×
Ad

ನಿಗಮ, ಮಂಡಳಿಗಳಲ್ಲಿ ರಾಯಚೂರಿಗೆ ದೊರೆಯದ ಸ್ಥಾನಮಾನ : ಮಲತಾಯಿ ಧೋರಣೆ ವಿರುದ್ಧ ಆಕ್ರೋಶ

Update: 2025-09-28 08:37 IST

ರಾಯಚೂರು : ಜಿಲ್ಲೆಯಲ್ಲಿ ಒಬ್ಬರು ಸಚಿವರು, ಉಸ್ತುವಾರಿ ಸಚಿವರು, ಮೂವರು ಎಂಎಲ್ ಸಿ, ನಾಲ್ಕು ಕಾಂಗ್ರೆಸ್ ಶಾಸಕರು, ಓರ್ವ ಸಂಸದರು ಇದ್ದರೂ ರಾಜ್ಯದಲ್ಲಿ ನಿಗಮ-ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ರಾಯಚೂರು ಜಿಲ್ಲೆಗೆ ಕಡೆಗಣಿಸಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಎನ್.ಎಸ್. ಭೋಸರಾಜು ಹಾಗೂ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಅವರ ಬಣಗಳಿವೆ. ಆದರೂ ಯಾವ ಬಣದ ಕಾರ್ಯಕರ್ತರಿಗೂ ಮಣೆ ಹಾಕದೇ ನಿರಾಸೆ ಮೂಡಿಸಿದೆ.

ವಿಧಾನಸಭೆ ನಾಲ್ವರು ಶಾಸಕರು, ಲೋಕಸಭೆ ಚುನಾವಣೆಯಲ್ಲಿ ಸಂಸದರ ಗೆಲುವಿನಲ್ಲಿ ಪಾತ್ರವಹಿಸಿದ ಪ್ರಮುಖ ವರ್ಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೈ ಕಮಾಂಡ್ ಘೋಷಿಸಿದೆ. ಚುನಾವಣೆಯಲ್ಲಿ ಜಿಲ್ಲೆಯ ಮುಖಂಡರಿಗೆ ಹೈಕಮಾಂಡ್ ಯಾವುದೇ ಮಾನ್ಯತೆ ನೀಡದೆ ಅಪಮಾನಿಸಿದೆ. ಜಿಲ್ಲೆಯ ಎರಡು ಗುಂಪುಗಳ ಕಾಂಗ್ರೆಸ್ ಮುಖಂಡರಿಂದಲೂ ಯಾರೊಬ್ಬರಿಗೆ ಅಧಿಕಾರ ಭಾಗ್ಯ ದೊರಕಿಸಿಕೊಡಲು ಸಾಧ್ಯವಾಗದ ದುರ್ಬಲ ನಾಯಕತ್ವಕ್ಕೆ ಜಿಲ್ಲೆಯ ಬುಡಮೇಲು ಮತ್ತು ಅಸಮಾಧಾನ ಕೈ ಗುರಿಯಾಗುವಂತೆ ಮಾಡಿದೆ.

ರಾಜ್ಯ ನಿಗಮ, ಮಂಡಳಿಗೆ ಹಿಂದುಳಿದ ವರ್ಗಗಳ ನಾಯಕರಲ್ಲಿ ಕೆ. ಶಾಂತಪ್ಪ, ಅಲ್ಪಸಂಖ್ಯಾತರಲ್ಲಿ ಅಸ್ಲಂ ಪಾಷಾ, ಆರ್ ಡಿಎ ಮಾಜಿ ಅಧ್ಯಕ್ಷ ಅಬ್ದುಲ್ ಕರೀಂ, ಮಲ್ಲಿ ಕಾರ್ಜುನ ಯದ್ದಲದಿನ್ನಿ ಅವರು ತೆರದ ಮರೆಯಲ್ಲಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿದ್ದರು ಎನ್ನಲಾಗಿದೆ. ಇವರೆಲ್ಲರೂ ಪಕ್ಷದಲ್ಲಿ ಅನೇಕ ವರ್ಷ ದುಡಿದಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವೆ ಬಣಬಳಗದ ಪೈಪೋಟಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ರಾಜ್ಯ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಲು ವಿಫಲರಾಗಿದ್ದಾರೆ ಎಂಬ ಟೀಕೆ ಕೇಳಿ ಬರುತ್ತಿದೆ.ಪಕ್ಷ ಸಂಘಟಕರು, ಹಳೆ ನಾಯಕರಿಗೆ ನ್ಯಾಯ ಸಿಗದೆ, ನೇಮಕಾತಿಯಲ್ಲಿ ರಾಯಚೂರು ಜಿಲ್ಲೆಯ ಪ್ರತಿನಿಧಿತ್ವ ನಸುಕಿನ ಕನಸಾಗಿಬಿಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಪಕ್ಷದ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಲಾಗಿದೆ.

ಅಲ್ಪಸಂಖ್ಯಾತರು ಅದರಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ರಾಯಚೂರಿನಲ್ಲಿ ವಾಸವಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕರಾಗಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯಲು ೮ಕ್ಕೂ ಹೆಚ್ಚು ಜನ ಮುಸ್ಲಿಮ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೂ ಅವರಲ್ಲಿ ಯಾರಿಗೂ ನಿಗಮ ಮಂಡಳಿಯಲ್ಲಿ ಸ್ಥಾನಮಾನ ಸಿಕ್ಕಿಲ್ಲ ಎನ್ನುವುದು ಮಲತಾಯಿ ಧೋರಣೆಯ ಜೊತೆಗೆ ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ನಿಗಮ ಮಂಡಳಿಗೆ ನೇಮಕಾತಿಯಲ್ಲಿ ರಾಯಚೂರು ಜಿಲ್ಲೆಗೆ ಯಾವುದೇ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯ ಕಾರ್ಯಕರ್ತರಿಗೆ ನಿಗಮ ಮಂಡಳಿಗೆ ನೇಮಕಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು. ರಾಯಚೂರು ಜಿಲ್ಲೆಯಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರಿದ್ದಾರೆ. ಎಲ್ಲ ಸಮಯದಲ್ಲಿ ಪಕ್ಷದ ಜೊತೆಗಿದ್ದು ಕಾರ್ಯ ನಿರ್ವಹಿಸುತ್ತಾ ಬಂದಿರುವ ಕಾರ್ಯಕರ್ತರನ್ನು ಪರಿಗಣಿಸದೇ ಇರುವುದು ವಿಷಾದನೀಯ.

-ಪಾರಸ್‌ಮಲ್ ಸುಖಾಣಿ, ಹಿರಿಯ ಕಾಂಗ್ರೆಸ್ ಮುಖಂಡ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News