ರಾಯಚೂರು: ಹೆಚ್ಚಿದ ವೈರಲ್ ಜ್ವರ, ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿ
ರಾಯಚೂರು: ರಾಯಚೂರು ನಗರ ಸೇರಿದಂತೆ ಮಸ್ಕಿ, ಸಿಂಧನೂರು, ಮಾನ್ವಿ, ದೇವದುರ್ಗ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯಗಳಿಂದ ಸೋಂಕು ಜ್ವರ(ವೈರಲ್ ಫಿವರ್) ಹೆಚ್ಚಾಗಿ ಕಾಡುತ್ತಿದ್ದು ಅದರಲ್ಲಿ ಸೊನ್ನೆಯಿಂದ 1 ವರ್ಷದ ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಪೋಷಕರು ಆತಂಕಕ್ಕೀಡಾಗಿದ್ದಾರೆ.
ಆಗಸ್ಟ್ ತಿಂಗಳಿನಿಂದ ಆಗಾಗ ಮಳೆ, ಬಿಸಿಲು, ಚಳಿ, ಇದ್ದಂಕಿದ್ದಂತೆ ಮೋಡ ಕವಿದ ವಾತಾವರಣ ಬದಲಾಗುತ್ತಿರುವ ಕಾರಣ ವೈರಲ್ ಫಿವರ್, ಕೆಮ್ಮು ಮಕ್ಕಳನ್ನು ಹೈರಾಣಾಗಿಸಿದೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು (ಬೆಡ್) ಫುಲ್ ಆಗಿ ಖಾಸಗಿ ಆಸ್ಪತ್ರೆಗಳಲ್ಲೂ ಬಹುತೇಕ ರೋಗಿಗಳಿಂದ ತುಂಬಿ ತುಳುಕುತ್ತಿದೆ.
ಇದು ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದರಿಂದ ಒಂದು ಕುಟುಂಬದ ಒಬ್ಬ ವ್ಯಕ್ತಿಗೆ ಬಂದು ಇಡೀ ಕುಟುಂಬ ಸದಸ್ಯರಿಗೆ ಹರಡುತ್ತಿದೆ. ವಿಶೇಷವಾಗಿ ಮಕ್ಕಳನ್ನು ಹೆಚ್ಚು ಅಪಾಯಗೊಳಿಸುತ್ತಿದೆ. ಹೀಗಾಗಿ ಒಂದೇ ಕುಟುಂಬದ ಇಬ್ಬರು,ಮೂರು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದು ಪೋಷಕರಿಗೆ ಸಮಸ್ಯೆಯಾಗಿದೆ.
ಗ್ರಾಮೀಣ ಭಾಗದ ಬಡ ಪಾಲಕರು ಹಳ್ಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡದೆ ಸಂಪೂರ್ಣ ಗುಣಮುಖರಾಗದೇ ತಾಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಕುಟುಂಬ ಸದಸ್ಯರೊಂದಿಗೆ ಕೆಲಸ ಕಾರ್ಯಗಳನ್ನು ಮಕ್ಕಳನ್ನು ಕಟ್ಟಿಕೊಂಡು ಬರುತ್ತಿದ್ದಾರೆ.
ಆಗಸ್ಟ್‌ನಲ್ಲಿ ರಿಮ್ಸ್‌ನಲ್ಲಿ 700 ಮಕ್ಕಳಿಗೆ ಚಿಕಿತ್ಸೆ: ಜಿಲ್ಲಾ ಕೇಂದ್ರದಲ್ಲಿರುವ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್) ಆಸ್ಪತ್ರೆಯಲ್ಲಿ ಆಗಸ್ಟ್‌ನಲ್ಲಿ 700 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಪೈಕಿ 500 ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದರೆ 200 ಮಕ್ಕಳು ಐಸಿಯುನಲ್ಲಿ ದಾಖಲಾಗಿ ಗುಣಮುಖರಾಗಿದ್ದಾರೆ.
ರಾಯಚೂರು ಗಡಿಭಾಗದಲ್ಲಿರುವುದರಿಂದ ಜಿಲ್ಲೆ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದಲೂ ರಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪ್ರಸ್ತುತ 90 ಹಾಸಿಗೆಗಳು ತುಂಬಿದ್ದು ಮಕ್ಕಳ ದಾಖಲಾಗುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರಿಮ್ಸ್ ಆಸ್ಪತ್ರೆಯಲ್ಲಿ 0-6 ತಿಂಗಳ ಒಳಗಿನ ನವಜಾತ ಶಿಶುಗಳು ಹೆಚ್ಚು ದಾಖಲಾಗುತ್ತಿದ್ದು, ಇಂತಹ ಮಕ್ಕಳಿಗೆ ಕೆಮ್ಮು, ವೈರಲ್ ಫಿವರ್ ನಿಂದ ನಿಮೋನಿಯವಾಗಿ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ರಿಮ್ಸ್‌ನಲ್ಲಿ ಪ್ರಸಕ್ತವಾಗಿ 90 ಸಾಮಾನ್ಯ ಬೆಡ್ ಹಾಗೂ 8 ವಿಶೇಷ ವಾರ್ಡ್‌ಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಕ್ಕಳು ರಿಮ್ಸ್
ನಲ್ಲಿ ದಾಖಲಾಗುತ್ತಿರುವ ಕಾರಣ ನರ್ಸ್‌ಗಳಿಗೆ ರಜೆ ಸಿಗದೆ ಪರದಾಡುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ರಜೆ ಪಡೆಯುತ್ತಿರುವ ಕಾರಣ ದೊಡ್ಡ ವಾರ್ಡ್‌ಗಳಲ್ಲಿ ಒಬ್ಬರೇ ರೋಗಿಗಳಿಗೆ ಚುಚ್ಚುಮದ್ದು, ಔಷಧೋಪಚಾರ ಮಾಡುತ್ತಿರುವ ದೃಶ್ಯಗಳು ಕಾಣುತ್ತಿವೆ. ರಿಮ್ಸ್‌ನಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರು ದಾಖಲಾಗಿದ್ದು ಕಫ, ರಕ್ತ ತಪಾಸಣೆಗೆ ದೊಡ್ಡ ಸರತಿ ಸಾಲು ಕಂಡು ಬರುತ್ತಿದ್ದು, ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗಿದೆ.
ವೈರಲ್ ಫಿವರ್ ಒಂದು ಸಾಂಕ್ರಾಮಿಕ ರೋಗವಾಗಿದ್ದು ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಎಲ್ಲರೂ ರೋಗಕ್ಕೆ ತುತ್ತಾಗುತ್ತಿದ್ದಾರೆ. ರಿಮ್ಸ್ ನಲ್ಲಿ 0-6 ತಿಂಗಳ ಒಳಗಿನ ಮಕ್ಕಳು ವೈರಲ್ ಸೊಂಕಿಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗುತ್ತಿದ್ದು, ಆಕ್ಸಿಜನ್ ಸೇರಿದಂತೆ ಎಲ್ಲ ಆಧುನಿಕ ಉಪಕರಣಗಳು ಲಭ್ಯವಿದೆ. ವೈರಲ್ ಫಿವರ್ 3ರಿಂದ 8 ದಿನಗಳವರೆಗೆ ಇರುತ್ತದೆ. ಪಾಲಕರು ಭಯಭೀತರಾಗದೇ ಮಕ್ಕಳನ್ನು ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಕುಟುಂಬದಲ್ಲಿ ಒಬ್ಬರಿಗೆ ಬಂದರೆ ವೇಗವಾಗಿ ಹರಡುವುದರಿಂದ ಮಕ್ಕಳನ್ನು ಸ್ವಲ್ಪ ದೂರವಿಸಿ ಸಾಧ್ಯವಾದಷ್ಟು ರೋಗಿಯಿಂದ ಸಂಪರ್ಕ ಕಡಿಮೆ ಮಾಡಿದರೆ ಇದನ್ನು ನಿಯಂತ್ರಿಸಬಹುದು.
ಡಾ.ವಿಜಯ ಸುಖಾಣಿ, ಮಕ್ಕಳ ತಜ್ಞ, ಪಿಡಿಯಾಟ್ರಿಕ್ ವಿಭಾಗದ ಪ್ರಭಾರಿ ಮುಖ್ಯಸ್ಥ