×
Ad

ಹೊಸ ರೂಪದತ್ತ ಪಿಲಿಕುಳದ ಗಾಲ್ಫ್ ಕ್ಲಬ್

Update: 2025-06-30 15:19 IST

ಮಂಗಳೂರು: ಪಿಲಿಕುಳ ನಿಸರ್ಗಧಾಮ ಟ್ರಸ್ಟ್‌ನ ಭಾಗವಾಗಿರುವ ಪಿಲಿಕುಳ ಗಾಲ್ಫ್ ಕ್ಲಬ್ ಅತ್ಯುಧಾನಿಕ ವ್ಯವಸ್ಥೆಗಳೊಂದಿಗೆ ಹೊಸ ರೂಪ ಪಡೆಯುವತ್ತ ಹೆಜ್ಜೆ ಇರಿಸಿದೆ. ಪಿಲಿಕುಳದತ್ತ ವಿದೇಶಿಯರು ಸೇರಿದಂತೆ ದೇಶದ ವಿವಿಧ ಭಾಗದಿಂದ ಪ್ರವಾಸಿಗರನ್ನು ಹೆಚ್ಚು ಸಂಖ್ಯೆಯಲ್ಲಿ ಸೆಳೆಯುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ.

ಅನುದಾನದ ಕೊರತೆಯಲ್ಲದೇ ಕೆಲವೊಂದು ಸಮಸ್ಯೆಗಳಿಂದ ಸುದ್ದಿಯಾಗುತ್ತಿರುವ ವಾಮಂಜೂರಿನ ಮೂಡುಶೆಡ್ಡೆಯಲ್ಲಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಆದಾಯದ ಮೂಲವಾಗಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಹಿಂದಿನ ದ.ಕ. ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ನಿಸರ್ಗಧಾಮ ಟ್ರಸ್ಟ್ ಅಧ್ಯಕ್ಷರೂ ಆಗಿದ್ದ ಮುಲ್ಲೈ ಮುಗಿಲನ್ ಜಿಲ್ಲೆಯ ಗಾಲ್ಫ್ ಪ್ರೇಮಿಗಳ ಜೊತೆ ಸೇರಿ ಪಿಲಿಕುಳ ಗಾಲ್ಫ್ ಕ್ಲಬ್‌ಗೆ ಹೊಸ ರೂಪು ನೀಡಲು ಯೋಜನೆ ರೂಪಿಸಿದ್ದರು. ಇತ್ತೀಚೆಗೆ ವರ್ಗಾ ವಣೆ ಗೊಂಡಿರುವ ಮುಲ್ಲೈ ಮುಗಿಲನ್ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲೂ ಪಿಲಿಕುಳದಲ್ಲಿ ಶೀಘ್ರವೇ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಗಾಲ್ಫ್ ಕ್ಲಬ್ ಹೊಸ ವಿನ್ಯಾಸದೊಂದಿಗೆ ಕಾರ್ಯಾಚರಿಸಲಿದೆ ಎಂಬುದನ್ನು ತಿಳಿಸಿದ್ದರು. ಇದೀಗ ನೂತನ ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಗಾಲ್ಫ್ ಕ್ಲಬ್‌ನ ನೂತನ ಅಧ್ಯಕ್ಷರ ಮೇಲುಸ್ತುವಾರಿಯಲ್ಲಿ ಈ ಗಾಲ್ಫ್ ಕ್ಲಬ್‌ನ ನವೀಕರಣ ಕಾರ್ಯ ಮುಂದುವರಿಯಲಿದೆ.

356 ಎಕರೆ ಭೂಮಿಯಲ್ಲಿ ಹರಡಿಕೊಂಡಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ 70 ಎಕರೆಯಲ್ಲಿ ಈ ಗಾಲ್ಫ್ ಕ್ಲಬ್ 9 ಹೋಲ್‌ಗಳೊಂದಿಗೆ 1998ರಲ್ಲಿ ಆರಂಭಗೊಂಡಿತ್ತು.

ಸದ್ಯ ಜಿಲ್ಲಾಧಿಕಾರಿ ಗಾಲ್ಫ್ ಕ್ಲಬ್ ಸೊಸೈಟಿಯ ಅಧ್ಯಕ್ಷರಾಗಿದ್ದು, ಜಿಪಂ ಸಿಇಒ, ಮಂಗಳೂರು ನಗರ ಪೊಲೀಸ್ ಆಯುಕ್ತರು, ಡಿಎಫ್‌ಒ, ಮನಪಾ ಆಯುಕ್ತರನ್ನು ಒಳಗೊಂಡು ಐವರು ಸರಕಾರಿ ಅಧಿಕಾರಿಗಳು ಈ ಸೊಸೈಟಿಯ ಖಾಯಂ ಸದಸ್ಯರಾಗಿದ್ದಾರೆ. ಪ್ರಸಕ್ತ ಪಿಲಿಕುಳ ಗಾಲ್ಫ್ ಕ್ಲಬ್ 1,033 ಸದಸ್ಯರನ್ನು ಒಳಗೊಂಡಿದೆ. ಸದಸ್ಯತ್ವ ಶುಲ್ಕ ಹಾಗೂ ಬಂಡವಾಳ ಹೂಡಿಕೆದಾರರ ಮೂಲಕ ನಿರ್ವಹಣೆ ನಡೆಸಲಾಗುತ್ತಿದೆ.

ಏನೆಲ್ಲಾ ಹೊಸತು ?

ಈ ವರ್ಷಾಂತ್ಯದಿಂದ ಪಿಲಿಕುಳ ಗಾಲ್ಫ್ ಕ್ಲಬ್ 9 ಹೋಲ್‌ಗಳಿಂದ ಅಂತರ್‌ರಾಷ್ಟ್ರೀಯ ದರ್ಜೆಗೆ ಪೂರಕವಾಗಿ 18 ಹೋಲ್‌ಗಳಿಗೆ ಮಾರ್ಪಡಲಿದೆ. ಹೊನಲು ಬೆಳಕಿನ ವ್ಯವಸ್ಥೆಯೊಂದಿಗೆ ಆಸ್ಟ್ರೇಲಿಯಾದ ತಜ್ಞ ವಿನ್ಯಾಸಗಾರರಿಂದ ಫೆಸಿಫಿಕ್ ಕೋರ್ಸ್ ಮಾದರಿಯಲ್ಲಿ ದೇಶದ 3ನೆ ಅಂತರ್‌ರಾಷ್ಟ್ರೀಯ ಗಾಲ್ಫ್ ಕ್ಲಬ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಇಲ್ಲಿ ಬೆಳೆಸಲಾಗಿದ್ದ 450 ಅಕೇಶಿಯಾ ಮರಗಳ ಬದಲಿಗೆ, ಶೀಘ್ರವಾಗಿ ಬೆಳೆಯುವ, ಪಶ್ಚಿಮ ಘಟ್ಟದ ತಳಿಗಳು ಸೇರಿದಂತೆ ಹಣ್ಣು ಹಂಪಲುಗಳ 5,000ದಷ್ಟು ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತಿದೆ. 180ರಷ್ಟು ವಿವಿಧ ತಳಿಯ ಸ್ಥಳೀಯ ಮಾವಿನ ತಳಿಗಳ ಮರಗಳು, ಜಾಮೂನು, ಹೂವು ಬಿಡುವ ಗಿಡಗಳನ್ನು ಬೆಳೆಸಲಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದ ಗಾಲ್ಫ್ ಆಟಗಾರರಿಗೆ ಪೂರಕವಾಗಿ 10 ಕೊಠಡಿಗಳ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಆಟವಾದ ಬಳಿಕ ಸುಧಾರಿಸಿಕೊಳ್ಳಲು ಪೂರಕವಾಗಿ ಶವರ್, ಶೌಚಾಲಯ ಹಾಗೂ ಆಟಗಾರರಿಗೆ ಗಾಲ್ಫ್ ಕೋರ್ಸ್‌ನಲ್ಲಿ ಓಡಾಡಲು ಅಗತ್ಯವಾದ ವಾಹನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಗಾಲ್ಪ್ ಕ್ಲಬ್‌ನ ಸದಸ್ಯರಾಗಿರುವ ವೈದ್ಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವ್ಯವಹಾರಸ್ಥರಿಗೆ ಪೂರಕವಾಗಿ ರಾತ್ರಿ ಹೊತ್ತು ಕೂಡಾ ಆಟವಾಡಲು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎನ್ನುತ್ತಾರೆ ಪಿಲಿಕುಳ ಗಾಲ್ಪ್ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ.

ಈ ನಡುವೆ, ಪಿಲಿಕುಳದ ಸರಕಾರಿ ಭೂಮಿ ಸದ್ಯ ಕಂದಾಯ ಇಲಾಖೆಯ ಅಧೀನದಲ್ಲಿದ್ದು, ಈ ಬಗ್ಗೆ ಕಂದಾಯ ಕಾರ್ಯದರ್ಶಿಗಳ ಸಭೆ ನಡೆದಿದ್ದು, ಭೂಮಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಿ ಪಿಲಿಕುಳವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಪಿಲಿಕುಳ ನಿಸರ್ಗಧಾಮದೊಳಗೆ ನೀರು ತುಂಬುವ ಸಮಸ್ಯೆ ಈ ಬಾರಿಯೂ ಕಾಡಿದೆ. ಈ ಬಾರಿಯ ಮಳೆಗೆ ಹಳೆಯ ಕಂಪೌಂಡ್‌ಗಳು ಕೂಡಾ ಕುಸಿದು ಸಮಸ್ಯೆಯಾಗಿದ್ದು, ದುರಸ್ತಿ ಕಾರ್ಯ ನಡೆಸಲಾಗುವುದು. ಸ್ಥಳೀಯವಾಗಿ ಹರಿಯುವ ಎಸ್‌ಟಿಪಿ ನೀರು ಪಿಲಿಕುಳದೊಳಗೆ ಹರಿಯುವ ಸಮಸ್ಯೆಯ ಬಗ್ಗೆ ಮನಪಾ ಗಮನಕ್ಕೆ ತರಲಾಗಿದೆ. ಮೃಗಾಲಯದ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರ ಮೃತಪಟ್ಟ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಪ್ರಕ್ರಿಯೆ ಆಗಬೇಕಾಗಿದೆ. ಆದರೆ ಪ್ರಾಣಿಗಳಿಗೆ ಆಹಾರ ಪೂರೈಕೆ ನಿಲ್ಲಿಸಲಾಗದು. ಹಾಗಾಗಿ ಮೃತಪಟ್ಟ ಆಹಾರ ಪೂರೈಕೆ ಗುತ್ತಿಗೆದಾರರ ಬಾಕಿ ಹಣವನ್ನು ಯಾರಿಗೆ ಪಾವತಿಸಬೇಕೆಂಬ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ನಡೆಯಬೇಕು. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ ಎಂದು ನಿಸರ್ಗಧಾಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರವಾಸೋದ್ಯಮ, ಮನೋರಂಜನೆ, ಕ್ರೀಡೆಗೆ ಪ್ರೋತ್ಸಾಹದ ಜೊತೆಗೆ, ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಗಾಲ್ಫ್ ಕ್ಲಬ್ ಕೂಡಾ ವಿಶೇಷ ಆಕರ್ಷಣೆಯಾಗಿದೆ. ಈ ಕ್ಲಬ್‌ನ ಸದಸ್ಯತ್ವ ಶುಲ್ಕದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ಲಬ್‌ನ ಆದಾಯದ ಶೇ.2ರಷ್ಟು ಅಥವಾ ವಾರ್ಷಿಕ 10 ಲಕ್ಷ ರೂ.ಗಳಂತೆ ಶುಲ್ಕವನ್ನು ಪಿಲಿಕುಳ ನಿಸರ್ಗಧಾಮ ಸೊಸೈಟಿಗೆ ನೀಡುವ ಕುರಿತಂತೆ ಈಗಾಗಲೇ ಒಪ್ಪಂದವಾಗಿದೆ. ರಾಜ್ಯದ ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲೂ ಗಾಲ್ಫ್ ಕ್ಲಬ್‌ಗಳು ಇದೇ ಮಾದರಿಯಲ್ಲಿ ನಿರ್ವಹಿಸಲ್ಪಡುತ್ತಿವೆ. ಹಿಂದಿನ ಶುಲ್ಕವನ್ನೂ (2006ರಿಂದ 2022ರವರೆಗಿನ ಬಾಕಿ) ಕ್ಲಬ್‌ನಿಂದ ನೀಡಲು ಒಪ್ಪಿಗೆ ದೊರಕಿದೆ. ಇದರಿಂದ ನಿಸರ್ಗಧಾಮಕ್ಕೆ ಆದಾಯವೂ ಸಿಗಲಿದೆ. ಈ ನಡುವೆ ಮಾನಸ ವಾಟರ್ ಪಾರ್ಕ್ ಕೂಡಾ ಆರಂಭಗೊಳ್ಳಲಿದೆ.

-ಡಾ.ಅರುಣ್ ಕುಮಾರ್, ಪ್ರಭಾರ ಆಯುಕ್ತರು, ಪಿಲಿಕುಳ ನಿಸರ್ಗಧಾಮ.

ಪಿಲಿಕುಳ ಗಾಲ್ಫ್ ಕ್ಲಬ್‌ನ್ನು ವಿಶ್ವದರ್ಜೆಯ ಕೇಂದ್ರವನ್ನಾಗಿಸುವ ಮೂಲಕ ವಿದೇಶಿ ಪ್ರವಾಸಿಗರಿಗೆ ಪೂರಕವಾದ ವ್ಯವಸ್ಥೆಗಳೊಂದಿಗೆ ಅಂದಾಜು 23 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ನವೆಂಬರ್‌ನಿಂದ ಹೊಸತನದೊಂದಿಗೆ ಗಾಲ್ಫ್ ಕ್ಲಬ್ ಪುನರಾರಂಭಗೊಳ್ಳಲಿದ್ದು, ಮುಂದೆ ಇಲ್ಲಿ ಗಾಲ್ಫ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವೂ ಇದೆ.

-ಮನೋಜ್ ಶೆಟ್ಟಿ, ಕ್ಯಾಪ್ಟನ್,ಪಿಲಿಕುಳ ಗಾಲ್ಫ್ ಕ್ಲಬ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತ್ಯಾ ಕೆ.

contributor

Similar News