×
Ad

ಪ್ರೊ. ಮಹ್ಮುದಾಬಾದ್ ಬಂಧನ, ಜಾಮೀನು ಮತ್ತು ತನಿಖೆ: ವಾಸಿಯಾಗದ ಗಾಯಗಳು

ಕೇಂಬ್ರಿಡ್ಜ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ಮಹ್ಮದಾಬಾದ್ ಅವರ ತಪ್ಪು ಮುಸ್ಲಿಮರಾಗಿದ್ದು ಎನ್ನುವುದು ಇಡೀ ಪ್ರಕರಣದ ನೀತಿಪಾಠವಾಗಿದೆ. ಬಹು ಸಂಸ್ಕೃತಿ, ಸ್ವಾತಂತ್ರ್ಯಕ್ಕಾಗಿ ಬದ್ಧತೆ ಇಂದು ರಾಜಕೀಯ ನೀತಿಯಾಗಿ ಉಳಿದುಕೊಂಡಿಲ್ಲ. ಈ ವಿಚಾರಗಳನ್ನು ಬಲಿಕೊಟ್ಟು ಉನ್ಮಾದ ರಾಷ್ಟ್ರೀಯತೆ ಇಂದು ದೇಶದಲ್ಲಿ ವಿಜೃಂಭಿಸುತ್ತಿರುವಾಗ ಯಾವುದು ಚರ್ಚೆಯಾಗಬೇಕು ಎನ್ನುವ ಅಂಶವೇ ಹಿನ್ನೆಲೆಗೆ ಸರಿಯುತ್ತದೆ. ಮೋದಿ ಸರಕಾರವು ಆರೆಸ್ಸೆಸ್ ಸಿದ್ಧಾಂತದ ಜಾರಿಗಾಗಿ ‘ವೈಯುಕ್ತಿಕ ಸ್ವಾತಂತ್ರ್ಯ’ವನ್ನು ಹತ್ತಿಕ್ಕಲು ಯಾವ ಹಂತಕ್ಕಾದರೂ ನುಗ್ಗಲು ತಯಾರಾಗಿರುವುದು ಕಳೆದ ಹತ್ತು ವರ್ಷಗಳಿಂದ ಪದೇ ಪದೇ ಸಾಬೀತಾಗುತ್ತಿದೆ. ನಾವು ಇದನ್ನು ಟೀಕಿಸುತ್ತಾ ಕೂಡುವ ಕಾಲವೂ ಇದಲ್ಲ ಅಥವಾ ಸಮಾವೇಶಗಳನ್ನು ನಡೆಸುತ್ತಾ ಸಂಭ್ರಮಿಸುವ ದಿನಗಳೂ ಇದಲ್ಲ. ಇಲ್ಲಿನ ಪ್ರಜಾಪ್ರಭುತ್ವ, ಬಹುತ್ವ ಮತ್ತು ಸಂವಿಧಾನದ ರಕ್ಷಣೆಗೆ ನಿರಂತರವಾಗಿ ಕಾರ್ಯಯೋಜನೆ ರೂಪಿಸುತ್ತಲೇ ಇರಬೇಕಾಗುತ್ತದೆ.

Update: 2025-05-27 12:18 IST

ಪ್ರೊಫೆಸರ್ ಅಲಿಖಾನ್ ಮಹ್ಮುದಾಬಾದ್, ಅಶೋಕ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರು. ಮೇ 8, 2025ರಂದು ಫೇಸ್‌ಬುಕ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯ ನಂತರ ಭಾರತ-ಪಾಕ್ ನಡುವಿನ ಸೇನಾ ಸಂಘರ್ಷ ಮತ್ತು ಸಂಬಂಧಿತ ವಿಷಯಗಳ ಕುರಿತು ಹಂಚಿಕೊಂಡಿದ್ದರು. ಭಾರತೀಯ ರಕ್ಷಣಾ ಪಡೆಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ನಡೆಸಿದ ಸೈನಿಕ ದಾಳಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅಲಿಖಾನ್ ಈ ಕುರಿತು ಅಧಿಕೃತ ಪತ್ರಿಕಾ ಮಾಹಿತಿಗಳನ್ನು ಟೀಕಿಸಿದರು, ಇದು ಧಾರ್ಮಿಕ ಐಕ್ಯತೆಯ ಪ್ರದರ್ಶನವೆಂದು ಕರೆದರು, ಆದರೆ ಸಮಾಜದಲ್ಲಿನ ವಾಸ್ತವತೆಯನ್ನು ಪ್ರತಿಬಿಂಬಿಸಲು ವಿಫಲವಾಗಿದೆ ಎಂದರು. ಮತ್ತೊಂದು ಪೋಸ್ಟ್ ನಲ್ಲಿ, ಶಾಂತಿಯನ್ನು ಪ್ರತಿಪಾದಿಸಿದರು ಮತ್ತು ಯುದ್ಧವಾದವನ್ನು ಖಂಡಿಸಿದರು.

ಈ ಪೋಸ್ಟನ್ನು ಉಲ್ಲೇಖಿಸಿ ಮೇ 18, 2025ರಂದು ಹರ್ಯಾಣದ ಸರ್‌ಪಂಚ್ ಮತ್ತು ಹರ್ಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ದೂರು ಸಲ್ಲಿಸಿದರು. ಈ ಎರಡು ದೂರುಗಳ ಆಧಾರದ ಮೇಲೆ ಭಾರತೀಯ ನ್ಯಾಯಸಂಹಿತ(ಬಿಎನ್‌ಎಸ್) 2023ರ ಅಡಿಯಲ್ಲಿ ಸೆಕ್ಷನ್‌196(1)(ಬಿ) (ವಿಭಿನ್ನ ದರಗಳ ನಡುವಿನ ಸಾಮರಸ್ಯ ಹಾಳು ಮಾಡುವ ಕೃತ್ಯ) ಸೆಕ್ಷನ್‌197(1)(ಬಿ)(ವಿಭಿನ್ನ ದರಗಳ ನಡುವೆ ದ್ವೇಷ ಬಿತ್ತುವ ಕೃತ್ಯ) ಸೆಕ್ಷನ್‌299(ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಉದ್ದೇಶಪೂರ್ವಕ ಕೃತ್ಯ) ಹೇರಿ ಅಲಿಖಾನ್ ಅವರನ್ನು ಬಂಧಿಸಲಾಯಿತು. ಈ ಅಕ್ರಮ ಬಂಧನದ ವಿರುದ್ಧದ ಅಶೋಕ ವಿವಿಯ ಬೋಧಕ ವಲಯ, ವಿದ್ಯಾರ್ಥಿಗಳು, ಚಿಂತಕರು ವ್ಯಾಪಕವಾಗಿ ಖಂಡಿಸಿದರು. ದೃಶ್ಯ ಮಾಧ್ಯಮ ಒಂದರಲ್ಲಿ ದೂರು ನೀಡಿದ ಹರ್ಯಾಣ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾರಿಗೆ ‘‘ಅಲಿಖಾನ್ ಅವರ ಪೋಸ್ಟ್‌ನಲ್ಲಿ ಆಕ್ಷೇಪಾರ್ಹ ವಿಚಾರ ಏನಿದೆ?’’ ಎಂದು ಪ್ರಶ್ನಿಸಿದಾಗ ಅವರಿಗೆ ಯಾವುದೇ ಮಾಹಿತಿ, ವಿವರಗಳು ಗೊತ್ತಿರದೆ ವಿವರಿಸಲು ಒದ್ದಾಡಿದರು. ಮುಖ್ಯ ಹುದ್ದೆಯಲ್ಲಿರುವ ವ್ಯಕ್ತಿಗಳಲ್ಲಿನ ಈ ತಿಳುವಳಿಕೆಯ ಕೊರತೆಯು ಅವರ ದೂರು ದುರುದ್ದೇಶಪೂರಿತ ಮತ್ತು ಸುಳ್ಳು ಎಂದು ಸಾಬೀತುಪಡಿಸುತ್ತದೆ.

ಅಶೋಕ ವಿವಿಯ ಪ್ರಾಧ್ಯಾಪಕ ಅಲಿಖಾನ್ ಅವರ ಅಕ್ರಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಮಾಡುತ್ತಾ ನ್ಯಾಯಮೂರ್ತಿ ಸೂರ್ಯಕಾಂತ್ ಅವರು(ಅಲಿಖಾನ್ ಪರ ಮಾತನಾಡುವವರಿಗೆ, ಬಂಧನದ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ)

‘‘ಇಂದು ನಾವು ಪತ್ರಿಕೆಯಲ್ಲಿ ಮಾತ್ರ ಓದಿದೆವು, ವಿದ್ಯಾರ್ಥಿಗಳು, ಪ್ರೊಫೆಸರ್‌ಗಳು ತಾವು ಏನಾದರೂ ಮಾಡಲು ಧೈರ್ಯ ಮಾಡಿದರೆ, ನಾವು ಆದೇಶವನ್ನು ಜಾರಿಗೊಳಿಸುತ್ತೇವೆ ಅಂತ ತಿಳಿದುಕೊಂಡಂತಿದೆ.

ತಮ್ಮನ್ನು ಖಾಸಗಿ ವಿಶ್ವವಿದ್ಯಾನಿಲಯಗಳೆಂದು ಕರೆದುಕೊಳ್ಳುವ ಕೆಲವು ಸಂಸ್ಥೆಗಳನ್ನು ತೆರೆಯುವುದು ಮತ್ತು ಅಲ್ಲಿ ಎಲ್ಲಾ ರೀತಿಯ ವ್ಯಕ್ತಿಗಳು ಒಂದಾಗಿ ಜವಾಬ್ದಾರಿಯಿಲ್ಲದ ಹೇಳಿಕೆ ಕೊಡಲು ಪ್ರಾರಂಭಿಸುವುದು ನಮಗೆ ಸ್ವೀಕಾರಾರ್ಹವಲ್ಲ. ಈ ಜನರನ್ನು ಹೇಗೆ ನಿಭಾಯಿಸಬೇಕೆಂದು ನಮಗೆ ಗೊತ್ತು; ಅವರು ನಮ್ಮ ಅಧಿಕಾರ ವ್ಯಾಪ್ತಿಯಿಂದ ಹೊರಗಿಲ್ಲ’’ ಎಂದು ಹೇಳಿದ್ದಾರೆ. ಅಂದರೆ ನ್ಯಾಯಾಂಗದ ಪ್ರಕಾರ ಅನ್ಯಾಯದ ವಿರುದ್ಧ ಪ್ರತಿಭಟಿಸುವಂತಿಲ್ಲವೇ? ವಿಧಿ 19, 21ರ ನೀತಿಯನ್ನು ಪಾಲಿಸುವಂತಿಲ್ಲವೇ? ನ್ಯಾಯಮೂರ್ತಿಗಳು ‘ಅರ್ಜಿದಾರರು ತಮ್ಮ ಭಾವನೆ ವ್ಯಕ್ತಪಡಿಸಲು ಬೇರೆಯವರಿಗೆ ನೋವಾಗದಂತೆ ಸಭ್ಯ ಭಾಷೆ ಬಳಸಬೇಕೆಂದು’ ಹೇಳಿದ್ದಾರೆ. ಆದರೆ ಮಹ್ಮುದಾಬಾದ್ ಅವರ ಪೋಸ್ಟ್ ಸಮತೋಲನವುಳ್ಳ ಅತ್ಯಂತ ಸಭ್ಯ ಭಾಷೆಯಲ್ಲಿದೆ ಎಂದು ಹೇಗೆ ಸಾಬೀತುಪಡಿಸುವುದು? ಆದರೂ ಅವರನ್ನು ಬಂಧಿಸಲಾಗಿದೆ ಎಂದು ಪ್ರಶ್ನಿಸುವುದು ತಂಟೆಕೋರತನವೇ? ಬಲಪಂಥೀಯ ಮತಾಂಧರು ಬಳಸುವ ಭಾಷೆಯು ದ್ವೇಷ, ಕ್ರೌರ್ಯದಿಂದ ತುಂಬಿದೆ ಎಂದು ಪದೇ ಪದೇ ಸಾಬೀತುಪಡಿಸಬೇಕೆ? ಅವರ ವಿರುದ್ಧ ಸಾಕ್ಷಿಗಳಿದ್ದರೂ ಖುಲ್ಲಂಖುಲ್ಲಾ ಮುಕ್ತವಾಗಿ ಅಡ್ಡಾಡಿಕೊಂಡಿದ್ದಾರೆ ಎಂದು ಹೇಳುವುದೂ ನ್ಯಾಯಾಂಗಕ್ಕೆ ಆಕ್ರೋಶ ಮೂಡಿಸುತ್ತದೆಯೇ?

ಕಡೆಗೆ ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ವಿಚಾರಣೆ ನಡೆಸಬೇಕಿದ್ದ ಗೌರವಾನ್ವಿತ ಸುಪ್ರೀಂ ಕೋರ್ಟ್ ಮಹ್ಮುದಾಬಾದ್‌ರಿಗೆ ಸದ್ಯಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅವರ ಪಾಸ್‌ಪೋರ್ಟ್ ಒಪ್ಪಿಸುವಂತೆ ಸೂಚಿಸಿದೆ, ಇದೇ ಸಂದರ್ಭದಲ್ಲಿ ‘ಅಲಿಖಾನ್‌ಭಾರತದೊಳಗಿನ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಥವಾ ನಮ್ಮ ಮಾಹಿತಿ ಮೂಲಗಳಿಂದ ನೀಡಲಾದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದಂತೆ’ ಎಚ್ಚರಿಕೆ ನೀಡಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲು ಹರ್ಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ. ಈ ಎಸ್‌ಐಟಿಯು ಅಲಿಖಾನ್‌ರವರ ಪೋಸ್ಟ್‌ನಲ್ಲಿ ‘ಅಡಕವಾಗಿರಬಹುದಾದ ಪದಗಳ ಅರ್ಥ’ವನ್ನು ಕಂಡು ಹಿಡಿಯುತ್ತದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಪೋಸ್ಟ್ ಮಾಡದಂತೆ ನಿಷೇಧಿಸಿದೆ. ಅವರನ್ನು ಬಂಧನದಿಂದ ಬಿಡುಗಡೆಗೊಳಿಸಿರುವುದು ಸಮಾಧಾನಕರವಾದರೂ, ಅವರನ್ನು ಬಂಧಿಸಿದ ಅದೇ ಪೊಲೀಸ್ ಸಂಸ್ಥೆಗೆ ಸಂಪೂರ್ಣ ಅಧಿಕಾರಗಳನ್ನು ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.

ನ್ಯಾಯಾಂಗದ ಟೀಕೆಗೆ ಕಾರಣವಾಗಿರುವ ಪ್ರಾಧ್ಯಾಪಕ ಮಹ್ಮುದಾಬಾದ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?

8 ಮೇ 2025ರಂದು, ಪ್ರೊಫೆಸರ್ ಮೂರು ಅಂಶಗಳನ್ನು ಒಳಗೊಂಡಂತೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಒಂದು ಪೋಸ್ಟ್‌ನಲ್ಲಿ ‘ಪಾಕ್ ಸೇನೆಯು ಪ್ರಭುತ್ವದ ಹೊರಗಿರುವ ಕಾರ್ಯಕರ್ತರನ್ನು ದೀರ್ಘಕಾಲದಿಂದ ಬಳಸಿಕೊಂಡು ಆ ಪ್ರದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ, ಆದರೆ ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ತಾವೇ ಬಲಿಪಶುಗಳೆಂದು ದಾಖಲಿಸಿಕೊಳ್ಳುತ್ತಿದೆ. ಇದೇ ಕಾರ್ಯಕರ್ತರನ್ನು ಪಾಕಿಸ್ತಾನದಲ್ಲಿ ಸಾಮುದಾಯಿಕ ಒಡಕುಗಳನ್ನು ಉಂಟುಮಾಡಲು ಬಳಸಿಕೊಳ್ಳುತ್ತಿದೆ. ಆಪರೇಷನ್ ಸಿಂಧೂರ ಭಾರತ-ಪಾಕ್ ಸಂಬಂಧಗಳ ನಡುವಿನ ಭಾವನೆಗಳನ್ನು ಮರು ನಿರ್ಧರಿಸುತ್ತದೆ, ಏಕೆಂದರೆ ಭಯೋತ್ಪಾದಕ ದಾಳಿಯನ್ನು ಸೇನೆಯ ಪ್ರತಿಕ್ರಿಯೆ ಮೂಲಕ ಎದುರಿಸಲಾಗುವುದು. ಈ ಹಿನ್ನಡೆಯ ಹೊರತಾಗಿಯೂ, ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ ಅಲ್ಲಿನ ಸೇನಾ, ನಾಗರಿಕ ನೆಲೆಗಳು ಅಥವಾ ಮೂಲಸೌಕರ್ಯಗಳನ್ನು ಗುರಿಯಾಗಿಸದಂತೆ ಎಚ್ಚರಿಕೆ ವಹಿಸಿವೆ. ಇದರಿಂದ ಅನಗತ್ಯ ಉಲ್ಬಣವಾಗದು’ ಎಂದು ಬರೆದಿದ್ದಾರೆ. ಮತ್ತೊಂದೆಡೆ ‘ನಿಮ್ಮ(ಪಾಕಿಸ್ತಾನ) ಭಯೋತ್ಪಾದನೆ ಸಮಸ್ಯೆಯನ್ನು ನೀವು ಎದುರಿಸದಿದ್ದರೆ, ನಾವು ಎದುರಿಸುತ್ತೇವೆ! ಎರಡೂ ಕಡೆಯ ನಾಗರಿಕರ ಜೀವಹಾನಿಯು ದುರಂತವಾಗಿದೆ ಮತ್ತು ಯುದ್ಧವನ್ನು ತಪ್ಪಿಸಲು ಅಗತ್ಯವಾದ ಮುಖ್ಯ ಕಾರಣವಾಗಿದೆ’ ಎಂದು ಬರೆದಿದ್ದಾರೆ. ಈ ಪೋಸ್ಟ್‌ಗಳಲ್ಲಿ ಆಕ್ಷೇಪಾರ್ಹ ವಿಚಾರಗಳೇನು? ಸುಪ್ರೀಂಕೋರ್ಟ್‌ನ ಪೀಠವು ಸಹ ಈ ಅಭಿಪ್ರಾಯದಲ್ಲಿನ ಯುದ್ಧ ವಿರೋಧಿ ನಿಲುವು ಮತ್ತು ನಾಗರಿಕ ಸಮಾಜದ ಪರವಾದ ಕಾಳಜಿಯನ್ನು ಗ್ರಹಿಸುವಲ್ಲಿ ವಿಫಲವಾಯಿತೇ? ಇದು ಪ್ರಭುತ್ವದ ಅನಿಯಂತ್ರಿತ ಮತ್ತು ಕಾನೂನುಬಾಹಿರ ಬಂಧನಕ್ಕೆ, ಅಧಿಕಾರದ ಅನುಚಿತ ಬಳಕೆಗೆ ಅವಕಾಶ ನೀಡುತ್ತದೆಯೇ? ಸುಪ್ರೀಂ ಕೋರ್ಟ್ ಈ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲವೇ?

ನ್ಯಾಯವಾದಿ ಕಲ್ಪನಾ ಕನ್ನಾಭಿರಾನ್ ಅವರು ‘ಭಾರತ-ಪಾಕ್ ನಡುವಿನ ಸೇನಾ ಸಂಘರ್ಷವನ್ನು ಬಹುತೇಕ ಭಾರತೀಯ ನಾಗರಿಕರು ಯುದ್ಧೋನ್ಮಾದ ಆಚರಣೆಯಾಗಿಸಿದ್ದರ ಕುರಿತು ಮತ್ತು ಸಂಘರ್ಷ ವಿರಾಮ ಮಾತುಕತೆಯ ಪ್ರಯತ್ನಗಳಿಗೆ ಗೊಂದಲಮಯ ಪ್ರತಿಕ್ರಿಯೆಗಳ ಬಗ್ಗೆ ಅಲಿಖಾನ್ ಕಳವಳ ವ್ಯಕ್ತಪಡಿಸಿದ್ದರು. ಯುದ್ಧವನ್ನು ಉತ್ತೇಜಿಸುವವರಿಗೆ ಉತ್ಸಾಹಕ್ಕೆ ತಣ್ಣೀರು ಎರಚಿದರು. ತಮ್ಮ ಪೋಸ್ಟಿನಲ್ಲಿ ‘‘ಯುದ್ಧಕ್ಕಾಗಿ ವಿವೇಚನರಹಿತವಾಗಿ ವಕಾಲತ್ತು ಮಾಡುವವರು ಇದ್ದಾರೆ, ಆದರೆ ಅವರು ಯುದ್ಧವನ್ನು ಎಂದಿಗೂ ನೋಡಿಲ್ಲ, ಯುದ್ಧ ಪೀಡಿತ ಪ್ರದೇಶದಲ್ಲಿ ವಾಸಿಸಿಲ್ಲ ಅಥವಾ ಭೇಟಿ ನೀಡಿಲ್ಲ. ನಕಲಿ ನಾಗರಿಕ ರಕ್ಷಣಾ ಕವಾಯತಿನ ಭಾಗವಾಗಿರುವುದು ನಿಮ್ಮನ್ನು ಸೈನಿಕನನ್ನಾಗಿ ಮಾಡುವುದಿಲ್ಲ ಮತ್ತು ಸಂಘರ್ಷದಿಂದ ತೊಂದರೆಗೊಳಗಾದವರ ನೋವನ್ನು ನೀವು ಎಂದಿಗೂ ತಿಳಿಯಲಾರಿರಿ. ಯುದ್ಧವು ಕ್ರೂರವಾಗಿದೆ. ಇದರಿಂದ ಬಡವರು ತೊಂದರೆಗೊಳಗಾಗುತ್ತಾರೆ. ಲಾಭ ಪಡೆಯುವವರು ಕೇವಲ ರಾಜಕಾರಣಿಗಳು ಮತ್ತು ರಕ್ಷಣಾ ಕಂಪೆನಿಗಳು ಮಾತ್ರ. ರಾಜಕೀಯವು ಮುಖ್ಯವಾಗಿ ಹಿಂಸೆಯಲ್ಲಿ ಬೇರೂರಿರುವುದರಿಂದ ಯುದ್ಧವು ಅನಿವಾರ್ಯವಾಗಿದೆ. ಆದರೆ ರಾಜಕೀಯ ಸಂಘರ್ಷಗಳನ್ನು ಸೇನಾ ಮಾರ್ಗದಿಂದ ಎಂದಿಗೂ ಪರಿಹರಿಸಲಾಗಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.’’ ಎಂದು ಹೇಳಿದ್ದಾರೆ ಈ ಕಳವಳವನ್ನು ವ್ಯಕ್ತಪಡಿಸುವಲ್ಲಿ ಅವರು ಒಬ್ಬರೇ ಅಲ್ಲ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಎಂ. ನರವಾಣೆ ಅವರು ‘‘ಯುದ್ಧವು ರೊಮ್ಯಾಂಟಿಕ್ ಅಲ್ಲ, ಅದು ಬಾಲಿವುಡ್ ಚಿತ್ರವೂ ಅಲ್ಲ’’ ಎಂದು ಹೇಳಿದ್ದಾರೆ ಮತ್ತು ಅವರ ಮೊದಲ ಆಯ್ಕೆ ಯಾವಾಗಲೂ ರಾಜತಾಂತ್ರಿಕತೆಯಾಗಿರುತ್ತದೆ ಎಂದಿದ್ದಾರೆ’ ಎಂದು ಬರೆಯುತ್ತಾರೆ

ಯುದ್ಧದಿಂದ ಉಂಟಾಗುವ ಆಳವಾದ ದುರಂತಗಳ, ಪರಿಣಾಮಗಳ ಬಗ್ಗೆ ಬದ್ಧತೆಯುಳ್ಳ ನಾಗರಿಕನಂತೆ ಯೋಚಿಸುವ ಪ್ರೊಫೆಸರ್ ಮಹ್ಮುದಾಬಾದ್‌ಗಡಿಯಲ್ಲಿ ವಾಸಿಸುವ ಜನರು, ದೇಶವನ್ನು ರಕ್ಷಿಸಲು ಯುವಕರನ್ನು ಯುದ್ಧದ ಮುಂಚೂಣಿಗೆ ಕಳುಹಿಸುವ ಕುಟುಂಬಗಳು ಮತ್ತು ಗ್ರಾಮಗಳು ಯುದ್ಧದ ನಿಜವಾದ ಅರ್ಥವನ್ನು ಅರಿತವರು ಎಂದು ಹೇಳುತ್ತಾರೆ. ಜನರಲ್ ನರವಾಣೆ ಅಥವಾ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಕದನ ವಿರಾಮಕ್ಕೆ ಬೆಂಬಲವಾಗಿ ಮಾತನಾಡಿದಾಗ ಅಥವಾ ಮಾತುಕತೆ ನಡೆಸಿದಾಗ ಕಂಡುಬರದ ಆಕ್ರೋಶ ಮುಸ್ಲಿಮ್ ಸಮುದಾಯದ ಅಲಿಖಾನ್ ಮಾತನಾಡಿದ ಕ್ಷಣ ವ್ಯಕ್ತವಾಗುವುದು ಯಾಕೆ? ಸತ್ಯವು ಕಹಿಯಾದಾಗ ಸುಪ್ರೀಂ ಕೋರ್ಟ್ ಆ ಸತ್ಯದ ಜೊತೆಗೆ ನಿಲ್ಲಬೇಕಲ್ಲವೇ?

ಕೆಲವು ಮಾಧ್ಯಮ ವಿಮರ್ಶಕರು ಕರ್ನಲ್ ಸೋಫಿಯಾ ಖುರೇಷಿಯವರನ್ನು ಕೊಂಡಾಡುತ್ತಿರುವಂತೆಯೇ, ಇಂದು ಭಾರತದಲ್ಲಿ ಸಾಮಾನ್ಯ ಮುಸ್ಲಿಮರ ಮೇಲಿನ ಗುಂಪು ಹತ್ಯೆ ಮತ್ತು ದೇಶಾದ್ಯಂತ ಮುಸ್ಲಿಮರಿಗೆ ಎದುರಾಗುವ ದ್ವೇಷದ ಮಾತುಕತೆಯನ್ನು ಸಮಾನವಾಗಿ ಖಂಡಿಸಬೇಕು. ಕರ್ನಲ್ ಖುರೇಷಿಯವರು ಯುದ್ಧದ ಸಂದರ್ಭದಲ್ಲಿ ಕರ್ತವ್ಯವನ್ನು ನಿರ್ವಹಿಸುವ ಅಧಿಕಾರಿಯಾಗಿದ್ದಾರೆ-ಇತರ ಸೇನಾ ಅಧಿಕಾರಿಗಳಂತೆ. ಅವರ ಉಪಸ್ಥಿತಿಯನ್ನು ಸಾಂಕೇತಿಕರಣಗೊಳಿಸುವುದು ಅಥವಾ ಅವರನ್ನು ಕ್ಯಾರಿಕೇಚರ್‌ಗೆ ಇಳಿಸುವುದು ದೊಡ್ಡ ಅನ್ಯಾಯವಾಗಿದೆ. ಇದರ ಇನ್ನೊಂದು ಮುಖವೆಂದರೆ ಸಾಮಾನ್ಯ ಮುಸ್ಲಿಮರ ವಿರುದ್ಧದ ಗುರಿಯಿಟ್ಟ ಹಿಂಸೆ. ಇದು ಕಹಿ ಸತ್ಯ. ಇತ್ತೀಚಿನ ಉದಾಹರಣೆಗಳಾದ ಶಾಸಕ ಕಪಿಲ್ ಮಿಶ್ರಾ ಮತ್ತು ಸಂಸದ ರಮೇಶ್ ಬಿಧೂರಿ (ಇಬ್ಬರೂ ಬಿಜೆಪಿಯವರು, ಈ ಪ್ರಕರಣದ ದೂರುದಾರರಂತೆಯೇ) ಅವರ ಬಹಿರಂಗವಾಗಿ ಪ್ರದರ್ಶಿಸಿದ ದ್ವೇಷಭರಿತ, ಹಿಂಸಾತ್ಮಕ ಅವಾಚ್ಯ ಮಾತುಗಳು ಸಾರ್ವಜನಿಕ ವಲಯದಲ್ಲಿವೆ.

ಇದನ್ನೇ ಉದಾಹರಿಸುವ ಪ್ರೊಫೆಸರ್ ತಮ್ಮ ಮತ್ತೊಂದು ಪೋಸ್ಟ್ ನಲ್ಲಿ ‘ನಾನು ತುಂಬಾ ಸಂತೋಷವಾಗಿದ್ದೇನೆ, ಏಕೆಂದರೆ ಅನೇಕ ಬಲಪಂಥೀಯ ವಿಮರ್ಶಕರು ಕರ್ನಲ್ ಸೋಫಿಯಾ ಖುರೇಷಿಯವರನ್ನು ಹೊಗಳುತ್ತಿರುವುದನ್ನು ನೋಡುತ್ತಿದ್ದೇನೆ. ಆದರೆ ಬಹುಶಃ ಅವರು ಗುಂಪು ಹತ್ಯೆಯಿಂದ ಬಲಿಯಾದವರನ್ನು, ಬುಲ್ಡೋಜರ್ ನೀತಿಯಿಂದ ಮನೆ, ಕಟ್ಟಡಗಳನ್ನು ಕಳೆದುಕೊಂಡವರನ್ನು ಮತ್ತು ಬಿಜೆಪಿಯ ದ್ವೇಷದ ಪ್ರಚಾರಕ್ಕೆ ಬಲಿಯಾದ ಇತರರನ್ನು ಭಾರತೀಯ ನಾಗರಿಕರಾಗಿ ರಕ್ಷಿಸಬೇಕೆಂದು ಸಮಾನವಾಗಿ ಒತ್ತಾಯಿಸಬಹುದು. ಇಬ್ಬರು ಮಹಿಳಾ ಸೈನಿಕರು ತಮ್ಮ ಫಲಿತಗಳನ್ನು ಮಂಡಿಸುವ ದೃಶ್ಯವು ಮುಖ್ಯವಾಗಿದೆ, ಆದರೆ ಈ ದೃಶ್ಯವು ಇಲ್ಲಿನ ವಾಸ್ತವಕ್ಕೆ ಬದಲಾಗಬೇಕು, ಇಲ್ಲದಿದ್ದರೆ ಅದು ಕೇವಲ ಕಪಟತನವಾಗಿರುತ್ತದೆ’ ಎಂದು ಬರೆಯುತ್ತಾರೆ. ಪ್ರೊಫೆಸರ್ ಕರ್ನಲ್ ಖುರೇಷಿಯವರನ್ನು ಮುಂದಿಟ್ಟುಕೊಂಡು ಸಾಂಕೇತಿಕವಾಗಿ ಸೆಕ್ಯುಲರಿಸಂನ್ನು ಪ್ರದರ್ಶಿಸುವುದು ಮತ್ತು ವಾಸ್ತವದಲ್ಲಿ ಮುಸ್ಲಿಮರನ್ನು ದ್ವೇಷಿಸುವಂತಹ ವಾತಾವರಣ ನಿರ್ಮಿಸುತ್ತಿರುವುದರ ಕುರಿತು ಹೇಳುತ್ತಿದ್ದಾರೆ. ಇದು ಸರಳವಾದ ಮತ್ತು ಸ್ಪಷ್ಟವಾದ ವಿಚಾರವಾಗಿದೆ.

ಕಲ್ಪನಾ ಅವರು ‘ಎಡಿಎಂ ಜಬಲ್ಪುರ್ ವರ್ಸಸ್ ಶಿವಕಾಂತ್ ಶುಕ್ಲಾ ಪ್ರಕರಣದಲ್ಲಿ ನ್ಯಾಯಮೂರ್ತಿ ಎಚ್.ಆರ್. ಖಾನ್ನಾ ಅವರ ಭಿನ್ನಾಭಿಪ್ರಾಯವು, ತುರ್ತುಪರಿಸ್ಥಿತಿಯಲ್ಲಿಯೂ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಾರದೆಂದು ಅಧಿಕಾರಯುತವಾಗಿ ಹೇಳಿತು. ಸಂವಿಧಾನದ 21ನೇ ವಿಧಿಯ (ಅಂದರೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಅನುಪಸ್ಥಿತಿಯಲ್ಲಿಯೂ, ಕಾನೂನಿನ ಅಧಿಕಾರವಿಲ್ಲದೆ ರಾಜ್ಯವು ಒಬ್ಬ ವ್ಯಕ್ತಿಯ ಜೀವನ ಅಥವಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ’ ಎಂದು ಬರೆಯುತ್ತಾರೆ. ನ್ಯಾಯಮೂರ್ತಿ ಖನ್ನಾ ಅವರ ಈ ಭಿನ್ನಾಭಿಪ್ರಾಯವನ್ನು 2017ರಲ್ಲಿ ಪುಟ್ಟಸ್ವಾಮಿ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏಕಮತದಿಂದ ಮರುಸ್ಥಾಪಿಸಿತು. ಇಂದು ಹರ್ಯಾಣ ಮಹಿಳಾ ಆಯೋಗ ಮತ್ತು ಸರ್‌ಪಂಚ್ ಅವರು ಪ್ರೊಫೆಸರ್ ಅವರ ಪೋಸ್ಟ್‌ನ ವಿವರಗಳನ್ನು ಅರಿತುಕೊಳ್ಳುವ ಗೋಜಿಗೆ ಹೋಗದೆ ಸುಪ್ರೀಂ ಕೋರ್ಟ್ ಮುಂದೆ ದುರುದ್ದೇಶಪೂರಿತ ಮತ್ತು ಸುಳ್ಳು ದೂರು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಎಫ್‌ಐಆರ್‌ನ್ನು ರದ್ದುಗೊಳಿಸಿ ಪ್ರೊಫೆಸರ್ ಮಹ್ಮುದಾಬಾದ್‌ರನ್ನು ಷರತ್ತು ರಹಿತವಾಗಿ ಬಿಡುಗಡೆಗೊಳಿಸಬೇಕು ಎಂದು ಪ್ರಜಾತಾಂತ್ರಿಕವಾದಿಗಳು ಮನವಿ ಮಾಡುತ್ತಿದ್ದಾರೆ.

ಆದರೆ ಮಹ್ಮುದಾಬಾದ್ ವಿರುದ್ಧ ತನಿಖೆ ಆದೇಶಿಸುವುದರ ಮೂಲಕ ನ್ಯಾಯಾಂಗವು ವಿಧಿ 19 ಹಕ್ಕುಗಳಾದ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ’ವನ್ನು ಮೊಟಕುಗೊಳಿಸಿದೆ. ನ್ಯಾಯವಾದಿ ಗೌತಮ್ ಭಾಟಿಯಾ ‘ಸುಪ್ರೀಂಕೋರ್ಟ್ ತನ್ನ ಎರಡು ಪುಟಗಳ ಆದೇಶದಲ್ಲಿ ಮಹ್ಮದಾಬಾದ್‌ರ ವಿರುದ್ಧದ ಆರೋಪಗಳ ಹೊಳಹನ್ನು ಪರಿಗಣಿಸಿಲ್ಲ ಮತ್ತು ಫೇಸ್‌ಬುಕ್ ಪೋಸ್ಟ್ ಅವರ ಮೇಲೆ ಆರೋಪಿಸಲ್ಪಟ್ಟ ಮತ್ತು ಜೈಲುವಾಸಕ್ಕೆ ಕಾರಣವಾದ ಅಪರಾಧಗಳ ಅಂಶಗಳನ್ನು ಒಳಗೊಂಡಿದೆಯೇ ಎಂದು ಪರಿಶೀಲಿಸಿಲ್ಲ. ಕೋರ್ಟ್ ‘ಎಸ್‌ಐಟಿಯನ್ನು ಎರಡು ಆನ್‌ಲೈನ್ ಪೋಸ್ಟ್‌ಗಳಲ್ಲಿ ಬಳಸಲಾದ ಶಬ್ದಕೋಶದ ಸಂಕೀರ್ಣತೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು’ ರಚಿಸಲಾಗುತ್ತಿದೆ. ಆದ್ದರಿಂದ, ಮೂವರು ಪೊಲೀಸ್ ಅಧಿಕಾರಿಗಳು ಒಂದು ಕೈಯಲ್ಲಿ ಮಹ್ಮದಾಬಾದ್‌ರ ಫೇಸ್‌ಬುಕ್ ಪೋಸ್ಟ್‌ನ ರಂಗಿನ ಮುದ್ರಣವನ್ನು ಮತ್ತು ಇನ್ನೊಂದು ಕೈಯಲ್ಲಿ ಸ್ಟಾನ್ಲಿ ಫಿಶ್‌ರ ‘ಹೌ ಟು ರೈಟ್ ಎ ಸೆಂಟೆನ್ಸ್; ಆಂಡ್ ಹೌ ಟು ರೀಡ್ ಒನ್’ ಪುಸ್ತಕವನ್ನು ಹಿಡಿದುಕೊಂಡು ಡೆಸ್ಕ್‌ನಲ್ಲಿ ಕುಳಿತಿರುವ ದೃಶ್ಯ ಕಂಡುಬರುತ್ತದೆ..’ ಎಂದು ಬರೆಯುತ್ತಾರೆ

ಮುಖ್ಯವಾಗಿ ತಮಗಿರುವ ಅಧಿಕಾರವನ್ನು ಬಳಸಿಕೊಂಡು, ಮೋದಿ ನೇತೃತ್ವದ ಸರಕಾರವು ಮಹ್ಮುದಾಬಾದ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಈ ದುರುದ್ದೇಶಪೂರಿತ, ಸುಳ್ಳು ದೂರು ಮತ್ತು ಬಂಧನದಿಂದ ಪ್ರೊಫೆಸರ್ ಅವರ ಸಾರ್ವಜನಿಕ ಬದುಕಿಗೆ ಉಂಟಾದ ಹಾನಿಯ ಪ್ರಶ್ನೆ ಹಾಗೆಯೇ ಉಳಿಯುತ್ತದೆ, ಇದು ಸಾರ್ವಜನಿಕ ಅವಮಾನವನ್ನು ಸಾಮಾನ್ಯೀಕರಣಗಳಿಸುತ್ತದೆ. ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸಿದ ಹರ್ಯಾಣ ಮಹಿಳಾ ಆಯೋಗದ ಅಧ್ಯಕ್ಷರು ಮತ್ತು ಸರ್‌ಪಂಚ್‌ರನ್ನು ಕಟ್ಟುನಿಟ್ಟಾಗಿ ಖಂಡಿಸುವ ಸಾಧ್ಯತೆಗಳೇ ಕ್ಷೀಣಿಸಿ ನಿರಪರಾಧಿ ಅಲಿಖಾನ್ ಅವರ ಅನಿಶ್ಚಿತ ವೃತ್ತಿ ಬದುಕು ಮಾತ್ರ ಉಳಿದುಕೊಳ್ಳುತ್ತದೆ. ಅಧಿಕಾರದಲ್ಲಿರುವ ಬಿಜೆಪಿಯು ತನ್ನ ನೀತಿ, ಸಿದ್ಧಾಂತಗಳನ್ನು ವಿಮರ್ಶಿಸುವವರ ವಿರುದ್ಧ ಕಾನೂನನ್ನು ಶಸ್ತ್ರೀಕರಣಗೊಳಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸಿದೆ. ಮತ್ತೊಂದೆಡೆ ಸೇನಾ ಅಧಿಕಾರಿ ಖುರೇಷಿ ವಿರುದ್ಧ ಅತ್ಯಂತ ಕೀಳುಮಟ್ಟದಲ್ಲಿ, ತುಚ್ಛ ಭಾಷೆಯಲ್ಲಿ ಮಾತನಾಡಿದ ಮಧ್ಯ ಪ್ರದೇಶ ಸರಕಾರದ ಬಿಜೆಪಿ ಮಂತ್ರಿ ವಿಜಯ್ ಶಾ ಮುಕ್ತವಾಗಿ ಅಡ್ಡಾಡಿಕೊಂಡಿದ್ದಾರೆ. ಸಾರ್ವಜನಿಕ ಒತ್ತಡದ ನಂತರ ಕ್ಷಮೆ ಕೇಳಿದ್ದರೂ ಇವರ ಬಂಧನವಾಗಲಿಲ್ಲ. ಸುಪ್ರೀಂ ಕೋರ್ಟ್ ಇವರ ವಿಚಾರಣೆಗಾಗಿ ಎಸ್‌ಐಟಿ ನೇಮಿಸಲು ಸೂಚಿಸಿದೆ. ಎಂತಹ ವ್ಯಂಗ್ಯವೆಂದರೆ ನಿರಪರಾಧಿಯನ್ನು ಆರೋಪಿಯಾಗಿಸಿ ಅವರ ವಿರುದ್ಧ ತನಿಖೆಗೆ ಎಸ್‌ಐಟಿ ರಚಿಸಿದರೆ, ಅದೇ ಸಂದರ್ಭದಲ್ಲಿ ಆರೋಪಿಯನ್ನು ನಿರಪರಾಧಿಯಾಗಿಸಿ ಇವರ ವಿರುದ್ಧ ತನಿಖೆಗೂ ಎಸ್‌ಐಟಿ ರಚಿಸಲಾಗಿದೆ. ಇದೆಂತಹ ವೈರುಧ್ಯಗಳ ಕಾಲ.

ಕೇಂಬ್ರಿಡ್ಜ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ಮಹ್ಮುದಾಬಾದ್ ಅವರ ತಪ್ಪು ಮುಸ್ಲಿಮರಾಗಿದ್ದು ಎನ್ನುವುದು ಇಡೀ ಪ್ರಕರಣದ ನೀತಿಪಾಠವಾಗಿದೆ. ಬಹು ಸಂಸ್ಕೃತಿ, ಸ್ವಾತಂತ್ರ್ಯಕ್ಕಾಗಿ ಬದ್ಧತೆ ಇಂದು ರಾಜಕೀಯ ನೀತಿಯಾಗಿ ಉಳಿದುಕೊಂಡಿಲ್ಲ. ಈ ವಿಚಾರಗಳನ್ನು ಬಲಿಕೊಟ್ಟು ಉನ್ಮಾದ ರಾಷ್ಟ್ರೀಯತೆ ಇಂದು ದೇಶದಲ್ಲಿ ವಿಜೃಂಭಿಸುತ್ತಿರುವಾಗ ಯಾವುದು ಚರ್ಚೆಯಾಗಬೇಕು ಎನ್ನುವ ಅಂಶವೇ ಹಿನ್ನೆಲೆಗೆ ಸರಿಯುತ್ತದೆ. ಮೋದಿ ಸರಕಾರವು ಆರೆಸ್ಸೆಸ್ ಸಿದ್ಧಾಂತದ ಜಾರಿಗಾಗಿ ‘ವೈಯುಕ್ತಿಕ ಸ್ವಾತಂತ್ರ್ಯ’ವನ್ನು ಹತ್ತಿಕ್ಕಲು ಯಾವ ಹಂತಕ್ಕಾದರೂ ನುಗ್ಗಲು ತಯಾರಾಗಿರುವುದು ಕಳೆದ ಹತ್ತು ವರ್ಷಗಳಿಂದ ಪದೇ ಪದೇ ಸಾಬೀತಾಗುತ್ತಿದೆ. ನಾವು ಇದನ್ನು ಟೀಕಿಸುತ್ತಾ ಕೂಡುವ ಕಾಲವೂ ಇದಲ್ಲ ಅಥವಾ ಸಮಾವೇಶಗಳನ್ನು ನಡೆಸುತ್ತಾ ಸಂಭ್ರಮಿಸುವ ದಿನಗಳೂ ಇದಲ್ಲ. ಇಲ್ಲಿನ ಪ್ರಜಾಪ್ರಭುತ್ವ, ಬಹುತ್ವ ಮತ್ತು ಸಂವಿಧಾನದ ರಕ್ಷಣೆಗೆ ನಿರಂತರವಾಗಿ ಕಾರ್ಯಯೋಜನೆ ರೂಪಿಸುತ್ತಲೇ ಇರಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ. ಶ್ರೀಪಾದ ಭಟ್

contributor

Similar News