ಆದರ್ಶ ಅಧ್ಯಾಪಕನ ಕಣ್ಮರೆ: ಮರೆಯಲಾಗದ, ಮರೆಯಬಾರದ ರಾವ್ ಸಾರ್
ರಾಧಾಕೃಷ್ಣ ರಾವ್
“ಊರಿಗೆ ಬಂದಾಗ ಒಮ್ಮೆ ಸಿಕ್ಕು ಮಾರಾಯ” ಎಂದು ವಾರಗಳ ಹಿಂದೆಯಷ್ಟೇ ದೂರವಾಣಿ ಮಾತುಕತೆ ವೇಳೆ ಒತ್ತಾಯಿಸಿದ್ದ ಬದ್ರಿಯಾ ಕಾಲೇಜಿನ ನನ್ನ ಅಧ್ಯಾಪಕ ರಾಧಾಕೃಷ್ಣ ರಾವ್ ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ. ಪ್ರಾಯಶಃ ಅದು ತೊಂಬತ್ತರ ದಶಕದ ಆರಂಭದಲ್ಲಿ ಪಿಯು ಕಾಲೇಜಿನಿಂದ ಹೊರಬಂದ ಬಳಿಕ ಅವರೊಂದಿಗಿನ ನನ್ನ ಮೊದಲ ಸಂಭಾಷಣೆ ಇರಬೇಕು. ಆದರೆ ಸುದೀರ್ಘ ಅಂತರದ ಹೊರತಾಗಿಯೂ ನಾವಿಬ್ಬರೂ ತುಂಬಾ ಆತ್ಮೀಯರೇನೋ ಎಂಬಂತೆ ಹರಟಿದ್ದೆವು. ಕಾಲೇಜು ದಿನಗಳ “ರಫ್ ಎಂಡ್ ಟಫ್” ರಾವ್ ಸಾರ್ ಅವರನ್ನು ಕಾಲೆಳೆಯುವ ಅವಕಾಶವನ್ನೂ ನಾನು ಬಿಟ್ಟುಕೊಡಲಿಲ್ಲ. “ನೀವಂತೂ ಬರೇ ನಿಮ್ಮ ಕಣ್ಣಿನಿಂದಲೇ ವಿದ್ಯಾರ್ಥಿಗಳನ್ನು ಕಂಟ್ರೋಲ್ ಮಾಡುತ್ತಿದ್ದಿರಿ” ಎಂದು ಅವರನ್ನು ಕಿಚಾಯಿಸಿದ್ದೆ.
ರಾವ್ ಅಕೌಂಟೆನ್ಸಿ ಅಧ್ಯಾಪಕರಾಗಿ ಪ್ರಾಯಶಃ ತಮ್ಮ ಇಡೀ ವೃತ್ತಿ ಜೀವನವನ್ನು ಬದ್ರಿಯಾ ಪಿ.ಯು. ಕಾಲೇಜಿನ ಅಭ್ಯುದಯಕ್ಕಾಗಿ ಮುಡಿಪಾಗಿಟ್ಟವರು. ಅವರದ್ದು ವಿಶಿಷ್ಟವಾದ ಬೋಧನಾ ಶೈಲಿ. ಅವರಿಗೆ ವಿದ್ಯಾರ್ಥಿಗಳ ಗ್ರಹಿಕೆಯ ಮಟ್ಟವನ್ನು ಅಳೆದು ಸರಳ ಭಾಷೆಯಲ್ಲಿ ವಿಷಯಗಳನ್ನು ಮನದಟ್ಟು ಮಾಡಿಸುವ ಚಾಕಚಕ್ಯತೆಯಿತ್ತು. ಅದರಲ್ಲೂ, ಬೇರೆಲ್ಲೂ ಸೀಟು ಸಿಗದಾಗ “ಕೊನೆಯ ಆಯ್ಕೆ” ಎಂಬಂತೆ ಬದ್ರಿಯಾ ಸಂಸ್ಥೆಯನ್ನು ಸೇರುತ್ತಿದ್ದ ವಿದ್ಯಾರ್ಥಿಗಳಿಗೆ ಭೋಧಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅಂತಹ ವಿದ್ಯಾರ್ಥಿಗಳ ಜತೆ ಏಗಾಡಿ ವರ್ಷ ವರ್ಷವೂ ಒಳ್ಳೆಯ ಫಲಿತಾಂಶವನ್ನು ತರುವಲ್ಲಿ ಇತರ ಅಧ್ಯಾಪಕರ ಜತೆ ದಿವಂಗತ ರಾವ್ ಅವರ ಪಾತ್ರ ಬಹಳ ದೊಡ್ಡದು.
ರಾವ್ ಅವರಿಂದ ಅಕೌಂಟೆನ್ಸಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹೆಸರು ಮಾಡಿ ನಾನಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಅದರಲ್ಲೂ ಕರಾವಳಿಯಲ್ಲಿ ಮುಸ್ಲಿಮರು ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಶಕಗಳಲ್ಲಿ ಕ್ರಾಂತಿಕಾರಿ ಸಾಧನೆ ಮಾಡಿದ್ದರೆ, ಅದರ ಹಿಂದೆಯೂ ರಾವ್ ಅವರಂತಹ ನಿಸ್ವಾರ್ಥ ಅಧ್ಯಾಪಕರ ಶ್ರಮವಿದೆ. ತಮ್ಮ ಪ್ರತಿಭೆ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಬಳಸಿ ಅವರಿಗೆ ಬದ್ರಿಯಾದ ಬದಲು ಬೇರಾವುದೇ ವಿದ್ಯಾಸಂಸ್ಥೆಗೆ ಸೇರಿ ದೊಡ್ಡ ಪ್ರಮಾಣದಲ್ಲಿ ಹೆಸರು ಮಾಡಬಹುದಾಗಿತ್ತು. ಆದರೆ ಅವರು ಚಾರಿತ್ರಿಕವಾಗಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿಯುತ್ತಲೇ ಬಂದ ಮುಸ್ಲಿಮ್ ಸಮುದಾಯದ ಹೊಸ ತಲೆಮಾರಿನ ಭವಿಷ್ಯ ರೂಪಿಸುವುದರಲ್ಲಿ ತಮ್ಮ ಜೀವವನ್ನು ಸವೆಸಿದರು. ಹಾಗಾಗಿ ಕರಾವಳಿಯ ಮುಸ್ಲಿಮ್ ಸಮುದಾಯ ಅವರಿಗೆ ಸದಾ ಕೃತಜ್ಞವಾಗಿರಬೇಕು.
ರಾವ್ ಅವರಿಗೆ ಮುಸ್ಲಿಮ್ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಇರುವ ಬದ್ಧತೆಯ ಧ್ಯೋತಕ ಎಂಬಂತೆ ಕಳೆದ ತಿಂಗಳು ರಾವ್ ಅವರು ಷೆಫರ್ಡ್ ವಿದ್ಯಾಸಂಸ್ಥೆಯವರು ಬೀದರ್ ಶಾಹೀನ್ ಸಂಸ್ಥೆಯ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಅರಂಭಿಸಲು ಹೊರಟಿರುವ ನೀಟ್ ಕೋಚಿಂಗ್ ಕೇಂದ್ರದ ಕಟ್ಟಡಗಳನ್ನು ವೀಕ್ಷಿಸಲು ತೆರಳಿದ್ದರು. ಅದರ ಫೋಟೋವನ್ನು ಬದ್ರಿಯಾ ಹಳೆವಿದ್ಯಾರ್ಥಿಗಳ ಗುಂಪಿನಲ್ಲಿ ಹಂಚಿಕೊಂಡಿದ್ದ ಗೆಳೆಯ ಫಾರೂರ್‌ರ ಸಹಾಯದಿಂದ ಆಗ ಅವರ ಜತೆ ಅನಿರೀಕ್ಷಿತ ಮಾತುಕತೆಯೂ ಸಾಧ್ಯವಾಯಿತು. ತೀರಾ ಬಳಲಿದಂತಿದ್ದ ಅವರು “ನನ್ನದೇನುಂಟು ಮಾರಾಯ. 65 ಕಳೆಯಿತು. ಬಿಪಿ, ಷುಗರ್ ಎಲ್ಲಾ ಉಂಟು. ಮಕ್ಖಳು ಎಲ್ಲಾ ಹೊರಗಿದ್ದಾರೆ. ಮಂಗಳೂರಿನ ಮನೆ ಮಾರಿ ಉಡುಪಿಗೆ ಬಂದಿದ್ದೇವೆ. ನಾನು ಮತ್ತು ಅವಳು ಮಾತ್ರ ಮನೆಯಲ್ಲಿ,” ಎಂದಿದ್ದರು. ಅವರ ಧ್ವನಿಯಲ್ಲಿ ಯಾವುದೋ ಒಂದು ಅವ್ಯಕ್ತ ನೋವು ಇದ್ದಂತಿತ್ತು. ನಾನು ತಮಾಷೆಗೆ, “ಏನಿಲ್ಲ ಸಾರ್. ನೀವು ಚೆನ್ನಾಗಿದ್ದೀರಿ. ಯಂಗ್ ಕಾಣಿಸುತ್ತಿದ್ದೀರಿ,” ಎಂದು ಕಿಚಾಯಿಸಿದ್ದೆ.
ಆದರೂ ಮುಂದಿನ ಬಾರಿ ಊರಿಗೆ ಹೋದಾಗ ಖಂಡಿತವಾಗಿಯೂ ಅವರನ್ನು ಭೇಟಿಯಾಗಲೇಬೇಕು ಎಂದು ಅಂದೇ ತೀರ್ಮಾನಿಸಿದ್ದೆ. ದುರದೃಷ್ಟವಶಾತ್, ಆ ಮಾತುಕತೆಯ ನಂತರದ ವಾರವೇ “ಅವರು ಟಿ.ಎಂ.ಏ ಪೈ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ,” ಎಂಬ ಸಂದೇಶ ಬಂತು. ಹತ್ತು ಹನ್ನೆರಡು ದಿನಗಳಲ್ಲೇ ಅವರು ತಮ್ಮ ಅಪಾರ ಕುಟುಂಬ ವರ್ಗವನ್ನು ಹಾಗೂ ಸಾವಿರಾರು ವಿದ್ಯಾರ್ಥಿ ಬಳಗವನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ದಶಕಗಳ ನಂತರ ರಾವ್ ಎಂಬ ಆದರ್ಶ ಶಿಕ್ಷಕರ ಜತೆ ಕನಿಷ್ಟ ದೂರವಾಣಿಯ ಮೂಲಕವಾದರೂ ಮಾತುಕತೆ ಸಾಧ್ಯವಾಯಿತಲ್ಲಾ ಎಂಬುದಷ್ಟೇ ನನಗೆ ಸಮಾಧಾನ. ಆದರೆ ಅವರ ಭೇಟಿ ಸಾಧ್ಯವಾಗಲಿಲ್ಲ ಎಂಬ ಕೊರಗು ಬಹಳ ಕಾಲ ನನ್ನನ್ನು ಕಾಡಲಿದೆ.
ಕೊನೆಯದಾಗಿ ಒಂದು ಮಾತು. ರಾವ್ ಅವರ ನಿಧನದಿಂದ ಮಂಗಳೂರಿನ ಬದ್ರಿಯಾ ಸಂಸ್ಥೆಯ ಸುದೀರ್ಘ ಇತಿಹಾಸದೊಂದಿಗೆ ಥಳಕು ಹಾಕಿಕೊಂಡಿರುವ ಆದರ್ಶ ಅಧ್ಯಾಪಕರ ಸರಣಿಯ ಮತ್ತೊಂದು ಕೊಂಡಿ ಕಳಚಿದೆ. ಅದರಲ್ಲೂ ಮರ್ಹೂಮ್ ಪ್ರೊ. ಅಬ್ದುಲ್ ಕಾದರ್ ಅವರ ದೂರದರ್ಶಿತ್ವದ ಮೂಲಕ 80ರ ದಶಕದಲ್ಲಿ ಆರಂಭಗೊಂಡ ಬದ್ರಿಯಾ ಪಿ.ಯು. ಕಾಲೇಜಿನ ಯಶಸ್ಸಿಗೆ ಅಡಿಪಾಯ ಹಾಕಿದವರಲ್ಲಿ ರಾವ್ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಬದ್ರಿಯಾ ಸಂಸ್ಥೆಯ ಈಗಿನ ವ್ಯವಸ್ಥಾಪಕ ಮಂಡಳಿ, ಹಳೆ ವಿದ್ಯಾರ್ಥಿಗಳು ದಿವಂಗತ ರಾವ್ ಅವರ ಸೇವೆಯನ್ನು ಗುರುತಿಸಿ ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ಸ್ಮಾರಕವೊಂದನ್ನು ಕ್ಯಾಂಪಸ್‌ನಲ್ಲಿ ಸ್ಥಾಪಿಸುವ ಬಗ್ಗೆ ಆಲೋಚಿಸಬೇಕು.
✍️: ತುಫೈಲ್ ಮುಹಮ್ಮದ್, ಅಬುಧಾಬಿ