×
Ad

ಉತ್ತರ ಪ್ರದೇಶದಲ್ಲಿ ಒಬಿಸಿ ಸಮುದಾಯಗಳತ್ತ ರಾಜಕೀಯ ಪಕ್ಷಗಳ ಚಿತ್ತ

ಇತರ ಹಿಂದುಳಿದ ವರ್ಗಗಳು ಉತ್ತರ ಪ್ರದೇಶದ ಜನಸಂಖ್ಯೆಯ ಶೇ.40ಕ್ಕಿಂತ ಹೆಚ್ಚಿವೆ ಮತ್ತು ಸುಮಾರು 40 ಜಾತಿ ವಿಭಾಗಗಳನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ. 2027ರಲ್ಲಿ ಜಾತಿ ಎಣಿಕೆ ಜನಗಣತಿಯ ಭಾಗವಾಗಲಿದೆ ಎಂಬ ಕೇಂದ್ರದ ಘೋಷಣೆಯ ಹಿನ್ನೆಲೆಯಲ್ಲಿ ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಸನ್ನದ್ಧಗೊಳಿಸುವ ಕ್ರಮಕ್ಕೆ ಎಲ್ಲ ರಾಜಕೀಯ ಪಕ್ಷಗಳು ಮುಂದಾಗಿವೆ.

Update: 2025-06-22 11:42 IST

ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಸನ್ನದ್ಧಗೊಳಿಸುವತ್ತ ಗಮನಹರಿಸಿವೆ. ಇತರ ಹಿಂದುಳಿದ ವರ್ಗಗಳು ರಾಜ್ಯದ ಜನಸಂಖ್ಯೆಯ ಶೇ. 40ಕ್ಕಿಂತ ಹೆಚ್ಚಿವೆ ಮತ್ತು ಸುಮಾರು 40 ಜಾತಿ ವಿಭಾಗಗಳನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ. 2027ರಲ್ಲಿ ಜಾತಿ ಎಣಿಕೆ, ಜನಗಣತಿಯ ಭಾಗವಾಗಲಿದೆ ಎಂಬ ಕೇಂದ್ರದ ಘೋಷಣೆಯ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ.

ಜೂನ್ 14ರಂದು, ಕಾಂಗ್ರೆಸ್ ಪಕ್ಷವು ಇತರ ಹಿಂದುಳಿದ ವರ್ಗಗಳನ್ನು ತಲುಪುವ ಗುರಿಯೊಂದಿಗೆ ಒಂದು ತಿಂಗಳ ಕಾಲ ‘ಭಾಗೀದಾರಿ ನ್ಯಾಯ ಸಮ್ಮೇಳನ’ ಎಂಬ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿತು. ಇತರ ಹಿಂದುಳಿದ ವರ್ಗಗಳಿಗೆ ಕ್ಷೀಣಿಸುತ್ತಿರುವ ಉದ್ಯೋಗ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಪಕ್ಷವು ರಾಜ್ಯಾದ್ಯಂತ ಸಮ್ಮೇಳನಗಳನ್ನು ನಡೆಸಲು ಪ್ರಾರಂಭಿಸಿದೆ. ಜಾತಿ ಜನಗಣತಿ ಮತ್ತು ಆರ್ಥಿಕ ಸಮೀಕ್ಷೆಯ ಮಹತ್ವದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಗ್ರಾಮ ಮಟ್ಟದ ‘ಚೌಪಾಲ್’ ಅಭಿಯಾನಗಳನ್ನು ಸಹ ಆಯೋಜಿಸುತ್ತಿದೆ. ಮೀಸಲಾತಿ ಮಿತಿಯನ್ನು ಶೇ. 50ಕ್ಕಿಂತ ಹೆಚ್ಚಿಸುವ ಅಗತ್ಯದ ಕುರಿತು ಜಿಲ್ಲಾಮಟ್ಟದ ಮೆರವಣಿಗೆಗಳನ್ನು ನಡೆಸಲು ಯೋಜಿಸಿದೆ. ಕುರ್ಮಿ, ನೋನಿಯಾ, ಬೈಂಡ್, ಮೌರ್ಯ, ಕುಶ್ವಾಹ, ರಾಜಭರ್, ಫಾಲ್ಸ್, ನಿಶಾದ್, ನಾಯಿಸ್, ಮಲ್ಲಾಸ್ ಮತ್ತು ಪ್ರಜಾಪತಿಗಳಂತಹ ವಿವಿಧ ಇತರ ಹಿಂದುಳಿದ ವರ್ಗಗಳ ವಿಭಾಗಗಳ ಜಾತಿ ಕೇಂದ್ರಿತ ಸಮಸ್ಯೆಗಳನ್ನು ಎತ್ತುವುದಾಗಿಯೂ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿಯವರು ಜಾತಿ ಜನಗಣತಿಗಾಗಿ ಪದೇಪದೇ ನೀಡಿದ ಪ್ರಚಾರವು ಸಾಕಷ್ಟು ಯಶಸ್ಸನ್ನು ಕಂಡಿದ್ದರಿಂದ ಯು.ಪಿ.ಯಲ್ಲಿ ತನ್ನ ಒಬಿಸಿ ಕೇಂದ್ರಿತ ವಿಧಾನದ ಬಗ್ಗೆ ಪಕ್ಷವು ವಿಶ್ವಾಸ ಹೊಂದಿದೆ.

ಅದೇ ರೀತಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಜ್ಯದಾದ್ಯಂತ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಒಬಿಸಿ ಕೇಡರ್ ಶಿಬಿರಗಳನ್ನು ಆಯೋಜಿಸಲು ಪ್ರಾರಂಭಿಸಿದೆ. ವಿಶೇಷವಾಗಿ ಅತ್ಯಂತ ಹಿಂದುಳಿದ ಮತ್ತು 1990 ಮತ್ತು 2000ದ ದಶಕಗಳಲ್ಲಿ ದಲಿತರ ಜೊತೆಗೆ ಪಕ್ಷಕ್ಕೆ ಮತ ಹಾಕುತ್ತಿದ್ದ ಒಬಿಸಿ ಗುಂಪುಗಳನ್ನು ಆಕರ್ಷಿಸುವ ಪ್ರಯತ್ನದಲ್ಲಿ ಮಾಯಾವತಿ ನೇತೃತ್ವದ ಹಿಂದಿನ ಬಿಎಸ್‌ಪಿ ಸರಕಾರಗಳು ಇವುಗಳಿಗಾಗಿ ಪ್ರಾರಂಭಿಸಿದ ಕಲ್ಯಾಣ ಕ್ರಮಗಳ ಬಗ್ಗೆ ಒಬಿಸಿ ಮತದಾರರಿಗೆ ನೆನಪಿಸಲು ಪಕ್ಷವು ಉತ್ಸಾಹದಲ್ಲಿದೆ. ಈ ಕೇಡರ್ ಶಿಬಿರಗಳ ವರದಿಗಳನ್ನು ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ವಿಶ್ಲೇಷಿಸಲಾಗುತ್ತದೆ.

ದಲಿತ ಕೇಂದ್ರಿತ ಪಕ್ಷವೆಂದು ಪರಿಗಣಿಸಲಾದ ಬಿಎಸ್‌ಪಿಯು ಇತರ ಹಿಂದುಳಿದ ವರ್ಗಗಳ ಮೇಲೆ ಕೇಂದ್ರೀಕರಿಸಿರುವುದು ಪಕ್ಷದ ನಾಯಕತ್ವದ ಆಯ್ಕೆಗಳಿಂದ ಸ್ಪಷ್ಟವಾಗುತ್ತದೆ. ಉದಾಹರಣೆಗೆ, ರಾಜ್ಯ ಅಧ್ಯಕ್ಷ ವಿಶ್ವನಾಥ ಪಾಲ್ ಗಡಾರಿಯ ಒಬಿಸಿ ಸಮುದಾಯಕ್ಕೆ ಸೇರಿದವರು. 1995 ಮತ್ತು 1997ರಲ್ಲಿ ಇಬ್ಬರು ಒಬಿಸಿ ನಾಯಕರಾದ ಭಗವತ್ ಪಾಲ್ ಮತ್ತು ದಯಾರಾಂ ಪಾಲ್ ಅವರು ರಾಜ್ಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದರು ಮತ್ತು ಬಹುಜನ್ ಸಮಾಜವಾದಿ ಪಕ್ಷ ಒಬಿಸಿ ಗುಂಪುಗಳೊಳಗೆ ಪ್ರವೇಶಿಸಲು ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮಂಡಲ್ ಸೂತ್ರವನ್ನು ಮುರಿಯಲು ಸಹಾಯ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಬಹುಜನ್ ಸಮಾಜವಾದಿ ಪಕ್ಷ ಇಂದು ತನ್ನ ಗತಕಾಲದ ಸ್ಥಿತಿಯನ್ನು ಕಳೆದುಕೊಂಡಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ ಒಂದು ಸ್ಥಾನವನ್ನು ಗೆದ್ದು ಶೇ. 12.8ರಷ್ಟು ಮತಗಳನ್ನು ಗಳಿಸಿತ್ತು. ಅದರ ಪತನವನ್ನು ಗಮನಿಸಿದರೆ ಅದು ತನ್ನ ಇತರ ಹಿಂದುಳಿದ ವರ್ಗಗಳ ಮೂಲಕ ವಿರೋಧ ಪಕ್ಷದ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಉತ್ಸುಕವಾಗಿದೆ ಮತ್ತು ಸಮಾಜವಾದಿ ಪಕ್ಷವು ರಾಜ್ಯವನ್ನು ಎರಡು ಧ್ರುವಗಳ ರಾಜಕೀಯ ಯುದ್ಧಭೂಮಿಯನ್ನಾಗಿ ಮಾಡುವುದನ್ನು ತಪ್ಪಿಸುವುದಾಗಿದೆ.

ಉತ್ತರ ಪ್ರದೇಶದ ರಾಜಕೀಯ ಚದುರಂಗದಾಟದಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾದ ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಸಹ ಸಮಾಜದ ವಿವಿಧ ಜಾತಿ ವಿಭಾಗಗಳ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಿವೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇತ್ತೀಚೆಗೆ ಲಕ್ನೊದಲ್ಲಿ ನೋನಿಯಾ ಮತ್ತು ರಾಜಭರ್ ಇತ್ಯಾದಿ ಹಿಂದುಳಿದ ವರ್ಗಗಳ ಗುಂಪುಗಳ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳೊಂದಿಗೆ ಸಭೆಗಳನ್ನು ನಡೆಸಿದರು. 2027ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಅವರು, ಅವರಿಗೆ ಹಲವಾರು ಪ್ರಗತಿಪರ ಕಾರ್ಯಕ್ರಮಗಳ ಭರವಸೆ ನೀಡಿದರು. ಸಮಾಜವಾದಿ ಪಕ್ಷವು ಪಕ್ಷದ ಪಿಡಿಎ (ಪಿಚ್ಡಾ, ದಲಿತರು ಮತ್ತು ಅಲ್ಪಸಂಖ್ಯಾಕ್ - ಅಂದರೆ, ಕ್ರಮವಾಗಿ ಹಿಂದುಳಿದ ಜಾತಿ, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳು) ಎಂದು ಪ್ರತಿಪಾದಿಸಿದೆ ಮತ್ತು ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಮಾಡಲು ಭಾರತೀಯ ಜನತಾ ಪಕ್ಷದ ಸರಕಾರವನ್ನು ನಿರಂತರವಾಗಿ ಒತ್ತಾಯಿಸಿದೆ.

ರಾಷ್ಟ್ರೀಯ ಮಟ್ಟದಲ್ಲಿ ಜನಗಣತಿಯ ಜೊತೆಗೆ ಜಾತಿಯನ್ನು ಸೇರಿಸುವ ತನ್ನ ನಿರ್ಧಾರವು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಉನ್ನತಿಗಾಗಿ ಪಕ್ಷದ ಆದ್ಯತೆಯನ್ನು ತೋರಿಸುತ್ತದೆ ಎಂದು ಹೇಳುತ್ತಿರುವ ಭಾರತೀಯ ಜನತಾ ಪಕ್ಷ, ತನ್ನ ಸಾಂಸ್ಥಿಕ ಹುದ್ದೆಗಳಲ್ಲಿ ಹೆಚ್ಚಿನ ಪಾಲನ್ನು ಇತರ ಹಿಂದುಳಿದ ವರ್ಗಗಳ ನಾಯಕರಿಗೆ ನೀಡುತ್ತಿದೆ. ಇತ್ತೀಚೆಗೆ ಘೋಷಿಸಲಾದ ತನ್ನ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಭಾರತೀಯ ಜನತಾ ಪಕ್ಷ 25 ಇತರ ಹಿಂದುಳಿದ ವರ್ಗಗಳ ಅಧ್ಯಕ್ಷರನ್ನು ಹೊಂದಿದೆ. ಅದರಲ್ಲಿ ಐದು ಮಂದಿ ಕುರ್ಮಿಗಳು, ಇಬ್ಬರು ಯೋಧ್, ಇಬ್ಬರು ಮೌರ್ಯರು ಮತ್ತು ತಲಾ ಒಬ್ಬರು ಯಾದವ, ಕುಶ್ವಾ, ರಾಜಭರ್, ಪಾಲ್, ಸೈನಿ ಮತ್ತು ಕಶ್ಯಪ್ ಸಮುದಾಯಗಳಿಂದ ಬಂದವರು. ಇತರ ಹಿಂದುಳಿದ ವರ್ಗಗಳಲ್ಲಿ ಕುರ್ಮಿಗಳು ಸಂಖ್ಯಾತ್ಮಕವಾಗಿ ಮಹತ್ವ ಹೊಂದಿದ್ದಾರೆ; ಅವರು ರಾಜ್ಯದ ಜನಸಂಖ್ಯೆಯ ಸರಿಸುಮಾರು ಶೇ. 4ರಷ್ಟಿದ್ದಾರೆ.

ಕಳೆದ ವಾರ, ಮಾಜಿ ಸಚಿವ ಮತ್ತು ಇತರ ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ‘ಲೋಕ್ ಮೋರ್ಚಾ’ ಎಂಬ ರಾಜಕೀಯ ರಂಗವನ್ನು ಪ್ರಾರಂಭಿಸಿದರು. ಇದು ಸಣ್ಣ ಸಣ್ಣ ಪಕ್ಷಗಳನ್ನೊಳಗೊಂಡಿದೆ. ಇವುಗಳಲ್ಲಿ ಹೆಚ್ಚಿನವು ಇತರ ಹಿಂದುಳಿದ ವರ್ಗಗಳ ನಾಯಕರ ನೇತೃತ್ವದಲ್ಲಿವೆ. ಪಕ್ಷಗಳು ‘ಜಿಸ್ಕಿ ಜಿತ್ನಿ ಸಂಖ್ಯಾ ಭಾರಿ, ಉಸ್ಕಿ ಉತ್ನಿ ಹಿಸ್ಸೆದಾರಿ’ (ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ) ಎಂಬ ಘೋಷಣೆಯನ್ನು ಸೃಷ್ಟಿಸಿಕೊಂಡಿವೆ. ಯಾವುದೇ ಪಕ್ಷವು ಸ್ಪಷ್ಟವಾಗಿ, ಇತರ ಹಿಂದುಳಿದ ವರ್ಗಗಳನ್ನು ಓಲೈಸುವ ಯಾವುದೇ ಅವಕಾಶವನ್ನು ಬಿಟ್ಟು ಕೊಡುವುದಿಲ್ಲ.

-ಕೃಪೆ: ದಿ ಹಿಂದೂ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಯಂಕ್ ಕುಮಾರ್

contributor

Contributor - ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ

contributor

Similar News