷ್ಣವ್ ರೈಲ್ವೆ ಸಚಿವರಾಗಿ ಏನು ಮಾಡುತ್ತಿದ್ದಾರೆ?

IRCTC ಲಾಭ ಶೇ.30ಕ್ಕೆ ಕುಸಿದಿದೆ. ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಲಾಭ ಶೇ. 45ಕ್ಕೆ ಕುಸಿದಿದೆ.

ಸೆಪ್ಟಂಬರ್‌ನಲ್ಲಿ 600ಕ್ಕಿಂತ ಹೆಚ್ಚಿದ್ದ ರೈಲ್ ವಿಕಾಸ್ ಮಾರ್ಚ್ 3ರಂದು 323ಕ್ಕೆ ಬಂದು ನಿಂತಿದೆ. ರೈಲ್‌ಟೆಲ್ ಕಾರ್ಪೊರೇಷನ್ ಲಾಭ ಸುಮಾರು ಶೇ.45ಕ್ಕೆ ಕುಸಿದಿದೆ. ಐಆರ್‌ಡಿಎ ಲಾಭ ಸಹ ಸುಮಾರು ಶೇ. 40ಕ್ಕೆ ಬಂದಿದೆ. ಸರಕಾರಿ ಕಂಪೆನಿಗಳ ಷೇರುಗಳು ಸಹ ನಕಾರಾತ್ಮಕ ಲಾಭವನ್ನು ನೀಡುತ್ತಿವೆ.

ಮಾರುಕಟ್ಟೆ ಕುಸಿಯುತ್ತದೆ ಮತ್ತು ಚೇತರಿಸಿಕೊಳ್ಳುತ್ತದೆ,

ಆದರೆ ಈಗ ಕುಸಿತ 5 ತಿಂಗಳುಗಳಿಂದ ಮುಂದುವರಿದಿದೆ.

ಈ ಬಾರಿಯ ಕುಸಿತ ದೀರ್ಘವಾಗಿರಲಿದೆ ಎಂದೇ ಎಲ್ಲರೂ ಭಾವಿಸತೊಡಗಿದ್ಧಾರೆ.

ಸೆಪ್ಟಂಬರ್‌ನಲ್ಲಿ ಸೆನ್ಸೆಕ್ಸ್ 85,000 ದಾಟಿತ್ತು ಮತ್ತು ಆ ಎತ್ತರದಿಂದ, ಅದು 73,000ಕ್ಕಿಂತ ಕಡಿಮೆಯಾಗಿದೆ.

ಮಧ್ಯಮ ವರ್ಗದವರ ಬಂಡವಾಳವನ್ನು ಮಾರುಕಟ್ಟೆಯಲ್ಲಿ ಲೂಟಿ ಮಾಡುತ್ತಿದ್ದ ಅದೇ ಸಮಯದಲ್ಲಿ ಬಜೆಟ್ ಅನ್ನು ಮಧ್ಯಮ ವರ್ಗದವರ ಬಜೆಟ್ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು.

ಇದು ಅದ್ಭುತ ಪ್ರಚಾರ ತಂತ್ರವಾಗಿದೆ, ರಾಜಕೀಯ ದೃಷ್ಟಿಕೋನದಿಂದ ಮಾರುಕಟ್ಟೆಯನ್ನು ನೋಡಲು ಪ್ರಾರಂಭಿಸಿದಾಗ ಮಾತ್ರ ಈ ರೀತಿಯ ಪ್ರಚಾರ ಯಶಸ್ವಿಯಾಗುತ್ತದೆ. ಬಲೂನ್ ಗಾಳಿಯಿಂದ ತುಂಬಿತ್ತು ಮತ್ತು ಕಂಪೆನಿಗಳ ಮೌಲ್ಯಮಾಪನ ಹೆಚ್ಚಿಸಲಾಯಿತು ಎಂದೇ ಈಗ ಎಲ್ಲರೂ ಅರ್ಥ ಮಾಡಿಕೊಳ್ಳತೊಡಗಿದ್ದಾರೆ.

ಆದರೆ ಏಕೆ ಇದೆಲ್ಲವೂ ಸಂಭವಿಸಲು ಅವಕಾಶ ನೀಡಲಾಯಿತು?

ಬ್ಯಾಂಕುಗಳ ಬಡ್ಡಿದರಗಳು ಹೆಚ್ಚಾಗುತ್ತಿರಲಿಲ್ಲ, ಎರಡು ತಿಂಗಳಲ್ಲಿ 1 ಕೋಟಿ ಎಸ್‌ಐಪಿ ಖಾತೆಗಳನ್ನು ಮುಚ್ಚಲಾಗಿದೆ.

ಜನರಿಗೆ ಹಣದ ಕೊರತೆಯಿದೆ ಮತ್ತು ಈಗ ಅವರಿಗೆ ಮಾರುಕಟ್ಟೆಯಲ್ಲಿ ನಂಬಿಕೆಯಿಲ್ಲ ಅಥವಾ ಮಾರುಕಟ್ಟೆ ಶೀಘ್ರದಲ್ಲೇ ಸುಧಾರಿಸುತ್ತದೆ ಎಂಬ ಯಾವುದೇ ಭರವಸೆಯೂ ಇಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ,

ಆದರೆ ಸರಕಾರ ಚಿಂತಿತವಾಗಿಲ್ಲ. ಅದು ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ, ಅದು ಬರೀ ಮಾತನಾಡುತ್ತ ಇರುತ್ತದೆ.

ಕಳೆದ 5 ತಿಂಗಳುಗಳಿಂದ ನಿರಂತರ ಕುಸಿತದ ಬಗ್ಗೆ ಚರ್ಚೆ ನಡೆಯುತ್ತಿದೆ.

ಮಾರುಕಟ್ಟೆಯಲ್ಲಿದ್ದ ಮತ್ತು 5 ತಿಂಗಳಲ್ಲಿ 93 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡ ಜನರಿಗೆ ಏನಾಗುತ್ತದೆ?

ಯಾವುದೇ ಹೂಡಿಕೆದಾರರು ತಮ್ಮ ನಷ್ಟವನ್ನು ಇಷ್ಟು ದೀರ್ಘಕಾಲ ಭರಿಸಲು ಸಾಧ್ಯವಾಗುತ್ತದೆಯೇ? ವಿದೇಶಿ ಹೂಡಿಕೆದಾರರು ಏಕೆ ಓಡಿಹೋಗುತ್ತಿದ್ದಾರೆ?

ಜಾಗತಿಕ ಹೂಡಿಕೆದಾರರು ಭಾರತದ ಪ್ರಧಾನಿ ಮೋದಿಯವರನ್ನು ನಂಬಲಿಲ್ಲ ಮತ್ತು ಸೆಪ್ಟಂಬರ್‌ನಿಂದ ಫೆಬ್ರವರಿ ಅಂತ್ಯದವರೆಗೆ ವಿದೇಶಿ ಹೂಡಿಕೆದಾರರು ಭಾರತದಿಂದ ಕೋಟ್ಯಂತರ ಹಣ ಹಿಂದೆಗೆದುಕೊಂಡರು. ಈ ವಿದೇಶಿ ಹೂಡಿಕೆದಾರರು ಭಾರತದಿಂದ ಹಣವನ್ನು ಹಿಂಪಡೆದು ಚೀನಾ ಮತ್ತು ಅಮೆರಿಕದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ.

ವಿದೇಶಿ ಹೂಡಿಕೆದಾರರು ಓಡಿಹೋಗಿ ದೇಶೀಯ ಹೂಡಿಕೆದಾರರು ಸಿಕ್ಕಿಬಿದ್ದರು. ಆದರೆ ಈಗ ದೇಶೀಯ ಹೂಡಿಕೆದಾರರ ಹಣವೂ ಮುಳುಗಿದೆ, ಇಂದು ಹಣಕಾಸು ಸಚಿವರು ಅವರೊಂದಿಗೆ ನಿಂತಿರುವುದು ಏಕೆ ಕಾಣುತ್ತಿಲ್ಲ?

ಮತ್ತೊಂದೆಡೆ ದೊಡ್ಡ ಕೈಗಾರಿಕೋದ್ಯಮಿಗಳು ಇನ್ನೂ ಮಾತನಾಡುತ್ತಿಲ್ಲ,

ಆದರೆ ಷೇರು ಮಾರುಕಟ್ಟೆ ತಜ್ಞರು ನಿಧಾನವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ.

ಈಗ ಜನರು ಅನುಭವಿಸಿರುವ ನಷ್ಟ ಎಂಥದೆಂದರೆ, ಅವರು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಬೇಕಾಗಿದೆ. ಲಾಭ ನಷ್ಟದ ಭ್ರಮೆಯಿಂದ ಮುಕ್ತರಾಗಿರಬೇಕಾಗಿದೆ.

ಏಕೆಂದರೆ ಅವರ ಹಣದ ಬಗ್ಗೆ ಮೋದಿ ಸರಕಾರವಂತೂ ತಲೆಕೆಡಿಸಿಕೊಳ್ಳುವುದಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಸ್. ಸುದರ್ಶನ್

contributor

Similar News